ಸೋಮವಾರ, ಆಗಸ್ಟ್ 8, 2022
21 °C

ಅಕ್ಟೋಬರ್‌ನಲ್ಲಿ ಎಸ್‌ಐಪಿ ಹೂಡಿಕೆ ಹೆಚ್ಚಳ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಆರು ತಿಂಗಳ ಬಳಿಕ ಅಕ್ಟೋಬರ್‌ನಲ್ಲಿ ವ್ಯವಸ್ಥಿತ ಹೂಡಿಕೆ ಯೋಜನೆಯ (ಎಸ್‌ಐಪಿ) ಮೂಲಕ ಮ್ಯೂಚುವಲ್‌ ಫಂಡ್‌ ಯೋಜನೆಗಳಲ್ಲಿ ಬಂಡವಾಳ ಹೂಡಿಕೆಯಲ್ಲಿ ಏರಿಕೆ ಕಂಡುಬಂದಿದೆ.

ಅಕ್ಟೋಬರ್‌ನಲ್ಲಿ ಎಸ್‌ಐಪಿ ಮೂಲಕ ₹ 7,800 ಕೋಟಿ ಹೂಡಿಕೆ ಆಗಿದೆ. ಸೆಪ್ಟೆಂಬರ್‌ನಲ್ಲಿ ₹ 7,788 ಕೋಟಿ ಹೂಡಿಕೆ ಆಗಿತ್ತು ಎಂದು ಭಾರತೀಯ ಮ್ಯೂಚುವಲ್‌ ಫಂಡ್‌ ಸಂಸ್ಥೆಗಳ ಒಕ್ಕೂಟ (ಎಎಂಎಫ್‌ಐ) ಮಾಹಿತಿ ನೀಡಿದೆ.

ಪ್ರಸಕ್ತ ಹಣಕಾಸು ವರ್ಷದ ಎಂಟು ತಿಂಗಳಿನಲ್ಲಿ ಎಸ್‌ಐಪಿ ಮೂಲಕ ಮ್ಯೂಚುವಲ್‌ ಫಂಡ್‌ ಉದ್ಯಮದಲ್ಲಿ ಒಟ್ಟಾರೆಯಾಗಿ ₹ 55,627 ಕೋಟಿ ಹೂಡಿಕೆ ಆದಂತಾಗಿದೆ.

‘ತಿಂಗಳಿನಿಂದ ತಿಂಗಳಿಗೆ ಹೂಡಿಕೆಯಲ್ಲಿ ಅಲ್ಪ ಏರಿಕೆ ಕಂಡಿದೆ. ಎಸ್‌ಐಪಿ ಮೂಲಕ ಹೂಡಿಕೆ ಮಾಡಲು ರಿಟೇಲ್‌ ಹೂಡಿಕೆದಾರರಲ್ಲಿ ಮತ್ತೆ ವಿಶ್ವಾಸ ಮೂಡುತ್ತಿದೆ ಎನ್ನುವುದನ್ನು ಇದು ಸೂಚಿಸುತ್ತಿದೆ’ ಎಂದು ಶೇರ್‌ಖಾನ್‌ ಹೂಡಿಕೆ ಪರಿಹಾರಗಳ ಮುಖ್ಯಸ್ಥ ಗೌತಮ್‌ ಕಾಲಿಯಾ ಹೇಳಿದ್ದಾರೆ.

‘ಆರ್ಥಿಕತೆಯು ನಿಧಾನವಾಗಿ ಚೇತರಿಕೆ ಕಾಣುತ್ತಿದೆ. ಉದ್ಯೋಗ ಮಾರುಕಟ್ಟೆಯು ಕೋವಿಡ್‌ಗೂ ಮುಂಚಿನ ಮಟ್ಟಕ್ಕೆ ಬರುತ್ತಿದೆ. ಹಣದ ಕೊರತೆ ಅಥವಾ ವೆಚ್ಚಗಳನ್ನು ನಿರ್ವಹಿಸುವ ಸಲುವಾಗಿ ಹೂಡಿಕೆಗೆ ವಿರಾಮ ನೀಡಿದ್ದ ಹೂಡಿಕೆದಾರರು ಈಗ ಮತ್ತೆ ಸಕ್ರಿಯವಾಗಿ ತೊಡಗಿಕೊಳ್ಳುತ್ತಿದ್ದಾರೆ’ ಎಂದು ಫೈರ್ಸ್‌ನ ಮುಖ್ಯಸ್ಥ ಗೋಪಾಲ್‌ ಕಾವಲಿರೆಡ್ಡಿ ತಿಳಿಸಿದ್ದಾರೆ.

ಅಕ್ಟೋಬರ್‌ನಲ್ಲಿ 11.27 ಲಕ್ಷ ಎಸ್‌ಐಪಿ ಖಾತೆಗಳು ನೋಂದಣಿ ಆಗಿದ್ದವು. ಅದರಲ್ಲಿ 7.87 ಲಕ್ಷ ಖಾತೆಗಳು ಹೂಡಿಕೆ ಸ್ಥಗಿತಗೊಳಿಸಿವೆ ಅಥವಾ ಅವುಗಳ ಅವಧಿ ಮುಕ್ತಾಯವಾಗಿದೆ. ಹೀಗಾಗಿ ಅಕ್ಟೋಬರ್‌ನಲ್ಲಿ ಒಟ್ಟಾರೆ ಖಾತೆಗಳ ಸಂಖ್ಯೆ 3.4 ಲಕ್ಷದಷ್ಟಾಗಿದೆ. ಸದ್ಯ ಮ್ಯೂಚುವಲ್‌ ಫಂಡ್‌ಗಳಲ್ಲಿ ಒಟ್ಟಾರೆಯಾಗಿ 3.37 ಕೋಟಿ ಎಸ್‌ಐಪಿ ಖಾತೆಗಳಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು