ಗುರುವಾರ , ಡಿಸೆಂಬರ್ 5, 2019
19 °C

ಷೇರುಪೇಟೆಯಲ್ಲಿ ಮಾರಾಟ ಒತ್ತಡ

Published:
Updated:

ಮುಂಬೈ: ಭಾರತದ ವಾಯುಪಡೆಯು ಪಾಕಿಸ್ತಾನದಲ್ಲಿನ ಭಯೋತ್ಪಾದನಾ ಶಿಬಿರಗಳ ಮೇಲೆ ದಾಳಿ ನಡೆಸಿದ್ದರಿಂದ ಷೇರುಪೇಟೆಯಲ್ಲಿ ಮಂಗಳವಾರದ ವಹಿವಾಟಿನಲ್ಲಿ ಮಾರಾಟ ಒತ್ತಡ ಕಂಡು ಬಂದು ಸಂವೇದಿ ಸೂಚ್ಯಂಕವು 240 ಅಂಶಗಳಿಗೆ ಎರವಾಯಿತು.

ಜಾಗತಿಕ ಷೇರುಪೇಟೆಗಳಲ್ಲಿನ ದುರ್ಬಲ ವಹಿವಾಟು ಮತ್ತು ಹಣಕಾಸು, ರಿಯಾಲಿಟಿ ಷೇರುಗಳಲ್ಲಿನ ಮಾರಾಟ ಒತ್ತಡವು ಕೂಡ ಪೇಟೆಯಲ್ಲಿ ಖರೀದಿ ಉತ್ಸಾಹಕ್ಕೆ ತಣ್ಣೀರೆರಚಿತು.

ದೇಶಿ ಸಾಂಸ್ಥಿಕ ಹೂಡಿಕೆದಾರರು (ಡಿಐಐ) ಷೇರುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟ ಮಾಡಿರುವುದು ಕೂಡ ಈ ನಿರುತ್ಸಾಹಕ್ಕೆ ಇಂಬು ನೀಡಿತು. ಸೋಮವಾರದ ವಹಿವಾಟಿನಲ್ಲಿ ‘ಡಿಐಐ‘ ₹ 1,764 ಕೋಟಿ ಮೊತ್ತದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ವಹಿವಾಟಿನ ಅಂತ್ಯಕ್ಕೆ ಸಂವೇದಿ ಸೂಚ್ಯಂಕವು 240 ಅಂಶಗಳನ್ನು ಕಳೆದುಕೊಂಡು 35,973 ಅಂಶಗಳಿಗೆ ಇಳಿಯಿತು. ರಾಷ್ಟ್ರೀಯ ಷೇರುಪೇಟೆ ‘ನಿಫ್ಟಿ’ ಕೂಡ 44 ಅಂಶಗಳಿಗೆ ಎರವಾಗಿ 10,835 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿತು.

ಸೂಚ್ಯಂಕದಲ್ಲಿನ ಎಚ್‌ಸಿಎಲ್‌ ಟೆಕ್‌ ಷೇರಿನ ಬೆಲೆ ಶೇ 2.26, ಎಚ್‌ಡಿಎಫ್‌ಸಿ ಶೇ 2.10ರಷ್ಟು ಕುಸಿತಗೊಂಡಿತು. ಬಜಾಜ್‌ ಆಟೊ ಮತ್ತು ಏಷಿಯನ್‌ ಪೇಂಟ್ಸ್‌ ಮಾತ್ರ ಲಾಭ ಮಾಡಿಕೊಂಡವು. ಮುಂಬರುವ ದಿನಗಳಲ್ಲೂ ಪೇಟೆಯ ವಹಿವಾಟು ತೀವ್ರ ಏರಿಳಿತ
ದಿಂದ ಕೂಡಿರಲಿದೆ ಎಂದು ನಿರೀಕ್ಷಿಸಲಾಗಿದೆ.

 

ಪ್ರತಿಕ್ರಿಯಿಸಿ (+)