ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧೀರ ಸೈನಿಕ ಈಗ ಯಶಸ್ವಿ ಉದ್ಯಮಿ

Last Updated 18 ಸೆಪ್ಟೆಂಬರ್ 2019, 11:11 IST
ಅಕ್ಷರ ಗಾತ್ರ

ರಾಮಮೂರ್ತಿ ನಗರದ ‘ಜಾನು ಅಯ್ಯಂಗಾರ್ ಕೇಕ್ ಪ್ಯಾಲೇಸ್’ ಬೇಕರಿ ಪ್ರಿಯರ ಇಷ್ಟದ ತಾಣ. ನಿತ್ಯ ನೂರಾರು ಗ್ರಾಹಕರು ಇಲ್ಲಿಗೆ ಭೇಟಿ ನೀಡುತ್ತಾರೆ. ಈ ಬೇಕರಿಯ ವಿಶೇಷತೆ ಎಂದರೆ, ಇಲ್ಲಿನ ಶುಚಿತ್ವ, ಶಿಸ್ತು ಹಾಗೂ ರುಚಿಕಟ್ಟಾದ ತಿಂಡಿ ತಿನಿಸುಗಳು.

ಈ ಬೇಕರಿ ಮಾಲೀಕ ಎಂ.ಮಹೇಶ್, ಕಾಶ್ಮೀರದಲ್ಲಿ ಉಗ್ರರ ಜತೆಗೆ ಕಾದಾಡಿದ ಧೀರ ಯೋಧ. ಕರ್ನಾಟಕ ಸರ್ಕಾರದ ಉಚಿತ ಕೌಶಲ್ಯ ಕರ್ನಾಟಕ ಯೋಜನೆಯನ್ನು ಸರಿಯಾಗಿ ಅನುಷ್ಠಾನಗೊಳಿಸಿದರೆ ಅದು ಹೇಗೆ ಜನಸಾಮಾನ್ಯರ ಬದುಕನ್ನು ಬೆಳಗಬಲ್ಲದು ಎಂಬುದಕ್ಕೆ ಈ ಮಾಜಿ ಯೋಧ ಸಾಕ್ಷಿ.

ಸಾಮಾನ್ಯವಾಗಿ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗುವ ಯೋಧರು ನಿವೃತ್ತಿ ಬಳಿಕದ ಜೀವನಕ್ಕೆ ಅವಲಂಬಿಸುವುದು ಭದ್ರತಾ ಸಿಬ್ಬಂದಿ ಕೆಲಸವನ್ನು. ಇಂದಿರಾ ಕ್ಯಾಂಟೀನ್‌ ಆಗಲಿ, ಅಥವಾ ಯಾವುದೇ ದೊಡ್ಡ ಕಟ್ಟಡವಾಗಲಿ, ಅಲ್ಲೆಲ್ಲ ನಿವೃತ್ತ ಯೋಧರು ಭದ್ರತಾ ಸಿಬ್ಬಂದಿಯಾಗಿ ತಮ್ಮ ಜೀವನ ಸವೆಸುತ್ತಾರೆ. ಆದರೆ, ಮಹೇಶ್ ನಿವೃತ್ತಿಯ ಬಳಿಕ ಯಶಸ್ವಿ ಉದ್ಯಮಿಯಾಗಿ ಹೊರಹೊಮ್ಮಿದ್ದಾರೆ.

ಮಹೇಶ್1999ರಿಂದ 2017ರವರೆಗೆ 18 ವರ್ಷಗಳ ಕಾಲ ಸೇನೆಯಲ್ಲಿ ನಾನಾ ಹಂತಗಳಲ್ಲಿ ಸೇವೆ ಸಲ್ಲಿಸಿದವರು. ‘ಕಾಶ್ಮೀರವೆಂದರೆ ಅದೊಂದು ದೊಡ್ಡ ರಣರಂಗವೇ ಸರಿ’ ಎಂದು ನೆನಪಿಸಿಕೊಳ್ಳುವ ಇವರು, ನಿವೃತ್ತಿಯ ಬಳಿಕ, ಉದ್ಯಮಿಯಾಗುವ ಬಹುದೊಡ್ಡ ಕನಸು ಕಂಡಿದ್ದರು.

ಅವರ ಕನಸಿಗೆ ನೀರೆರದದ್ದು ಕೌಶಲ್ಯ ಕರ್ನಾಟಕ ಯೋಜನೆ. ನಗರದ ಡಾಲರ್ ಆಕಾಡಮಿ ಫಾರ್ ಸ್ಕಿಲ್ ಆ್ಯಂಡ್‌ ಎಂಟರ್‌ಪ್ರೀನರ್‌ಶಿಪ್‌ (ಡಿಎಎಸ್‍ಇ) ಸಂಸ್ಥಾಪಕ ಕೆ.ಪಿ ಜಯಪ್ರಕಾಶನ್ ಹಾಗೂ ಮದ್ರಾಸ್ ಎಂಜಿನಿಯರ್ ಗ್ರೂಪ್, ಬೆಂಗಳೂರಿನ ಕರ್ನಲ್‌ ವರ್ಗೀಸ್‌ ಡೇನಿಯಲ್ ಅವರು ಬೆಂಬಲಕ್ಕೆ ನಿಂತರು. ‘ಅವರಿಬ್ಬರು ನನ್ನ ಸಾಧನೆಯ ಹಿಂದಿನ ಪ್ರೇರಕ ಶಕ್ತಿಗಳು’ ಎನ್ನುತ್ತಾರೆ ಮಹೇಶ್.

‘ಆರಂಭದಲ್ಲಿ ನಾನು ಡಿಎಎಸ್‍ಇನಲ್ಲಿ ಬೇಕರಿ ಹಾಗೂ ಇನ್ನಿತರ ತಿಂಡಿ ತಿನಸುಗಳ ತಯಾರಿಕೆಯ ಅನುಭವ ಪಡೆದೆ. ಬಳಿಕ ಜಯಪ್ರಕಾಶನ್ ಸ್ವತಃ ನನ್ನ ಬೇಕರಿ ಸ್ಥಾಪನೆಯ ಕನಸಿಗೆ ಜೀವ ತುಂಬಿದರು. ಅವರೇ ಈ ಬೇಕರಿಯ ಒಳಾಂಗಣ ವಿನ್ಯಾಸಗೊಳಿಸಿ, ಅಗತ್ಯ ಉಪಕರಣಗಳನ್ನು ಒದಗಿಸಿದರು. ನಾನೀಗ ಇತರ ಹಲವರಿಗೆ ಉದ್ಯೋಗದಾತನಾಗಿದ್ದೇನೆ’ ಎನ್ನುವಾಗ ಮಹೇಶ್ ಕಣ್ಣಲ್ಲಿ ಸಾಧನೆಯ ಬೆಳಕು ಮೂಡುತ್ತದೆ.

ಕೆ.ಪಿ ಜಯಪ್ರಕಾಶನ್ ಪ್ರಕಾರ ಮಹೇಶ್ ಸಾಧನೆ, ಇಂದಿನ ಯುವ ಜನಾಂಗಕ್ಕೆ ಮಾದರಿ. ‘ನಿವೃತ್ತಿ ಬಳಿಕ ಅವರು ಸೃಷ್ಟಿಸಿಕೊಂಡಿರುವ ಅವಕಾಶಗಳು ಇನ್ನಷ್ಟು ಜನರಿಗೆ ಪ್ರೇರಣೆ ಆಗಲಿದೆ’ ಎನ್ನುತ್ತಾರೆ ಜಯಪ್ರಕಾಶನ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT