ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂಡಿಕೆ ಉತ್ತೇಜಿಸದ ಬಜೆಟ್‌: ಪೇಟೆಯಲ್ಲಿ ಕರಡಿ–ಗೂಳಿ ಜಿದ್ದಾಜಿದ್ದಿ

ನಾಲ್ಕು ದಿನಗಳ ಸೂಚ್ಯಂಕದ ಓಟಕ್ಕೆ ತಡೆ
Last Updated 5 ಜುಲೈ 2019, 20:00 IST
ಅಕ್ಷರ ಗಾತ್ರ

ಮುಂಬೈ: ದೇಶದ ಷೇರುಪೇಟೆಗಳಲ್ಲಿ ಹೂಡಿಕೆದಾರರ ಉತ್ಸಾಹ ಕಾಯ್ದುಕೊಳ್ಳುವಲ್ಲಿ ಕೇಂದ್ರ ಬಜೆಟ್‌ ವಿಫಲವಾಗಿದೆ. ನಕಾರಾತ್ಮಕವಾಗಿ ವಹಿವಾಟು ಅಂತ್ಯಗೊಂಡಿದೆ.

ಕಂಪನಿಗಳಲ್ಲಿ ಸಾರ್ವಜನಿಕರ ಪಾಲನ್ನು ಶೇ 25 ರಿಂದ ಶೇ 35ಕ್ಕೆ ಹೆಚ್ಚಿಸುವ ಕುರಿತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಘೋಷಣೆ ಮಾಡಿದ್ದಾರೆ. ಇದರ ಪ್ರಭಾವಕ್ಕೆ ಒಳಗಾಗಿಸತತ ನಾಲ್ಕು ದಿನಗಳಿಂದ ಏರುಮುಖವಾಗಿದ್ದ ಷೇರುಪೇಟೆ ಸೂಚ್ಯಂಕಗಳು ಶುಕ್ರವಾರ ಇಳಿಕೆ ಕಂಡವು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) ಆರಂಭದ ವಹಿವಾಟಿನಲ್ಲಿ 40 ಸಾವಿರದ ಗಡಿ ತಲುಪಿತ್ತು. ಆದರೆ,ಬಜೆಟ್‌ ಮಂಡನೆ ಆರಂಭವಾಗುತ್ತಿದ್ದಂತೆಯೇ ಗೂಳಿ ಮತ್ತು ಕರಡಿ ಮಧ್ಯೆ ತಿಕ್ಕಾಟ ಆರಂಭವಾಯಿತು.ಅಂತಿಮವಾಗಿ ದಿನದ ವಹಿವಾಟು ಮುಗಿಯು ವೇಳೆಗೆ ಕಡಿಯೇ ಮೇಲುಗೈ ಸಾಧಿಸಿತು.

395 ಅಂಶಗಳ ಇಳಿಕೆಯೊಂದಿಗೆ (ಶೇ 0.99) 39,513 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿತು.

ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ (ಎನ್‌ಎಸ್‌ಇ) ನಿಪ್ಟಿ ಸಹ 135 ಅಂಶ (ಶೇ 1.14) ಇಳಿಕೆಯಾಗಿ 11,811 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ.

ಬಿಎಸ್‌ಇನಲ್ಲಿ ಮಧ್ಯಮ ಮತ್ತು ಕೆಳಮಧ್ಯಮ ಶ್ರೇಣಿ ಸೂಚ್ಯಂಕಗಳೂ ಶೇ 1.39ರವರೆಗೆ ಇಳಿಕೆ ಕಂಡಿವೆ.

ಸರ್ಕಾರಿ ಸ್ವಾಮ್ಯದ ಹಲವು ಕಂಪನಿಗಳು ಶೇ 25ರಷ್ಟು ಸಾರ್ವಜನಿಕರ ಪಾಲು ಬಂಡವಾಳ ಹೊಂದುವಲ್ಲಿಯೇ ವಿಫಲವಾಗಿವೆ ಎಂದು ವರ್ತಕರು ಹೇಳಿದ್ದಾರೆ.

ನಷ್ಟ: ಯೆಸ್‌ ಬ್ಯಾಂಕ್‌ ಶೇ 8.36ರಷ್ಟು ಗರಿಷ್ಠ ನಷ್ಟ ಅನುಭವಿಸಿತು. ಎನ್‌ಟಿಪಿಸಿ, ಮಹೀಂದ್ರಾ, ವೇದಾಂತ, ಸನ್‌ ಫಾರ್ಮಾ ಮತ್ತು ಟಿಸಿಎಸ್‌ ಶೇ 4.81ರವರೆಗೂ ಇಳಿಕೆ ಕಂಡಿವೆ.

ಗಳಿಕೆ: ಇಂಡಸ್‌ಇಂಡ್ ಬ್ಯಾಂಕ್‌, ಕೋಟಕ್‌ ಬ್ಯಾಂಕ್‌, ಎಸ್‌ಬಿಐ, ಐಟಿಸಿ, ಭಾರ್ತಿ ಏರ್‌ಟೆಲ್‌ ಮತ್ತು ಐಸಿಐಸಿಐ ಬ್ಯಾಂಕ್‌ಗಳು ಶೇ 2.16ರವರೆಗೂ ಏರಿಕೆ ದಾಖಲಿಸಿವೆ.

‘ಸಾರ್ವಜನಿಕ ಷೇರುಪಾಲಿನ ನಿಯಮದ ಕುರಿತು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಗಡುವು ನೀಡಬೇಕಿದೆ. ಪ್ರವರ್ತಕರ ಪಾಲುಬಂಡವಾಳನ್ನು ಕಡಿಮೆ ಮಾಡುವುದರಿಂದ ಷೇರುಪೇಟೆ ಮತ್ತು ಕೆಲವು ನಿರ್ದಿಷ್ಟ ಷೇರುಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ’ ಎಂದು ಸೆಂಟ್ರಂ ಬ್ರೋಕಿಂಗ್‌ ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಜಗನ್ನಾಥಂ ತಂಗುತಲ ಅವರು ಅಭಿಪ್ರಾಯಪಟ್ಟಿದ್ದಾರೆ.

‘ಪ್ರಸಕ್ತ ಹಣಕಾಸು ವರ್ಷಕ್ಕೆ ಶೇ 3.3ರ ವಿತ್ತೀಯ ಕೊರತೆ ಗುರಿ ಸಾಧನೆ ಕಷ್ಟವಾಗಲಿದೆ. ಕೇಂದ್ರೋದ್ಯಮಗಳ ಷೇರು ವಿಕ್ರಯದಿಂದ ₹ 1.05 ಲಕ್ಷ ಕೋಟಿ ಸಂಗ್ರಹಿಸುವುದು ಕಷ್ಟವಾಗುವುದಿಲ್ಲ’ ಎಂದು ಜಿಯೋಜಿತ್‌ ಫೈನಾನ್ಶಿಯಲ್‌ ಸರ್ವೀಸಸ್‌ನ ಮುಖ್ಯ ಹೂಡಿಕೆ ಸಲಹೆಗಾರ ವಿ.ಕೆ. ವಿಜಯಕುಮಾರ್‌ ತಿಳಿಸಿದ್ದಾರೆ.

ರೂಪಾಯಿ ಮೌಲ್ಯ ಏರಿಕೆ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ 8 ಪೈಸೆ ವೃದ್ಧಿಯಾಗಿ ಒಂದು ಡಾಲರ್‌ಗೆ ₹ 68.42ರಂತೆ ವಿನಿಮಯಗೊಂಡಿತು.ವಾರದ ವಹಿವಾಟಿನಲ್ಲಿ ರೂಪಾಯಿ ಮೌಲ್ಯ 61 ಪೈಸೆಗಳಷ್ಟು ಹೆಚ್ಚಾಗಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್‌ ಕಚ್ಚಾ ತೈಲ ದರ ಶೇ 0.57ರಷ್ಟು ಏರಿಕೆಯಾಗಿ ಒಂದು ಬ್ಯಾರೆಲ್‌ಗೆ 63.66 ಡಾಲರ್‌ಗಳಂತೆ ಮಾರಾಟವಾಯಿತು.

₹ 3.87 ಲಕ್ಷ ಕೋಟಿ ಮೌಲ್ಯದ ಷೇರು ಮಾರಾಟ?
ಕಂಪನಿಗಳಲ್ಲಿ ಸಾರ್ವಜನಿಕರ ಪಾಲು ಬಂಡವಾಳ ತಗ್ಗಿಸಬೇಕು ಎಂದು ಬಜೆಟ್‌ನಲ್ಲಿ ಹೇಳಲಾಗಿದೆ. ಇದರಿಂದ ಟಿಸಿಎಸ್‌, ವಿಪ್ರೊ, ಡಿಮಾರ್ಟ್‌ ಒಳಗೊಂಡು ಒಟ್ಟಾರೆ 1,174 ಕಂಪನಿಗಳು ₹ 3.87 ಲಕ್ಷ ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಬೇಕಾಗಿದೆ.

ಈ ಕಂಪನಿಗಳಲ್ಲಿ ಪ್ರವರ್ತಕರ ಷೇರುಪಾಲು ಶೇ 65ಕ್ಕಿಂತಲೂ ಹೆಚ್ಚಿಗೆ ಇದೆ ಎಂದು ಸೆಂಟ್ರಂ ಬ್ರೋಕಿಂಗ್‌ ಲಿಮಿಟೆಡ್‌ ಮಾಹಿತಿ ನೀಡಿದೆ.

ಟಿಸಿಎಸ್‌ ₹59,600 ಕೋಟಿ, ವಿಪ್ರೊ ₹ 15,000 ಕೋಟಿ ಮತ್ತು ಡಿಮಾರ್ಟ್‌ ₹ 14,000 ಕೋಟಿ ಮೌಲ್ಯದ ಪಾಲು ಬಂಡವಾಳವನ್ನು
ವಿಕ್ರಯಿಸಬೇಕಿದೆ.

ವಹಿವಾಟಿನ ವಿವರ
3,043 ಅಂಶ -ಮಧ್ಯಂತರ ಬಜೆಟ್‌ ಬಳಿಕ ಸಂವೇದಿ ಸೂಚ್ಯಂಕದಲ್ಲಾಗಿರುವ ಏರಿಕೆ
917 ಅಂಶ -ಮಧ್ಯಂತರ ಬಜೆಟ್‌ ಬಳಿಕ ನಿಫ್ಟಿ ಕಂಡಿರುವ ಏರಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT