ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ: ಹಣಕಾಸು, ತೆರಿಗೆ ಸಮಸ್ಯೆಗೆ ಪರಿಹಾರ

Last Updated 28 ಸೆಪ್ಟೆಂಬರ್ 2022, 21:43 IST
ಅಕ್ಷರ ಗಾತ್ರ

ವೆಂಕಟರಾಜು, ಊರು ಬೇಡ

l ಪ್ರಶ್ನೆ: ಅಕ್ಟೋಬರ್ 1ರಿಂದ ಅಟಲ್ ಪಿಂಚಣಿ ಯೋಜನೆಗೆ ಆದಾಯ ತೆರಿಗೆದಾರರು ಸದಸ್ಯರಾಗುವಂತಿಲ್ಲ ಎಂದು ಸರ್ಕಾರ ಹೇಳಿದೆ. ಈವರೆಗೆ ಈ ಯೋಜನೆಗೆ ಸದಸ್ಯರಾಗಿ ನಿಗದಿತವಾಗಿ ಹಣ ಕಟ್ಟುತ್ತಿದ್ದವರು ಆದಾಯ ತೆರಿಗೆದಾರರಾಗಿದ್ದರೆ ಅವರು ಅದನ್ನು ನಿಲ್ಲಿಸಬೇಕೇ? ಹಿಂದೆ ಆದಾಯ ತೆರಿಗೆ ವ್ಯಾಪ್ತಿಗೆ ಬಾರದೆ, ಈಗ ತೆರಿಗೆ ವ್ಯಾಪ್ತಿಗೆ ಬಂದಿದ್ದರೆ ಅವರು ಏನು ಮಾಡಬೇಕು? ಎನ್‌ಪಿಎಸ್ ಯೋಜನೆಯ ಸ್ಥೂಲ ವಿವರ ನೀಡಿ.

ಉತ್ತರ: ಅಟಲ್ ಪಿಂಚಣಿ ಯೋಜನೆ ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ಬಡ ವರ್ಗಗಳಿಗೆ ಸೇರಿದ ಜನರಿಗೆ 60 ವರ್ಷ ವಯಸ್ಸು ದಾಟಿದೊಡನೆ ಪಿಂಚಣಿ ಲಭಿಸುವಂತೆ ಮಾಡುವ ಉದ್ದೇಶದಿಂದ 2015ರಲ್ಲಿ ಆರಂಭಿಸಲಾಗಿದೆ. ಆರ್ಥಿಕವಾಗಿ ಹಿಂದುಳಿದಿರುವ ಇನ್ನಷ್ಟು ವರ್ಗಗಳಿಗೆ ಯೋಜನೆಯ ಪ್ರಯೋಜನ ಸಿಗಬೇಕು ಎಂಬ ಉದ್ದೇಶ ಕೇಂದ್ರ ಸರ್ಕಾರಕ್ಕೆ ಇದೆ.

ಸರ್ಕಾರ ಇತ್ತೀಚೆಗೆ ಹೊರಡಿಸಿರುವ ಅಧಿಸೂಚನೆ ಪ್ರಕಾರ, ಹೊಸದಾಗಿ ಈ ಯೋಜನೆಗೆ ಸೇರಬೇಕೆನ್ನುವವರು, ಆದಾಯ ತೆರಿಗೆ ವ್ಯಾಪ್ತಿಯಲ್ಲಿ ಬಂದಿರಬಾರದು. ಯಾರು ತಮ್ಮ ಗಳಿಕೆಯ ಮೇಲೆ ತೆರಿಗೆ ಪಾವತಿಸಲು ಬಾಧ್ಯಸ್ಥರಲ್ಲವೋ ಅವರಷ್ಟೇ ಅಟಲ್ ಪಿಂಚಣಿ ಯೋಜನೆ ಸೇರಬಹುದು. ಈ ನಿಯಮ ಅಕ್ಟೋಬರ್ 1ರಿಂದ ಅನ್ವಯವಾಗುತ್ತದೆ. ಯಾರು ಈ ದಿನಾಂಕಕ್ಕೆ ಮೊದಲೇ ಯೋಜನೆಗೆ ಸೇರಿಕೊಂಡಿರುತ್ತಾರೋ ಅವರು ಪಾವತಿ ಮುಂದುವರಿಸುವುದಕ್ಕೆ ತೊಂದರೆ ಇರುವುದಿಲ್ಲ. ಅಕ್ಟೋಬರ್ 1ರ ನಂತರ ಖಾತೆ ತೆರೆಯುವವರು ಆದಾಯ ತೆರಿಗೆ ವ್ಯಾಪ್ತಿಯಲ್ಲಿ ಇದ್ದವರಾದರೆ, ಸರ್ಕಾರವು ಅವರ ಖಾತೆಯನ್ನು ಸ್ಥಗಿತಗೊಳಿಸಿ ಹಣವನ್ನು ಹಿಂದಿರುಗಿಸುವ ಅಧಿಕಾರ ಹೊಂದಿದೆ.

ರಾಷ್ಟ್ರೀಯ ಪಿಂಚಣಿ ಯೋಜನೆ (NPS) ಬಗ್ಗೆ: ಇದರಲ್ಲಿ ಹಣ ತೊಡಗಿಸುವುದರ ಮೂಲ ಉದ್ದೇಶ, ನಿವೃತ್ತಿ ಜೀವನದ‌ ಆರ್ಥಿಕ ವೆಚ್ಚ ಭರಿಸುವುದು. ಎನ್‌ಪಿಎಸ್‌ ಅಡಿಯಲ್ಲಿ ಸಂಗ್ರಹವಾದ ಮೊತ್ತವನ್ನು ವೃತ್ತಿಪರರು ನಿರ್ವಹಣೆ ಮಾಡುತ್ತಾರೆ. ಇದಕ್ಕೆ ಪಿಂಚಣಿ ಪ್ರಾಧಿಕಾರದಿಂದ ಅನುಮೋದನೆ ಪಡೆದು, ಪ್ರಾಧಿಕಾರದ ಹೂಡಿಕೆ ಮಾರ್ಗಸೂಚಿಗಳ ಪ್ರಕಾರ ವೃತ್ತಿಪರರು ನಿಧಿ ನಿರ್ವಾಹಕರು ಸರ್ಕಾರಿ ಬಾಂಡ್‌, ಬಿಲ್‌, ಕಾರ್ಪೊರೇಟ್ ಡಿಬೆಂಚರ್‌ ಮತ್ತು ಷೇರುಗಳನ್ನು ಒಳಗೊಂಡಿರುವ ವೈವಿಧ್ಯಮಯ ಪೋರ್ಟ್‌ಫೋಲಿಯೊಗಳಲ್ಲಿ ತೊಡಗಿಸುತ್ತಾರೆ. ದೀರ್ಘಾವಧಿಯಲ್ಲಿ ಅದು ಆಯ್ಕೆ ಮಾಡಿದ ಯೋಜನೆಗೆ ಅನುಗುಣವಾಗಿ ಉತ್ತಮ ಆದಾಯ ಕೊಡುತ್ತದೆ. ಎನ್‌ಪಿಎಸ್‌ ಖಾತೆ ತೆರೆಯಲು ಶಾಶ್ವತ ನಿವೃತ್ತಿ ಖಾತೆ ಸಂಖ್ಯೆಯನ್ನು (PRAN) ಹೊಂದಿರಬೇಕಾಗುತ್ತದೆ. ಇದು ಒಂದು ಅನನ್ಯ ಸಂಖ್ಯೆ ಮತ್ತು ಇದು ಚಂದಾದಾರರ ಜೀವಿತಾವಧಿಯಲ್ಲಿ ಎನ್‌ಪಿಎಸ್ ಸಂಬಂಧಿ ವ್ಯವಹಾರಗಳಿಗೆಲ್ಲ ಬಳಕೆ ಆಗುತ್ತದೆ.

ಭರತ್ ಪಾಠಕ್, ಬೆಂಗಳೂರು

l ಪ್ರಶ್ನೆ: ನಾನು ಮಾಧ್ಯಮಗಳಲ್ಲಿ, ಷೇರುಗಳ ಬದಲಾಗಿ ಇಟಿಎಫ್ ಕೊಂಡುಕೊಳ್ಳಿ, ರಿಸ್ಕ್ ತುಂಬಾ ಕಡಿಮೆ ಎನ್ನುವ ಮಾಹಿತಿಯನ್ನುಇತ್ತೀಚೆಗೆ ಕೇಳಿರುವೆ. ಈ ಮಾತು ಸರಿಯೇ? ಇಟಿಎಫ್ ಹೂಡಿಕೆ ಷೇರುಗಳಿಗಿಂತ ಭಿನ್ನವೇ? ನಾವು ಹೂಡಿಕೆ ಮಾಡಿ ಲಾಭ ಗಳಿಸಬಹುದೇ? ತಿಳಿಸಿಕೊಡಿ.

ಉತ್ತರ: ಭಾರತೀಯ ಬಂಡವಾಳ ಮಾರುಕಟ್ಟೆಯಲ್ಲಿ ಎಕ್ಸ್‌ಚೇಂಜ್ ಟ್ರೇಡೆಡ್ ಫಂಡ್‌ಗಳು (ಇಟಿಎಫ್‌) ಇತ್ತೀಚಿನ ದಿನಗಳಲ್ಲಿ ಬಹಳ ಪ್ರಾಮುಖ್ಯತೆ ಪಡೆಯುತ್ತಿವೆ. ಒಂದೆಡೆ ಇವು ಷೇರುಗಳ ಸ್ವಭಾವವನ್ನು, ಇನ್ನೊಂದೆಡೆ ಮ್ಯೂಚುವಲ್ ಫಂಡ್‌ಗಳ ಸ್ವಭಾವವನ್ನೂ ಹೊಂದಿದ ಹೂಡಿಕೆ ಉತ್ಪನ್ನವಾಗಿವೆ. ಇಟಿಎಫ್‌ಗಳನ್ನು ಷೇರುಗಳಂತೆ ಪ್ರತಿ ಕ್ಷಣ ಮಾರುಕಟ್ಟೆ ಅವಧಿಯಲ್ಲಿ ನಿಮ್ಮ ಅನುಕೂಲಕರ ಬೆಲೆಗೆ ಖರೀದಿ ಹಾಗೂ ಮಾರಾಟ ಮಾಡಬಹುದು. ಹೂಡಿಕೆದಾರರ ಡಿಮ್ಯಾಟ್ ಖಾತೆಯಲ್ಲಿ ಇವುಗಳ ಖರೀದಿ ಮತ್ತು ಮಾರಾಟವನ್ನು ಷೇರುಗಳಂತೆಯೇ ದಾಖಲಿಸಲಾಗುತ್ತದೆ.

ಹೂಡಿಕೆದಾರ ತನ್ನ ನೆಚ್ಚಿನ ಕ್ಷೇತ್ರವನ್ನು ಆಯ್ಕೆ ಮಾಡಿ ಹೂಡಿಕೆ ಮಾಡುವ ಅವಕಾಶವನ್ನು ಇಟಿಎಫ್‌ ಕೊಡುತ್ತದೆ. ಉದಾಹರಣೆಗೆ, ಹೂಡಿಕೆದಾರ ಬ್ಯಾಂಕಿಂಗ್ ಕ್ಷೇತ್ರದ ಮೇಲೆ ಹೆಚ್ಚಿನ ಭರವಸೆ ಹೊಂದಿದ್ದು, ಯಾವುದೇ ನಿರ್ದಿಷ್ಟ ಬ್ಯಾಂಕಿನ ಷೇರುಗಳಲ್ಲಿ ಹೂಡಿಕೆಗೆ ಆಸಕ್ತನಿಲ್ಲದಿದ್ದಲ್ಲಿ ಅಂಥವರು ಒಟ್ಟು ಮಾರುಕಟ್ಟೆ ಪರಿಸ್ಥಿತಿಯನ್ನು ಅವಲೋಕಿಸಿ ಮಾರುಕಟ್ಟೆ ಕೆಳಕ್ಕೆ ಬಂದಾಗ ಇಟಿಎಫ್‌ ಖರೀದಿಸಬಹುದು. ಇಲ್ಲಿ ಷೇರು ಮಾರುಕಟ್ಟೆಯ ಕೆಲವು ಷೇರುಗಳು ಕಾಣುವ ಭಾರೀ ಏರಿಳಿತ ಇರುವುದಿಲ್ಲ. ಕಾರಣ, ಮ್ಯೂಚುವಲ್ ಫಂಡ್‌ಗಳಂತೆ ಒಂದು ಸೂಚ್ಯಂಕವನ್ನು ಮಾನದಂಡವನ್ನಾಗಿಸಿ ಅದರಲ್ಲಿರುವ ಷೇರುಗಳ ಪ್ರಮಾಣಕ್ಕೆ ಅನುಗುಣವಾಗಿ ಇಟಿಎಫ್‌ ನಿರ್ವಹಣಾ ಸಂಸ್ಥೆಗಳು ಹೂಡಿಕೆ ಮಾಡುತ್ತವೆ. ಹೀಗಾಗಿ ಅತೀ ದೊಡ್ಡ ಪ್ರಮಾಣದ ಏರಿಳಿತಗಳು ಹೆಚ್ಚಿನ ಅಪಾಯ ತರದಂತೆ ಸಹಕರಿಸುತ್ತವೆ.

ಎಲ್ಲಾ ಹೂಡಿಕೆಗಳಿಗಿರುವ ಅನುಕೂಲ ಹಾಗೂ ಅನನುಕೂಲಗಳು ಇಟಿಎಫ್‌ಗಳ ವಿಚಾರದಲ್ಲಿಯೂ ಇವೆ. ಇದರಲ್ಲಿನ ಹೂಡಿಕೆಗೂ ಮಾರುಕಟ್ಟೆ ವ್ಯವಹಾರದ ಸಾಮಾನ್ಯ ಕೌಶಲ ಬೇಕಾಗುತ್ತದೆ. ಲಾಭ–ನಷ್ಟ ನಾವು ಆಯ್ಕೆ ಮಾಡುವ ಒಟ್ಟಾರೆ ಕ್ಷೇತ್ರದ ಭವಿಷ್ಯದ ಮೇಲೆ ಅವಲಂಬಿತವಾಗಿರುವ ಕಾರಣ ಯಾವುದೇ ಇಟಿಎಫ್‌ ಕೊಳ್ಳುವ ಮೊದಲು ಒಂದಷ್ಟು ಕ್ಷೇತ್ರಗಳ ವ್ಯವಹಾರದ ಸಾಧಕ ಮತ್ತು ಬಾಧಕ ಅವಲೋಕಿಸಿ ಅಂತಹ ಕ್ಷೇತ್ರದಲ್ಲಿ ಹೆಚ್ಚು ವ್ಯವಹರಿಸಲ್ಪಡುವ ಇಟಿಎಫ್‌ ಖರೀದಿಸುವುದು ಉತ್ತಮ ಲಾಭಗಳಿಸಲು ನೆರವಾಗಬಲ್ಲದು. ಷೇರು ಸೂಚ್ಯಂಕವಷ್ಟೇ ಅಲ್ಲದೆ, ಹೂಡಿಕೆದಾರ ಯಾವುದೇ ನಿರ್ದಿಷ್ಟ ಉತ್ಪನ್ನಗಳ ಬೆಲೆಗಳಲ್ಲಿ ಏರುಗತಿ ನಿರೀಕ್ಷಿಸುತ್ತಿದ್ದರೆ, ಅಂತಹ ಇಟಿಎಫ್‌ಗಳನ್ನೂ ಹೂಡಿಕೆಗೆ ಆಯ್ಕೆ ಮಾಡಿಕೊಳ್ಳಬಹುದು. ಉದಾಹರಣೆಗೆ ಚಿನ್ನ, ಕಚ್ಚಾ ತೈಲ, ನೈಸರ್ಗಿಕ ಅನಿಲ ಇತ್ಯಾದಿಗಳ ಬೆಲೆಯಲ್ಲಿ ಏರಿಕೆಯಾಗುವ ನಿರೀಕ್ಷೆ ಇದ್ದರೆ, ಆಯಾ ವರ್ಗದ ಇಟಿಎಫ್‌ ಖರೀದಿಸಬಹುದು. ವಿದೇಶಿ ಮಾರುಕಟ್ಟೆ ಸೂಚ್ಯಂಕಗಳನ್ನು ಆಧರಿಸಿರುವ ಇಟಿಎಫ್‌ ಕೂಡ ಲಭ್ಯವಿದೆ.

ಹಣಕಾಸು, ತೆರಿಗೆ ಸಮಸ್ಯೆಗೆ ಪರಿಹಾರ

ಹಣಕಾಸಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಪತ್ರದಲ್ಲಿ (ದೂರವಾಣಿ ಸಂಖ್ಯೆ ಸಹಿತ) ಬರೆದು ಕಳುಹಿಸಿ. ವಿಳಾಸ: ಪ್ರಶ್ನೋತ್ತರ, ವಾಣಿಜ್ಯ ವಿಭಾಗ, ಪ್ರಜಾವಾಣಿ, ನಂ.75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು–560001
ಇ–ಮೇಲ್‌: businessdesk@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT