ಸೂಚ್ಯಂಕ 277 ಅಂಶ ಜಿಗಿತ

7
ಜಾಗತಿಕ ಷೇರುಪೇಟೆಗಳ ಸಕಾರಾತ್ಮಕ ಸ್ಪಂದನೆ

ಸೂಚ್ಯಂಕ 277 ಅಂಶ ಜಿಗಿತ

Published:
Updated:

ಮುಂಬೈ: ಜಾಗತಿಕ ಷೇರುಪೇಟೆಗಳ ಸಕಾರಾತ್ಮಕ ವಹಿವಾಟಿನ ಜತೆಗೆ ವಿದ್ಯುತ್‌, ಬ್ಯಾಂಕಿಂಗ್‌, ಇಂಧನ ಷೇರುಗಳು ಉತ್ತಮ ಖರೀದಿ ವಹಿವಾಟಿಗೆ ಒಳಗಾದವು. ಇದರಿಂದ ಸೋಮವಾರ ದೇಶಿ ಷೇರುಪೇಟೆಗಳಲ್ಲಿ ಸೂಚ್ಯಂಕಗಳು ಏರಿಕೆ ಕಂಡಿವೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) ಸೋಮವಾರ 277 ಅಂಶ ಜಿಗಿತ ಕಂಡು ಐದು ತಿಂಗಳ ಗರಿಷ್ಠ ಮಟ್ಟವಾದ 35,934 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ಈ ಹಿಂದೆ ಜನವರಿ 31 ರಂದು 35,965 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿತ್ತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 80 ಅಂಶ ಹೆಚ್ಚಾಗಿ 10,852 ಅಂಶಗಳಿಗೆ ತಲುಪಿತು. 2018ರ ಜೂನ್‌ 13ರ ನಂತರದ (10,857 ಅಂಶ) ಗರಿಷ್ಠ ಅಂತ್ಯ ಇದಾಗಿದೆ.

ಇಂಧನ, ಭಾರಿ ಯಂತ್ರೋಪಕರಣಗಳು, ವಿದ್ಯುತ್‌ ಮತ್ತು ಬ್ಯಾಂಕಿಂಗ್‌ ಷೇರುಗಳು ಉತ್ತಮ ಖರೀದಿ ವಹಿವಾಟಿಗೆ ಒಳಗಾದವು.

ಡಾಲರ್‌ ಎದುರು ರೂಪಾಯಿ ಮೌಲ್ಯವರ್ಧನೆಯೂ ಚಟುವಟಿಕೆ ಹೆಚ್ಚಲು ಕಾರಣವಾಯಿತು. 

ಉತ್ತಮ ಗಳಿಕೆ: ವೇದಾಂತ ಅತಿ ಹೆಚ್ಚು ಶೇ 3.14 ರಷ್ಟು ಗಳಿಕೆ ಕಂಡರೆ ಏಷ್ಯನ್‌ ಪೇಂಟ್ಸ್‌ ಶೇ 3.11 ರಷ್ಟು ಏರಿಕೆ ಕಂಡಿದೆ. 

ಅಧ್ಯಕ್ಷ ಸ್ಥಾನದಿಂದ ಕೈಬಿಟ್ಟಿರುವ ಟಾಟಾ ಸನ್ಸ್‌ ವಿರುದ್ಧ ಸೈರಸ್‌ ಮಿಸ್ತ್ರಿ ಸಲ್ಲಿಸಿದ್ದ ಅರ್ಜಿಯನ್ನು ಎನ್‌ಸಿಎಲ್‌ಟಿ ವಜಾ ಮಾಡಿದೆ. ಇದರಿಂದ ಟಾಟಾ ಸಮೂಹ ಕಂಪನಿಗಳ ಷೇರುಗಳು ಗಳಿಕೆ ಕಂಡುಕೊಂಡವು.

ರಿಲಯನ್ಸ್‌ ಇಂಡಸ್ಟ್ರೀಸ್‌ ಷೇರುಗಳು ಶೇ 1.96 ರಷ್ಟು ಏರಿಕೆ ಕಂಡು, ಪ್ರತಿ ಷೇರಿನ ಬೆಲೆ ₹ 996ಕ್ಕೆ ತಲುಪಿತು. ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಪ್ರಮುಖ ಸಂಸ್ಥೆ ಇನ್ಫೊಸಿಸ್‌ ಶೇ 1.14 ರಷ್ಟು ಹೆಚ್ಚಾಗಿ ಒಂದು ಷೇರಿನ ಬೆಲೆ ₹ 1,299 ರಂತೆ ಮಾರಾಟವಾಯಿತು.‌‌‌‌

ತ್ರೈಮಾಸಿಕ ಫಲಿತಾಂಶ: ಈ ವಾರ ಹಣಕಾಸು ವರ್ಷದ ಮೊದಲ ತ್ರೈಮಾಸಿಕ ಫಲಿತಾಂಶ ಪ್ರಕಟಣೆಗೆ ಚಾಲನೆ ಸಿಗಲಿದೆ. ಟಿಸಿಎಸ್‌ ಮತ್ತು ಇನ್ಫೊಸಿಸ್ ಸಂಸ್ಥೆಗಳು ತಮ್ಮ ಆರ್ಥಿಕ ಸಾಧನೆ ಪ್ರಕಟಿಸಲಿವೆ. ಈ ಫಲಿತಾಂಶಗಳ ಆಧಾರದ ಮೇಲೆ ಹೂಡಿಕೆ ಚಟುವಟಿಕೆ ನಿರ್ಧಾರವಾಗಲಿದೆ ಎಂದು ದಲ್ಲಾಳಿಗಳು ಹೇಳಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !