ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂದ ಆರ್ಥಿಕ ಪ್ರಗತಿ; ಸೇವಾ ವಲಯದಲ್ಲಿ ಕುಸಿತ

3ನೇ ತ್ರೈಮಾಸಿಕದಲ್ಲಿಯೂ ಎಚ್ಚರಿಕೆಯ ಗಂಟೆ
Last Updated 5 ನವೆಂಬರ್ 2019, 20:18 IST
ಅಕ್ಷರ ಗಾತ್ರ

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದ ಆರಂಭದಲ್ಲಿಯೇ ದೇಶಿ ಆರ್ಥಿಕತೆಗೆ ಸಂಬಂಧಿಸಿ ನಿರಾಶಾದಾಯಕ ಬೆಳವಣಿಗೆಗಳು ಕಂಡು ಬಂದಿವೆ.

ಸೇವಾ ವಲಯದ ಚಟುವಟಿಕೆಗಳ ಪ್ರಗತಿಯು ಸತತ 2ನೇ ತಿಂಗಳೂ ಕುಸಿತ ಕಂಡಿದೆ. ಸೇವೆಗಳ ರಫ್ತು ಸತತ 4ನೇ ತಿಂಗಳೂ ಕುಸಿದಿದೆ. ಅಕ್ಟೋಬರ್‌ – ಡಿಸೆಂಬರ್‌ ತ್ರೈಮಾಸಿಕದಲ್ಲಿಯೂ ಆರ್ಥಿಕ ಬೆಳವಣಿಗೆ ಮಂದಗತಿಯಲ್ಲಿ ಇರುವುದನ್ನು ಇದು ದೃಢೀಕರಿಸುತ್ತವೆ. ಅರ್ಥ ವ್ಯವಸ್ಥೆಯು ಎದುರಿಸುತ್ತಿರುವ ಸಂಕಷ್ಟಗಳು ಇನ್ನೂ ಕೆಲ ಸಮಯದವರೆಗೆ ಮುಂದುವರೆಯಲಿವೆ ಎನ್ನುವುದನ್ನು ಈ ವಿದ್ಯಮಾನವು ಪುಷ್ಟೀಕರಿಸುತ್ತದೆ.

ಕಚ್ಚಾ ವಸ್ತುಗಳ ಖರೀದಿ ವೆಚ್ಚವು ಒಂದು ವರ್ಷದ ಹಿಂದಿನ ಗರಿಷ್ಠ ಮಟ್ಟಕ್ಕೆ ತಲುಪಿರುವುದರಿಂದ ಸೇವಾ ವಲಯದಲ್ಲಿನ ಆತ್ಮವಿಶ್ವಾಸವು ಮೂರು ವರ್ಷಗಳ ಹಿಂದಿನ ಮಟ್ಟಕ್ಕೆ ಇಳಿದಿದೆ. ಸೇವಾ ವಲಯವು ದೇಶಿ ಆರ್ಥಿಕತೆಗೆ ಅರ್ಧಕ್ಕಿಂತ ಹೆಚ್ಚಿನ ಕೊಡುಗೆ ನೀಡುತ್ತಿದೆ. ಹೀಗಾಗಿ ಈ ವಿದ್ಯಮಾನವು ಅರ್ಥ ವ್ಯವಸ್ಥೆ ಮೇಲೆ ಗಂಭೀರ ಸ್ವರೂಪದ ಪರಿಣಾಮ ಬೀರಲಿದೆ.

ಕಚ್ಚಾ ಸರಕಿನ ವೆಚ್ಚ ಹೆಚ್ಚಿರುವುದರಿಂದ ಹಿಂದಿನ ಎರಡು ತ್ರೈಮಾಸಿಕಗಳಲ್ಲಿ ಸೇವಾ ವಲಯದ ಪ್ರಗತಿ ಕುಗ್ಗಿದೆ. ಸಾಗಾಣಿಕೆ, ಇಂಧನ, ತರಕಾರಿ ಮತ್ತು ಸಿಬ್ಬಂದಿ ವೆಚ್ಚ ಹೆಚ್ಚಳಗೊಂಡಿರುವುದರಿಂದ ಕಚ್ಚಾ ಸರಕಿನ ಹಣದುಬ್ಬರವು ಒಂದು ವರ್ಷದ ಹಿಂದಿನ ಗರಿಷ್ಠ ಮಟ್ಟ ತಲುಪಿದೆ. ಸೆಪ್ಟೆಂಬರ್‌ಗೆ ಹೋಲಿಸಿದರೆ ಅಕ್ಟೋಬರ್‌ನಲ್ಲಿ ಉದ್ದಿಮೆ ವಹಿವಾಟಿನ ಚಟುವಟಿಕೆಗಳು ಸ್ಥಿರಗೊಂಡಿದ್ದು ಉದ್ಯೋಗ ಸೃಷ್ಟಿಯೂ ಮಿತವಾಗಿದೆ.

ನಿಕೆಯಿ / ಐಎಚ್‌ಎಸ್‌ ಮರ್ಕಿಟ್‌ ಸರ್ವಿಸಸ್‌ ಪರ್ಚೇಜಿಂಗ್‌ ಮ್ಯಾನೇಜರ್ಸ್‌ ಇಂಡೆಕ್ಸ್‌, ಸೆಪ್ಟೆಂಬರ್‌ಗೆ ಹೋಲಿಸಿದರೆ ಅಕ್ಟೋಬರ್‌ನಲ್ಲಿ 48.7 ರಿಂದ 49.2ಕ್ಕೆ ಅಲ್ಪ ಏರಿಕೆ ಕಂಡಿದೆ. ಆದರೆ, ತಿಂಗಳ ಲೆಕ್ಕದಲ್ಲಿ ಆರ್ಥಿಕ ಪ್ರಗತಿ ಮತ್ತು ಕುಸಿತವನ್ನು ಬೇರ್ಪಡಿಸುವ 50ರ ಮಟ್ಟಕ್ಕಿಂತ ಕಡಿಮೆ ಇದೆ. ಅಕ್ಟೋಬರ್‌ ತಿಂಗಳಲ್ಲಿ ತಯಾರಿಕಾ ವಲಯದ ‘ಪಿಎಂಐ’ ಸೆ‍ಪ್ಟೆಂಬರ್‌ನಲ್ಲಿನ 51.4ಕ್ಕೆ ಹೋಲಿಸಿದರೆ 50.6ಕ್ಕೆ ಇಳಿದಿದೆ. ತಯಾರಿಕೆ ಮತ್ತು ಸೇವಾ ವಲಯದಲ್ಲಿನ ಪ್ರಸಕ್ತ ಸಂದರ್ಭದಲ್ಲಿನ ಏರಿಳಿತದ ವಿದ್ಯಮಾನಗಳನ್ನು ಪರ್ಚೆಸಿಂಗ್‌ ಮ್ಯಾನೇಜರ್ಸ್‌ ಇಂಡೆಕ್ಸ್‌ ಸೂಚಿಸುತ್ತದೆ.

ಚಿನ್ನದ ಬೇಡಿಕೆ ಕುಸಿತ
ಪ್ರಸಕ್ತ ಹಣಕಾಸು ವರ್ಷದಲ್ಲಿ ಚಿನ್ನದ ಬೇಡಿಕೆಯು ಶೇ 8ರಷ್ಟು ಕಡಿಮೆಯಾಗಲಿದೆ. ಇದು ಹಿಂದಿನ ಮೂರು ವರ್ಷಗಳಲ್ಲಿನ ಕಡಿಮೆ ಮಟ್ಟವಾಗಿದೆ ಎಂದು ವಿಶ್ವ ಚಿನ್ನದ ಮಂಡಳಿ (ಡಬ್ಲ್ಯುಜಿಸಿ) ತಿಳಿಸಿದೆ.

‘ದುಬಾರಿ ಬೆಲೆ ಜತೆಗೆ, ಗ್ರಾಮೀಣ ಪ್ರದೇಶದಲ್ಲಿ ಖರೀದಿ ಉತ್ಸಾಹ ಕಂಡು ಬರದಿರುವುದೂ ಇದಕ್ಕೆ ಕಾರಣವಾಗಿದೆ. ಭಾರತದಲ್ಲಿ ಎರಡು ಮೂರಾಂಶದಷ್ಟು ಚಿನ್ನದ ಬೇಡಿಕೆಯು ಗ್ರಾಮೀಣ ಭಾಗದಿಂದಲೇ ಬರುತ್ತದೆ’ ಎಂದು ‘ಡಬ್ಲ್ಯುಜಿಸಿ’ಯ ಭಾರತದ ವ್ಯವಸ್ಥಾಪಕ ನಿರ್ದೇಶಕ ಸೋಮಸುಂದರಂ ಪಿಆರ್‌ ಹೇಳಿದ್ದಾರೆ.

ಜಿಡಿ‍ಪಿ: ಶೀಘ್ರವೇ ಹೊಸ ಮೂಲ ವರ್ಷ
ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) ಲೆಕ್ಕ ಹಾಕಲು, ಸಾಂಖ್ಯಿಕ ಮತ್ತು ಕಾರ್ಯಕ್ರಮ ಜಾರಿ ಸಚಿವಾಲಯವು ಶೀಘ್ರದಲ್ಲಿಯೇ ಹೊಸ ಮೂಲ ವರ್ಷ ನಿಗದಿಪಡಿಸಲಿದೆ.

‘ಸದ್ಯಕ್ಕೆ ಮೂಲ ವರ್ಷವೆಂದು 2011–12 ಪರಿಗಣಿಸಲಾಗುತ್ತಿದೆ. ಆರ್ಥಿಕತೆಯ ಸ್ವರೂಪದಲ್ಲಿ ಆಗಿರುವ ಬದಲಾವಣೆಯ ವಾಸ್ತವ ಚಿತ್ರಣ ಪರಿಗಣಿಸಲು ಹೊಸ ಮೂಲ ವರ್ಷ ನೆರವಾಗಲಿದೆ’ ಎಂದು ಸಾಂಖ್ಯಿಕ ಮತ್ತು ಕಾರ್ಯಕ್ರಮ ಜಾರಿ ಸಚಿವಾಲಯದ ಕಾರ್ಯದರ್ಶಿ ಪ್ರವೀಣ್‌ ಶ್ರೀವಾಸ್ತವ ಹೇಳಿದ್ದಾರೆ.

ಸ್ವಯಂಕೃತ ಅಪರಾಧ
ಆರ್ಥಿಕ ಬೆಳವಣಿಗೆ ದರವು ಮಂದಗತಿಯಲ್ಲಿ ಇರುವುದಕ್ಕೆ ದೇಶಿ ಆರ್ಥಿಕತೆಗೆ ಮೂರು ವರ್ಷಗಳಲ್ಲಿ ಒಂದರ ಹಿಂದೆ ಒಂದರಂತೆ ಅಪ್ಪಳಿಸಿದ ಆಘಾತಗಳ ಸ್ವಯಂಕೃತ ಅಪರಾಧವೇ ಕಾರಣ ಎಂದು ಷೇರು ದಲ್ಲಾಳಿ ಸಂಸ್ಥೆ ಸೆಂಟ್ರಂ ವರದಿಯಲ್ಲಿ ವಿಶ್ಲೇಷಿಸಿದೆ.

ಗರಿಷ್ಠ ಮುಖಬೆಲೆಯ ನೋಟು ರದ್ದತಿ (2016), ಪೂರ್ವಭಾವಿ ಸಿದ್ಧತೆಗಳಿಲ್ಲದೇ ಜಾರಿಗೆ ತಂದ ಜಿಎಸ್‌ಟಿ ವ್ಯವಸ್ಥೆಯ ಗೋಜಲು (2017) ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳಲ್ಲಿನ ನಗದು ಬಿಕ್ಕಟ್ಟು (2018) ಆರ್ಥಿಕತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿವೆ. ಅರ್ಥ ವ್ಯವಸ್ಥೆಯಲ್ಲಿನ ಸದ್ಯದ ಮಂದಗತಿಯ ಪರಿಣಾಮವು ಹಿಂದಿನ 20 ವರ್ಷಗಳಲ್ಲಿಯೇ ಅತ್ಯಂತ ತೀವ್ರ ಸ್ವರೂಪದ್ದಾಗಿದೆ. ಗ್ರಾಮೀಣ, ನಗರ ಪ್ರದೇಶ ಗಳಲ್ಲಿನ ಇದರ ಪರಿಣಾಮ ಅಸಾಮಾನ್ಯ ಸ್ವರೂಪದಲ್ಲಿದೆ ಎಂದು ತಿಳಿಸಿದೆ. 2021ರ ಮೊದಲ ಅಥವಾ ದ್ವಿತೀಯ ತ್ರೈಮಾಸಿಕದಲ್ಲಿ ಮಾತ್ರ ಆರ್ಥಿಕ ವೃದ್ಧಿ ದರ ಚೇತರಿಕೆ ಹಾದಿಗೆ ಮರಳಬಹುದು ಎಂದು ಸೆಂಟ್ರಂ ವರದಿಯಲ್ಲಿ ಅಂದಾಜಿಸಲಾಗಿದೆ.

‘ಈ ಬಾರಿ ಬಸ್‌ ತಪ್ಪಿಸಿಕೊಳ್ಳುವುದಿಲ್ಲ’
‘ಆರ್ಥಿಕ ಸುಧಾರಣಾ ಕ್ರಮಗಳ ಹೊಸ ಅಲೆ ಶೀಘ್ರ ದಲ್ಲಿಯೇ ಜಾರಿಗೆ ಬರಲಿದ್ದು, ಈ ಬಾರಿ ನಾವು ಬಸ್‌ ತಪ್ಪಿಸಿಕೊಳ್ಳುವುದಿಲ್ಲ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಭಾರಿ ಜನಬೆಂಬಲ ಪಡೆದು ಕೇಂದ್ರದಲ್ಲಿ ಅಧಿಕಾರಕ್ಕೆ ಮರಳಿ ಬಂದಿರುವ ಬಿಜೆಪಿ ಆರ್ಥಿಕತೆಯನ್ನು ಸಂಕಷ್ಟದಿಂದ ಪಾರು ಮಾಡಲು ಭೂ ಸ್ವಾಧೀನ ಮತ್ತು ಕಾರ್ಮಿಕ ಸುಧಾರಣಾ ಕ್ರಮಗಳನ್ನು ತುರ್ತಾಗಿ ಜಾರಿಗೆ ತರಬೇಕಾಗಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ನಿರ್ಮಲಾ ಹೇಳಿಕೆ ಮಹತ್ವ ಪಡೆದಿದೆ. ‘ಹೊಸ ಸುಧಾರಣಾ ಕ್ರಮಗಳ ಜಾರಿಗೆ ಸರ್ಕಾರ ಬದ್ಧವಾಗಿದೆ.ನಾವು ಸದ್ಯದಲ್ಲೇ ಸಾಧ್ಯ ಮಾಡಿ ತೋರಿಸುತ್ತೇವೆ’ ಎಂದು ಮಂಗಳವಾರ ಹೇಳಿದರು.

**
ನವೆಂಬರ್‌ ಮಧ್ಯಭಾಗದಲ್ಲಿ ಕೈಗಾರಿಕಾ ಉತ್ಪಾದನೆ, ಗ್ರಾಹಕ ಮತ್ತು ಸಗಟು ಬೆಲೆ ಸೂಚ್ಯಂಕ ಅಂಕಿ ಅಂಶ ಪ್ರಕಟವಾದ ನಂತರವೇ ಆರ್ಥಿಕ ಚೇತರಿಕೆ ಬಗ್ಗೆ ಮಾತನಾಡಬಹುದು.
-ಪ್ರವೀಣ್‌ ಶ್ರೀವಾಸ್ತವ, ಸಾಂಖ್ಯಿಕ ಮತ್ತು ಕಾರ್ಯಕ್ರಮ ಜಾರಿ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT