ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಟಾರ್ಟ್‌ಅಪ್‌ಗಳಿಗೆ ಉತ್ತೇಜನ ಮುಂಚೂಣಿಯಲ್ಲಿ ಗುಜರಾತ್‌

ಅತ್ಯುತ್ತಮ ಸಾಧನೆ ವಿಭಾಗದಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ
Last Updated 20 ಡಿಸೆಂಬರ್ 2018, 19:41 IST
ಅಕ್ಷರ ಗಾತ್ರ

ನವದೆಹಲಿ: ಹೊಸ ಉದ್ಯಮಿಗಳಿಗೆ ಉತ್ತೇಜನ ನೀಡಿ ಪೂರಕ ವಾತಾವರಣ ಕಲ್ಪಿಸಿಕೊಡುವಲ್ಲಿ ಗುಜರಾತ್‌ನ ಸಾಧನೆ ಅತ್ಯುತ್ತಮವಾಗಿದೆ.

ನವೋದ್ಯಮಗಳಿಗೆ ರಾಜ್ಯಗಳು ನೀಡುತ್ತಿರುವ ಬೆಂಬಲ ಆಧರಿಸಿ ಕೈಗಾರಿಕಾ ನೀತಿ ಮತ್ತು ಉತ್ತೇಜನಾ ಇಲಾಖೆಯು (ಡಿಐಪಿಪಿ) ರಾಜ್ಯಗಳ ಶ್ರೇಯಾಂಕ ನಿಗದಿಪಡಿಸಿದೆ.

ಅತ್ಯುತ್ತಮ ಸಾಧನೆಯ ರಾಜ್ಯಗಳ ಸಾಲಿನಲ್ಲಿ ಗುಜರಾತ್‌ ನಂತರದ ಸ್ಥಾನದಲ್ಲಿ ಕರ್ನಾಟಕ, ಕೇರಳ, ಒಡಿಶಾ ಮತ್ತು ರಾಜಸ್ಥಾನ ರಾಜ್ಯಗಳಿವೆ.

‘ನವೋದ್ಯಮಿಗಳಿಗೆ ನೆರವಾಗುತ್ತಿರುವ ರಾಜ್ಯಗಳ ಸಾಧನೆ ಗುರುತಿಸಿ ನೀಡಲಾಗುವ ಈ ಶ್ರೇಯಾಂಕದಿಂದ ಸ್ಟಾರ್ಟ್‌ಅಪ್‌ಗಳಿಗೆ ಉತ್ತೇಜನ ನೀಡುವ ರಾಜ್ಯ ಸರ್ಕಾರಗಳ ಧೋರಣೆಯಲ್ಲಿ ಗುಣಾತ್ಮಕ ಬದಲಾವಣೆ ಕಂಡು ಬರಲಿದೆ’ ಎಂದು ‘ಡಿಐಪಿಪಿ’ ಕಾರ್ಯದರ್ಶಿ ರಮೇಶ್‌ ಅಭಿಷೇಕ್‌ ಹೇಳಿದ್ದಾರೆ.

ಉದಯೋನ್ಮುಖ ಉದ್ದಿಮೆದಾರರು ಹೊಸ ಉದ್ದಿಮೆ ಆರಂಭಿಸಲು ಅಗತ್ಯವಾದ ಸೌಲಭ್ಯಗಳನ್ನು ಒದಗಿಸಲು ರಾಜ್ಯ ಸರ್ಕಾರಗಳು ಕೈಗೊಂಡಿರುವ ಕ್ರಮಗಳನ್ನು ಆಧರಿಸಿ ಶ್ರೇಯಾಂಕ ನಿಗದಿಪಡಿಸಲಾಗಿದೆ. ಈ ಪ್ರಕ್ರಿಯೆಯಲ್ಲಿ 27 ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳ ಸಾಧನೆಯನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿತ್ತು.

ನವೋದ್ಯಮಗಳಿಗೆ ಬೆಂಬಲ ನೀಡುವ, ಮೂಲ ಸೌಕರ್ಯ, ಮೂಲ ನಿಧಿ ಒದಗಿಸುವ, ಪೂರಕ ಬಂಡವಾಳ ತೊಡಗಿಸಲು ನೆರವಾಗುವ ಮತ್ತು ನಿಯಂತ್ರಣ ಕ್ರಮಗಳ ಸಡಿಲಿಕೆ ಕ್ರಮಗಳನ್ನು ಪರಿಗಣಿಸಿ ರಾಜ್ಯಗಳ ಸಾಧನೆ ಗುರುತಿಸಲಾಗಿದೆ.

ಕ್ರಿಯಾ ಯೋಜನೆ: ನವೋದ್ಯಮಿಗಳಿಗೆ ಉತ್ತೇಜನ ನೀಡುವ ಉದ್ದೇಶಕ್ಕೆ ಕೇಂದ್ರ ಸರ್ಕಾರವು ಈ ವರ್ಷದ ಜನವರಿಯಲ್ಲಿ ಸ್ಟಾರ್ಟ್‌ಅಪ್‌ ಭಾರತ್‌ ಕ್ರಿಯಾ ಯೋಜನೆಗೆ ಚಾಲನೆ ನೀಡಿತ್ತು.

ನವೋದ್ಯಮಗಳಿಗೆ ತೆರಿಗೆ ಬಿಡುವು, ಇನ್‌ಸ್ಪೆಕ್ಟರ್‌ ರಾಜ್‌ ವ್ಯವಸ್ಥೆಯಿಂದ ಮುಕ್ತಿ ಮತ್ತು ಬಂಡವಾಳ ಗಳಿಕೆ ತೆರಿಗೆಯಿಂದ ವಿನಾಯ್ತಿಯಂತಹ ಉತ್ತೇಜನಾ ಕ್ರಮಗಳನ್ನು ಕೈಗೊಳ್ಳುವುದು ಈ ಕ್ರಿಯಾ ಯೋಜನೆಯ ಉದ್ದೇಶವಾಗಿದೆ.

ನವೋದ್ಯಮಗಳಿಗೆ ತೆರಿಗೆ ವಿನಾಯ್ತಿ
ತೆರಿಗೆ ವಿನಾಯ್ತಿ ಸೌಲಭ್ಯ ಪಡೆಯಲು ಹೆಚ್ಚೆಚ್ಚು ಸ್ಟಾರ್ಟ್‌ಅಪ್‌ಗಳು ಮುಂದೆ ಬರಬೇಕು. ತಮಗೆ ಎದುರಾದ ನಿರ್ದಿಷ್ಟ ಸಮಸ್ಯೆಗಳನ್ನು ನಮ್ಮ ಗಮನಕ್ಕೆ ತಂದರೆ ಸಂಬಂಧಿತ ಇಲಾಖೆಯ ಜತೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದೂ ರಮೇಶ್‌ ಅಭಿಷೇಕ್‌ ಹೇಳಿದ್ದಾರೆ.

‘ಸ್ಟಾರ್ಟ್‌ಅಪ್‌ಗಳಲ್ಲಿ ಬಂಡವಾಳ ತೊಡಗಿಸುವವರಿಗೆ ತೆರಿಗೆ ವಿಧಿಸುವುದಕ್ಕೆ ವಿನಾಯ್ತಿ ಪಡೆಯಲು ಈ ಉದ್ದೇಶಕ್ಕೆ ಸ್ಥಾಪಿಸಲಾಗಿರುವ ವಿವಿಧ ಸಚಿವಾಲಯಗಳ ಮಂಡಳಿಯ ನೆರವು ಪಡೆಯಬೇಕು. ನಮ್ಮ ಇಲಾಖೆಯು ಈ ವಿಷಯವನ್ನು ರೆವಿನ್ಯೂ ಇಲಾಖೆ ಜತೆ ಚರ್ಚಿಸುತ್ತಿದೆ.

‘ಏಪ್ರಿಲ್‌ ತಿಂಗಳಿನಿಂದೀಚೆಗೆ ಕೇವಲ ಎರಡು ನವೋದ್ಯಮಗಳು ಮಾತ್ರ ತೆರಿಗೆ ವಿನಾಯ್ತಿಗೆ ಅರ್ಜಿ ಸಲ್ಲಿಸಿವೆ. ಪ್ರಾಮಾಣಿಕ ಹೂಡಿಕೆದಾರರಿಗೆ ತೆರಿಗೆ ವಿನಾಯ್ತಿ ನೀಡಲಾಗುವುದು. ಪ್ರತಿಯೊಂದು ಮಾಹಿತಿ ಆನ್‌ಲೈನ್‌ನಲ್ಲಿ ಇರಲಿದೆ. ಇದರ ಪ್ರಯೋಜನ ಪಡೆದುಕೊಳ್ಳಬೇಕು’ ಎಂದು ಹೇಳಿದ್ದಾರೆ.

ಒಟ್ಟಾರೆ ಹೂಡಿಕೆ ಪ್ರಮಾಣ ₹ 10 ಕೋಟಿ ದಾಟಿರದಿದ್ದರೆ ಅಂತಹ ಸ್ಟಾರ್ಟ್‌ಅಪ್‌ಗಳು ತೆರಿಗೆ ವಿನಾಯ್ತಿಗೆ ಅರ್ಹತೆ ಪಡೆಯಲಿವೆ ಎಂದು ಕೇಂದ್ರ ಸರ್ಕಾರ ಏಪ್ರಿಲ್‌ನಲ್ಲಿಯೇ ನಿಯಮ ರೂಪಿಸಿದೆ. ಮೂರು ವರ್ಷಗಳವರೆಗೆ ಆದಾಯ ತೆರಿಗೆ ವಿನಾಯ್ತಿಯೂ ಲಭ್ಯ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT