ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೇಟೆಗೆ ವಿದೇಶಿ ಹೂಡಿಕೆ ಬಲ

ದೇಶಿ, ವಿದೇಶಿ ವಿದ್ಯಮಾನಗಳ ಸಕಾರಾತ್ಮಕ ಪರಿಣಾಮ
Last Updated 13 ಏಪ್ರಿಲ್ 2019, 16:44 IST
ಅಕ್ಷರ ಗಾತ್ರ

ಮುಂಬೈ: ಹೊಸ ಹಣಕಾಸು ವರ್ಷದ (2019–20) ಆರಂಭದಿಂದಲೂ ಷೇರುಪೇಟೆಯಲ್ಲಿ ವಿದೇಶಿ ಬಂಡವಾಳ ಹೂಡಿಕೆ (ಎಫ್‌ಪಿಐ) ಹೆಚ್ಚಾಗುತ್ತಿದೆ. ಇದರಿಂದ ಸಕಾರಾತ್ಮಕ ವಹಿವಾಟು ಮುಂದುವರಿದಿದೆ.

ವಿದೇಶಿ ಹೂಡಿಕೆದಾರರು ಏಪ್ರಿಲ್‌ ತಿಂಗಳ ಮೊದಲ ವಾರ ₹ 8,634 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದರು. ಎರಡನೇ ವಾರದಲ್ಲಿ
₹ 4,346 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ. ಇದರಿಂದ ಏಪ್ರಿಲ್‌ 12ರವರೆಗೆ ಷೇರುಪೇಟೆಯಲ್ಲಿ ಒಟ್ಟಾರೆ ₹ 12,980 ಕೋಟಿ ಹೂಡಿಕೆ ಮಾಡಿದ್ದಾರೆ.

ದೇಶಿ ಮತ್ತು ಜಾಗತಿಕ ಸಕಾರಾತ್ಮಕ ಅಂಶಗಳಿಂದಾಗಿ ವಿದೇಶಿ ಹೂಡಿಕೆ ಚಟುವಟಿಕೆ ಹೆಚ್ಚಾಗುತ್ತಿದೆ. ಇದು ಇನ್ನೂ ಕೆಲವು ದಿನಗಳವರೆಗೂ ಇದು ಮುಂದುವರಿಯಲಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.

ಮಾರ್ಚ್‌ನಲ್ಲಿ ಬಂಡವಾಳ ಮಾರುಕಟ್ಟೆಯಲ್ಲಿ ₹ 45,981 ಕೋಟಿಗಳಷ್ಟು ಹೂಡಿಕೆ ಮಾಡಿದ್ದರು.

ಚುನಾವಣೆಗೆ ಸಂಬಂಧಿಸಿದ ವಿದ್ಯಮಾನಗಳು ಮತ್ತು 2018–19ನೇ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಕಂಪನಿಗಳ ಆರ್ಥಿಕ ಸಾಧನೆಗಳುಅಲ್ಪಾವಧಿಯಲ್ಲಿ ಷೇರುಪೇಟೆಯ ವಹಿವಾಟಿನ ಮೇಲೆ ಹೆಚ್ಚಿನ ಪ್ರಭಾವ ಬೀರಲಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ವಾರದ ವಹಿವಾಟು: ದೇಶದ ಷೇರುಪೇಟೆಗಳ ವಾರದ ವಹಿವಾಟು ಇಳಿಮುಖವಾಗಿ ಅಂತ್ಯಗೊಂಡಿದೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) ವಾರದ ವಹಿವಾಟಿನಲ್ಲಿ 95 ಅಂಶ ಇಳಿಕೆಯಾಗಿ 38,767 ಅಂಶಗಳಿಗೆ ತಲುಪಿದೆ.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 22 ಅಂಶ ಇಳಿಕೆ ಕಂಡು 11,643 ಅಂಶಗಳಿಗೆ ತಲುಪಿದೆ.

ರೂಪಾಯಿ ಚಲನೆ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಎದುರು ರೂಪಾಯಿ ಮೌಲ್ಯ ಏರಿಳಿತ ಕಾಣುತ್ತಿದೆ.

ವಾರದ ವಹಿವಾಟಿನಲ್ಲಿ 6 ಪೈಸೆಗಳಷ್ಟು ಗಳಿಕೆ ಕಂಡು ಒಂದು ಡಾಲರ್‌ಗೆ ₹ 69.17ಕ್ಕೆ ತಲುಪಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್‌ ಕಚ್ಚಾ ತೈಲ ದರ ಒಂದು ಬ್ಯಾರೆಲ್‌ಗೆ 71.61 ಡಾಲರ್‌ಗಳಂತೆ ಮಾರಾಟವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT