ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

40 ಸಾವಿರ ಗಡಿ ದಾಟಿದ ಬಿಎಸ್‌ಇ

ಆರ್‌ಬಿಐನಿಂದ ಬಡ್ಡಿದರ ಕಡಿತದ ನಿರೀಕ್ಷೆ: ದಾಖಲೆ ಮಟ್ಟದ ವಹಿವಾಟು
Last Updated 3 ಜೂನ್ 2019, 19:45 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ):ದೇಶದ ಷೇರುಪೇಟೆಗಳಲ್ಲಿ ಸೋಮವಾರ ಸಾರ್ವಕಾಲಿಕ ಗರಿಷ್ಠ ಮಟ್ಟದ ವಹಿವಾಟು ನಡೆಯಿತು.

ಆರ್‌ಬಿಐನಿಂದ ಬಡ್ಡಿದರ ಕಡಿತ ಮತ್ತು ಹೊಸ ಸರ್ಕಾರದಿಂದ ಸುಧಾರಣಾ ಕ್ರಮಗಳ ನಿರೀಕ್ಷೆಯು ಷೇರುಪೇಟೆಗಳಲ್ಲಿ ಉತ್ತಮ ಖರೀದಿ ಚಟುವಟಿಕೆ ನಡೆಯುವಂತೆ ಮಾಡಿತು ಎಂದು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) 553 ಅಂಶ ಜಿಗಿತ ಕಂಡು ಸಾರ್ವಕಾಲಿಕ ದಾಖಲೆ ಮಟ್ಟವಾದ 40,267 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 166 ಅಂಶ ಹೆಚ್ಚಾಗಿ 12,088 ಅಂಶಗಳ ದಾಖಲೆ ಮಟ್ಟ ತಲುಪಿತು.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಇಳಿಕೆ, ವಿದೇಶಿ ಬಂಡವಾಳ ಒಳಹರಿವು ಮತ್ತು ಆರ್‌ಬಿಐನಿಂದ ಬಡ್ಡಿದರ ಕಡಿತದ ನಿರೀಕ್ಷೆಯಿಂದಾಗಿ ಖರೀದಿ ಚಟುವಟಿಕೆ ಹೆಚ್ಚಾಯಿತು.

ಎಚ್‌ಡಿಎಫ್‌ಸಿ, ರಿಲಯನ್ಸ್‌ ಇಂಡಸ್ಟ್ರೀಸ್‌ ಮತ್ತು ಟಿಸಿಎಸ್‌ ಷೇರುಗಳು ಉತ್ತಮ ಗಳಿಕೆ ಕಂಡಿವೆ. ವಾಹನ, ಆರೋಗ್ಯ ಸೇವೆ, ಇಂಧನ, ಗ್ರಾಹಕ ಬಳಕೆ ವಸ್ತುಗಳು ಮತ್ತು ಲೋಹ ವಲಯದ ಷೇರುಗಳು ಶೇ 1.93ರವರೆಗೂ ಏರಿಕೆ ಕಂಡಿವೆ.

2018-19ರ ಮಾರ್ಚ್‌ ತ್ರೈಮಾಸಿಕದ ಜಿಡಿಪಿ ಬೆಳವಣಿಗೆ ನಿರಾಶಾದಾಯವಾಗಿದೆ. ಐದು ವರ್ಷಗಳ ಕನಿಷ್ಠ ಮಟ್ಟವಾದ ಶೇ 5.8ರಷ್ಟಿದೆ. ಹೀಗಾಗಿ ಆರ್ಥಿಕತೆಗೆ ಚೇತರಿಕೆ ನೀಡಲು ಆರ್‌ಬಿಐ ಬಡ್ಡಿದರದಲ್ಲಿ ಕಡಿತ ಮಾಡಲಿದೆ ಎನ್ನುವ ನಿರೀಕ್ಷೆ ಉದ್ಯಮ ವಲಯದಲ್ಲಿದೆ.

ಆರ್‌ಬಿಐನ ಹಣಕಾಸು ನೀತಿ ಸಮಿತಿಯು (ಎಂಪಿಸಿ) ಗುರುವಾರ ಬಡ್ಡಿದರ ಪರಾಮರ್ಶೆ ನಡೆಸಲಿದೆ. ಹಿಂದಿನ ಎರಡೂ ಹಣಕಾಸು ನೀತಿ ಪರಾಮರ್ಶೆಯಲ್ಲಿ ರೆಪೊ ದರವನ್ನು ಶೇ 0.25ರಷ್ಟು ತಗ್ಗಿಸಲಾಗಿದೆ. ಈ ಬಾರಿಯೂ ಶೇ 0.25 ರಿಂದ ಶೇ 0.50ರವರೆಗೂ ಬಡ್ಡಿದರ ಕಡಿತದ ನಿರೀಕ್ಷೆ ವ್ಯಕ್ತವಾಗಿದೆ.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು ದೇಶದ ಷೇರುಪೇಟೆಗಳಲ್ಲಿ ಬಂಡವಾಳ ಹೂಡಿಕೆಗೆ ಹೆಚ್ಚಿನ ಗಮನ ನೀಡಿದ್ದಾರೆ. ಸೋಮವಾರದ ವಹಿವಾಟಿನಲ್ಲಿ ₹3,069 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.

ಹೂಡಿಕೆದಾರರ ಸಂಪತ್ತು ವೃದ್ಧಿ

ಷೇರುಪೇಟೆಯಲ್ಲಿನ ಉತ್ತಮ ವಹಿವಾಟಿನಿಂದ ಹೂಡಿಕೆದಾರರ ಸಂಪತ್ತು, ಮಾರುಕಟ್ಟೆ ಮೌಲ್ಯದ ಲೆಕ್ಕದಲ್ಲಿ ₹ 1.76 ಲಕ್ಷ ಕೋಟಿಗಳಷ್ಟು ಏರಿಕೆಯಾಗಿದೆ. ಷೇರುಪೇಟೆಯ ಬಂಡವಾಳ ಮೌಲ್ಯ ₹ 156 ಲಕ್ಷ ಕೋಟಿಗಳಿಗೆ ತಲುಪಿದೆ.

ರೂಪಾಯಿ ಮೌಲ್ಯ ಹೆಚ್ಚಳ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಎದುರು ರೂಪಾಯಿ ಮೌಲ್ಯ 44 ಪೈಸೆ ಹೆಚ್ಚಾಗಿ ಒಂದು ಡಾಲರ್‌ಗೆ ₹ 69.26ರಂತೆ ವಿನಿಮಯಗೊಂಡಿತು.

ಎರಡು ವಹಿವಾಟು ಅವಧಿಗಳಲ್ಲಿ ದೇಶಿ ಕರೆನ್ಸಿ 58 ಪೈಸೆಗಳಷ್ಟು ಗಳಿಕೆ ಕಂಡುಕೊಂಡಿದೆ. ಷೇರುಪೇಟೆಯಲ್ಲಿನ ಉತ್ತಮ ವಹಿವಾ`ಟು ಮತ್ತು ವಿದೇಶಿ ಬಂಡವಾಳ ಒಳಹರಿವಿನಿಂದ ರೂಪಾಯಿ ಮೌಲ್ಯದಲ್ಲಿ ಏರಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT