ನವದೆಹಲಿ(ಪಿಟಿಐ): ತಮಿಳುನಾಡಿನ ಹೊಸೂರಿನಲ್ಲಿ ₹250 ಕೋಟಿ ವೆಚ್ಚದಲ್ಲಿ ನೂತನ ತಯಾರಿಕಾ ಘಟಕವನ್ನು ಸ್ಥಾಪಿಸುವ ಗುರಿ ಇದೆ ಎಂದು ಪ್ರಮುಖ ಹೆಲ್ಮೆಟ್ ತಯಾರಕ ಕಂಪನಿ ಸ್ಟೀಲ್‌ಬರ್ಡ್ ಹೈಟೆಕ್ ಇಂಡಿಯಾದ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸ್ಟೀಲ್‌ಬರ್ಡ್ ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಕಪೂರ್ ಮಾತನಾಡಿ, ಬೇಡಿಕೆ ಪೂರೈಸಲು ಘಟಕಗಳನ್ನು ಸ್ಥಾಪಿಸಲಾಗುತ್ತಿದೆ. ಇದಕ್ಕಾಗಿ ಜಮೀನು ಸ್ವಾಧೀನಪಡಿಸಿಕೊಳ್ಳುವ ಕಾರ್ಯ ಅಂತಿಮ ಹಂತದಲ್ಲಿದೆ. ಆರಂಭಿಕ ಹಂತವಾಗಿ ₹100 ಕೋಟಿ ಹೂಡಿಕೆ ಮಾಡಲಿದ್ದೇವೆ. ಎರಡು ವರ್ಷಗಳಲ್ಲಿ ₹250 ಕೋಟಿ ಹೂಡಿಕೆ ಮಾಡಲಾಗುವುದು. ಆ ವೇಳೆಗೆ ಘಟಕವು ಕಾರ್ಯನಿರ್ವಹಿಸುವ ನಿರೀಕ್ಷೆ ಇದೆ ಎಂದರು.
ಹಿಮಾಚಲ ಪ್ರದೇಶದ ಬಡ್ಡಿ ಮತ್ತು ನೊಯಿಡಾದಲ್ಲಿ ಈಗಾಗಲೇ ಕಂಪನಿ ತಲಾ ನಾಲ್ಕು ಘಟಕಗಳನ್ನು ಹೊಂದಿದೆ. ಬಡ್ಡಿಯಲ್ಲಿನ ತಯಾರಿಕಾ ಘಟಕವನ್ನು ₹105 ಕೋಟಿ ವೆಚ್ಚದಲ್ಲಿ ವಿಸ್ತರಣೆ ಮಾಡಲಾಗುತ್ತಿದೆ. ಈ ಸ್ಥಾವರ ಫೂರ್ಣವಾದ ನಂತರ ಕಂಪನಿಯ ತಯಾರಿಕಾ ಸಾಮರ್ಥ್ಯವು ದಿನಕ್ಕೆ 20 ಸಾವಿರದಿಂದ 50 ಸಾವಿರ ಹೆಲ್ಮೆಟ್‌ಗಳಿಗೆ ಏರಿಕೆ ಆಗಲಿದೆ. ಈ ಆರ್ಥಿಕ ವರ್ಷದಲ್ಲಿ ಎಲ್ಲ ಘಟಕಗಳಿಂದ ಕೋಟಿ ಹೆಲ್ಮೆಟ್ ತಯಾರಿಸುವ ನಿರೀಕ್ಷೆಯಿದೆ. ಮುಂದಿನ ವರ್ಷದ ಅಂತ್ಯದ ವೇಳೆಗೆ, ಕಂಪನಿಯು ಒಟ್ಟಾರೆ ತಯಾರಿಕೆಯನ್ನು ವರ್ಷಕ್ಕೆ 1.5 ಕೋಟಿ ಹೆಲ್ಮೆಟ್‌ಗಳಿಗೆ ವಿಸ್ತರಿಸಲು ಯೋಜಿಸಿದೆ ಎಂದು ಅವರು ಹೇಳಿದರು.
2022–23ರ ಅವಧಿಯಲ್ಲಿ ಕಂಪನಿಯು ₹554 ಕೋಟಿ ವ್ಯವಹಾರ ನಡೆಸಿದ್ದು, ಪ್ರಸಕ್ತ ಹಣಕಾಸು ವರ್ಷದಲ್ಲಿ ಇದನ್ನು ₹600 ಕೋಟಿ ಮುಟ್ಟಿಸುವ ಗುರಿ ಹೊಂದಿದೆ. 2026–27ರ ವೇಳೆಗೆ ವಹಿವಾಟನ್ನು ₹1300 ಕೋಟಿಗೆ ಹೆಚ್ಚಿಸಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.