ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕರಡಿ ಹಿಡಿತಕ್ಕೆ ಷೇರುಪೇಟೆ: ಸೆನ್ಸೆಕ್ಸ್‌ 885, ನಿಫ್ಟಿ 293 ಅಂಶ ಇಳಿಕೆ

Published : 2 ಆಗಸ್ಟ್ 2024, 14:28 IST
Last Updated : 2 ಆಗಸ್ಟ್ 2024, 14:28 IST
ಫಾಲೋ ಮಾಡಿ
Comments

ಮುಂಬೈ: ಸತತ ಐದು ದಿನಗಳಿಂದ ಏರಿಕೆ ಕಂಡಿದ್ದ ದೇಶದ ಷೇರುಪೇಟೆಗಳಲ್ಲಿ ಶುಕ್ರವಾರ ಕರಡಿ ಕುಣಿತ ಜೋರಾಯಿತು. ಹೂಡಿಕೆದಾರರು ಲಾಭ ಮಾಡಿಕೊಳ್ಳುವ ಉದ್ದೇಶದಿಂದ ಲೋಹ, ಆಟೊ ಮತ್ತು ಐ.ಟಿ ಷೇರುಗಳ ಮಾರಾಟಕ್ಕೆ ಮುಂದಾದರು. ಇದರಿಂದ ಸೂಚ್ಯಂಕಗಳು ಇಳಿಕೆ ಕಂಡಿವೆ.

ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್‌ 885 ಅಂಶ (ಶೇ 1.08ರಷ್ಟು) ಇಳಿಕೆ ಕಂಡು, 80,981 ಅಂಶಗಳಲ್ಲಿ ಸ್ಥಿರಗೊಂಡಿತು. ದಿನದ ವಹಿವಾಟಿನಲ್ಲಿ 998 ಅಂಶ ಇಳಿಕೆಯಾಗಿತ್ತು. ಸೆನ್ಸೆಕ್ಸ್ ಗುಚ್ಛದಲ್ಲಿನ 30 ಕಂಪನಿಗಳ ಪೈಕಿ 25 ಕಂಪನಿಗಳ ಷೇರಿನ ಮೌಲ್ಯದಲ್ಲಿ ಕುಸಿತವಾಗಿದೆ. 

ಗುರುವಾರದ ವಹಿವಾಟಿನಲ್ಲಿ 25 ಸಾವಿರ ಅಂಶ ದಾಟಿ ಹೊಸ ಎತ್ತರಕ್ಕೆ ಜಿಗಿದಿದ್ದ ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ, 293 ಅಂಶ ಕುಸಿತ ಕಂಡಿತು. 24,717 ಅಂಶಗಳಲ್ಲಿ ವಹಿವಾಟನ್ನು ಮುಕ್ತಾಯಗೊಳಿಸಿತು.

ಮಾರುತಿ ಸುಜುಕಿ ಇಂಡಿಯಾ, ಟಾಟಾ ಮೋಟರ್ಸ್‌, ಜೆಎಸ್‌ಡಬ್ಲ್ಯು ಸ್ಟೀಲ್‌, ಎಲ್‌ ಆ್ಯಂಡ್ ಟಿ, ಟಾಟಾ ಸ್ಟೀಲ್‌, ಮಹೀಂದ್ರ ಆ್ಯಂಡ್‌ ಮಹೀಂದ್ರ, ಟಿಸಿಎಸ್‌, ಟೆಕ್ ಮಹೀಂದ್ರ, ಎಚ್‌ಸಿಎಲ್‌ ಟೆಕ್ನಾಲಜೀಸ್‌, ಇನ್ಫೊಸಿಸ್‌ ಷೇರಿನ ಮೌಲ್ಯದಲ್ಲಿ ಇಳಿಕೆಯಾಗಿದೆ.

ಎಚ್‌ಡಿಎಫ್‌ಸಿ, ಸನ್‌ ಫಾರ್ಮಾ, ಕೋಟಕ್‌ ಮಹೀಂದ್ರ ಬ್ಯಾಂಕ್‌, ನೆಸ್ಲೆ ಇಂಡಿಯಾ ಮತ್ತು ಏಷ್ಯನ್‌ ಪೇಂಟ್ಸ್‌ ಷೇರಿನ ಮೌಲ್ಯದಲ್ಲಿ ಏರಿಕೆಯಾಗಿದೆ.

ಜೂನ್ ತ್ರೈಮಾಸಿಕದಲ್ಲಿ ಲಾಭ ಗಳಿಕೆಯಲ್ಲಿ ಏರಿಕೆಯಾಗಿರುವುದರಿಂದ ಜೊಮಾಟೊ ಷೇರಿನ ಮೌಲ್ಯದಲ್ಲಿ ಶೇ 12ರಷ್ಟು ಏರಿಕೆಯಾಗಿದೆ.

‘ಅಮೆರಿಕದ ಐಎಸ್‌ಎಂ ಮ್ಯಾನುಫ್ಯಾಕ್ಚರಿಂಗ್‌ ಸೂಚ್ಯಂಕವು ಜುಲೈ ತಿಂಗಳಿನಲ್ಲಿ ಎಂಟು ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಇದು ಅಲ್ಲಿನ ಆರ್ಥಿಕತೆಯ ಬೆಳವಣಿಗೆಯ ಮೇಲೆ ಕನ್ನಡಿ ಹಿಡಿದಿದ್ದು, ಆರ್ಥಿಕ ಹಿಂಜರಿತದ ಭೀತಿ ತಲೆದೋರಿದೆ. ಹಾಗಾಗಿ, ಜಾಗತಿಕ ಷೇರುಪೇಟೆಗಳಲ್ಲಿ ನರಾಕಾತ್ಮಕ ವಹಿವಾಟು ನಡೆದಿದೆ. ದೇಶೀಯ ಷೇರುಪೇಟೆಗಳ ಮೇಲೂ ಇದು ಪರಿಣಾಮ ಬೀರಿದೆ’ ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ.

‘ಅಮೆರಿಕದ ಐ.ಟಿ ವಲಯದ ಗಳಿಕೆಯಲ್ಲಿ ಇಳಿಕೆಯಾಗಿದೆ. ನಿರುದ್ಯೋಗ ಪ್ರಮಾಣ ಹೆಚ್ಚಿದೆ. ಬ್ಯಾಂಕ್‌ ಆಫ್ ಜಪಾನ್‌ ಬಡ್ಡಿದರ ಏರಿಕೆ ಮಾಡುವ ಸಾಧ್ಯತೆಯಿದೆ. ಮತ್ತೊಂದೆಡೆ ಚೀನಾದ ಆರ್ಥಿಕತೆಯು ಮಂದಗತಿಯಲ್ಲಿದೆ. ಈ ಎಲ್ಲಾ ವಿದ್ಯಮಾನಗಳು ದೇಶೀಯ ಮಾರುಕಟ್ಟೆಗಳ ಕುಸಿತಕ್ಕೆ ಕಾರಣವಾಗಿವೆ’ ಎಂದು ಜಿಯೋಜಿತ್‌ ಫೈನಾನ್ಶಿಯಲ್‌ ಸರ್ವಿಸಸ್‌ನ (ಸಂಶೋಧನಾ ವಿಭಾಗ) ಮುಖ್ಯಸ್ಥ ವಿನೋದ್‌ ನಾಯರ್‌ ಹೇಳಿದ್ದಾರೆ. 

ಬಿಎಸ್‌ಇ ಸ್ಮಾಲ್‌ಕ್ಯಾಪ್‌ ಸೂಚ್ಯಂಕ ಶೇ 0.58ರಷ್ಟು ಹಾಗೂ ಮಿಡ್‌ಕ್ಯಾಪ್‌ ಸೂಚ್ಯಂಕ ಶೇ 1.19ರಷ್ಟು ಕುಸಿದಿವೆ. 

ಟೋಕಿಯೊ, ಹಾಂಗ್‌ಕಾಂಗ್‌, ಸೋಲ್‌ ಮಾರುಕಟ್ಟೆಗಳು ಇಳಿಕೆ ದಾಖಲಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT