ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ: ಹಣಕಾಸು, ತೆರಿಗೆ ಸಮಸ್ಯೆಗೆ ಪರಿಹಾರ

Last Updated 12 ಜುಲೈ 2022, 19:30 IST
ಅಕ್ಷರ ಗಾತ್ರ

ಹೆಸರು ಬೇಡ, ಊರು ಬೇಡ

l ಪ್ರಶ್ನೆ: ನಾನು ನಿವೃತ್ತ ನೌಕರ. ಮನೆ ಕಟ್ಟಲು ಸಾಲವಾಗಿ ₹ 15 ಲಕ್ಷ ಪಡೆದಿದ್ದು, ಅದರಲ್ಲಿ ₹ 7 ಲಕ್ಷ ಬಾಕಿ ಇದೆ. ಕೋವಿಡ್–19ರ ವಿಚಾರವಾಗಿ ಪಡೆದ ₹ 2 ಲಕ್ಷ ಸಾಲವಿದೆ. ಇನ್ನೊಂದು ಮನೆ ಮೇಲೆ ಸಾಲ ₹ 20 ಲಕ್ಷ ಇದೆ. ಚಿನ್ನದ ಮೇಲಿನ ಸಾಲ ₹ 4 ಲಕ್ಷ ಇದೆ. ಹೀಗೆ ಒಟ್ಟು ₹ 33 ಲಕ್ಷ ಸಾಲ ಒಂದೇ ಬ್ಯಾಂಕಿನಲ್ಲಿದೆ. ಕುಟುಂಬದ ಒಂದು ಆಸ್ತಿ ಮಾರಾಟ ಮಾಡಿದರೆ ಸುಮಾರು ₹ 50 ಲಕ್ಷ ನನಗೆ ಬರಬಹುದು. ಅದರಲ್ಲಿ ₹ 33 ಲಕ್ಷವನ್ನು ಸಾಲ ತೀರಿಸಲು ಬಳಸಿದರೆ, ಎಷ್ಟು ಹಣಕ್ಕೆ ತೆರಿಗೆ ಕಟ್ಟಬೇಕು? ಈ ಜಮೀನು ತಾತನ ಕಾಲದ ಇನಾಂ ಭೂಮಿ.

ಉತ್ತರ: ಯಾವುದೇ ಆಸ್ತಿ ಮಾರಾಟ ಮಾಡಿದಾಗ ತೆರಿಗೆ ನಿರ್ಣಯವಾಗುವುದು ಅದರ ಮಾರಾಟದಿಂದ ಬಂದ ಲಾಭ ಅಥವಾ ನಷ್ಟದ ಆಧಾರದಲ್ಲಿ. ನಿಮ್ಮ ಒಡೆತನದ ಮೂರು ವರ್ಷಕ್ಕಿಂತ ಹಳೆಯ ಆಸ್ತಿ ಮಾರಾಟದಿಂದ ಸುಮಾರು ₹ 50 ಲಕ್ಷ ನಿರೀಕ್ಷಿಸುತ್ತಿದ್ದೀರಿ. ಈ ಆಸ್ತಿಯ ಮೂಲ ಬೆಲೆ ಅಥವಾ ಅದಕ್ಕೆ ಸಮನಾದ ಅಂದಿನ ನ್ಯಾಯಸಮ್ಮತ ಮೌಲ್ಯದ ಆಧಾರದ ಮೇಲೆ ಪ್ರಸ್ತುತ ಅನ್ವಯವಾಗುವ ಹಣದುಬ್ಬರ ಸೂಚ್ಯಂಕದಂತೆ ಅದರ ಇಂದಿನ ಬೆಲೆಯನ್ನು ನಿರ್ಧರಿಸಲಾಗುತ್ತದೆ. ನಿಮ್ಮ ಮಾರಾಟದ ಬೆಲೆ ಇದಕ್ಕಿಂತ ಅಧಿಕವಿದ್ದರೆ, ಹೆಚ್ಚುವರಿ ಮೊತ್ತವನ್ನು ಬಂಡವಾಳ ಲಾಭವೆಂದು ಪರಿಗಣಿಸಲಾಗುತ್ತದೆ. ಮಾರಾಟ ಬೆಲೆ ಅದಕ್ಕಿಂತ ಕಡಿಮೆ ಇದ್ದರೆ ಆ ವ್ಯತ್ಯಾಸವನ್ನು ಬಂಡವಾಳ ನಷ್ಟವೆಂದು ತಿಳಿಯಲಾಗುತ್ತದೆ. ಲಾಭವಾದ ಸಂದರ್ಭದಲ್ಲಿ ಶೇಕಡ 20ರಷ್ಟು ಮೂಲ ತೆರಿಗೆ ಹಾಗೂ ಸೆಸ್ ಅನ್ವಯವಾಗುತ್ತದೆ.

ನಿಮ್ಮ ಪ್ರಶ್ನೆಯಲ್ಲಿ ತಿಳಿಸಿದಂತೆ, ಬಂದ ಹಣವನ್ನು ಉಪಯೋಗಿಸಿ ಸಾಲ ಮರುಪಾವತಿ ಮಾಡುವ ಯೋಜನೆ ಹೊಂದಿದ್ದೀರಿ. ಇದು ಒಳ್ಳೆಯ ನಿರ್ಧಾರ. ಆದರೆ, ಮಾರಾಟದಿಂದ ಬರುವ ಹಣವನ್ನು ಸಾಲ ಮರುಪಾವತಿಗೆ ಬಳಸಿದಾಗ ಆ ಮೊತ್ತವನ್ನು ತೆರಿಗೆ ವಿನಾಯಿತಿಗೆ ಪರಿಗಣಿಸಲು ಆಗುವುದಿಲ್ಲ. ನಿಮ್ಮ ಜಮೀನಿನ ಈಗಿನ ನ್ಯಾಯಸಮ್ಮತ ಮಾರುಕಟ್ಟೆ ಬೆಲೆ (fair market value) ಅರಿಯಲು ಜಮೀನು ಇರುವ ಪ್ರದೇಶದ ಮಾಹಿತಿಯೂ ಬೇಕಾಗುತ್ತದೆ. ಈ ಬಗ್ಗೆ ಹೆಚ್ಚಿನ ವಿವರಕ್ಕಾಗಿ ಸಮೀಪದ ತೆರಿಗೆ ಸಲಹೆಗಾರರನ್ನು ಒಮ್ಮೆ ಸಂಪರ್ಕಿಸಿ.

***

ಅನಂತ ಪದ್ಮನಾಭ, ಬದಿಯಡ್ಕ

l ಪ್ರಶ್ನೆ: ನಾವು ಗಡಿನಾಡಿನವರು. ನಮ್ಮ ಊರಲ್ಲಿ ಹೆಚ್ಚಾಗಿ ಅಡಿಕೆ, ಬಾಳೆ, ತೆಂಗು, ಗೇರು, ಭತ್ತ ಇತ್ಯಾದಿ ಬೆಳೆಯುತ್ತೇವೆ. ಇವು ನಮ್ಮ ಜೀವನಾಧಾರ. ಅಲ್ಲದೆ, ನಾವು ರಬ್ಬರ್ ಕೃಷಿಯನ್ನೂ ಮಾಡುತ್ತಿದ್ದೇವೆ. ಇದರಿಂದ ವಾರ್ಷಿಕವಾಗಿ ₹ 6 ಲಕ್ಷದಿಂದ ₹ 8 ಲಕ್ಷ ಹೆಚ್ಚುವರಿ ಆದಾಯ ಸಿಗುತ್ತದೆ. ನಾವು ಈ ಆದಾಯವನ್ನು ಕೃಷಿ ಆದಾಯ ಎಂದೇ ಪರಿಗಣಿಸುತ್ತಿದ್ದೇವೆ. ಆದರೆ ರಬ್ಬರ್ ವಾಣಿಜ್ಯ ಬೆಳೆ ಎಂದು ಒಬ್ಬರು ತಿಳಿಸಿದರು. ಆದಾಯ ತೆರಿಗೆಯ ಅಡಿ ಅಂತಹ ಯಾವುದಾದರೂ ತೆರಿಗೆ ನಿಬಂಧನೆಗಳಿವೆಯೇ? ಈ ಬಗ್ಗೆ ಮಾಹಿತಿ ನೀಡಿದರೆ ನನ್ನಂತಹ ಅನೇಕ ಕೃಷಿಕರಿಗೆ ಉಪಯುಕ್ತ ಆಗಬಹುದು.

ಉತ್ತರ: ರಬ್ಬರ್ ಒಂದು ವಾಣಿಜ್ಯ ಬೆಳೆ. ಆದಾಯ ತೆರಿಗೆ ನಿಯಮದ ಪ್ರಕಾರ, ಕಾಫಿ ಹಾಗೂ ಚಹಾ ಬೆಳೆಗಳೂ ಈ ಪಟ್ಟಿಯಲ್ಲಿ ಸೇರಿಕೊಳ್ಳುತ್ತವೆ. ಬೆಳೆಗಾರ ಅಥವಾ ಎಸ್ಟೇಟ್ ಮಾಲೀಕ ಸ್ವತಃ ಉತ್ಪಾದಿಸುವ ರಬ್ಬರ್, ಚಹಾ ಹಾಗೂ ಕಾಫಿಯ ಮೇಲೆ ಅವುಗಳ ವಿವಿಧ ಹಂತಗಳ ಪರಿಷ್ಕರಣೆಯ ಆಧಾರದಲ್ಲಿ ತೆರಿಗೆ ಅನ್ವಯವನ್ನು ತೀರ್ಮಾನಿಸಲಾಗುತ್ತದೆ. ಇದು ಮೊದಲ ಕೆಲವು ಹಂತಗಳತನಕ ಸಂಪೂರ್ಣ ಕೃಷಿ ಆದಾಯವೆಂದು ಪರಿಗಣಿತವಾಗಬಹುದು. ಮುಂದಿನ ಕೆಲವು ಹಂತವನ್ನು ತಲುಪಿದಂತೆ ಭಾಗಶಃ ಕೃಷಿ ಆದಾಯವಾಗಿ ಪರಿಗಣಿತವಾಗಬಹುದು.

ಮಾರಾಟಗಾರ ತನ್ನ ಜಮೀನಿನಲ್ಲಿ ಬೆಳೆದ ಕೃಷಿ ಉತ್ಪನ್ನವನ್ನು ಕೊನೆಯ ಹಂತದ ತನಕ ಪರಿಷ್ಕರಿಸಿ ರಬ್ಬರ್, ಚಹಾ ಅಥವಾ ಕಾಫಿ ಇತ್ಯಾದಿ ಉತ್ಪಾದಿಸಿದಲ್ಲಿ ಒಟ್ಟು ಆದಾಯದಲ್ಲಿ ಕೃಷಿ ಆದಾಯ ಹಾಗೂ ವ್ಯಾಪಾರದ ಆದಾಯವೆಂದು ವರ್ಗೀಕರಿಸಲಾಗುತ್ತದೆ. ರಬ್ಬರ್ ಉತ್ಪಾದನೆಗೆ ಸಂಬಂಧಪಟ್ಟು ಹೇಳುವುದಾದರೆ, ಆದಾಯ ತೆರಿಗೆಯ ನಿಯಮ 7ಎ ಅನ್ವಯ ‘ರಬ್ಬರ್ ಉತ್ಪಾದನೆ’ಯಿಂದ ಮಾರಾಟ ಮಾಡಿ ಗಳಿಸಿದ ಆದಾಯದ ಶೇಕಡ 35ರಷ್ಟನ್ನು ಕೃಷಿಯೇತರ ಆದಾಯವೆಂದೂ ಉಳಿದ ಶೇ 65ರಷ್ಟನ್ನು ಕೃಷಿ ಆದಾಯವಾಗಿಯೂ ವರ್ಗೀಕರಿಸಲಾಗುತ್ತದೆ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ, ಯಾವುದೇ ಮೊತ್ತವನ್ನು ಮೇಲಿನ ಅನುಪಾತದ ಪ್ರಕಾರ ವ್ಯವಹಾರದ ಆದಾಯವೆಂದು ಪರಿಗಣಿಸಿ ತೆರಿಗೆಗೆ ಒಳಪಡಿಸಬೇಕಾದರೆ, ಅಲ್ಲಿ ಮೂಲ ಕೃಷಿ ಉತ್ಪನ್ನದಿಂದ ಹೊಸದಾದ ವಸ್ತುವೊಂದು ಉತ್ಪಾದನೆಯಾಗಿರಬೇಕು.

ನೀವು ನೈಸರ್ಗಿಕ ರಬ್ಬರನ್ನು ಹಾಗೆಯೇ ಮಾರಾಟ ಮಾಡುತ್ತಿದ್ದರೆ ನಿಮ್ಮ ಆದಾಯ ಕೃಷಿ ಆದಾಯವೆಂದೇ ಪರಿಗಣಿಸಲ್ಪಡುತ್ತದೆ. ನೀವು ರಬ್ಬರ್ ಬೆಳೆಯುವುದರ ಜೊತೆ ಅದೇ ನೈಸರ್ಗಿಕ ರಬ್ಬರನ್ನು ನಿಮ್ಮದೇ ಉತ್ಪಾದನಾ ಘಟಕಗಳಲ್ಲಿ ಹಲವಾರು ರಾಸಾಯನಿಕಗಳ ಮೂಲಕ ಮುಂದಿನ ಹಂತದ ಪರಿಷ್ಕರಣೆಗೆ ಒಗ್ಗಿಸಿ ಲ್ಯಾಟೆಕ್ಸ್ ಅಥವಾ ವಿವಿಧ ರೀತಿಯ, ಮಾರುಕಟ್ಟೆ ಅಗತ್ಯಕ್ಕೆ ತಕ್ಕಂತೆ ಪರಿಷ್ಕೃತ ಉತ್ಪನ್ನಗಳನ್ನು ತಯಾರಿಸಿದಾಗ ಅದು ರಬ್ಬರ್ ಉತ್ಪಾದನೆ ಎಂದು ಪರಿಗಣಿತವಾಗುತ್ತದೆ. ಇಂತಹ ಸಂದರ್ಭದಲ್ಲಷ್ಟೇ ಮೇಲೆ ಉಲ್ಲೇಖಿಸಿದ ಶೇಕಡಾವಾರು ದರದಲ್ಲಿ ಆದಾಯವನ್ನು ತೆರಿಗೆಗೆ ಒಳಪಡಿಸಲಾಗುತ್ತದೆ. ಎಲ್ಲಿಯತನಕ ನೀವೇ ಕೃಷಿ ಮಾಡಿದ ಉತ್ಪನ್ನ ನೈಸರ್ಗಿಕ ರೂಪದಲ್ಲಿ ಮಾರಾಟ ಆಗುತ್ತದೆಯೋ ಅಲ್ಲಿಯತನಕ ಅದರ ಮಾರಾಟದಿಂದ ಬಂದ ಆದಾಯ ಕೃಷಿ ಆದಾಯವಾಗಿ ಪರಿಗಣಿತವಾಗುತ್ತದೆ.

ಹಣಕಾಸು, ತೆರಿಗೆ ಸಮಸ್ಯೆಗೆ ಪರಿಹಾರ

ಹಣಕಾಸಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಪತ್ರದಲ್ಲಿ (ದೂರವಾಣಿ ಸಂಖ್ಯೆ ಸಹಿತ) ಬರೆದು ಕಳುಹಿಸಿ.
ವಿಳಾಸ: ಪ್ರಶ್ನೋತ್ತರ, ವಾಣಿಜ್ಯ ವಿಭಾಗ, ಪ್ರಜಾವಾಣಿ, ನಂ.75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು–560001
ಇ–ಮೇಲ್‌: businessdesk@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT