ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂಚ್ಯಂಕ 383 ಅಂಶ ಕುಸಿತ

Last Updated 17 ಅಕ್ಟೋಬರ್ 2018, 16:59 IST
ಅಕ್ಷರ ಗಾತ್ರ

ಮುಂಬೈ: ದಿನದ ಆರಂಭದಲ್ಲಿನ ಗಳಿಕೆಯನ್ನು ಕಳೆದುಕೊಂಡ ಸಂವೇದಿ ಸೂಚ್ಯಂಕವು, ಬುಧವಾರದ ವಹಿವಾಟಿನಲ್ಲಿ 383 ಅಂಶಗಳಿಗೆ ಎರವಾಗಿ 35 ಸಾವಿರ ಅಂಶಗಳ ಗಡಿಯಿಂದ ಕೆಳಗೆ ಇಳಿದಿದೆ.

ವಹಿವಾಟುದಾರರು ಲಾಭ ಮಾಡಿಕೊಳ್ಳಲು ಮಾರಾಟಕ್ಕೆ ಮುಗಿಬಿದ್ದಿದ್ದರಿಂದ ಪೇಟೆಯಲ್ಲಿ ತೀವ್ರ ಏರಿಳಿತ ಕಂಡು ಬಂದಿತು. ಮೂರು ವಹಿವಾಟಿನ ದಿನಗಳಲ್ಲಿನ ಏರಿಕೆಯನ್ನು ಕಳೆದುಕೊಂಡಿತು.

ಸೂಚ್ಯಂಕವು ಖರೀದಿ ಮತ್ತು ಮಾರಾಟ ಒತ್ತಡಕ್ಕೆ ಸಿಲುಕಿ 880 ಅಂಶಗಳಷ್ಟು ಏರಿಳಿತ ಕಂಡಿತು. ಬ್ಯಾಂಕೇತರ ಹಣಕಾಸು ಸಂಸ್ಥೆಗಳಲ್ಲಿ ನಗದುತನ ಸಮಸ್ಯೆ ಎದುರಾಗಿರುವುದೂ ಖರೀದಿ ಉತ್ಸಾಹ ಉಡುಗಿಸಿದೆ.

ಪೇಟೆಯಲ್ಲಿ ಒಟ್ಟಾರೆ ಎಚ್ಚರಿಕೆಯ ಧೋರಣೆ ಕಂಡು ಬಂದಿತು. ಹೂಡಿಕೆದಾರರು ಕಾದು ನೋಡುವ ತಂತ್ರಕ್ಕೆ ಶರಣಾಗಿದ್ದಾರೆ. ಇನ್ಫೊಸಿಸ್‌ನ ದ್ವಿತೀಯ ತ್ರೈಮಾಸಿಕದ ಹಣಕಾಸು ಸಾಧನೆಯು ನಿರೀಕ್ಷೆಗಿಂತ ಉತ್ತಮವಾಗಿರುವುದರಿಂದ ಸೂಚ್ಯಂಕವು ವಹಿವಾಟಿನ ಆರಂಭದ ಹಂತದಲ್ಲಿ 35,605 ಅಂಶಗಳವರೆಗೆ ಏರಿಕೆ ದಾಖಲಿಸಿತ್ತು.

ಆನಂತರ ಹೂಡಿಕೆದಾರರು ಲಾಭ ಮಾಡಿಕೊಳ್ಳುವ ಉದ್ದೇಶದಿಂದ ಬಹುತೇಕ ಷೇರುಗಳ ಮಾರಾಟಕ್ಕೆ ಆದ್ಯತೆ ನೀಡಿದ್ದರು. ಇದರಿಂದ ಮಧ್ಯಾಹ್ನದ ವೇಳೆಗೆ ಸೂಚ್ಯಂಕವು 34,727 ಅಂಶಗಳವರೆಗೆ ಕುಸಿತ ಕಂಡಿತ್ತು. ದಿನದ ಅಂತ್ಯಕ್ಕೆ 383 ಅಂಶಗಳಿಗೆ ಎರವಾಗಿ 34,779 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿತು.

ದೇಶಿ ಸಾಂಸ್ಥಿಕ ಹೂಡಿಕೆದಾರರ ನಿರಂತರ ಖರೀದಿ ಆಸಕ್ತಿ ಮತ್ತು ಜಾಗತಿಕ ಷೇರುಪೇಟೆಗಳಲ್ಲಿನ ಚೇತರಿಕೆ ಫಲವಾಗಿ ಮೂರು ವಹಿವಾಟಿನ ದಿನಗಳಲ್ಲಿ ಸೂಚ್ಯಂಕವು 1,161 ಅಂಶಗಳಷ್ಟು ಏರಿಕೆ ಕಂಡಿತ್ತು.

ರಾಷ್ಟ್ರೀಯ ಷೇರುಪೇಟೆ ‘ನಿಫ್ಟಿ’ ಕೂಡ 131 ಅಂಶಗಳಿಗೆ ಎರವಾಗಿದೆ. ದಸರಾ ಪ್ರಯುಕ್ತ ಗುರುವಾರ ಷೇರುಪೇಟೆಗೆ ರಜೆ ಇರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT