ಸೋಮವಾರ, ಡಿಸೆಂಬರ್ 9, 2019
17 °C

ಷೇರುಪೇಟೆಯ ಮೇಲೆ ವ್ಯತಿರಿಕ್ತ ಪರಿಣಾಮ

Published:
Updated:
Prajavani

ಮುಂಬೈ: ಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿನ ಉದ್ವಿಗ್ನ ಪರಿಸ್ಥಿತಿಯು ತೀವ್ರಗೊಂಡಿರುವುದು ದೇಶಿ ಷೇರುಪೇಟೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ.

ದಿನದ ವಹಿವಾಟಿನ ಆರಂಭದಲ್ಲಿ ಸಕಾರಾತ್ಮಕ  ವಹಿವಾಟು ಕಂಡು ಬಂದಿತ್ತು. ನಂತರ ಮಾರಾಟ ಒತ್ತಡ ಕಂಡು ಬಂದಿದ್ದರಿಂದ ಸಂವೇದಿ ಸೂಚ್ಯಂಕವು ದಿನದಂತ್ಯಕ್ಕೆ 68 ಅಂಶಗಳನ್ನು ಕಳೆದುಕೊಂಡು 35,905 ಅಂಶಗಳಿಗೆ ಇಳಿಯಿತು. ಮಂಗಳವಾರ 239 ಅಂಶಗಳಿಗೆ ಎರವಾಗಿತ್ತು.

ರಾಷ್ಟ್ರೀಯ ಷೇರುಪೇಟೆ ‘ನಿಫ್ಟಿ’ಯಲ್ಲಿಯೂ 28 ಅಂಶಗಳ ಕುಸಿತ ಉಂಟಾಗಿ 10,806ಕ್ಕೆ ತಲುಪಿತು.

‘ಹೂಡಿಕೆದಾರರು ಎಚ್ಚರಿಕೆಯಿಂದ ವಹಿವಾಟು ನಡೆಸಬೇಕು. ಗಡಿಯಲ್ಲಿನ ಉದ್ವಿಗ್ನ ಪರಿಸ್ಥಿತಿ ಆಧರಿಸಿ ಹೂಡಿಕೆ ಮತ್ತು ಖರೀದಿ ನಿರ್ಧಾರ ಕೈಗೊಳ್ಳಬೇಕು. ದೇಶಿ ಷೇರುಪೇಟೆಗಳ ಆಧಾರಸ್ತಂಭಗಳು ಸುಭದ್ರವಾಗಿರುವುದನ್ನೂ ಗಮನದಲ್ಲಿ ಇಟ್ಟುಕೊಳ್ಳಬೇಕು’  ಎಂದು ಶೇರ್‌ಖಾನ್‌ ಸಲಹಾ ವಿಭಾಗದ ಮುಖ್ಯಸ್ಥ ಹೇಮಂಗ್‌ ಜನಿ ಅವರು ಕಿವಿಮಾತು ಹೇಳಿದ್ದಾರೆ.

‘ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಗಮನಾರ್ಹ ಪ್ರಮಾಣದಲ್ಲಿ ಹಣ ಹೂಡಿಕೆ ಮಾಡುತ್ತಿರುವ ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ), ಕೆಲ ದಿನಗಳವರೆಗೆ ತಮ್ಮ ಹೂಡಿಕೆ ಚಟುವಟಿಕೆಯನ್ನು ಕಡಿಮೆ ಮಾಡಬಹುದು. ಇದು ಕೂಡ ಪೇಟೆಯ ಮೇಲೆ ಪರಿಣಾಮ ಬೀರಬಹುದು’ ಎಂದೂ ಅವರು ವಿಶ್ಲೇಷಿಸಿದ್ದಾರೆ.

ಸಂವೇದಿ ಸೂಚ್ಯಂಕದಲ್ಲಿನ ಟಾಟಾ ಮೋಟರ್ಸ್‌ ಷೇರು ಬೆಲೆ ಶೇ 3.01 ಮತ್ತು ವೇದಾಂತ ಶೇ 2.92ರಷ್ಟು ಕಡಿಮೆಯಾಗಿದೆ.

ಇನ್ನೊಂದೆಡೆ, ಭಾರ್ತಿ ಏರ್‌ಟೆಲ್‌, ಬಜಾಜ್‌ ಆಟೊ, ಮಾರುತಿ ಸುಜುಕಿ, ಟಾಟಾ ಸ್ಟೀಲ್‌, ಏಷಿಯನ್ ಪೇಂಟ್ಸ್‌, ಆರ್‌ಐಎಲ್ ಷೇರು ಬೆಲೆಗಳು ಗರಿಷ್ಠ  ಶೇ 2.43ರವರೆಗೆ ಏರಿಕೆ ದಾಖಲಿಸಿದವು.

ರೂಪಾಯಿ ದರ ಕುಸಿತ
ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಎದುರು ರೂಪಾಯಿ ದರವು ಬುಧವಾರದ ವಹಿವಾಟಿನಲ್ಲಿ 17 ಪೈಸೆಗಳಷ್ಟು ಕುಸಿತ ಕಂಡಿತು.

ಭಾರತ ಮತ್ತು ಪಾಕಿಸ್ತಾನ ಮಧ್ಯೆ ಉದ್ವಿಗ್ನ ಪರಿಸ್ಥಿತಿ ಹೆಚ್ಚಿರುವುದರಿಂದ ರೂಪಾಯಿ ಬೆಲೆ ₹ 71.24ಕ್ಕೆ ಇಳಿಯಿತು.

ಕಚ್ಚಾ ತೈಲದ ಬೆಲೆ ಹೆಚ್ಚಳ, ತೈಲ ಆಮದುದಾರರಿಂದ ತಿಂಗಳಾಂತ್ಯದಲ್ಲಿ ಡಾಲರ್‌ಗೆ ಹೆಚ್ಚಿದ ಬೇಡಿಕೆ ಮತ್ತು ದೇಶಿ ಷೇರುಪೇಟೆಗಳಲ್ಲಿನ ಕುಂದಿದ ಖರೀದಿ ಉತ್ಸಾಹದ ಕಾರಣಕ್ಕೆ ರೂಪಾಯಿ ಬೆಲೆ ದುರ್ಬಲಗೊಂಡಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು