ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೇಟೆಗೆ ದಾಂಗುಡಿ ಇಟ್ಟ ಗೂಳಿ, ಷೇರುಪೇಟೆ ಸೂಚ್ಯಂಕದ ಮಹಾ ಜಿಗಿತ

Last Updated 7 ಏಪ್ರಿಲ್ 2020, 19:45 IST
ಅಕ್ಷರ ಗಾತ್ರ

ಮುಂಬೈ: ಮುಂಬೈ ಷೇರುಪೇಟೆ ವಹಿವಾಟಿನ ಮಾನದಂಡವಾಗಿರುವ ಸಂವೇದಿ ಸೂಚ್ಯಂಕವು ಮಂಗಳವಾರದ ವಹಿವಾಟಿನಲ್ಲಿ 2,476 ಅಂಶಗಳಷ್ಟು ಭಾರಿ ಜಿಗಿತ ಕಂಡಿದೆ.

21 ದಿನಗಳ ಕೊರೊನಾ ದಿಗ್ಬಂಧನವು ಹಂತ ಹಂತವಾಗಿ ಸಡಿಲುಗೊಳ್ಳುವ ನಿರೀಕ್ಷೆ, ದೇಶಿ ಆರ್ಥಿಕತೆಗೆ ಎರಡನೇ ಪರಿಹಾರ ಕೊಡುಗೆ ಪ್ರಕಟಿಸುವ ಸಾಧ್ಯತೆ ಮತ್ತು ಜಾಗತಿಕ ಷೇರುಪೇಟೆಗಳಲ್ಲಿನ ಖರೀದಿ ಉತ್ಸಾಹದಿಂದ ಪ್ರೇರಣೆ ಪಡೆದ ದೇಶಿ ಪೇಟೆಯ ವಹಿವಾಟು ಗಮನಾರ್ಹ ಪ್ರಮಾಣದಲ್ಲಿ ಚೇತರಿಸಿಕೊಂಡಿದೆ.

‘ಏಷ್ಯಾದ ಷೇರುಪೇಟೆಗಳಲ್ಲಿನ ಖರೀದಿ ಉತ್ಸಾಹ ಮತ್ತು ವಿಶ್ವದಾದ್ಯಂತ ಪಿಡುಗಿನ ತೀವ್ರತೆಯು ಕಡಿಮೆಯಾಗುತ್ತಿರುವ ಸೂಚನೆಗಳು ದೇಶಿ ಷೇರುಪೇಟೆಗಳಲ್ಲಿ ಖರೀದಿ ಉತ್ಸಾಹ ಮೂಡಿಸಿವೆ’ ಎಂದು ಆನಂದ್‌ ರಥಿ ಕಂಪನಿಯ ಷೇರು ಸಂಶೋಧನಾ ವಿಭಾಗದ ಮುಖ್ಯಸ್ಥ ನರೇಂದ್ರ ಸೋಳಂಕಿ ಪ್ರತಿಕ್ರಿಯಿಸಿದ್ದಾರೆ.

‘ಕೊರೊನಾ ವೈರಸ್‌ ಹಾವಳಿಯಿಂದಾಗಿ ಪೇಟೆಯಲ್ಲಿನ ಖರೀದಿ ಭರಾಟೆ ಮುಂದುವರೆಯುವ ಸಾಧ್ಯತೆ ಕಡಿಮೆ ಇದೆ’ ಎಂದು ಜಿಯೊಜಿತ್‌ ಫೈನಾನ್ಶಿಯಲ್‌ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್‌ ನಾಯರ್‌ ವಿಶ್ಲೇಷಿಸಿದ್ದಾರೆ.

ವಹಿವಾಟಿನ ಒಂದು ಹಂತದಲ್ಲಿ 2,567 ಅಂಶಗಳಿಗೆ ತಲುಪಿದ್ದ ಪ್ರಮುಖ 30 ಕಂಪನಿ ಷೇರುಗಳ ಸಂವೇದಿ ಸೂಚ್ಯಂಕವು ದಿನದಂತ್ಯಕ್ಕೆ 2,476 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿ 30 ಸಾವಿರ ಅಂಶಗಳ ಗಡಿ ದಾಟಿತು. ಸೂಚ್ಯಂಕದ ದಿನದ ಹೆಚ್ಚಳವು 2009ರ ನಂತರದ ಅತಿದೊಡ್ಡ ಏರಿಕೆಯಾಗಿದೆ. ಅದೇ ರೀತಿ, ರಾಷ್ಟ್ರೀಯ ಷೇರುಪೇಟೆ ‘ನಿಫ್ಟಿ’ 708 ಅಂಶಗಳ ಹೆಚ್ಚಳ ಕಂಡು 8,792 ಅಂಶಗಳಿಗೆ ತಲುಪಿತು.

ಇಂಡಸ್‌ಇಂಡ್‌ ಬ್ಯಾಂಕ್‌ ಷೇರು ಬೆಲೆ ಗರಿಷ್ಠ (ಶೇ 22) ಏರಿಕೆ ದಾಖಲಿಸಿತು. ನಂತರದ ಸ್ಥಾನದಲ್ಲಿ ಆ್ಯಕ್ಸಿಸ್‌ ಬ್ಯಾಂಕ್‌, ಮಹೀಂದ್ರಾ ಆ್ಯಂಡ್‌ ಮಹೀಂದ್ರಾ, ಐಸಿಐಸಿಐ ಬ್ಯಾಂಕ್‌, ಎಚ್‌ಯುಎಲ್‌, ಮಾರುತಿ, ಎಚ್‌ಸಿಎಲ್‌ ಟೆಕ್‌ ಮತ್ತು ಹೀರೊ ಮೋಟೊಕಾರ್ಪ್‌ ಇವೆ.

ಶಾಂಘೈ, ಹಾಂಗ್‌ಕಾಂಗ್‌, ಟೋಕಿಯೊ, ಸೋಲ್‌ ಷೇರುಪೇಟೆಗಳು ಶೇ 2ರಷ್ಟು ಚೇತರಿಕೆ ಕಂಡಿವೆ.

ತೈಲ ಬೆಲೆ ಏರಿಕೆ: ಬ್ರೆಂಟ್‌ ಕಚ್ಚಾ ತೈಲದ ವಾಯಿದಾ ಬೆಲೆಯು ಶೇ 2.48ರಷ್ಟು ಏರಿಕೆಯಾಗಿ ಪ್ರತಿ ಬ್ಯಾರಲ್‌ಗೆ 33.87 ಡಾಲರ್‌ಗೆ ತಲುಪಿದೆ.

ರೂಪಾಯಿ ಚೇತರಿಕೆ: ಡಾಲರ್‌ ಎದುರಿನ ರೂಪಾಯಿ ವಿನಿಮಯ ದರವು 49 ಪೈಸೆ ಹೆಚ್ಚಳಗೊಂಡು ₹ 75.64ಕ್ಕೆ ತಲುಪಿದೆ.

ಸಂಪತ್ತು ಹೆಚ್ಚಳ

ಸೂಚ್ಯಂಕದ ಜಿಗಿತದಿಂದ ಷೇರುಪೇಟೆಯಲ್ಲಿ ವಹಿವಾಟು ನಡೆಸುವ ಕಂಪನಿಗಳ ಮಾರುಕಟ್ಟೆ ಮೌಲ್ಯವು ₹ 7.9 ಲಕ್ಷ ಕೋಟಿಗಳಷ್ಟು ಹೆಚ್ಚಾಗಿದೆ.

8.97 %; ಬಿಎಸ್‌ಇ ಸೂಚ್ಯಂಕ ಹೆಚ್ಚಳ

8.76 %; ರಾಷ್ಟ್ರೀಯ ಷೇರುಪೇಟೆ ‘ನಿಫ್ಟಿ’ ಏರಿಕೆ

2 %: ಏಷ್ಯಾದ ಷೇರುಪೇಟೆಗಳಲ್ಲಿನ ಚೇತರಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT