ಸೋಮವಾರ, ಅಕ್ಟೋಬರ್ 18, 2021
25 °C
₹ 250 ಲಕ್ಷ ಕೋಟಿ ತಲುಪಿದ ಬಿಎಸ್‌ಇ ಮಾರುಕಟ್ಟೆ ಬಂಡವಾಳ ಮೌಲ್ಯ

ಸೆನ್ಸೆಕ್ಸ್‌, ನಿಫ್ಟಿ; ಸಾರ್ವಕಾಲಿಕ ದಾಖಲೆಯ ವಹಿವಾಟು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ದೇಶದ ಷೇರುಪೇಟೆಗಳು ಮಂಗಳವಾರ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿ ವಹಿವಾಟು ಅಂತ್ಯಗೊಳಿಸಿವೆ. ಮುಂಬೈ ಷೇರುಪೇಟೆ (ಬಿಎಸ್‌ಇ) ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಇದೇ ಮೊದಲ ಬಾರಿಗೆ 57 ಸಾವಿರದ ಗಡಿಯನ್ನು ದಾಟಿದರೆ, ರಾಷ್ಟ್ರೀಯ ಷೇರುಪೇಟೆ (ಎನ್‌ಎಸ್‌ಇ) ಸಂವೇದಿ ಸೂಚ್ಯಂಕ ನಿಫ್ಟಿ 17 ಸಾವಿರದ ಗಡಿ ದಾಟಿತು.

ಆಗಸ್ಟ್‌ ತಿಂಗಳಿನಲ್ಲಿ ಸೆನ್ಸೆಕ್ಸ್‌ ಹಲವು ದಾಖಲೆಗಳನ್ನು ಬರೆದಿದ್ದು, ಶೇಕಡ 9ಕ್ಕೂ ಹೆಚ್ಚಿನ ಏರಿಕೆ ಕಂಡಿದೆ. ಮಂಗಳವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್‌ 663 ಅಂಶ ಏರಿಕೆ ಕಂಡು 57,552 ಅಂಶಗಳ ದಾಖಲೆಯ ಮಟ್ಟದಲ್ಲಿ ವಹಿವಾಟು ಅಂತ್ಯವಾಯಿತು. ಎನ್‌ಎಸ್‌ಇ ನಿಫ್ಟಿ 201 ಅಂಶ ಹೆಚ್ಚಾಗಿ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 17,132 ಅಂಶಗಳಿಗೆ ತಲುಪಿದೆ.

ಬಿಎಸ್‌ಇಯಲ್ಲಿ ಭಾರ್ತಿ ಏರ್‌ಟೆಲ್‌ ಷೇರು ಮೌಲ್ಯ ಶೇ 6.99ರಷ್ಟು ಗರಿಷ್ಠ ಏರಿಕೆ ಕಂಡಿದೆ. ದೂರಸಂಪರ್ಕ ಕಂಪನಿಗಳ ಸೇವಾ ಶುಲ್ಕ ಹೆಚ್ಚಾಗಬೇಕು ಎಂದು ಏರ್‌ಟೆಲ್‌ ಕಂಪನಿಯ ಅಧ್ಯಕ್ಷ ಸುನಿಲ್‌ ಭಾರ್ತಿ ಮಿತ್ತಲ್ ಸೋಮವಾರ ಹೇಳಿಕೆ ನೀಡಿರುವುದು ಮಂಗಳವಾರ ಆ ಕಂಪನಿಯ ಷೇರುಗಳ ಮೌಲ್ಯ ಹೆಚ್ಚಳಕ್ಕೆ ಕಾರಣವಾಯಿತು.

ಜಾಗತಿಕ ಷೇರುಪೇಟೆಗಳ ಸಕಾರಾತ್ಮಕ ಚಲನೆ ಹಾಗೂ ಆರ್ಥಿಕ ಬೆಳವಣಿಗೆಯ ಆಶಾವಾದದಿಂದ ದೇಶದ ಷೇರುಪೇಟೆಗಳಲ್ಲಿ ಉತ್ತಮ ಖರೀದಿ ವಹಿವಾಟು ನಡೆಯಿತು. ಹಣಕಾಸು ವರ್ಷದ ಮೊದಲ ತ್ರೈಮಾಸಿಕ ಜಿಡಿಪಿ ಅಂಕಿ–ಅಂಶ ಬಿಡುಗಡೆಗೂ ಮುನ್ನ ಮಾರುಕಟ್ಟೆ ಚಟುವಟಿಕೆಯು ಸಕಾರಾತ್ಮಕವಾಗಿತ್ತು. ರೂಪಾಯಿ ಮೌಲ್ಯ ಬಲವರ್ಧನೆ ಕೂಡ ಸೂಚ್ಯಂಕಗಳ ಓಟಕ್ಕೆ ನೆರವಾಯಿತು.

ಎಲ್ಲ ವಲಯಗಳಲ್ಲಿಯೂ ನಿರಂತರವಾಗಿ ಖರೀದಿ ನಡೆದಿದ್ದು ಹಾಗೂ ಜಾಗತಿಕ ಮಾರುಕಟ್ಟೆಗಳಲ್ಲಿ ಉತ್ತಮ ವಹಿವಾಟು ನಡೆದಿದ್ದು ದೇಶಿ ಷೇರುಪೇಟೆಗಳ ಸೂಚ್ಯಂಕಗಳಿಗೆ ವೇಗ ನೀಡಿದವು. ಎಲ್ಲ ಪ್ರಮುಖ ವಲಯಗಳ ಸೂಚ್ಯಂಕಗಳು ಗಳಿಕೆ ಕಂಡವು. ಲೋಹ, ಹಣಕಾಸು (ಬ್ಯಾಂಕ್‌ ಹೊರತುಪಡಿಸಿ) ಮತ್ತು ಔಷಧ ವಲಯಗಳು ಉತ್ತಮ ಚೇತರಿಕೆ ಕಂಡಿವೆ ಎಂದು ಜಿಯೋಜಿತ್‌ ಹಣಕಾಸು ಸೇವೆಗಳ ಸಂಶೋಧನಾ ಮುಖ್ಯಸ್ಥ ವಿನೋದ್‌ ನಾಯರ್‌ ಹೇಳಿದ್ದಾರೆ.

ರೂಪಾಯಿ ಮೌಲ್ಯ ವೃದ್ಧಿ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಮಂಗಳವಾರ ರೂಪಾಯಿ ಮೌಲ್ಯವು ಅಮೆರಿಕದ ಡಾಲರ್‌ ಎದುರು 29 ಪೈಸೆ ಹೆಚ್ಚಾಯಿತು. ಇದರಿಂದ ಒಂದು ಡಾಲರ್‌ಗೆ ₹ 73ರಂತೆ ವಿನಿಮಯಗೊಂಡಿತು. ನಾಲ್ಕು ದಿನಗಳ ಡಾಲರ್ ಎದುರು ರೂಪಾಯಿ ಮೌಲ್ಯ 124 ಪೈಸೆಗಳಷ್ಟು ಹೆಚ್ಚಾಗಿದೆ.

ಮುಖ್ಯಾಂಶಗಳು
* ಬಿಎಸ್‌ಇ ಮಾರುಕಟ್ಟೆ ಮೌಲ್ಯ ₹ 250 ಲಕ್ಷ ಕೋಟಿಗೆ ಏರಿಕೆ
* ಬಿಎಸ್‌ಇ ಮಿಡ್‌, ಸ್ಮಾಲ್‌ ಕ್ಯಾಪ್‌ ಸೂಚ್ಯಂಕಗಳು ಶೇ 0.86ರವರೆಗೂ ಏರಿಕೆ

ಅಂಕಿ–ಅಂಶ
1,608 ಅಂಶ: 
ನಾಲ್ಕು ದಿನಗಳಲ್ಲಿ ಸೆನ್ಸೆಕ್ಸ್ ಕಂಡಿರುವ ಏರಿಕೆ
9,801 ಅಂಶ: ಈ ವರ್ಷದಲ್ಲಿ ಇಲ್ಲಿಯವರೆಗೆ ಸೆನ್ಸೆಕ್ಸ್‌ ಕಂಡಿರುವ ಏರಿಕೆ
9%ಕ್ಕೂ ಹೆಚ್ಚು: ಆಗಸ್ಟ್‌ನಲ್ಲಿ ಬಿಎಸ್‌ಇ ಸೆನ್ಸೆಕ್ಸ್‌ ಹೆಚ್ಚಳ ಪ್ರಮಾಣ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು