ಸೂಚ್ಯಂಕ 379 ಅಂಶ ಜಿಗಿತ

ಮಂಗಳವಾರ, ಮಾರ್ಚ್ 26, 2019
26 °C
ವಾಹನ, ಹಣಕಾಸು, ಇಂಧನ ಷೇರುಗಳ ಗಳಿಕೆ

ಸೂಚ್ಯಂಕ 379 ಅಂಶ ಜಿಗಿತ

Published:
Updated:

ಮುಂಬೈ: ದೇಶದ ಷೇರುಪೇಟೆಗಳಲ್ಲಿ ಮಂಗಳವಾರ ಸಕಾರಾತ್ಮಕ ವಹಿವಾಟು ನಡೆಯಿತು.

ಭಾರತ ಮತ್ತು ಪಾಕಿಸ್ತಾನ ಮಧ್ಯೆ ಮೂಡಿದ್ದ ಬಿಕ್ಕಟ್ಟು ತಗ್ಗಿದೆ. ಇದರ ಜತೆಗೆ ಸೇವಾ ವಲಯದ ಚಟುವಟಿಕೆಯಲ್ಲಿನ ಚೇತರಿಕೆಯಿಂದಾಗಿ ವಾಹನ, ಹಣಕಾಸು ಮತ್ತು ಇಂಧನ ವಲಯದ ಷೇರುಗಳು ಉತ್ತಮ ಖರೀದಿ ವಹಿವಾಟಿಗೆ ಒಳಗಾದವು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು (ಬಿಎಸ್‌ಇ) 379 ಅಂಶ ಜಿಗಿತ ಕಂಡು, 36,442 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 124 ಅಂಶ ಹೆಚ್ಚಾಗಿ 10,987 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ.

ಟಾಟಾ ಮೋಟರ್ಸ್‌ ಶೇ 7.72ರಷ್ಟು ಗರಿಷ್ಠ ಗಳಿಕೆ ಕಂಡುಕೊಂಡಿದೆ. ಹೀರೊಮೋಟೊಕಾರ್ಪ್‌ ಶೇ 5.28, ಆ್ಯಕ್ಸಿಸ್‌ ಬ್ಯಾಂಕ್‌ ಶೇ 4.12ರಷ್ಟು ಏರಿಕೆ ಕಂಡಿವೆ.

ಭಾರತಕ್ಕೆ ನೀಡಿರುವ ಆದ್ಯತಾ ವ್ಯಾಪಾರ ಒಪ್ಪಂದ ರದ್ದುಪಡಿಸಲು ಅಮೆರಿಕ ಸರ್ಕಾರ ನಿರ್ಧರಿಸಿದೆ. ಇದರಿಂದಾಗಿ ಷೇರುಪೇಟೆ ತುಸು ಒತ್ತಡಕ್ಕೆ ಒಳಗಾಗಿತ್ತು. ಆದರೆ, ಭಾರತದ ಮೇಲೆ ಹೆಚ್ಚೇನೂ ಪರಿಣಾಮ ಆಗುವುದಿಲ್ಲ ಎಂದು ಸರ್ಕಾರ ಪ್ರತಿಕ್ರಿಯೆ ನೀಡಿದೆ.

ರೂಪಾಯಿ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಎದುರು ರೂಪಾಯಿ ಮೌಲ್ಯ 43 ಪೈಸೆ ಹೆಚ್ಚಾಗಿ ಒಂದು ಡಾಲರ್‌ಗೆ ₹ 70.49ರಂತೆ ವಿನಿಮಯಗೊಂಡಿತು.

ವಿದೇಶಿ ಬಂಡವಾಳ ಹೂಡಿಕೆ ಮತ್ತು ಷೇರುಪೇಟೆಯಲ್ಲಿನ ಗಳಿಕೆಯಿಂದಾಗಿ ರೂಪಾಯಿ ಮೌಲ್ಯದಲ್ಲಿ ವೃದ್ಧಿಯಾಗಿದೆ ಎಂದು ವರ್ತಕರು
ಹೇಳಿದ್ದಾರೆ.

₹ 2.24 ಲಕ್ಷ ಕೋಟಿ ಸಂಪತ್ತು ವೃದ್ಧಿ

ಷೇರುಪೇಟೆಯಲ್ಲಿ ನಡೆದ ಉತ್ತಮ ವಹಿವಾಟಿನಿಂದ ಹೂಡಿಕೆದಾರರ ಸಂಪತ್ತು ಮೌಲ್ಯ ₹ 2.24 ಲಕ್ಷ ಕೋಟಿಗಳಷ್ಟು ಹೆಚ್ಚಾಗಿದೆ. ಷೇರುಪೇಟೆಯ ಬಂಡವಾಳ ಮೌಲ್ಯ ₹ 142 ಲಕ್ಷ ಕೋಟಿಗಳಿಂದ ₹ 144.24 ಲಕ್ಷ ಕೋಟಿಗೆ ಏರಿಕೆಯಾಗಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !