ಮಂಗಳವಾರ, ಆಗಸ್ಟ್ 11, 2020
27 °C
38 ಸಾವಿರದಿಂದ ಕೆಳಗಿಳಿದ ಸಂವೇದಿ ಸೂಚ್ಯಂಕ

ಮುಂದುವರಿದ ಮಾರಾಟ ಒತ್ತಡ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ದೇಶದ ಷೇರುಪೇಟೆಗಳಲ್ಲಿ ಸತತ ಆರನೇ ವಹಿವಾಟಿನ ದಿನವೂ ಮಾರಾಟದ ಒತ್ತಡ ಮುಂದುವರಿಯಿತು.

ಅಮೆರಿಕ–ಚೀನಾ ವಾಣಿಜ್ಯ ಸಂಘರ್ಷವು ಜಾಗತಿಕ ಹೂಡಿಕೆ ಚಟುವಟಿಕೆಯನ್ನು ತಗ್ಗುವಂತೆ ಮಾಡಿದೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು (ಬಿಎಸ್‌ಇ) 487 ಅಂಶ ಕುಸಿತ ಕಂಡು 37,789 ಅಂಶಗಳಿಗೆ ಇಳಿಕೆ ಕಂಡಿತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಪ್ಟಿ 139 ಅಂಶ ಇಳಿಕೆಯಾಗಿ 11,359 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ.

ರಿಲಯನ್ಸ್‌ ಇಂಡಸ್ಟ್ರೀಸ್‌, ಎಚ್‌ಡಿಎಫ್‌ಸಿ, ಎಚ್‌ಡಿಎಫ್‌ಸಿ ಬ್ಯಾಂಕ್‌, ಐಸಿಐಸಿಐ ಬ್ಯಾಂಕ್‌ ಮತ್ತು ಎಸ್‌ಬಿಐ ಷೇರುಗಳು ಶೇ 3.35ರವರೆಗೂ ಇಳಿಕೆ ಕಂಡಿವೆ. ಇದರಿಂದಾಗಿ ಸೂಚ್ಯಂಕಗಳು ಹೆಚ್ಚಿನ ಇಳಿಕೆ ಕಾಣುವಂತಾಯಿತು.

ವಾಣಿಜ್ಯ ಸಂಘರ್ಷವು ಜಾಗತಿಕ ಷೇರುಪೇಟೆಗಳ ಮೇಲೆ ಬೀರಿದ ನಕಾರಾತ್ಮಕ ಪರಿಣಾಮವು ದೇಶಿ ಷೇರುಪೇಟೆಗಳಲ್ಲಿಯೂ ಪ್ರತಿಫಲಿಸಿತು ಎಂದು ವರ್ತಕರು ಹೇಳಿದ್ದಾರೆ.

₹ 14 ಲಕ್ಷ ಕೋಟಿ ಮೌಲ್ಯದ ಚೀನಾದ ಸರಕುಗಳ ಮೇಲೆ ಗರಿಷ್ಠ ಸುಂಕ ಹೇರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಭಾನುವಾರ ಹೇಳಿದ್ದರು. ಇದರಿಂದಾಗಿ ಮಾರುಕಟ್ಟೆಗಳಲ್ಲಿ ನಕಾರಾತ್ಮಕ ವಹಿವಾಟು ನಡೆಯುತ್ತಿದೆ.

ರೂಪಾಯಿ ಇಳಿಕೆ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಸತತ ಮೂರನೇ ದಿನವೂ ರೂಪಾಯಿ ಮೌಲ್ಯ ಇಳಿಕೆ ಕಂಡಿತು. ಬುಧವಾರ ಡಾಲರ್‌ ಎದುರು ರೂಪಾಯಿ ಮೌಲ್ಯ 28 ಪೈಸೆ ಇಳಿಕೆಯಾಗಿ ಒಂದು ಡಾಲರ್‌ಗೆ
₹ 69.71ರಂತೆ ವಿನಿಮಯಗೊಂಡಿತು.

ಹೂಡಿಕೆದಾರರಿಗೆ ನಷ್ಟ

ಬುಧವಾರದ ವಹಿವಾಟಿನಲ್ಲಿ ಹೂಡಿಕೆದಾರರ ಸಂಪತ್ತು ಮಾರುಕಟ್ಟೆ ಮೌಲ್ಯದ ಲೆಕ್ಕದಲ್ಲಿ ₹ 1.64 ಲಕ್ಷ ಕೋಟಿಗಳಷ್ಟು ಕರಗಿದೆ. ಒಟ್ಟಾರೆ ಮೂರು ದಿನಗಳ ವಹಿವಾಟಿನಲ್ಲಿ ₹ 4.14ಲಕ್ಷ ಕೋಟಿಗಳಷ್ಟು ಸಂಪತ್ತು ನಷ್ಟವಾಗಿದೆ.

ಷೇರುಪೇಟೆಯ ಬಂಡವಾಳ ಮೌಲ್ಯ ₹ 151.61 ಲಕ್ಷ ಕೋಟಿಗಳಿಂದ ₹ 147.47 ಲಕ್ಷ ಕೋಟಿಗಳಿಗೆ ಇಳಿಕೆಯಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು