37 ಸಾವಿರಕ್ಕಿಂತ ಕೆಳಗಿಳಿದ ಬಿಎಸ್‌ಇ

ಮುಂಬೈ: ದೇಶದ ಷೇರುಪೇಟೆ ಕುಸಿತಕ್ಕೆ ಹಲವು ಅಂಶಗಳು ಕಾರಣವಾಗುತ್ತಿವೆ. ಈಗಾಗಲೇ ಒಂದು ತಿಂಗಳಿನಿಂದ ನಕಾರಾತ್ಮಕ ಮಟ್ಟದಲ್ಲಿರುವ ಪೇಟೆಯ ಮೇಲೆ ಇದೀಗ ಕಾಶ್ಮೀರದಲ್ಲಿ ಉಂಟಾಗಿರುವ ರಾಜಕೀಯ ಅಸ್ಥಿರತೆಯೂ ಪರಿಣಾಮ ಬೀರಿದೆ.
ಅಮೆರಿಕ–ಚೀನಾ ವಾಣಿಜ್ಯ ಸಮರ, ಕಂಪನಿಗಳ ಆರ್ಥಿಕ ಸಾಧನೆ ಮೊದಲ ತ್ರೈಮಾಸಿಕದಲ್ಲಿ ನಿರಾಸೆ ಮೂಡಿಸಿರುವುದು, ರೂಪಾಯಿ ಮೌಲ್ಯ ಇಳಿಕೆ, ವಿದೇಶಿ ಸಾಂಸ್ಥಿಕ ಹೂಡಿಕೆದಾರರ (ಎಫ್‌ಪಿಐ) ಮೇಲೆ ಸರ್ಚಾರ್ಜ್ ವಿಧಿಸಿರುವುದು ಸಹ ವಹಿವಾಟಿನ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ಬೀರಿವೆ.
ಜಾಗತಿಕ ಷೇರುಪೇಟೆಗಳಲ್ಲಿನ ಮಂದಗತಿಯ ವಹಿವಾಟು ಮತ್ತು ಕಾಶ್ಮೀರದ ಸಮಸ್ಯೆಯಿಂದಾಗಿ ಸೋಮವಾರದ ವಹಿವಾಟಿನಲ್ಲಿ ಬ್ಯಾಂಕಿಂಗ್, ಹಣಕಾಸು ಮತ್ತು ಲೋಹ ವಲಯದ ಷೇರುಗಳು ಅತಿಯಾದ ಮಾರಾಟದ ಒತ್ತಡಕ್ಕೆ ಒಳಗಾದವು. ಇದರಿಂದ ಷೇರುಪೇಟೆಗಳಲ್ಲಿ ಸೂಚ್ಯಂಕಗಳ ಇಳಿಮುಖ ಚಲನೆ ಮುಂದುವರಿಯಿತು.
ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) ವಹಿವಾಟಿನ ಆರಂಭದಲ್ಲಿ 700 ಅಂಶಗಳವರೆಗೆ ಕುಸಿತ ಕಂಡಿತ್ತು. ಮಧ್ಯಾಹ್ನದ ಬಳಿಕ ಮಾರಾಟದ ಒತ್ತಡ ತುಸು ಕಡಿಮೆಯಾಗಿದ್ದರಿಂದ ಸೂಚ್ಯಂಕದ ಇಳಿಕೆಯ ವೇಗಕ್ಕೆ ಕಡಿವಾಣ ಬಿದ್ದು, 418 ಅಂಶಗಳ ಹಾನಿಯೊಂದಿಗೆ 36,700 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿತು.
ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 135 ಅಂಶ ಇಳಿಕೆಯಾಗಿ 10,862 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ.
ಏಷ್ಯಾದ ಶಾಂಘೈ ಕಾಂಪೊಸಿಟ್ ಇಂಡೆಕ್ಸ್, ಹಾಂಗ್ ಸೆಂಗ್, ನಿಕೇಯ್ ಸೂಚ್ಯಂಕಗಳು ಇಳಿಕೆ ಕಂಡಿವೆ.
ರೂಪಾಯಿ ಮೌಲ್ಯ 113 ಪೈಸೆ ಕುಸಿತ
ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ 113 ಪೈಸೆ ಕುಸಿತ ಕಂಡು ಒಂದು ಡಾಲರ್‌ಗೆ ₹ 70.73ಕ್ಕೆ ಇಳಿಕೆಯಾಗಿದೆ. ಆರು ವರ್ಷಗಳ ವಹಿವಾಟಿನಲ್ಲಿ ದಿನವೊಂದರಲ್ಲೇ ರೂಪಾಯಿಯ ಗರಿಷ್ಠ ಕುಸಿತ ಇದಾಗಿದೆ. ವಹಿವಾಟಿನ ಅಂತ್ಯವು ನಾಲ್ಕು ತಿಂಗಳ ಕನಿಷ್ಠ ಮಟ್ಟದ್ದಾಗಿದೆ.
ಯುವಾನ್: ಅಮೆರಿಕ ಮತ್ತು ಚೀನಾ ಮಧ್ಯೆ ನಡೆಯುತ್ತಿರುವ ವಾಣಿಜ್ಯ ಸಮರದಿಂದಾಗಿ ಹೂಡಿಕೆ ಚಟುವಟಿಕೆ ತಗ್ಗುತ್ತಿದೆ. ಈ ಕಾರಣಕ್ಕೆ ಚೀನಾ ಕರೆನ್ಸಿ ಯುವಾನ್ ಮೌಲ್ಯವು 11 ವರ್ಷಗಳ ಬಳಿಕ ಭಾರಿ ಕುಸಿತ ಕಂಡಿದೆ.
ಡಾಲರ್ ಎದುರು ಯುವಾನ್ ಶೇ 7.03ಕ್ಕೆ ಕುಸಿತ ಕಂಡಿದೆ. ಇದು 2008ರ ಫೆಬ್ರುವರಿ ನಂತರದ ಅತ್ಯಂತ ಕನಿಷ್ಠ ಮಟ್ಟವಾಗಿದೆ.
₹ 1.5 ಲಕ್ಷ ಕೋಟಿ ಸಂಪತ್ತು ಕರಗಿದೆ
ದಿನದ ವಹಿವಾಟಿನಲ್ಲಿ ಹೂಡಿಕೆದಾರರ ಸಂಪತ್ತು, ಮಾರುಕಟ್ಟೆ ಮೌಲ್ಯದ ಲೆಕ್ಕದಲ್ಲಿ ₹ 1.5 ಲಕ್ಷ ಕೋಟಿ ಕರಗಿದೆ. ಷೇರುಪೇಟೆಯ ಬಂಡವಾಳ ಮೌಲ್ಯ ₹ 138.37 ಲಕ್ಷ ಕೋಟಿಗೆ ಇಳಿಕೆಯಾಗಿದೆ. ಬಜೆಟ್ ನಂತರ ಇದುವರೆಗೆ ಹೂಡಿಕೆದಾರರ ಸಂಪತ್ತು ₹ 12.98 ಲಕ್ಷ ಕೋಟಿಗಳಷ್ಟು ಕರಗಿದೆ.
ಗರಿಷ್ಠ ನಷ್ಟ
ಯೆಸ್ ಬ್ಯಾಂಕ್ 8.15
ಟಾಟಾ ಮೋಟರ್ಸ್ 5.25
ಪವರ್ ಗ್ರಿಡ್ 4.42
ರಿಲಯನ್ಸ್ ಇಂಡಸ್ಟ್ರೀಸ್ 3.48
ಕೋಟಕ್ ಬ್ಯಾಂಕ್ 3.13
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.