ಮಂಗಳವಾರ, ನವೆಂಬರ್ 19, 2019
23 °C
ದೇಶಿ, ವಿದೇಶಿ ವಿದ್ಯಮಾನಗಳ ಸಕಾರಾತ್ಮಕ ಪರಿಣಾಮ

ಷೇರುಪೇಟೆಯ ಹೊಸ ದಾಖಲೆ

Published:
Updated:

ಮುಂಬೈ: ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ಗುರುವಾರದ ವಹಿವಾಟಿನಲ್ಲಿ 184 ಅಂಶಗಳ ಹೆಚ್ಚಳ ಕಂಡು ಹೊಸ ದಾಖಲೆಯೊಂದಿಗೆ ದಿನದ ವಹಿವಾಟು ಕೊನೆಗೊಳಿಸಿದೆ.

ದೇಶಿ ಮತ್ತು ವಿದೇಶಿ ಸಕಾರಾತ್ಮಕ ವಿದ್ಯಮಾನಗಳು ಹೂಡಿಕೆದಾರರಲ್ಲಿ ಖರೀದಿ ಉತ್ಸಾಹ ಹೆಚ್ಚಿಸಿವೆ. ಕೇಂದ್ರ ಸರ್ಕಾರವು ರಿಯಲ್‌ ಎಸ್ಟೇಟ್ ವಲಯಕ್ಕೆ ಉತ್ತೇಜನ ನೀಡಲು ₹ 25 ಸಾವಿರ ಕೋಟಿಗಳ ನಿಧಿ ಸ್ಥಾಪಿಸಿರುವುದು ನಿರ್ಮಾಣ ಚಟುವಟಿಕೆಗಳಿಗೆ ಸಂಬಂಧಿಸಿದ ಇತರ ಉದ್ದಿಮೆಗಳ ಮೇಲೆಯೂ ಸಕಾರಾತ್ಮಕ ಪರಿಣಾಮ ಬೀರಲಿದೆ. ಕಾರ್ಪೊರೇಟ್‌ಗಳ ಉತ್ತಮ ಹಣಕಾಸು ಸಾಧನೆ ಮತ್ತು ವಿದೇಶಿ ಬಂಡವಾಳ ಹರಿವಿನಲ್ಲಿನ ಹೆಚ್ಚಳವು ದೇಶಿ ಷೇರುಪೇಟೆಗಳ ವಹಿವಾಟುದಾರರಲ್ಲಿ ಉತ್ಸಾಹ ಮೂಡಿಸಿವೆ.

ಜಾಗತಿಕ ಷೇರು ಮಾರುಕಟ್ಟೆಗಳಲ್ಲಿಯೂ ಸಕಾರಾತ್ಮಕ ವಹಿವಾಟು ನಡೆಯುತ್ತಿದೆ. ಅಮೆರಿಕ ಮತ್ತು ಚೀನಾ ಪರಸ್ಪರ ಸರಕುಗಳ ಮೇಲೆ ವಿಧಿಸಿದ್ದ ಹೆಚ್ಚುವರಿ ಸುಂಕಗಳನ್ನು ಹಂತ ಹಂತವಾಗಿ ತೆಗೆದು ಹಾಕಲು ನಿರ್ಧರಿಸಿರುವುದು ಕೂಡ ಸಕಾರಾತ್ಮಕ ಪರಿಣಾಮ ಬೀರಿದೆ.

ದಿನದ ವಹಿವಾಟಿನಲ್ಲಿ ಸೂಚ್ಯಂಕವು ಗರಿಷ್ಠ ಮಟ್ಟವಾದ 40,688 ಅಂಶಗಳಿಗೆ ತಲುಪಿತ್ತು. ಅಂತಿಮವಾಗಿ 184 ಅಂಶಗಳ ಹೆಚ್ಚಳ ಕಂಡು 40,653 ಅಂಶಗಳಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿತು. ರಾಷ್ಟ್ರೀಯ ಷೇರುಪೇಟೆ ‘ನಿಫ್ಟಿ’ ಕೂಡ 46 ಅಂಶ ಹೆಚ್ಚಳ ಕಂಡು 12,012 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿತು.

ಗಳಿಕೆ: ಸನ್‌ ಫಾರ್ಮಾ, ಇಂಡಸ್‌ಇಂಡ್‌ ಬ್ಯಾಂಕ್‌, ಆರ್‌ಐಎಲ್‌, ಐಟಿಸಿ, ವೇದಾಂತ, ಏಷಿಯನ್‌ ಪೇಂಟ್ಸ್‌, ಎಚ್‌ಡಿಎಫ್‌ಸಿ ಮತ್ತು ಇನ್ಫೊಸಿಸ್‌ ಷೇರುಗಳು ಶೇ 3.02ರವರೆಗೆ ಏರಿಕೆ ಕಂಡಿವೆ.

ನಷ್ಟ: ಯೆಸ್‌ ಬ್ಯಾಂಕ್‌, ಎಚ್‌ಯುಎಲ್‌, ಒಎನ್‌ಜಿಸಿ, ಟಾಟಾ ಮೋಟರ್ಸ್‌, ಆ್ಯಕ್ಸಿಸ್‌ ಬ್ಯಾಂಕ್‌, ಎಲ್‌ಆ್ಯಂಡ್‌ಟಿ ಮತ್ತು ಎನ್‌ಟಿಪಿಸಿ ಷೇರುಗಳು ಶೇ 3.27ರವರೆಗೆ ನಷ್ಟ ಕಂಡಿವೆ.

ರಿಯಾಲ್ಟಿ ಷೇರುಗಳ ಗರಿಷ್ಠ ಗಳಿಕೆ
ರಿಯಲ್‌ ಎಸ್ಟೇಟ್‌ ವಲಯಕ್ಕೆ ಕೇಂದ್ರ ಸರ್ಕಾರವು ₹ 25 ಸಾವಿರ ಕೋಟಿಗಳ ನಿಧಿ ಸ್ಥಾಪಿಸಿರುವುದರಿಂದ ಈ ವಲಯದ ಷೇರುಗಳ ಬೆಲೆ ಶೇ 8.2ರಷ್ಟು ಏರಿಕೆ ದಾಖಲಿಸಿದವು. ಎನ್‌ಬಿಸಿಸಿ ಇಂಡಿಯಾ (ಶೇ 8.20), ಇಂಡಿಯಾ ಬುಲ್ಸ್‌ ರಿಯಲ್‌ ಎಸ್ಟೇಟ್‌ (ಶ₹ 4.94), ಫೋಯೆನಿಕ್ಸ್‌ ಮಿಲ್ಸ್‌ (ಶೇ 3.11) ಶೋಭಾ (ಶೇ 2.34) ಮತ್ತು ಪ್ರೆಸ್ಟೀಜ್‌ ಎಸ್ಟೇಟ್ಸ್‌ ಪ್ರಾಜೆಕ್ಟ್ಸ್‌ ಶೇ 1.48 ಗಳಿಕೆ ಕಂಡಿವೆ.

ಹೂಡಿಕೆದಾರರಲ್ಲಿ ಖರೀದಿ ಉತ್ಸಾಹ
* ರಿಯಲ್‌ ಎಸ್ಟೇಟ್ ವಲಯಕ್ಕೆ ₹ 25 ಸಾವಿರ ಕೋಟಿ ನೆರವು
* ಅಮೆರಿಕ – ಚೀನಾ ವಾಣಿಜ್ಯ ಬಾಂಧವ್ಯ ಸುಧಾರಣೆ
*  ಕಾರ್ಪೊರೇಟ್‌ಗಳ ಉತ್ತಮ ಹಣಕಾಸು ಸಾಧನೆ
*  ವಿದೇಶಿ ಬಂಡವಾಳದ ಒಳ ಹರಿವು ಹೆಚ್ಚಳ

ಪ್ರತಿಕ್ರಿಯಿಸಿ (+)