ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷೇರುಪೇಟೆಯಲ್ಲಿ ಮಾರಾಟದ ಒತ್ತಡ

ಜಾಗತಿಕ ಷೇರುಪೇಟೆಗಳಲ್ಲಿನ ಇಳಿಕೆ, ವಾಯಿದಾ ವಹಿವಾಟಿನ ಪ್ರಭಾವ
Last Updated 25 ಅಕ್ಟೋಬರ್ 2018, 18:46 IST
ಅಕ್ಷರ ಗಾತ್ರ

ಮುಂಬೈ:ದೇಶದ ಷೇರುಪೇಟೆಗಳಲ್ಲಿ ಗುರುವಾರ ಮತ್ತೆ ನಕಾರಾತ್ಮಕ ವಹಿವಾಟು ನಡೆಯಿತು.

ಜಾಗತಿಕ ಮಾರುಕಟ್ಟೆಗಳಲ್ಲಿನ ವಹಿವಾಟು ಇಳಿಕೆ ಹಾಗೂ ಸರ್ಕಾರಿ ಬಾಂಡ್‌ಗಳ ಅಕ್ಟೋಬರ್‌ ತಿಂಗಳ ವಾಯಿದಾ ವಹಿವಾಟು ಮುಕ್ತಾಯವು ಷೇರುಪೇಟೆಗಳಲ್ಲಿ ಮಾರಾಟದ ಒತ್ತಡ ಸೃಷ್ಟಿಸಿದವು.

ಬುಧವಾರ 575 ಅಂಶ ಚೇತರಿಕೆ ಕಂಡಿದ್ದ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) ಗುರುವಾರ 344 ಅಂಶಗಳಷ್ಟು ಇಳಿಕೆ ಕಂಡು, 33,690 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 99 ಅಂಶ ಇಳಿಕೆಯಾಗಿ 10,125 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ.

ಬುಧವಾರ ಅಮೆರಿಕದ ಡೋ ಜೋನ್ಸ್‌ ಸೂಚ್ಯಂಕ ಬುಧವಾರ 600 ಅಂಶಗಳಷ್ಟು ಕುಸಿತ ಕಂಡಿತ್ತು. ಈ ಮೂಲಕ ಈ ವರ್ಷದಲ್ಲಿ ಇದುವರೆಗೆ ಕಂಡಿದ್ದ ಗಳಿಕೆಯೆಲ್ಲವೂ ಕೊಚ್ಚಿ ಹೋಗಿದೆ. ಇದುಏಷ್ಯಾದ ಮಾರುಕಟ್ಟೆಯಲ್ಲಿ ನಕಾರಾತ್ಮಕ ವಹಿವಾಟು ನಡೆಯುವಂತೆ ಮಾಡಿತು.

ಜಾಗತಿಕ ಮಟ್ಟದಲ್ಲಿ ಬಹುತೇಕ ಕಂಪನಿಗಳ ಆರ್ಥಿಕ ಸಾಧನೆ ಮಾರುಕಟ್ಟೆ ನಿರೀಕ್ಷೆಯನ್ನು ತಲುಪಲು ಸಾಧ್ಯವಾಗಿಲ್ಲ. ಈ ಬೆಳವಣಿಗೆಯೂ ಕಂಪನಿಗಳ ಷೇರುಗಳ ಮೌಲ್ಯ ಇಳಿಕೆ ಕಾಣುವಂತೆ ಮಾಡಿತು ಎಂದು ದಲ್ಲಾಳಿಗಳು ಹೇಳಿದ್ದಾರೆ.

ರಿಯಲ್‌ ಎಸ್ಟೇಟ್‌, ಲೋಹ, ಬೃಹತ್‌ ಯಂತ್ರೋಪಕರಣಗಳು ಮತ್ತು ಬ್ಯಾಂಕಿಂಗ್ ಷೇರುಗಳು ಮಾರಾಟದ ಒತ್ತಡಕ್ಕೆ ಒಳಗಾದವು.

ಭಾರ್ತಿ ಏರ್‌ಟೆಲ್‌, ವೇದಾಂತ, ಟಾಟಾ ಮೋಟರ್ಸ್‌, ಅದಾನಿ ಪೋರ್ಟ್ಸ್‌ ಮತ್ತು ಯೆಸ್‌ ಬ್ಯಾಂಕ್‌ ಷೇರುಗಳು ಗರಿಷ್ಠ ನಷ್ಟ ಕಂಡಿವೆ.

ವಿದೇಶಿ ಬಂಡವಾಳ ಹೊರಹರಿವು:ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಗುರುವಾರ ₹ 1,496 ಕೋಟಿ ಮೌಲ್ಯ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಅಕ್ಟೋಬರ್‌ನಲ್ಲಿ ಇದುವರೆಗೆ ₹ 21 ಸಾವಿರ ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದಂತಾಗಿದೆ. ಸೆಪ್ಟೆಂಬರ್‌ನಲ್ಲಿ ₹ 10,824 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದರು.

ರೂಪಾಯಿ ಕುಸಿತ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಎದುರು ರೂಪಾಯಿ ಮೌಲ್ಯ 11 ಪೈಸೆ ಇಳಿಕೆಯಾಗಿದೆ. ಇದರಿಂದ ಒಂದು ಡಾಲರ್‌ಗೆ ₹ 73.27ರಂತೆ ವಿನಿಮಯಗೊಂಡಿತು.

ಸಂವೇದಿ ಸೂಚ್ಯಂಕದ ಕುಸಿತ ಮತ್ತು ವಿದೇಶಿ ಬಂಡವಾಳ ಹೊರಹರಿವಿನಿಂದಾಗಿ ರೂಪಾಯಿ ಮೌಲ್ಯದಲ್ಲಿ ಇಳಿಕೆ ಕಂಡಿದೆ ಎಂದು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.

ರಫ್ತುದಾರರು ಹೆಚ್ಚಿನ ಪ್ರಮಾಣದಲ್ಲಿ ಡಾಲರ್‌ ಖರೀದಿ ನಡೆಸಿರುವುದು ಸಹ ರೂಪಾಯಿ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎಂದು ವರ್ತಕರು ಹೇಳಿದ್ದಾರೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಇಳಿಕೆ ಕಂಡಿದೆ. ಹೀಗಾಗಿ ರೂಪಾಯಿಗೆ ಹೆಚ್ಚಿನ ಹಾನಿಯಾಗಲಿಲ್ಲ.ಬ್ರೆಂಟ್‌ ಕಚ್ಚಾ ತೈಲ ಒಂದು ಬ್ಯಾರೆಲ್‌ಗೆ 76.71 ಡಾಲರ್‌ನಂತೆ ಮಾರಾಟವಾಗಿದೆ.

ಜಾಗತಿಕ ಷೇರುಪೇಟೆಗಳಲ್ಲಿ ಇಳಿಮುಖ ವಹಿವಾಟು ನಡೆದಿರುವುದರಿಂದ ತೈಲ ಬೇಡಿಕೆ ಕಡಿಮೆಯಾಗುವ ಆತಂಕ ಮೂಡಿದೆ. ಹೀಗಾಗಿ ದರದಲ್ಲಿ ಇಳಿಕೆ ಕಂಡಿದೆ ಎನ್ನುವುದು ಮಾರುಕಟ್ಟೆ ಪರಿಣತರು ವಿಶ್ಲೇಷಣೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT