ಸೋಮವಾರ, ಅಕ್ಟೋಬರ್ 18, 2021
25 °C

ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಸೆನ್ಸೆಕ್ಸ್‌, ನಿಫ್ಟಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ದೇಶದ ಷೇರುಪೇಟೆಗಳು ಮಂಗಳವಾರದ ವಹಿವಾಟಿನಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿಕೆ ಕಂಡವು. ಬ್ಯಾಂಕಿಂಗ್‌, ಹಣಕಾಸು ಮತ್ತು ಲೋಹ ವಲಯದ ಕಂಪನಿಗಳ ಷೇರು ಖರೀದಿ ಉತ್ತಮವಾಗಿ ನಡೆದ ಕಾರಣ ದಾಖಲೆಯ ವಹಿವಾಟು ನಡೆಯಿತು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು 403 ಅಂಶ ಏರಿಕೆಯಾಗಿ 55,958 ಅಂಶಗಳಲ್ಲಿ ವಹಿವಾಟು ಅಂತ್ಯವಾಯಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 128 ಅಂಶ ಹೆಚ್ಚಾಗಿ 16,624 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ಬಿಎಸ್‌ಇನಲ್ಲಿ ಬಜಾಜ್‌ ಫಿನ್‌ಸರ್ವ್‌ ಕಂಪನಿಯ ಷೇರು ಮೌಲ್ಯವು ಶೇ 7.91ರಷ್ಟು ಏರಿಕೆ ಆಗಿದೆ. ಕಂಪನಿಯು ಮ್ಯೂಚುವಲ್‌ ಫಂಡ್‌ ವಹಿವಾಟು ಆರಂಭಿಸಲು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ತಾತ್ವಿಕ ಒಪ್ಪಿಗೆ ನೀಡಿದೆ. ಇದರಿಂದಾಗಿ ಷೇರುಗಳ ಬೆಲೆ ಹೆಚ್ಚಾಗಿದೆ.

ಈಚಿನ ವಾರಗಳಲ್ಲಿ ಮಾರಾಟದ ಒತ್ತಡಕ್ಕೆ ಒಳಗಾಗಿದ್ದ ಮಿಡ್‌ ಮತ್ತು ಸ್ಮಾಲ್‌ ಕ್ಯಾಪ್‌ ಷೇರುಗಳು ಮಂಗಳವಾರ ಉತ್ತಮ ಚೇತರಿಕೆ ಕಂಡವು ಎಂದು ರಿಲಯನ್ಸ್‌ ಸೆಕ್ಯುರಿಟೀಸ್‌ನ ಯೋಜನಾ ಮುಖ್ಯಸ್ಥ ವಿನೋದ್‌ ಮೋದಿ ಹೇಳಿದ್ದಾರೆ.

ಮೂಲಸೌಕರ್ಯ ಯೋಜನೆಗಳಿಗೆ ಅನುದಾನ ಒದಗಿಸಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಆಸ್ತಿ ನಗದೀಕರಣ ಯೋಜನೆಯನ್ನು ಸೋಮವಾರ ಅನಾವರಣಗೊಳಿಸಿದ್ದಾರೆ. ಇದು ಷೇರುಪೇಟೆಯಲ್ಲಿ ಉತ್ತಮ ವಹಿವಾಟಿಗೆ ಕಾರಣವಾಯಿತು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಬಿಎಸ್‌ಇ ಲೋಹ, ತೈಲ ಮತ್ತು ಅನಿಲ, ಕೈಗಾರಿಕೆ ಮತ್ತು ಬಂಡವಾಳ ಸರಕುಗಳ ವಲಯಗಳು ಶೇ 2.76ರಷ್ಟು ಏರಿಕೆ ಕಂಡವು. ಐ.ಟಿ., ತಂತ್ರಜ್ಞಾನ ಮತ್ತು ಎಫ್‌ಎಂಸಿಜಿ ವಲಯಗಳು ಇಳಿಕೆ ಕಂಡಿವೆ.

ಇನ್ಫೊಸಿಸ್‌ ಲಿಮಿಟೆಡ್‌ನ ಮಾರುಕಟ್ಟೆ ಮೌಲ್ಯವು ಮಂಗಳವಾರ 100 ಬಿಲಿಯನ್‌ ಡಾಲರ್‌ (₹ 7.40 ಲಕ್ಷ ಕೋಟಿ) ತಲುಪಿದೆ. ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌), ರಿಲಯನ್ಸ್‌ ಇಂಡಸ್ಟ್ರೀಸ್ ಲಿಮಿಟೆಡ್ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ ನಂತರ ಈ ಸಾಧನೆ ಮಾಡಿದ ದೇಶದ ನಾಲ್ಕನೇ ಕಂಪನಿ ಆಗಿದೆ.

ಬಿಎಸ್‌ಇನಲ್ಲಿ ಬೆಳಗ್ಗಿನ ವಹಿವಾಟಿನಲ್ಲಿ ಕಂಪನಿ ಷೇರು ಮೌಲ್ಯ ₹ 1,755.6ಕ್ಕೆ ತಲುಪಿ 52 ವಾರಗಳ ಗರಿಷ್ಠ ಮಟ್ಟದಲ್ಲಿ ವಹಿವಾಟು ನಡೆಸುತ್ತಿದ್ದಾಗ ಈ ಮೈಲಿಗಲ್ಲು ತಲುಪಿತು. ಆದರೆ, ವಹಿವಾಟಿನ ಅಂತ್ಯದ ವೇಳೆಗೆ ಕಂಪನಿ ಷೇರು ಬೆಲೆಯು ₹ 1,720.75ಕ್ಕೆ ಇಳಿಕೆ ಆಯಿತು.

ಮಾರುಕಟ್ಟೆ ಮೌಲ್ಯದ ಲೆಕ್ಕದಲ್ಲಿ ರಿಲಯನ್ಸ್‌ ಇಂಡಸ್ಟ್ರೀಸ್‌ ₹ 13.7 ಲಕ್ಷ ಕೋಟಿಯೊಂದಿಗೆ ಮೊದಲ ಸ್ಥಾನದಲ್ಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು