ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಇಜೆಡ್‌ಗೆ ಕಾರ್ಮಿಕ ಕಾಯ್ದೆಯಿಂದ ವಿನಾಯ್ತಿ

Last Updated 27 ನವೆಂಬರ್ 2019, 19:19 IST
ಅಕ್ಷರ ಗಾತ್ರ

ಬೆಂಗಳೂರು: ವಿಶೇಷ ಆರ್ಥಿಕ ವಲಯದಲ್ಲಿರುವ (ಎಸ್‌ಇಜೆಡ್) ಎಲ್ಲ ಕೈಗಾರಿಕಾ ಘಟಕಗಳಿಗೂ ಮುಂದಿನ ಐದು ವರ್ಷಗಳ ಅವಧಿಗೆ ಕಾರ್ಮಿಕ ಕಾಯ್ದೆಯ ನಿಯಮಗಳಿಂದ ಷರತ್ತು ಬದ್ಧ ವಿನಾಯ್ತಿ ನೀಡಲಾಗಿದೆ.

ಕೈಗಾರಿಕಾ ಉದ್ಯೋಗ (ಸ್ಥಾಯಿ ಆದೇಶಗಳು) ಕಾಯ್ದೆಯಿಂದ ವಿನಾಯ್ತಿ ನೀಡಿರುವ ಸಂಬಂಧ ಬುಧವಾರ ಅಧಿಸೂಚನೆ ಹೊರಡಿಸಲಾಗಿದೆ. ಮುಖ್ಯವಾಗಿ, ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕುವುದು, ದುರ್ನಡತೆ, ವೇತನ, ರಜೆ ಮತ್ತಿತರ ವಿಷಯಗಳನ್ನು ಕಾಯ್ದೆಯು ನಿಯಂತ್ರಿಸುತ್ತಿತ್ತು.

ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಪ್ರಕಾರ, ರಾಜ್ಯದಲ್ಲಿ 32 ಎಸ್‌ಇಜೆಡ್‌ಗಳು ಸ್ಥಾಪನೆಗೊಂಡಿದ್ದು, ಲಕ್ಷಾಂತರ ಉದ್ಯೋಗಿಗಳಿದ್ದಾರೆ. ಈ ಪೈಕಿ ಬಹುತೇಕ ಎಸ್‌ಇಜೆಡ್‌ಗಳು ಐಟಿ ಮತ್ತು ಐಟಿ ಸೇವೆಗಳಿಗೆ ಸಂಬಂಧಿಸಿವೆ. ಅಲ್ಲದೆ, ಔಷಧ, ಜವಳಿ, ವೈಮಾನಿಕ ಮತ್ತು ಉತ್ಪನ್ನಗಳ ಆಧಾರಿತ ಎಂಜಿನಿಯರಿಂಗ್‌ ವಲಯವೂ ಸೇರಿವೆ.

ವಿಧಿಸಿರುವ ಷರತ್ತುಗಳು: ವಿಶೇಷ ಆರ್ಥಿಕ ವಲಯಗಳಿಗೆ ನಾಲ್ಕು ಷರತ್ತು ಗಳನ್ನು ವಿಧಿಸಲಾಗಿದೆ. ಉದ್ಯೋಗ ಸ್ಥಳದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ (ತಡೆ, ನಿರ್ಬಂಧ ಮತ್ತು ಪರಿಹಾರ) ಕಾಯ್ದೆಯ ಅನ್ವಯ ಆಂತರಿಕ ಸಮಿತಿ ರಚಿಸಬೇಕು. ಕಾರ್ಮಿಕರ ಯಾವುದೇ ಸ್ವರೂಪದ ದೂರುಗಳನ್ನು ವಿಚಾರಿಸಿ, ಪರಿಹಾರ ನೀಡಲು ದೂರು ಪರಿಹಾರ ಸಮಿತಿ ರಚಿಸಬೇಕು.

ಶಿಸ್ತು ಕ್ರಮಗಳಾದ ಅಮಾನತು, ಹಿಂಬಡ್ತಿಯಂತಹ ಶಿಸ್ತು ಕ್ರಮಗಳನ್ನು ತೆಗೆದುಕೊಂಡಾಗ ಸಮಿತಿ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಸೇವಾ ಷರತ್ತುಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಕೇಳುವ ಮಾಹಿತಿಯನ್ನೂ ಕೈಗಾರಿಕೆ ಗಳ ಆಡಳಿತ ಮಂಡಳಿ ಒದಗಿಸಬೇಕು.

ವರ್ಷದ ಆರಂಭದಲ್ಲಿ ರಾಜ್ಯ ಸರ್ಕಾರ ಐಟಿ ಮತ್ತು ಐಟಿ ಸೇವಾ ವಲಯಕ್ಕೆ ಕೈಗಾರಿಕಾ ಉದ್ಯೋಗ ಕಾಯ್ದೆ
ಯಿಂದ 5 ವರ್ಷಗಳ ಅವಧಿಗೆ ವಿನಾಯ್ತಿ ನೀಡಿತ್ತು. ಇದಕ್ಕೂ ಹಿಂದೆ 2014 ರಲ್ಲೂ ವಿನಾಯ್ತಿ ನೀಡಲಾಗಿತ್ತು. ಈ ಕಾಯ್ದೆ ಸಾಂಪ್ರದಾಯಿಕ ಕೈಗಾರಿಕಾ ವ್ಯವಸ್ಥೆಗೆ ಅನುಗುಣವಾಗಿದ್ದು, ಆಧುನಿಕ ಕಾಲದ ಐಟಿ ಉದ್ಯಮಗಳಿಗೆ ಇದನ್ನು ಅನ್ವಯ ಮಾಡುವುದು ಸರಿಯಲ್ಲ ಎಂದು ಐಟಿ ಉದ್ಯಮಿಗಳು ವಾದಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT