ಪೇಟೆಯಲ್ಲಿ ಕರಡಿ ಕುಣಿತ

ಸೋಮವಾರ, ಮೇ 27, 2019
29 °C
ದೇಶಿ, ಜಾಗತಿಕ ವಿದ್ಯಮಾನಗಳ ಪರಿಣಾಮ

ಪೇಟೆಯಲ್ಲಿ ಕರಡಿ ಕುಣಿತ

Published:
Updated:
Prajavani

ಮುಂಬೈ: ದೇಶದ ಷೇರುಪೇಟೆ ವಹಿವಾಟಿನ ಮೇಲೆ ಕರಡಿ ತನ್ನ ಪ್ರಭಾವ ಬೀರುತ್ತಿದ್ದು ನಕಾರಾತ್ಮಕ ವಹಿವಾಟು ನಡೆಯುತ್ತಿದೆ. ಇದರಿಂದ  ಹೂಡಿಕೆದಾರರ ಸಂಪತ್ತು ಕರಗುತ್ತಿದೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) ಫೆಬ್ರುವರಿ 7ರಿಂದ 15ರವರೆಗೆ ಏಳು ದಿನಗಳ ವಹಿವಾಟು ಅವಧಿಗಳಲ್ಲಿ 1,165 ಅಂಶಗಳಷ್ಟು ಕುಸಿತ ಕಂಡಿದೆ. ಈ ಅವಧಿಯಲ್ಲಿ ಹೂಡಿಕೆದಾರರ ಸಂಪತ್ತಿನಲ್ಲಿ ₹ 4 ಲಕ್ಷ ಕೋಟಿಯಷ್ಟು ಕರಗಿದ್ದು, ಷೇರುಪೇಟೆಯ ಬಂಡವಾಳ ಮೌಲ್ಯ₹ 141 ಲಕ್ಷ ಕೋಟಿಯಿಂದ ₹ 137 ಲಕ್ಷ ಕೋಟಿಗೆ ಇಳಿಕೆಯಾಗಿದೆ.

ವಾರದ ವಹಿವಾಟು:  ಕಳೆದ ಎರಡು ವಾರಗಳಿಂದ ಏರುಮುಖವಾಗಿದ್ದ ಷೇರು ಪೇಟೆಗಳ ವಹಿವಾಟು ಮತ್ತೆ ಇಳಿಮುಖ ಹಾದಿ ಹಿಡಿದಿದೆ. ಫೆ. 11 ರಿಂದ 15ರವರೆಗೆ ಐದು ದಿನಗಳ ವಾರದ ವಹಿವಾಟು ಇಳಿಮುಖವಾಗಿಯೇ ಅಂತ್ಯ ಕಂಡಿದೆ. ಈ ಅವಧಿಯಲ್ಲಿ ಸೂಚ್ಯಂಕ 737.53 ಅಂಶಗಳಷ್ಟು ಇಳಿಕೆಯಾಗಿದ್ದು, 35,808 ಅಂಶಗಳಿಗೆ ತಲುಪಿದೆ.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ ವಾರದ ವಹಿವಾಟಿನಲ್ಲಿ 219 ಅಂಶ ಇಳಿಕೆಯಾಗಿ 10,724 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ನಕಾರಾತ್ಮಕ ಅಂಶಗಳು: ಮುಖ್ಯವಾಗಿ ಸಾರ್ವತ್ರಿಕ ಚುನಾವಣೆಯ ಕಾರಣಕ್ಕಾಗಿ ಪೇಟೆಯಲ್ಲಿ ಅನಿಶ್ಚಿತ ಮತ್ತು ಚಂಚಲ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕೆಲವು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಜನವರಿಯಲ್ಲಿ ಪ್ರಯಾಣಿಕ ವಾಹನಗಳ ಮಾರಾಟದಲ್ಲಿ ಇಳಿಕೆಯಾಗಿದೆ. ಇದರಿಂದ ವಾಹನ ವಲಯದ ಷೇರುಗಳ ಮೌಲ್ಯ ಇಳಿಕೆಯಾಗಿದೆ., ಲಾಭಗಳಿಕೆ ಉದ್ದೇಶದ ವಹಿವಾಟಿನಿಂದ ಮಾರಾಟದ ಒತ್ತಡ ಸೃಷ್ಟಿಯಾಗುತ್ತಿದೆ. ವಾಹನ, ಬ್ಯಾಂಕ್‌, ಲೋಹ ಮತ್ತು ಔಷಧ ವಲಯದ ಷೇರುಗಳು ನಷ್ಟ ಅನುಭವಿಸಿವೆ. 

ಕೆಲವು ಕಂಪನಿಗಳ ತ್ರೈಮಾಸಿಕ ಫಲಿತಾಂಶ ಮಾರುಕಟ್ಟೆಯ ನಿರೀಕ್ಷೆಯಂತೆ ಇಲ್ಲ ಎನ್ನುವ ಕಾರಣವೂ ನಕಾರಾತ್ಮಕ ವಹಿವಾಟು ನಡೆಯುವಂತೆ ಮಾಡಿದೆ ಎಂದು ಪರಿಣತರು ಹೇಳಿದ್ದಾರೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರ ಷೇರುಗಳ ಖರೀದಿಗಿಂತಲೂ ಮಾರಾಟಕ್ಕೆ ಹೆಚ್ಚಿನ ಗಮನ ನೀಡುತ್ತಿದ್ದಾರೆ. ಇದರಿಂದ ಮಾರಾಟದ ಒತ್ತಡ ಕಂಡು ಬಂದು ಸೂಚ್ಯಂಕ ಇಳಿಕೆ ಕಾಣುವಂತಾಗಿದೆ. 

ಕಚ್ಚಾ ತೈಲ ದರದಲ್ಲಿ ಏರಿಕೆಯಾದರೆ ಆಮದು ವೆಚ್ಚ ಹೆಚ್ಚಾಗಲಿದೆ. ಅಮೆರಿಕ ಮತ್ತು ಚೀನಾ ಮಧ್ಯೆ ಮೂಡಿರುವ ವಾಣಿಜ್ಯ ಬಿಕ್ಕಟ್ಟು ಸದ್ಯಕ್ಕೆ ಬಗೆಹರಿಯುವಂತೆ ಕಾಣುತ್ತಿಲ್ಲ. ಇದು ಜಾಗತಿಕ ಷೇರುಪೇಟೆಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದ್ದು, ಭಾರತವೂ ಅದರ ಪ್ರಭಾವಕ್ಕೆ ಒಳಗಾಗಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !