ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಗತಿ ಉತ್ತೇಜಿಸುವ ಸ್ಥಿರ ಸರ್ಕಾರ: ಉದ್ಯಮ ನಿರೀಕ್ಷೆ

ಉದ್ದಿಮೆ ದಿಗ್ಗಜರ ನಿರೀಕ್ಷೆ
Last Updated 23 ಮೇ 2019, 15:54 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರದಲ್ಲಿ ಸ್ಥಿರ ಸರ್ಕಾರ ಅಸ್ತಿತ್ವಕ್ಕೆ ಬರಲಿರುವುದರಿಂದ ಆರ್ಥಿಕ ಪ್ರಗತಿಗೆ ಉತ್ತೇಜನ ದೊರೆಯಲಿದೆ ಎಂದು ಕೈಗಾರಿಕೋದ್ಯಮಿಗಳು ಆಶಾವಾದ ವ್ಯಕ್ತಪಡಿಸಿದ್ದಾರೆ.

ಬಂಡವಾಳ ಹೂಡಿಕೆ ಹೆಚ್ಚಿಸಿ, ಆರ್ಥಿಕ ಬೆಳವಣಿಗೆ ಉತ್ತೇಜಿಸಿ ಹೊಸ ಉದ್ಯೋಗ ಅವಕಾಶಗಳನ್ನು ಸೃಷ್ಟಿಸಲಿದೆ ಎಂದು ಉದ್ಯಮಿಗಳು
ನಿರೀಕ್ಷಿಸಿದ್ದಾರೆ.

‘ಹೊಸ ಸರ್ಕಾರವು, ದೇಶಿ ಆರ್ಥಿಕ ವೃದ್ಧಿ ದರವು (ಒಟ್ಟು ಆಂತರಿಕ ಉತ್ಪನ್ನ –ಜಿಡಿಪಿ) ಹೆಚ್ಚಳಕ್ಕೆ ಕಾರಣವಾಗುವ ರಚನಾತ್ಮಕ ಕ್ರಮಗಳನ್ನು ಕೈಗೊಳ್ಳಲಿದೆ’ ಎಂದು ಗೋದ್ರೇಜ್‌ ಸಮೂಹದ ಅಧ್ಯಕ್ಷ ಆದಿ ಗೋದ್ರೇಜ್‌ ಪ್ರತಿಕ್ರಿಯಿಸಿದ್ದಾರೆ.

‘ಕಂಪನಿ ತೆರಿಗೆಯು ನಮ್ಮಲ್ಲಿ ಗರಿಷ್ಠ ಮಟ್ಟದಲ್ಲಿ ಇದೆ. ಈ ತೆರಿಗೆ ಪ್ರಮಾಣವನ್ನು ಕಡಿಮೆ ಮಾಡಬೇಕಾಗಿದೆ. ಸಣ್ಣ ಕಂಪನಿಗಳಿಗೆ ತೆರಿಗೆ ದರವನ್ನು ಶೇ 25ಕ್ಕೆ ಇಳಿಸಲಾಗಿದೆ. ದೊಡ್ಡ ಕಂಪನಿಗಳಿಗೂ ಇದನ್ನು ವಿಸ್ತರಿಸಿದರೆ ಅದೊಂದು ಮಹತ್ವದ ಕ್ರಮವಾಗಲಿದೆ. ಆರ್ಥಿಕತೆಗೆ ಚೇತರಿಕೆ ನೀಡಲು ಇಂತಹ ಅನೇಕ ಕ್ರಮಗಳನ್ನು ಕೈಗೊಳ್ಳುವ ಅಗತ್ಯ ಇದೆ’ ಎಂದು ಹೇಳಿದ್ದಾರೆ.

’ಒಟ್ಟಾರೆ ಆರ್ಥಿಕತೆಯ ಚಿತ್ರಣ ಬದಲಿಸುವ ದಿಟ್ಟ ಸುಧಾರಣಾ ಕ್ರಮಗಳನ್ನು ಕೈಗೊಳ್ಳುವ ಅಗತ್ಯ ಇದೆ’ ಎಂದು ನೀತಿ ಆಯೋಗದ ಮಾಜಿ ಉಪಾಧ್ಯಕ್ಷ ಅರವಿಂದ ಪನಗರಿಯಾ ಹೇಳಿದ್ದಾರೆ.

‘ಸದ್ಯಕ್ಕೆ ಜಾರಿಯಲ್ಲಿ ಇರುವ ಆರ್ಥಿಕ ಧೋರಣೆಗಳೇ ಮುಂದುವರೆಯಲಿರುವುದರಿಂದ ವಿದೇಶಿ ಬಂಡವಾಳ ಹರಿವು ಹೆಚ್ಚಲಿದೆ. ಇದರಿಂದ ದೇಶಿ ಆರ್ಥಿಕತೆ ಇನ್ನಷ್ಟು ಸದೃಢಗೊಳ್ಳಲಿದೆ’ ಎಂದು ಮುಂಬೈ ಷೇರುಪೇಟೆ ಸದಸ್ಯ ರಮೇಶ್‌ ದಮನಿ ಪ್ರತಿಕ್ರಿಯಿಸಿದ್ದಾರೆ.

‘ಸ್ಥಿರ ಸರ್ಕಾರದಿಂದಾಗಿ ರಿಯಲ್‌ ಎಸ್ಟೇಟ್ ವಲಯಕ್ಕೂ ಉತ್ತೇಜನ ದೊರೆಯಲಿದೆ’ ಎಂದು ಹೌಸ್‌ ಆಫ್ ಹೀರಾನಂದಾನಿ ಸ್ಥಾಪಕ ಸುರೇಂದ್ರ ಹೀರಾನಂದಾನಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT