ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಂತ ಸೂರಿನ ಕನಸಿಗೆಸಣ್ಣ ಹಣಕಾಸು ಬ್ಯಾಂಕ್‌

Last Updated 23 ಅಕ್ಟೋಬರ್ 2018, 19:45 IST
ಅಕ್ಷರ ಗಾತ್ರ

ಬೆಂಗಳೂರಿನ ಜಕ್ಕಸಂದ್ರದಲ್ಲಿ ವಾಸಿಸುವಆಟೊ ರಿಕ್ಷಾ ಚಾಲಕ ಸುಬ್ಬು ಅದೊಂದು ದಿನ ಮನೆಗೆ ಬಂದಾಗ ಪತ್ನಿಯ ನಗುಮೊಗ ನೋಡಿಏನು ವಿಶೇಷ, ತುಂಬಾ ಖುಷಿಯಾಗಿರುವೆಯಲ್ಲಾ ಎಂದು ಪ್ರಶ್ನಿಸಿದ. ರಸ್ತೆಯಲ್ಲಿ ತರಕಾರಿ ಮಾರಾಟ ಮಾಡುವ ಸುಬ್ಬು ಅವರ ಪತ್ನಿ ರುಕ್ಮಿಣಿ ಅವರಿಗೆ ತಮಗೊಂದು ಸೂರು ದೊರೆಯಲಿದೆ ಎನ್ನುವ ಸಂಗತಿ ಸಂತಸ ಮೂಡಿಸಿತ್ತು.

ಹಲವಾರು ವರ್ಷಗಳಿಂದ ರುಕ್ಮಿಣಿ ಅವರು ತಮ್ಮ ತರಕಾರಿ ವಹಿವಾಟಿಗೆ ಕಿರು ಹಣಕಾಸು ಸಂಸ್ಥೆಯಿಂದ ಸಾಲ ಪಡೆಯುತ್ತಿದ್ದರು. ಈಗ ಈ ಹಣಕಾಸು ಸಂಸ್ಥೆ ಸಣ್ಣ ಹಣಕಾಸು ಬ್ಯಾಂಕ್‌ (ಎಸ್‌ಎಫ್‌ಬಿ) ಆಗಿ ಪರಿವರ್ತನೆಗೊಂಡಿದೆ. ಹೀಗಾಗಿ, ಸುಲಭವಾಗಿ ಮನೆ ಸಾಲವನ್ನು ನೀಡುತ್ತಿದೆ ಎನ್ನುವ ಸುದ್ದಿ ರುಕ್ಮಿಣಿ ಅವರಲ್ಲಿ ಸಂತಸ ಮೂಡಿಸಿತ್ತು.

ಐದು ವರ್ಷಗಳ ಹಿಂದೆ ಸುಬ್ಬು ಪುಟ್ಟ ಮನೆ ಖರೀದಿಸುವ ಉದ್ದೇಶಕ್ಕೆ ಸಾಲ ಸಿಗುವ ನಿರೀಕ್ಷೆಯಿಂದ ಬ್ಯಾಂಕ್‌ಗೆ ಹೋದಾಗ ಅವರಿಗೆ ಕಹಿ ಅನುಭವ ಆಗಿತ್ತು. ಕರ್ನಾಟಕ ಗೃಹ ಮಂಡಳಿಯು ಕಡಿಮೆ ಆದಾಯವುಳ್ಳವರಿಗೆ (ಎಲ್‌ಐಜಿ) ವಸತಿ ಯೋಜನೆಯನ್ನು ಘೋಷಿಸಿದಾಗ ಬ್ಯಾಂಕ್‌ಗೆ ಅವರು ಅರ್ಜಿ ಸಲ್ಲಿಸಿದಾಗ ದಿನಗೂಲಿ ಎನ್ನುವ ಕಾರಣ ನೀಡಿ ಸಾಲ ನೀಡಲು ನಿರಾಕರಿಸಲಾಗಿತ್ತು.

ಹೀಗಾಗಿ, ರುಕ್ಮಿಣಿ ಅವರು ಈಗ ಗೃಹ ಸಾಲ ಸುಲಭವಾಗಿ ದೊರೆಯುತ್ತದೆ ಎಂದು ಹೇಳಿದಾಗಲೂ ಸುಬ್ಬು ಆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಹಾಗಾದರೆ, ಇತರ ಬ್ಯಾಂಕ್‌ಗಳು ಸಾಲ ನೀಡಲು ಆಕ್ಷೇಪ ವ್ಯಕ್ತಪಡಿಸಿರುವಾಗ ಎಸ್‌ಎಫ್‌ಬಿ ಏಕೆ ಸಾಲ ನೀಡುತ್ತದೆ ಎನ್ನುವ ಪ್ರಶ್ನೆ ಮೂಡುವುದು ಸಹಜ. ಇದಕ್ಕೆ ಇಲ್ಲಿ ಉತ್ತರ ನೀಡುವ ಪ್ರಯತ್ನ ಮಾಡಲಾಗಿದೆ.

ದೇಶದಲ್ಲಿ ಮೂರು ವರ್ಷಗಳ ಹಿಂದೆ ಮನೆ ನಿರ್ಮಾಣದ ವೆಚ್ಚ ಎರಡೂವರೆ ಪಟ್ಟು ಹೆಚ್ಚಾಗಿತ್ತು. ಅದು ಶೇಕಡ 8ರಿಂದ 21ರಷ್ಟು ಹೆಚ್ಚಾಗಿತ್ತು. ಈ ಅವಧಿಯಲ್ಲೇ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡು ಪ್ರತಿಯೊಬ್ಬರಿಗೂ ಸುಲಭವಾಗಿ ವಸತಿ ಸೌಲಭ್ಯ ಕಲ್ಪಿಸಲು ಮುಂದಾಗಿದೆ.

ಸರ್ಕಾರ ನೀಡುವ ಮಾಹಿತಿ ಪ್ರಕಾರ ಕಡಿಮೆ ಆದಾಯ ಹೊಂದಿರುವವರಿಗೆ 1.8 ಕೋಟಿ ಮನೆಗಳ ಕೊರತೆ ಇದೆ. ಹೀಗಾಗಿ, ಭಾರತದಲ್ಲಿ ವಸತಿ ಕ್ಷೇತ್ರವು ಬಹುದೊಡ್ಡ ಮಾರುಕಟ್ಟೆ ಹೊಂದಿದೆ. ಈ ಮಾರುಕಟ್ಟೆಯ ಗಾತ್ರ ₹5ಲಕ್ಷ ಕೋಟಿಯಿಂದ ₹10 ಲಕ್ಷ ಕೋಟಿವರೆಗೆ ಇದೆ.

ಪ್ರಧಾನ ಮಂತ್ರಿ ಆವಾಸ್‌ ಯೋಜನೆಯನ್ನು (ಪಿಎಂಎವೈ) 2015ರಲ್ಲಿ ಆರಂಭಿಸಲಾಯಿತು. ಎಲ್ಲರಿಗೂ ವಸತಿ ಸೌಲಭ್ಯ ಕಲ್ಪಿಸುವ ಸರ್ಕಾರದ ಆಶಯವನ್ನು ಇದು ಈಡೇರಿಸುತ್ತಿದೆ. ಪಿಎಂಎವೈ ಮುಖ್ಯವಾಗಿ ಸಾಲ ಆಧಾರಿತ ಸಬ್ಸಿಡಿ ಯೋಜನೆಯಾಗಿದೆ. ಇದರಿಂದ ಮನೆ ಖರೀದಿಸಲು ಅಥವಾ ನಿರ್ಮಿಸಲು ಸಬ್ಸಿಡಿ ರೂಪದ ಬಡ್ಡಿ ದರದಲ್ಲಿ ಸಾಲ ದೊರೆಯುತ್ತದೆ. ಈ ಯೋಜನೆಗೆ ಸಂಬಂಧಿಸಿದಂತೆ ಹಣಕಾಸು ಸಂಸ್ಥೆಯಾಗಿ ನೋಡಲ್‌ ಏಜನ್ಸಿಯಾಗಿರುವ ನ್ಯಾಷನಲ್‌ ಹೌಸಿಂಗ್‌ ಬ್ಯಾಂಕ್‌ ಸಬ್ಸಿಡಿ ನೀಡುತ್ತದೆ.

ಸಬ್ಸಿಡಿ ಆಧಾರಿತ ಸಾಲ ಯೋಜನೆ ಇದಾಗಿರುವುದರಿಂದ ಆರ್ಥಿಕವಾಗಿ ದುರ್ಬಲವಾಗಿರುವ (ಇಡಬ್ಲ್ಯೂಎಸ್‌) ಮತ್ತು ಮಧ್ಯಮ ವರ್ಗವನ್ನು (ಎಂಐಜಿ) ಇದು ಒಳಗೊಂಡಿದೆ. ಸಾಲ ಆಧಾರಿತ ಸಬ್ಸಿಡಿಯು 2022ರ ಮಾರ್ಚ್‌ 31ರವರೆಗೂ ಆರ್ಥಿಕವಾಗಿ ದುರ್ಬಲ ಹೊಂದಿರುವವರಿಗೆ ಮತ್ತು ಕಡಿಮೆ ಆದಾಯ ಹೊಂದಿರುವವರಿಗೆ ಹಾಗೂ ಮಧ್ಯಮ ಆದಾಯ ಹೊಂದಿರುವ ವರ್ಗಕ್ಕೆ 2019ರ ಮಾರ್ಚ್‌ 31ರವರೆಗೆ ದೊರೆಯಲಿದೆ.

ಸುಲಭವಾಗಿ ವಸತಿ ಸೌಲಭ್ಯ ಕಲ್ಪಿಸುವ ಯೋಜನೆಯನ್ನು ವಾಖ್ಯಾನಿಸುವಾಗ ಸರ್ಕಾರವು ವಾರ್ಷಿಕ ಆದಾಯ ಮತ್ತು ಮನೆಯ ಗಾತ್ರವನ್ನು ಮುಖ್ಯವಾಗಿ ಪರಿಗಣಿಸುತ್ತದೆ. ಆರ್ಥಿಕವಾಗಿ ದುರ್ಬಲವಾಗಿರುವ ವರ್ಗದ ವಾರ್ಷಿಕ ಆದಾಯ ₹3 ಲಕ್ಷಕ್ಕೂ ಕಡಿಮೆ ಇರಬೇಕು ಮತ್ತು ಮನೆಯು 30 ಚದರ ಮೀಟರ್‌ವರೆಗೆ ಮಾತ್ರ ಇರಬೇಕು. ಕಡಿಮೆ ಆದಾಯ ಹೊಂದಿದ ವರ್ಗದವರಿಗೆ ವಾರ್ಷಿಕ ಆದಾಯ ₹3ಲಕ್ಷದಿಂದ 6 ಲಕ್ಷದ ಒಳಗೆ ಇರಬೇಕು ಮತ್ತು ಮನೆಯು 60 ಚದರ ಮೀಟರ್‌ ಇರಬೇಕು.

ಈ ಎರಡು ವರ್ಗಗಳ ನಾಗರಿಕರು ಸಬ್ಸಿಡಿ ಬಡ್ಡಿ ದರ ಶೇಕಡ 6.5ರಷ್ಟು ಇರುತ್ತದೆ ಮತ್ತು ಗರಿಷ್ಠ ₹6ಲಕ್ಷದವರೆಗೆ ಸಾಲ ದೊರೆಯುತ್ತದೆ. ಈ ಸಾಲವನ್ನು 20 ವರ್ಷಗಳಲ್ಲಿ ಪಾವತಿಸಲು ಅವಕಾಶವಿದೆ. ಈ ಎರಡು ಗುಂಪುಗಳಿಗೆ ₹2.67 ಲಕ್ಷ ಗರಿಷ್ಠ ಸಬ್ಸಿಡಿ ದೊರೆಯುತ್ತದೆ.

ಮಧ್ಯಮ ಆದಾಯ ಗುಂಪನ್ನು (ಎಂಐಜಿ) ಎರಡು ರೀತಿಯಲ್ಲಿ ವಿಭಜಿಸಲಾಗಿದೆ. ಆದಾಯದ ಆಧಾರದ ಮೇಲೆ ಎಂಐಜಿ–1 ಮತ್ತು ಎಂಐಜಿ–2 ಎಂದು ವಿಭಜಿಸಲಾಗಿದೆ. ಎಂಐಜಿ–1 ಗುಂಪಿಗೆ ವಾರ್ಷಿಕ ಆದಾಯ ₹6ರಿಂದ 12 ಲಕ್ಷ ಇದ್ದರೆ ₹9 ಲಕ್ಷ ಸಾಲ ದೊರೆಯಲಿದ್ದು, ಶೇಕಡ 4ರ ಸಬ್ಸಿಡಿ ಬಡ್ಡಿ ದರ ವಿಧಿಸಲಾಗುತ್ತದೆ.

₹12 ಲಕ್ಷದಿಂದ 18 ಲಕ್ಷ ವಾರ್ಷಿಕ ಆದಾಯ ಹೊಂದಿದವರನ್ನು ಎಂಐಜಿ–2 ವಿಭಾಗದಲ್ಲಿ ಗುರುತಿಸಲಾಗಿದ್ದು, ₹12ರಿಂದ 18 ಲಕ್ಷ ಸಾಲ ಪಡೆಯಲು ಅರ್ಹರಾಗಿರುತ್ತಾರೆ. ಇವರಿಗೆ ಶೇಕಡ 3ರ ಸಬ್ಸಿಡಿ ಬಡ್ಡಿ ದರದಲ್ಲಿ ₹12 ಲಕ್ಷ ಸಾಲ ಪಡೆಯಬಹುದಾಗಿದೆ.

ವಸತಿ ಕ್ಷೇತ್ರಕ್ಕೆ ವಿಧಿಸುವ ಜಿಎಸ್‌ಟಿಯನ್ನು ಈಗಿರುವ ಶೇಕಡ 12ರಿಂದ ಶೇಕಡ 8ಕ್ಕೆ ಇಳಿಸಲು ವಸತಿ ವಲಯದ ಮಂಡಳಿ ಪ್ರಸ್ತಾಪ ಮುಂದಿಟ್ಟಿದೆ.ಜತೆಗೆ ಈಗಿರುವ ಮನೆಗಳ ಗಾತ್ರವನ್ನು ಹೆಚ್ಚಿಸುವ ಉದ್ದೇಶವನ್ನು ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯ ಹೊಂದಿದೆ.

ಸಾಂಪ್ರದಾಯಿಕ ಬ್ಯಾಂಕಿಂಗ್‌ ವಲಯವು ಆರ್ಥಿಕವಾಗಿ ದುರ್ಬಲ ಹೊಂದಿದ ವರ್ಗ ಮತ್ತು ಕಡಿಮೆ ಆದಾಯ ಹೊಂದಿದ ವರ್ಗಕ್ಕೆ ಸಾಲ ನೀಡಲು ಹಿಂಜರಿಯುತ್ತದೆ. ದಾಖಲೆಗಳ ಪರಿಶೀಲನೆ ಮತ್ತು ಆದಾಯ ತಪಾಸಣೆ ಹಾಗೂ ಸಾಲ ವಸೂಲಿಗೆ ಹೆಚ್ಚಿನ ಶ್ರಮ ಹಾಕಬೇಕಾಗುತ್ತದೆ ಎನ್ನುವುದು ಬ್ಯಾಂಕ್‌ಗಳ ಅಭಿಪ್ರಾಯವಾಗಿದೆ. ಜತೆಗೆ ಈಗ ನಿಗದಿಪಡಿಸಿರುವ ಮಾನದಂಡಗಳು ಸಹ ಸಾಲ ನೀಡಲು ಅರ್ಹತೆ ಒದಗಿಸುವುದಿಲ್ಲ.

ಹೀಗಾಗಿಯೇ, ಸಣ್ಣ ಹಣಕಾಸು ಬ್ಯಾಂಕ್‌ಗಳು ವಿಶ್ವಾಸದಿಂದ ವಸತಿ ಕ್ಷೇತ್ರದಲ್ಲೂ ಕಾರ್ಯಾಚರಣೆ ನಡೆಸುತ್ತಿವೆ. ಮೈಕ್ರೊಫೈನಾನ್ಸ್‌ ಎನ್‌ಬಿಎಫ್‌ಸಿ ರೂಪದಲ್ಲಿ ಈ ಬ್ಯಾಂಕ್‌ಗಳು ಕಾರ್ಯನಿರ್ವಹಿಸುತ್ತಿವೆ. ಇದರಿಂದ ಈ ಬ್ಯಾಂಕ್‌ಗಳಿಗೆ ವಿಪುಲ ಅವಕಾಶಗಳು ದೊರೆಯುತ್ತಿವೆ. ಕಡಿಮೆ ಆದಾಯ ಹೊಂದಿದವರಿಗಾಗಿಯೇ ಸುಲಭವಾಗಿ ಕಂತುಗಳ ರೂಪದಲ್ಲಿ ಸಾಲ ನೀಡುವ ಯೋಜನೆಯನ್ನು ರೂಪಿಸಿವೆ. ಇದರಿಂದ, ಸರ್ಕಾರದ ಆಶಯವು ಈಡೇರುತ್ತಿದೆ.

(ಲೇಖಕ, ಉಜ್ಜೀವನ್‌ ಸಣ್ಣ ಹಣಕಾಸು ಬ್ಯಾಂಕ್‌ನ ಮುಖ್ಯ ವಹಿವಾಟು ಅಧಿಕಾರಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT