ಶನಿವಾರ, ಮೇ 30, 2020
27 °C
‘ಎಂಎಫ್‌’ ಗಳಿಕೆ: ಎದೆಗುಂದಬೇಡಿ

ಎಂಎಫ್‌ ಗಳಿಕೆ ಎದೆಗುಂದಬೇಡಿ

ಪೆಷೊತ್ತನ್‌ ದಸ್ತೂರ್‌ Updated:

ಅಕ್ಷರ ಗಾತ್ರ : | |

Prajavani

ಷೇರು ಪೇಟೆಯಲ್ಲಿ ಈಗ ನಡೆಯುತ್ತಿರುವ ಗೂಳಿಯ ಓಟವು, ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಆರಂಭವಾಗಿರುವಂಥದ್ದು. ಷೇರು ಪೇಟೆಯು ತೇಜಿಯ ಹಾದಿ ಹಿಡಿದಾಗಲೆಲ್ಲ ಒಂದಷ್ಟು ಹೊಸ ಹೂಡಿಕೆದಾರರು ಮಾರುಕಟ್ಟೆಯತ್ತ ಆಕರ್ಷಿತರಾಗುವುದು ಹಿಂದಿನಿಂದಲೂ ನಡೆದುಬಂದ ವ್ಯವಸ್ಥೆಯಾಗಿದೆ.

ಈಗಿನ ತೇಜಿಯೂ ಮಾರುಕಟ್ಟೆಗೆ ಅನೇಕ ಹೊಸ ಚಿಲ್ಲರೆ ಹೂಡಿಕೆದಾರರನ್ನು ಆಕರ್ಷಿಸಿದೆ. ಆದರೆ, ಈಗಿನ ಹೊಸ ಹೂಡಿಕೆದಾರರಿಗೂ ಹಿಂದೆ ಬರುತ್ತಿದ್ದ ಹೊಸ ಹೂಡಿಕೆದಾರಿಗೂ ಸಣ್ಣದೊಂದು ವ್ಯತ್ಯಾಸವಿದೆ. ಅದೆಂದರೆ, ಹಿಂದೆ ಹೊಸ ಹೂಡಿಕೆದಾರರು ನೇರವಾಗಿ ಷೇರುಪೇಟೆಯಲ್ಲಿ ಹೂಡಿಕೆ ಮಾಡುತ್ತಿದ್ದರು. ಆದರೆ, ಈಗ ಇಂಥ ಹೊಸ ಹೂಡಿಕೆದಾರರು ಮ್ಯೂಚುವಲ್‌ ಫಂಡ್‌ಗಳ ಮೂಲಕ ಹೂಡಿಕೆ ಮಾಡುತ್ತಾರೆ.

ಮ್ಯೂಚುವಲ್‌ ಫಂಡ್‌ ಉದ್ದಿಮೆಯು ಕಳೆದ ಸುಮಾರು ಐದು ವರ್ಷಗಳಲ್ಲಿ 2.5 ಪಟ್ಟು ವೃದ್ಧಿ ಕಂಡಿದೆ. 2014ರಲ್ಲಿ ₹ 10 ಲಕ್ಷ ಕೋಟಿ  ಈ ಕ್ಷೇತ್ರದಲ್ಲಿ ಹೂಡಿಕೆ ಆಗಿದ್ದರೆ, ಈಗ ಅದರ ಪ್ರಮಾಣ ₹ 25 ಲಕ್ಷ ಕೋಟಿಯಾಗಿದೆ. 2015ರಲ್ಲಿ ವ್ಯವಸ್ಥಿತ ಹೂಡಿಕೆ ಯೋಜನೆ (ಎಸ್‌ಐಪಿ) ಮೂಲಕ ಹಣ ಹೂಡಿದವರ ಸಂಖ್ಯೆ 73 ಲಕ್ಷ ಇದ್ದರೆ, ಅದು ಈಗ ಮೂರು ಪಟ್ಟು ಏರಿಕೆಯಾಗಿ 2.5 ಕೋಟಿಗೆ ತಲುಪಿದೆ.

ಈ ಅಂಕಿ ಅಂಶಗಳು ಮ್ಯೂಚುವಲ್‌ ಫಂಡ್‌ ಉದ್ದಿಮೆಗೆ ಆಕರ್ಷಕವಾಗಿ ಕಾಣಿಸುತ್ತವೆ ಎಂಬುದು ನಿಜ. ಆದರೆ, ಹೂಡಿಕೆದಾರರನ್ನು ದೀರ್ಘ ಅವಧಿಗೆ ಹಿಡಿದಿಟ್ಟುಕೊಳ್ಳಲು ಉದ್ದಿಮೆಗೆ ಸಾಧ್ಯವಾಗುವುದೇ ಎಂಬುದು ದೊಡ್ಡ ಪ್ರಶ್ನೆ. ಈಗಾಗಲೇ ಉದ್ದಿಮೆಗೆ ಕೆಲವು ಕಹಿ ಅನುಭವಗಳಾಗಿವೆ.

 ಹಿಂದಿನ ಕೆಲವು ತಿಂಗಳಲ್ಲಿ ಮಲ್ಟಿ ಕ್ಯಾಪ್‌ ಫಂಡ್‌ಗಳ ಗಳಿಕೆಯು ಋಣಾತ್ಮಕವಾಗಿತ್ತು (ಶೇ –5.6). ಉದ್ದಿಮೆಯು ಗಮನಿಸಬೇಕಾದ ಮುಖ್ಯ ಅಂಶವೆಂದರೆ, ಮೊದಲ ಬಾರಿ ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆ ಮಾಡುವವರಲ್ಲಿ, ‘ಮ್ಯೂಚುವಲ್ ಫಂಡ್‌ಗಳಲ್ಲಿ ಮಾಡುವ ಹೂಡಿಕೆಯಿಂದ ನಷ್ಟವಾಗುವುದಿಲ್ಲ, ಬದಲಿಗೆ ಹೆಚ್ಚಿನ ಗಳಿಕೆ ಆಗುತ್ತದೆ’ ಎಂಬ ಭಾವನೆ ಇರುತ್ತದೆ. ಇಂಥವರು ಗರಿಷ್ಠ ಗಳಿಕೆಯ ಉದ್ದೇಶವಿಟ್ಟು ಷೇರುಪೇಟೆ ಆಧಾರಿತ ಫಂಡ್‌ಗಳನ್ನೇ ಆಯ್ಕೆ ಮಾಡಿಕೊಂಡು ಹೂಡಿಕೆ ಮಾಡುತ್ತಾರೆ. ಆದರೆ, ತಮ್ಮ ಹೂಡಿಕೆಯು ನಷ್ಟದ ಹಾದಿ ಹಿಡಿಯುತ್ತಿದ್ದಂತೆ ಅವರು ಚಿಂತೆಗೆ ಒಳಗಾಗಿ ಹೂಡಿಕೆಯಿಂದ ಹಿಂದೆ ಸರಿಯುವ ಮಾರ್ಗ ಹುಡುಕುತ್ತಾರೆ. ಮಾರುಕಟ್ಟೆಯು ಗಳಿಕೆ ಮಾಡಲು ಸಾಕಷ್ಟು ಅವಕಾಶಗಳನ್ನು ಕೊಡುತ್ತಿದ್ದರೂ ಅನೇಕ ಹೂಡಿಕೆದಾರರು ನಷ್ಟ ಅನುಭವಿಸಲು ಮುಖ್ಯ ಕಾರಣವೆಂದರೆ ದೀರ್ಘಾವಧಿಗೆ ಹೂಡಿಕೆ ಮಾಡದಿರುವುದು. ಆಗಿರುವ ನಷ್ಟವನ್ನು ಭರಿಸಲು ಮಾರುಕಟ್ಟೆಯಲ್ಲಿ ಅವಕಾಶ ಲಭಿಸುವುದು ಖಚಿತ. ಆದರೆ ಹೂಡಿಕೆದಾರರು ತಾಳ್ಮೆಯಿಂದ ಇರಬೇಕಾಗುವುದು ಅಗತ್ಯ.

ಒಂದು ಉದಾಹರಣೆ ಕೊಡಬೇಕೆಂದರೆ; 2008ರಲ್ಲಿ ಅತ್ಯಂತ ಕಡಿಮೆ ಅವಧಿಯಲ್ಲಿ ಷೇರು ಸೂಚ್ಯಂಕವು 20,000 ಅಂಶದಿಂದ 8000ಕ್ಕೆ ಕುಸಿಯಿತು. ಇದನ್ನು ನಾನು ನಷ್ಟವನ್ನು ಭರಿಸಿಕೊಳ್ಳುವ ಸಮಯ ಎಂದು ಕರೆಯುತ್ತೇನೆ. ಸೂಚ್ಯಂಕದ ಆ ನಂತರದ ಗತಿಯನ್ನು ನೀವು ಗಮನಿಸಿದ್ದರೆ, ಸೂಚ್ಯಂಕವು ಮತ್ತೆ 20,000 ಅಂಶಗಳಿಗೆ ತಲುಪಬೇಕಾದರೆ ಸುಮಾರು ಐದು ವರ್ಷಗಳನ್ನು ತೆಗೆದುಕೊಂಡಿತು.

ಹೂಡಿಕೆದಾರರ ಮನಸ್ಥಿತಿ ಪರೀಕ್ಷೆಗೆ ಒಳಗಾಗುವುದು ಇಂಥ ಸಮಯದಲ್ಲೇ. 2008ರಲ್ಲಿ ಸೂಚ್ಯಂಕವು ದಿಢೀರ್‌ ಕುಸಿತ ಕಂಡಾಗ, ಅನೇಕ ಹೂಡಿಕೆದಾರರು ಕಂಗಾಲಾಗಿ ಹೂಡಿಕೆಯನ್ನು ನಿಲ್ಲಿಸಿರಬಹುದು. ಅಂಥವರು ನಷ್ಟ ಅನುಭವಿಸಿದ್ದು ಖಚಿತ. ಆದರೆ, ಕುಸಿತದ ಸಮಯದಲ್ಲೂ ಧೈರ್ಯದಿಂದ ಇದ್ದು, ಹೂಡಿಕೆಯನ್ನು ಮುಂದುವರಿಸಿರುವವರು, ಆಗಿರುವ ನಷ್ಟ ತುಂಬಿಕೊಂಡಿದ್ದಲ್ಲದೆ, ಒಳ್ಳೆಯ ಗಳಿಕೆಯನ್ನೂ ದಾಖಲಿಸಿರಬಹುದು.

ಮಲ್ಟಿ ಕ್ಯಾಪ್‌ ಫಂಡ್‌ಗಳಲ್ಲಿ ಮಾಡಿದ ಮೊದಲ ವರ್ಷದ ಹೂಡಿಕೆಯು ಋಣಾತ್ಮಕ ಗಳಿಕೆ ಮಾಡಿದ್ದರೂ, ದೀರ್ಘಾವಧಿಯ ಹೂಡಿಕೆ ಒಳ್ಳೆಯ ಗಳಿಕೆ ತಂದುಕೊಟ್ಟಿದೆ ಎಂಬುದನ್ನು ಅಂಕಿ ಅಂಶಗಳು ಸ್ಪಷ್ಟಪಡಿಸುತ್ತವೆ. ಮ್ಯೂಚುವಲ್‌ ಫಂಡ್‌ನಲ್ಲಿ ಮೊದಲ ವರ್ಷದಲ್ಲಿ ಮಾಡಿರುವ ಹೂಡಿಕೆಯು ನಷ್ಟ ಅನುಭವಿಸಿದ್ದು ಇದೇ ಮೊದಲ ಬಾರಿಯೇನಲ್ಲ.

2011ರ ಫೆಬ್ರುವರಿಗೆ ಒಂದು ವರ್ಷ ಪೂರೈಸಿದ್ದ ಎಸ್‌ಐಪಿ ಹೂಡಿಕೆಯೂ ಋಣಾತ್ಮಕ (ಶೇ –10.02)ಗಳಿಕೆ ಕಂಡಿತ್ತು. ಆದರೆ ಅದಕ್ಕೆ ಹೆದರದೆ ಹೂಡಿಕೆಯನ್ನು ಮುಂದುವರಿಸಿರುವವರು ಮೂರನೇ ವರ್ಷದಲ್ಲಿ ಶೇ 4.10 ಹಾಗೂ 2018ರಲ್ಲಿ ಶೇ 15.82ರಷ್ಟು ಗಳಿಕೆ ದಾಖಲಿಸಿದ್ದಾರೆ.

ಆದ್ದರಿಂದ ತಾಳ್ಮೆಯು ಅತ್ಯುತ್ತಮವಾದ ಫಲವನ್ನು ನೀಡುತ್ತದೆ ಎಂಬುದು ಮ್ಯೂಚುವಲ್‌ ಫಂಡ್‌ ಹೂಡಿಕೆಯ ವಿಚಾರದಲ್ಲಿ ಸತ್ಯವಾದ ಮಾತು.

(ಲೇಖಕ: ಫ್ರ್ಯಾಂಕ್ಲಿನ್‌ ಟೆಂಪಲ್‌ಟನ್‌ ಇನ್‌ವೆಸ್ಟಮೆಂಟ್ಸ್‌ ಇಂಡಿಯಾದ ರಾಷ್ಟ್ರೀಯ ಮಾರಾಟ ನಿರ್ದೇಶಕ)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು