ಶುಕ್ರವಾರ, ಏಪ್ರಿಲ್ 3, 2020
19 °C

ನೀವು ಜಾಣ ಉಳಿತಾಯಗಾರರೇ?

ಡಿ. ಪಿ. ಸಿಂಗ್‌ Updated:

ಅಕ್ಷರ ಗಾತ್ರ : | |

Prajavani

ಉಳಿತಾಯದ ವಿಚಾರದಲ್ಲಿ ಜನರ ಯೋಚನಾ ವಿಧಾನ ಬದಲಾಗುತ್ತಿದೆ. ಸಾಂಪ್ರದಾಯಿಕ, ಖಚಿತ ಆದಾಯದ ಯೋಜನೆಗಳ ಬದಲಿಗೆ ಕಡಿಮೆ ಅಪಾಯದ ಆದರೆ, ಹೆಚ್ಚು ಆದಾಯ ತರುವ ಯೋಜನೆಗಳತ್ತ ಜನರು ಗಮನ ಹರಿಸುತ್ತಿರುವುದನ್ನು ಇಲ್ಲಿ ವಿವರಿಸಲಾಗಿದೆ.

***

ನನ್ನ ಸೋದರ ಸಂಬಂಧಿಯೊಬ್ಬರು ಚಿಂತೆಗೆ ಒಳಗಾಗಿದ್ದರು. ತಮ್ಮ ಪುತ್ರ, ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಎರಡು ವರ್ಷಗಳಿಂದ ಕೆಲಸ ಮಾಡುತ್ತಿದ್ದರೂ ಅವನು ಸಾಕಷ್ಟು ಹಣವನ್ನು ಉಳಿತಾಯ ಮಾಡುತ್ತಿಲ್ಲ ಎಂಬುದು ಅವರ ಚಿಂತೆಗೆ ಕಾರಣವಾಗಿತ್ತು. ಆದರೆ, ಪುತ್ರನ ಜೊತೆ ಮಾತನಾಡಿದಾಗ ಆತ ಸಾಕಷ್ಟು ಉಳಿತಾಯ ಮಾಡುತ್ತಿರುವುದು ಅಷ್ಟೇ ಅಲ್ಲದೆ, ಉಳಿತಾಯದ ವಿಚಾರದಲ್ಲಿ ಆತ ತನ್ನ ವಯಸ್ಸಿಗೆ ಮೀರಿದ ಬುದ್ಧಿವಂತಿಕೆಯನ್ನು ಪ್ರದರ್ಶಿಸಿದ್ದು ಕಂಡುಬಂತು.

ಈ ಮಾಹಿತಿಯನ್ನು ಪಡೆದ ನಂತರ ನಾನು ಮತ್ತೆ ನನ್ನ ಸೋದರ ಸಂಬಂಧಿಯನ್ನು ಭೇಟಿಮಾಡಿ, ‘ನಿಮ್ಮ ಪುತ್ರ ಉಳಿತಾಯ ಮಾಡುತ್ತಿಲ್ಲ ಎಂಬ ಸಂದೇಹ ನಿಮಗೇಕೆ ಬಂತು’ ಎಂದು ಪ್ರಶ್ನಿಸಿದೆ. ಅದಕ್ಕವರು, ‘ಮಗನ ಬ್ಯಾಂಕ್‌ ಖಾತೆಯಲ್ಲಿ ಅತ್ಯಲ್ಪ ಹಣ ಇದೆ’ ಎಂದರು. ಅವರ ಮುಂದಿನ ಮಾತುಗಳು ಏನಿರಬಹುದು ಎಂಬುದನ್ನು ನಾನು ಊಹಿಸಿದ್ದೆ. ಅವರಿಗೆ ಒಂದಿಷ್ಟು ಸಲಹೆಗಳನ್ನು ನೀಡಬೇಕು ಎನಿಸಿತು...

‘ಉಳಿತಾಯ ಖಾತೆ ಹಾಗೂ ನಿಶ್ಚಿತ ಠೇವಣಿಗಳ ಬಡ್ಡಿ ದರವು ಸತತವಾಗಿ ಕುಸಿಯುತ್ತಿದೆ. ಆದ್ದರಿಂದ ಬ್ಯಾಂಕ್‌ನಲ್ಲಿ ಹಣ ಇಡುವುದು ಹೆಚ್ಚು ಲಾಭದಾಯಕವಾಗಿಲ್ಲ. ಇದಕ್ಕೆ ಪ್ರರ್ಯಾಯ ಎಂಬಂತೆ, ಇತ್ತೀಚಿನ ದಿನಗಳಲ್ಲಿ ಮ್ಯೂಚುವಲ್‌ ಫಂಡ್‌ಗಳು ಆಕರ್ಷಕ ಗಳಿಕೆ ದಾಖಲಿಸುತ್ತಿವೆ’ ಎಂದೆ.

ನಿರೀಕ್ಷೆಯಂತೆ, ‘ಷೇರುಪೇಟೆ ಕುಸಿತ ದಾಖಲಿಸುತ್ತಿದೆ, ಮ್ಯೂಚುವಲ್‌ ಫಂಡ್‌ ಹೂಡಿಕೆಯಲ್ಲಿ ಆಪಾಯವಿದೆಯಲ್ಲವೇ’ ಎಂಬ ಪ್ರಶ್ನೆ ಅತ್ತಕಡೆಯಿಂದ ಬಂತು.

ಮ್ಯೂಚುವಲ್‌ ಫಂಡ್‌ಗಳು ಹಣವನ್ನು ಷೇರುಪೇಟೆಯಲ್ಲಿ ಹೂಡಿಕೆ ಮಾಡುತ್ತವೆ ಎಂಬ ಕಾರಣಕ್ಕೆ ಅನೇಕರು ‘ಇದು ಸುರಕ್ಷಿತ ಹೂಡಿಕೆ ವಿಧಾನವಲ್ಲ’ ಎಂಬ ನಿರ್ಧಾರಕ್ಕೆ ಬರುತ್ತಾರೆ. ಆದರೆ, ಸಂಪೂರ್ಣವಾಗಿ ಸಾಲನಿಧಿಗಳಲ್ಲಿ ಹೂಡಿಕೆ ಮಾಡುವ ಮ್ಯೂಚುವಲ್‌ ಫಂಡ್‌ಗಳು ಸಹ ಇವೆ ಎಂಬುದು ಅನೇಕರಿಗೆ ಗೊತ್ತಿಲ್ಲ.

ಬ್ಯಾಂಕ್‌ನಂಥ ಸೇವೆಗಳು

ಬ್ಯಾಂಕ್‌ನಲ್ಲಿ ನಡೆಯುವ ಒಂದೆರಡು ವ್ಯವಹಾರಗಳನ್ನು ಮ್ಯೂಚುವಲ್‌ ಫಂಡ್‌ಗಳಲ್ಲಿ ನಡೆಸಲಾಗುವುದಿಲ್ಲ ಎಂಬುದನ್ನು ಬಿಟ್ಟರೆ, ಮ್ಯೂಚುವಲ್‌ ಫಂಡ್‌ ಸಹ ಒಂದರ್ಥದಲ್ಲಿ ಬ್ಯಾಂಕ್‌ಗಳು ನೀಡುವಂಥ ಸೇವೆಗಳನ್ನೇ ನೀಡುತ್ತವೆ. ಉಳಿತಾಯ ಖಾತೆ, ಚಾಲ್ತಿ ಖಾತೆ, ನಿಶ್ಚಿತ ಠೇವಣಿಯಂಥದ್ದೇ ಸೇವೆಗಳನ್ನು ನೀಡುವ ಮ್ಯೂಚುವಲ್‌ ಫಂಡ್‌ಗಳೂ ಇವೆ.

ವೇತನ ಅಥವಾ ಇನ್ಯಾವುದೇ ರೂಪದಲ್ಲಿ ನಿಮ್ಮ ಉಳಿತಾಯ ಖಾತೆಗೆ ಹಣ ಬರುತ್ತದೆ ಎಂದಿಟ್ಟುಕೊಳ್ಳಿ. ಆ ಹಣಕ್ಕೆ ಬರುವ ಬಡ್ಡಿಯು ಶೇ 3.25 ಮಾತ್ರ. ಈ ಬಡ್ಡಿ ದರವೂ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಲೇ ಇದೆ. ಹೀಗೆ ಉಳಿತಾಯ ಖಾತೆಯಲ್ಲಿ ಹಣ ಇಡುವ ಬದಲು, ಹೆಚ್ಚುವರಿ ಹಣವನ್ನು ಲಿಕ್ವಿಡ್‌ ಫಂಡ್‌ ಅಥವಾ ಓವರ್‌ನೈಟ್‌ ಫಂಡ್‌ಗೆ ವರ್ಗಾವಣೆ ಮಾಡಬಹುದು. ಇಲ್ಲಿಯೂ ದೊಡ್ಡ ಆದಾಯದ ಭರವಸೆ ಇರುವುದಿಲ್ಲ ನಿಜ. ಆದರೆ, ಮೂರು ವರ್ಷಗಳ ಅವಧಿಗೆ ಇಲ್ಲಿ ಹಣವನ್ನಿಟ್ಟರೆ ಅವುಗಳು ನಿಮಗೆ ತೆರಿಗೆ ಉಳಿತಾಯದ ಜೊತೆಗೆ ಒಳ್ಳೆಯ ಆದಾಯವನ್ನು ತಂದುಕೊಡಬಲ್ಲವು.

ಇದಲ್ಲದೆ ಬ್ಯಾಂಕ್‌ಗಳ ನಿಶ್ಚಿತ ಠೇವಣಿಯಂಥದ್ದೇ, ನಿಶ್ಚಿತ ಪಕ್ವ ಠೇವಣಿಗಳು (ಎಫ್‌ಎಂಪಿ) ಮ್ಯೂಚುವಲ್‌ ಫಂಡ್‌ನಲ್ಲಿ ಲಭ್ಯ ಇವೆ. ಇಲ್ಲಿ ಮೂರು ವರ್ಷಗಳ ಅವಧಿಗೆ ಹೂಡಿಕೆ ಮಾಡಿದರೆ ಬ್ಯಾಂಕ್‌ನ ನಿಶ್ಚಿತ ಠೇವಣಿಗಿಂತ ಹೆಚ್ಚಿನ ಆದಾಯ ಮಾಡಿಕೊಳ್ಳಲು ಅವಕಾಶ ಇರುತ್ತದೆ.

ಇದಲ್ಲದೆ, ವ್ಯವಸ್ಥಿಯ ಹೂಡಿಕೆ ಯೋಜನೆ (ಎಸ್‌ಐಪಿ) ಇದ್ದೇ ಇದೆ. ಈ ಬಗ್ಗೆ ಹೂಡಿಕೆದಾರರಲ್ಲಿ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜಾಗೃತಿ ಮೂಡುತ್ತಿದೆ. ಹೀಗೆ ವಿವಿಧ ಹೂಡಿಕಾ ಆಯ್ಕೆಗಳ ಬಗ್ಗೆ ನನ್ನ ಸಹೋದರ ಸಂಬಂಧಿಗೆ ವಿವರಣೆಗಳನ್ನು ನೀಡಿದೆ. ನನ್ನ ಮಾತಿನಿಂದ ಆತ ಸಂಪೂರ್ಣವಾಗಿ ತೃಪ್ತನಾದಂತೆ ಕಾಣಲಿಲ್ಲ. ಇನ್ನೂ ಕೆಲವು ಉದಾಹರಣೆ ಕೊಡಬೇಕು ಎಂದೆನಿಸಿ ಮಾತುಕತೆ ಮುಂದುವರಿಸಿದೆ.

ವ್ಯಕ್ತಿಯೊಬ್ಬನು ಹಲವು ಬ್ಯಾಂಕ್‌ ಖಾತೆಗಳನ್ನು ಹೊಂದುವ ಅಗತ್ಯ ಇರುವುದಿಲ್ಲ. ಹಾಗೆಯೇ ಮ್ಯೂಚುವಲ್‌ ಫಂಡ್‌ ಹೂಡಿಕೆಗೂ ಹಲವು ನಿಧಿ ನಿರ್ವಹಣಾ ಸಂಸ್ಥೆಗಳನ್ನು ಆಯ್ಕೆಮಾಡುವ ಅಗತ್ಯವೂ ಇರುವುದಿಲ್ಲ.

ಸಂಸ್ಥೆಯ ಹಿಂದಿನ ದಾಖಲೆಗಳನ್ನು ಗಮನಿಸಿ, ನಮಗೆ ಬೇಕಾದ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ಒಂದರ್ಥದಲ್ಲಿ, ಖಾತೆ ತೆರೆಯಲು ಲಾಕರ್‌ ಮತ್ತಿತರ ಸೌಲಭ್ಯಗಳನ್ನು ಹೊಂದಿರುವ, ತಮಗೆ ಅನುಕೂಲಕರವಾದ ಸ್ಥಳದಲ್ಲಿರುವ ಬ್ಯಾಂಕ್‌ ಒಂದನ್ನು ನಾವು ಆಯ್ಕೆ ಮಾಡಿಕೊಳ್ಳುವಂತೆ, ನಮಗೆ ಹೊಂದಿಕೆಯಾಗುವ ಮ್ಯೂಚುವಲ್‌ ಫಂಡ್‌ ಅನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಮನವರಿಕೆ ಮಾಡಿಕೊಟ್ಟೆ.

‘ಹೂಡಿಕೆ ಮಾಡುವ ಹೊಸ ವಿಧಾನಗಳ ಬಗ್ಗೆ ನೀವೂ ನಿಮ್ಮ ಮಗನಿಂದ ಕಲಿಯಬಹುದು. ಕಲಿಕೆಗೆ ಯಾವುದೇ ವಯೋಮಾನದ ಹಂಗಿಲ್ಲ. ನಾನು ನನ್ನ ಉಳಿತಾಯ ಖಾತೆಯಲ್ಲಿ ಕನಿಷ್ಠ ಕಣವನ್ನು ಇಟ್ಟಿರುತ್ತೇನೆ. ಹೆಚ್ಚುವರಿ ಹಣವು ಬೇರೆಬೇರೆ ಹೂಡಿಕಾ ವಿಧಾನಗಳಿಗೆ ಹೋಗುವಂತೆ ಮಾಡಿದ್ದೇನೆ. ಸ್ಮಾರ್ಟ್‌ ಉಳಿತಾಯವೆಂದರೆ ಬರಿಯ ಉಳಿತಾಯವಲ್ಲ. ಅದು ಉಳಿತಾಯದ ಜೊತೆಗೆ ಹೂಡಿಕೆ ಮಾಡುವ ಪದ್ಧತಿ. ಇದಕ್ಕೆ ಮ್ಯೂಚುವಲ್‌ ಫಂಡ್‌ ಅತ್ಯುತ್ತಮ ವಿಧಾನ. ಸಂಪತ್ತನ್ನು ಸೃಷ್ಟಿಸುವುದು, ಉಳಿಸುವುದು ಮತ್ತು ವಿತರಣೆಗೆ ಮ್ಯೂಚುವಲ್‌ ಫಂಡ್‌ ಅತ್ಯುತ್ತಮ ವಿಧಾನವಾಗಿದೆ’ ಎಂದು ಅವರಿಗೆ ಮನವರಿಕೆ ಮಾಡಿಕೊಟ್ಟೆ.

ಈ ಮೇಲಿನ ವಿವರಣೆಯಿಂದ ಬುದ್ಧಿವಂತ ಹೂಡಿಕೆದಾರರಿಗೂ ಈ ಎಲ್ಲ ವಿಚಾರಗಳು ಮನವರಿಕೆಯಾಗಿರಬಹುದು ಎಂದು ನಾನು ಭಾವಿಸುವೆ.

 (ಲೇಖಕ: ಇಡಿ ಮತ್ತು ಸಿಎಂಒ, ಎಸ್‌ಬಿಐ ಮ್ಯೂಚುವಲ್‌ ಫಂಡ್‌)

****

ಮ್ಯೂಚುವಲ್‌ ಫಂಡ್‌ ಹೂಡಿಕೆಗೂ ಹಲವು ನಿಧಿ ನಿರ್ವಹಣಾ ಸಂಸ್ಥೆಗಳನ್ನು ಆಯ್ಕೆಮಾಡುವ ಅಗತ್ಯವೂ ಇರುವುದಿಲ್ಲ

ಪ್ರತಿಯೊಬ್ಬರೂ ತಮಗೆ ಹೊಂದಿಕೆಯಾಗುವ ಮ್ಯೂಚುವಲ್‌ ಫಂಡ್‌ ಆಯ್ಕೆ ಮಾಡಿಕೊಳ್ಳಬೇಕು

ಉಳಿತಾಯದ ಜೊತೆಗೆ ಹೂಡಿಕೆ ಮಾಡುವುದೇ ಬುದ್ಧಿವಂತಿಕೆಯ ಲಕ್ಷಣ

ಸಂಪತ್ತಿನ ಸೃಷ್ಟಿ, ರಕ್ಷಣೆ ಮತ್ತು ವಿತರಣೆಗೆ ಮ್ಯೂಚುವಲ್‌ ಫಂಡ್‌ ಉತ್ತಮ ವಿಧಾನ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು