ಶುಕ್ರವಾರ, ಜೂನ್ 5, 2020
27 °C
ಐದು ವಹಿವಾಟಿನ ಅವಧಿಗಳಲ್ಲಿನ ಸೂಚ್ಯಂಕದ ಓಟಕ್ಕೆ ತಡೆ

ಪೇಟೆಯಲ್ಲಿ ಲಾಭ ಗಳಿಕೆ ಒತ್ತಡ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ಹೂಡಿಕೆದಾರರು ಲಾಭ ಗಳಿಕೆ ಉದ್ದೇಶದ ವಹಿವಾಟು ನಡೆಸಿದರು. ಪರಿಣಾಮ ಷೇರುಪೇಟೆಯಲ್ಲಿ ಐದು ವಹಿವಾಟು ದಿನಗಳ ಸೂಚ್ಯಂಕದ ಓಟಕ್ಕೆ ಅಡ್ಡಿಯಾಯಿತು. ಲೋಹ, ಹಣಕಾಸು ಮತ್ತು ವಾಹನ ವಲಯದ ಷೇರುಗಳು ಮಾರಾಟದ ಒತ್ತಡಕ್ಕೆ ಒಳಗಾದವು.

ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಯು (ಐಎಂಎಫ್), 2019 ಮತ್ತು 2020ಕ್ಕೆ ಜಾಗತಿಕ ಆರ್ಥಿಕ ವೃದ್ಧಿ ದರವನ್ನು ಕ್ರಮವಾಗಿ ಶೇ 3.5 ಮತ್ತು 3.6ಕ್ಕೆ ತಗ್ಗಿಸಿದೆ. ಇದರಿಂದ ಜಾಗತಿಕ ಮಾರುಕಟ್ಟೆಗಳಲ್ಲಿ ವಹಿವಾಟು ಇಳಿಕೆ ಕಂಡು ಭಾರತದ ಮೇಲೂ ಅದು ಪರಿಣಾಮ ಬೀರಿತು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು (ಬಿಎಸ್‌ಇ) ಮಂಗಳವಾರ 134 ಅಂಶ ಇಳಿಕೆಯಾಗಿ 36,444 ಅಂಶಗಳಲ್ಲಿ ದಿನದ ವಹಿವಾಟು ಅಂತ್ಯಗೊಂಡಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 39 ಅಂಶ ಇಳಿಕೆ ಕಂಡು 10,922 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಕಂಪನಿಗಳ ಆರ್ಥಿಕ ಸಾಧನೆಯು ಮಾರುಕಟ್ಟೆ ನಿರೀಕ್ಷೆಗಿಂತಲೂ ಉತ್ತಮವಾಗಿದೆ. ಹೀಗಿದ್ದರೂ ಜಾಗತಿಕ ವಿದ್ಯಮಾನಗಳ ಪ್ರಭಾವದಿಂದ ಹೂಡಿಕೆದಾರರು ಮಾರಾಟಕ್ಕೆ ಗಮನ ನೀಡಿದರು.

‘ವಿತ್ತೀಯ ಶಿಸ್ತು ಕಾಯ್ದುಕೊಳ್ಳುವ ಬಗ್ಗೆ ಎದುರಾಗಿರುವ ಸವಾಲು ಹೂಡಿಕೆದಾರರನ್ನು ಆತಂಕಕ್ಕೆ ದೂಡಿದೆ. ರೂಪಾಯಿ ಮೌಲ್ಯ ಇಳಿಕೆಯಿಂದ ಐಟಿ ಮತ್ತು ಔಷಧ ವಲಯದ ಷೇರುಗಳು ಗಳಿಕೆಗೆ ನೆರವಾಗಿವೆ. ಬಹುತೇಕ ಉಳಿದೆಲ್ಲಾ ವಲಯಗಳು ಒತ್ತಡದಲ್ಲಿವೆ’ ಎಂದು ಆಶಿಕಾ ಗ್ರೂಪ್‌ನ ಅಧ್ಯಕ್ಷ ಪಾರಸ್‌ ಬೋಥ್ರಾ ವಿಶ್ಲೇಷಣೆ ಮಾಡಿದ್ದಾರೆ. 

ರೂಪಾಯಿ ಮೌಲ್ಯ 16 ಪೈಸೆ ಇಳಿಕೆ

ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ 16 ಪೈಸೆ ಇಳಿಕೆಯಾಗಿದೆ. ಒಂದು ಡಾಲರ್‌ಗೆ ₹ 71.44 ರಂತೆ ಮಾರಾಟವಾಯಿತು.

ಒಂದು ತಿಂಗಳಿನಲ್ಲಿ ರೂಪಾಯಿ ಮೌಲ್ಯ ₹ 2.4ರಷ್ಟು ಕಡಿಮೆಯಾಗಿದೆ.ಜಾಗತಿಕ ಆರ್ಥಿಕ ಪ್ರಗತಿಯ ಬಗ್ಗೆ ಕಳವಳ ಮತ್ತು ವಿದೇಶಿ ಬಂಡವಾಳ ಹೊರಹರಿವು ರೂಪಾಯಿ ಮೌಲ್ಯ ಇಳಿಕೆಗೆ ಕಾರಣವಾಗಿವೆ ಎಂದು ವರ್ತಕರು ಹೇಳಿದ್ದಾರೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್‌ ಕಚ್ಚಾ ತೈಲ ದರ ಶೇ 1.96ರಷ್ಟು ಇಳಿಕೆಯಾಗಿ ಒಂದು ಬ್ಯಾರೆಲ್‌ಗೆ 61.51 ಡಾಲರ್‌ಗಳಂತೆ ಮಾರಾಟವಾಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು