ಶುಕ್ರವಾರ, ಜೂನ್ 18, 2021
23 °C

ಕೈಗಾರಿಕೆ ಸ್ಥಾಪನೆಗೆ ಮುಂದಾದ ಕಂಪನಿಗಳು: ₹400 ಕೋಟಿ ಹೂಡಿಕೆಗೆ ಒಪ್ಪಂದ -ಶೆಟ್ಟರ್

ಎಂ. ಮಹೇಶ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಜಿಲ್ಲೆಯಲ್ಲಿ ಹೊಸದಾಗಿ ₹ 400 ಕೋಟಿ ಹೂಡಿಕೆಗೆ ಉದ್ಯಮಗಳು ಸರ್ಕಾರದೊಂದಿಗೆ ಇತ್ತೀಚೆಗೆ ಒಪ್ಪಂದ ಮಾಡಿಕೊಂಡಿವೆ. ಇದರಿಂದ ನೂರಾರು ಉದ್ಯೋಗ ಸೃಷ್ಟಿಯಾಗುತ್ತದೆ ಎಂದು ಕೈಗಾರಿಕಾ ಇಲಾಖೆಯಿಂದ ಅಂದಾಜಿಸಲಾಗಿದೆ.

ರಾಜ್ಯ ಮಟ್ಟದ ಏಕಗವಾಕ್ಷಿ ಒಪ್ಪಿಗೆ ಸಮಿತಿಯ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಶ್ರೀರೇಣುಕಾ ಶುಗರ್ಸ್‌ ಕಂಪನಿಯು ₹ 156.66 ಕೋಟಿ ಹೂಡಲಾಗುತ್ತಿದೆ. ಜೊಲ್ಲೆ ಆತಿಥ್ಯ ಸಮೂಹದಿಂದ ₹ 41.05 ಕೋಟಿ ಬಂಡವಾಳ ಹಾಕಲು ಯೋಜಿಸಿದ್ದು, 36 ಉದ್ಯೋಗ ಸೃಷ್ಟಿಯಾಗುವ ಅಂದಾಜಿದೆ. ಅಂತೆಯೇ ಆಸ್ಕಿನ್ಸ್‌ ಬಯೊಫ್ಯುಯೆಲ್‌ ಸಮೂಹದಿಂದ ₹ 41..05 ಕೋಟಿ ತೊಡಗಿಸಲಾಗುತ್ತಿದ್ದು, 67 ಕೆಲಸಗಳು ದೊರೆಯಲಿವೆ. ಸಾವ್‌ಸನ್‌ ಡಿಸ್ಟಿಲ್‌ ಪ್ರೈವೇಟ್ ಲಿಮಿಟೆಡ್ ಕಂಪನಿಯು ₹ 122 ಕೋಟಿ ಹೂಡಿಕೆಯ ಯೋಜನೆ ಹೊಂದಿದ್ದು, 100 ಉದ್ಯೋಗ ಅವಕಾಶ ಸೃಷ್ಟಿಯಾಗಲಿದೆ. ಈ ಕೈಗಾರಿಕೆಗಳಿಂದ 203 ದುಡಿಯುವ ಕೈಗಳಿಗೆ ಕೆಲಸ ದೊರೆತಂತಾಗಲಿದೆ. ಇವು ಜಿಲ್ಲೆಯ ವಿವಿಧೆಡೆ ಜಾಗ ಕೇಳಿವೆ’ ಎಂದು ಕೈಗಾರಿಕಾ ಇಲಾಖೆಯ ಮೂಲಗಳು ತಿಳಿಸಿವೆ.

ಸ್ಥಳೀಯರಿಗೆ ಅವಕಾಶ: ‘ಕಳೆದ ಐದು ತಿಂಗಳಲ್ಲಿ ವಿವಿಧ ಕಂಪೆನಿಗಳು ಸರ್ಕಾರದಿಂದ ಅನುಮೋದನೆ ಪಡೆದಿವೆ. ಬಹುತೇಕ ಕಂಪೆನಿಗಳು ವಿಸ್ತರಣಾ ಯೋಜನೆಗಳಿಗೆ ರಾಜ್ಯದ ವಿವಿಧ ಜಿಲ್ಲೆಗಳನ್ನು ಆಯ್ಕೆ ಮಾಡಿಕೊಂಡಿವೆ. ಇದರಲ್ಲಿ ಬೆಳಗಾವಿಯೂ ಸೇರಿದೆ. ಹೂಡಿಕೆಯಿಂದ ಉದ್ಯೋಗವೂ ಲಭ್ಯವಾಗಲಿದೆ. ಸ್ಥಳೀಯರಿಗೂ ಅವಕಾಶ ಸಿಗಲಿದೆ. ಹೂಡಿಕೆದಾರರಿಗೆ ಅನುಕೂಲವಾಗುವಂತೆ ಕೈಗಾರಿಕೆ ನೀತಿಯನ್ನು ರೂಪಿಸಲಾಗಿದೆ. ಹೀಗಾಗಿ ತಡಮಾಡದೇ ಅವು ಅನುಷ್ಠಾನಗೊಳಿಸುವ ಸಾಧ್ಯತೆ ಹೆಚ್ಚಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

‘ಹೂಡಿಕೆಗೆ ಈಗ, ಸರ್ಕಾರದ ಉನ್ನತ ಮಟ್ಟದ ಸಮಿತಿಯಿಂದ ಅನುಮತಿ ಪಡೆದುಕೊಂಡವರೆಲ್ಲ ಕೂಡಲೇ ತಮ್ಮ ಉದ್ಯಮ ಆರಂಭಿಸಬಹುದಾಗಿದೆ. ಈ ಹಿಂದೆ ವಿವಿಧ ಇಲಾಖೆಗಳಿಂದ ಎನ್‌ಒಸಿ, ಅನುಮತಿ ಪತ್ರ ಪಡೆದುಕೊಳ್ಳಬೇಕಿತ್ತು. ಪ್ರಸ್ತುತ ಕಾನೂನು ತಿದ್ದುಪಡಿ ಅನುಕೂಲ ಮಾಡಿಕೊಡಲಾಗಿದೆ. ಉನ್ನತ ಮಟ್ಟದ  ಸಮಿತಿ ಅನುಮತಿಯಿಂದಲೇ ಉದ್ಯಮ ಆರಂಭಕ್ಕೆ ಅವಕಾಶವಿದೆ’ ಎನ್ನುತ್ತಾರೆ ಅವರು.

ಜಿಲ್ಲಾಧಿಕಾರಿ ಸಭೆಯಲ್ಲಿ: ‘ಫೆಬ್ರುವರಿಯಲ್ಲಿ ಹುಬ್ಬಳ್ಳಿಯಲ್ಲಿ ನಡೆದ ರಾಜ್ಯಮಟ್ಟದ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಜಿಲ್ಲೆಯ 10 ಉದ್ಯಮಿಗಳು ಒಂಡಂಬಡಿಕೆ ಮಾಡಿಕೊಂಡಿದ್ದಾರೆ. ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿ ಸಭೆಯ ಮೂಲಕ 18 ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ₹ 167 ಕೋಟಿ ಬಂಡವಾಳ ಹೂಡಿಕೆಯಿಂದ 537 ಮಂದಿಗೆ ಉದ್ಯೋಗ ದೊರೆಯಲಿದೆ’ ಎಂದು ಮೂಲಗಳು ಮಾಹಿತಿ ನೀಡಿವೆ.

ಮುಂಬೈ ಹಾಗೂ ಬೆಳಗಾವಿಯ ವಿವಿಧ ಕಂಪನಿಗಳು ತಮ್ಮ ಉದ್ಯಮ ವಿಸ್ತರಿಸಲು ಜಿಲ್ಲೆಯಲ್ಲಿ ₹ 570 ಕೋಟಿ ಹೂಡಿಕೆಗೆ ಮುಂದಾಗಿವೆ. ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಅಧ್ಯಕ್ಷತೆಯಲ್ಲಿ ಕೆಲವು ತಿಂಗಳುಗಳ ಹಿಂದೆ ಇಲ್ಲಿ ನಡೆದಿದ್ದ ಸಭೆಯಲ್ಲಿ ಆ ಉದ್ಯಮಿಗಳು ಆಸಕ್ತಿ ತೋರಿದ್ದರು. ಮುಂಬೈನ ಇಂಡೊ ಕೌಂಟ್ ಇಂಡಸ್ಟ್ರೀಸ್ ಲಿ., ಗೋದಾವರಿ ಬಯೊರೀಫೈನರೀಸ್ ಲಿ., ಬೆಳಗಾವಿಯ ಜೀನ ಸ್ಪೆಷಲ್ ಸ್ಟೀಲ್ ವರ್ಕ್ಸ್‌ ಪ್ರೈವೇಟ್‌ ಲಿ., ಕ್ವಾಲಿಟಿ ಅನಿಮಲ್ ಫೀಡ್ಸ್ ಪ್ರೈವೇಟ್‌ ಲಿ., ವಿಜಯ್ ಶಂತ್ರಿ ಅಗ್ರೊಟೆಕ್ ಎಕ್ಸ್‌ಪೋರ್ಟ್ಸ್‌, ಅಶೋಕ್ ಐರನ್‌ ವರ್ಕ್ಸ್‌ ಪ್ರೈವೇಟ್‌ ಲಿ., ಆನಂದ್ ಲೈಫ್ ಸೈನ್ಸಸ್ ಲಿ., ಹೂಡಿಕೆಗೆ ಒಪ್ಪಂದ ಮಾಡಿಕೊಂಡಿದ್ದವು. ಅವು ಉದ್ಯಮ ಆರಂಭಿಸಿದಲ್ಲಿ ನೂರಾರು ಮಂದಿಗೆ ಅದರಲ್ಲೂ ಸ್ಥಳೀಯರಿಗೆ ಉದ್ಯೋಗದ ಅವಕಾಶಗಳು ಸೃಷ್ಟಿಯಾಗಲಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು