ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

37 ಸಾವಿರ ದಾಟಿದ ಸೂಚ್ಯಂಕ

ಆರು ತಿಂಗಳ ಬಳಿಕ ಗರಿಷ್ಠ ಮಟ್ಟದಲ್ಲಿ ಷೇರುಪೇಟೆ ವಹಿವಾಟು ಅಂತ್ಯ
Last Updated 11 ಮಾರ್ಚ್ 2019, 19:49 IST
ಅಕ್ಷರ ಗಾತ್ರ

ಮುಂಬೈ: ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು (ಬಿಎಸ್‌ಇ) ಸೋಮವಾರದ ವಹಿವಾಟಿನಲ್ಲಿ 37 ಸಾವಿರದ ಗಡಿ ದಾಟಿತು.

ಆರು ತಿಂಗಳ ವಹಿವಾಟಿನಲ್ಲಿನ ಗರಿಷ್ಠ ಮಟ್ಟ ಇದಾಗಿದೆ. ರಿಲಯನ್ಸ್‌, ಐಸಿಐಸಿಐ ಬ್ಯಾಂಕ್‌ ಮತ್ತು ಭಾರ್ತಿ ಏರ್‌ಟೆಲ್‌ ಷೇರುಗಳ ಗಳಿಕೆ, ವಿದೇಶಿ ಬಂಡವಾಳದ ಒಳಹರಿವು ಮತ್ತು ಸಕಾರಾತ್ಮಕ ಜಾಗತಿಕ ಸಂಗತಿಗಳಿಂದಾಗಿ ದೇಶದ ಷೇರುಪೇಟೆಯಲ್ಲಿ ಗರಿಷ್ಠ ಮಟ್ಟದಲ್ಲಿ ಖರೀದಿ ಚಟುವಟಿಕೆ ನಡೆಯಿತು ಎಂದು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.

2019ರ ಸಾರ್ವತ್ರಿಕ ಚುನಾವಣೆಯಲ್ಲಿ ಎನ್‌ಡಿಎ ಸರ್ಕಾರವೇ ಗೆಲುವು ಸಾಧಿಸಲಿರುವ ವಿಶ್ವಾಸದಿಂದ ಹೂಡಿಕೆದಾರರು ವಹಿವಾಟು ನಡೆಸಿದರು ಎಂದು ತಜ್ಞರು ಹೇಳಿದ್ದಾರೆ.

ಸಂವೇದಿ ಸೂಚ್ಯಂಕವು 383 ಅಂಶ ಜಿಗಿತ ಕಂಡು 37,054 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ.ಈ ಹಿಂದೆ 2018ರ ಸೆಪ್ಟೆಂಬರ್‌ 19ರಂದು ಸೂಚ್ಯಂಕ 37,121 ಅಂಶಗಳಿಗೆ ತಲುಪಿತ್ತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಪ್ಟಿ 132 ಅಂಶ ಹೆಚ್ಚಾಗಿ 11,168 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ. 2018ರ ಸೆಪ್ಟೆಂಬರ್‌ 26ರ ನಂತರ ಗರಿಷ್ಠ ಮಟ್ಟದ ವಹಿವಾಟಿನ ಅಂತ್ಯ ಇದಾಗಿದೆ.

ಭಾರತ ಮತ್ತು ಪಾಕಿಸ್ತಾನ ಮಧ್ಯೆ ಕಂಡು ಬಂದಿರುವ ಸೇನಾ ಸಂಘರ್ಷವು ಚುನಾವಣೆಯ ಮೇಲೆ ಪರಿಣಾಮ ಬೀರಲಿದ್ದು, ಎನ್‌ಡಿಎ ಸರ್ಕಾರಕ್ಕೆ ಅನುಕೂಲ ಮಾಡಿಕೊಡುವ ಸಾಧ್ಯತೆ ಇದೆ ಎನ್ನುವುದು ಪರಿಣತರ ವಿಶ್ಲೇಷಣೆಯಾಗಿದೆ.

‘ಚುನಾವಣಾ ಫಲಿತಾಂಶವು ಅಲ್ಪಾವಧಿಗೆ ಷೇರುಪೇಟೆಯ ದಿಕ್ಕನ್ನು ನಿರ್ಧರಿಸಲಿದೆ’ ಎಂದು ಷೇರ್‌ಖಾನ್‌ ಸಂಸ್ಥೆಯ ಸಲಹಾ ಮುಖ್ಯಸ್ಥ ಹೇಮಾಂಗ್‌ ಜೈನ್‌ ಅಭಿಪ್ರಾಯಪಟ್ಟಿದ್ದಾರೆ.

ಭಾರ್ತಿ ಏರ್‌ಟೆಲ್‌ ಶೇ 8.08 ರಷ್ಟು ಮತ್ತು ಪವರ್‌ ಗ್ರಿಡ್‌ ಶೇ 3.90ರಷ್ಟು ಗರಿಷ್ಠ ಗಳಿಕೆ ಕಂಡುಕೊಂಡಿವೆ.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಎರಡು ತಿಂಗಳಿನಿಂದ ದೇಶದ ಷೇರುಪೇಟೆಯಲ್ಲಿ ಖರೀದಿಗೆ ಹೆಚ್ಚಿನ ಗಮನ ನೀಡುತ್ತಿದ್ದಾರೆ. ಇದರಿಂದ ಸಕಾರಾತ್ಮಕ ವಹಿವಾಟು ಮುಂದುವರಿಯುತ್ತಿದೆ.

‘ಕಾರ್ಪೊರೇಟ್‌ ಬಾಂಡ್‌ಗಳಲ್ಲಿ ವಿದೇಶಿ ಹೂಡಿಕೆ ಮಿತಿ ಶೇ 20ರವರೆಗಷ್ಟೇ ಇತ್ತು. ಈ ಪ್ರಮಾಣವನ್ನು ಸಡಿಲಿಸಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಬಂಡವಾಳ ಹೂಡಿಕೆಯಾಗುತ್ತಿದೆ’ ಎಂದು ಗ್ರೋವ್‌ ಸಂಸ್ಥೆಯ ಸಿಒಒ ಹರ್ಷ್‌ ಜೈನ್‌ ತಿಳಿಸಿದ್ದಾರೆ.

ರೂಪಾಯಿ ಬೆಲೆ25 ಪೈಸೆ ಗಳಿಕೆ
ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಎದುರು ರೂಪಾಯಿ ಮೌಲ್ಯ 25 ಪೈಸೆ ಹೆಚ್ಚಾಗಿದ್ದು, ಒಂದು ಡಾಲರ್‌ಗೆ ₹ 69.89ರಂತೆ ವಿನಿಮಯಗೊಂಡಿತು.

ವಿದೇಶಿ ಬಂಡವಾಳ ಒಳಹರಿವು, ಷೇರುಪೇಟೆಯಲ್ಲಿನ ಸಕಾರಾತ್ಮಕ ವಹಿವಾಟಿನಿಂದಾಗಿ ರೂಪಾಯಿ ಮೌಲ್ಯ ವೃದ್ಧಿಯಾಗಿದೆ ಎಂದು ವರ್ತಕರು ಹೇಳಿದ್ದಾರೆ.

ಅಂತರರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಬ್ರೆಂಟ್‌ ಕಚ್ಚಾ ತೈಲ ದರ ಶೇ 0.68ರಷ್ಟು ಹೆಚ್ಚಾಗಿ ಒಂದು ಬ್ಯಾರೆಲ್‌ಗೆ 66.19 ಡಾಲರ್‌ಗಳಂತೆ ಮಾರಾಟವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT