ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಕ್ಕರೆ ಜಪ್ತಿ ಮಾಡಿದರೂ ಸಿಗದ ಬಾಕಿ

ಜಿಲ್ಲಾಡಳಿತದಿಂದ ಎರಡು ಬಾರಿ ಟೆಂಡರ್‌; ಇಲ್ಲ ಸ್ಪಂದನೆ
Last Updated 22 ಡಿಸೆಂಬರ್ 2018, 19:47 IST
ಅಕ್ಷರ ಗಾತ್ರ

ಬೆಳಗಾವಿ: ಕಳೆದ ಹಂಗಾಮಿನಲ್ಲಿ ರೈತರು ಪೂರೈಸಿದ ಕಬ್ಬಿನ ಬಿಲ್ ಪಾವತಿಸದೇ ಇರುವುದರಿಂದ, ಜಿಲ್ಲೆಯ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಸಕ್ಕರೆಯನ್ನು ಜಪ್ತಿ ಮಾಡಿ ತಿಂಗಳು ಕಳೆದಿವೆ. ಆದರೆ, ಅದನ್ನು ಮಾರಿ ರೈತರಿಗೆ ಹಣ ಕೊಡಿಸುವುದು ಜಿಲ್ಲಾಡಳಿತದಿಂದ ಸಾಧ್ಯವಾಗಿಲ್ಲ.

‘ಬಾಕಿ ಪಾವತಿಗಾಗಿ ಜಿಲ್ಲೆಯಲ್ಲಿ ಕಬ್ಬು ಬೆಳೆಗಾರರ ಹೋರಾಟ ತೀವ್ರಗೊಂಡಿದ್ದರಿಂದ ಜಿಲ್ಲಾಧಿಕಾರಿ, ಕಬ್ಬು ಅಭಿವೃದ್ಧಿ ಆಯುಕ್ತ ಹಾಗೂ ಸಕ್ಕರೆ ನಿರ್ದೇಶಕರ ಆದೇಶದ ಮೇರೆಗೆ ಆ.7ರಂದು ಕಾರ್ಖಾನೆಯ ಮೂರು ಗೋದಾಮುಗಳನ್ನು (ಎಂ.ಕೆ. ಹುಬ್ಬಳ್ಳಿಯಲ್ಲಿರುವ) ಕಿತ್ತೂರ ತಹಸೀಲ್ದಾರ್ ಪ್ರವೀಣ ಹುಚ್ಚಣ್ಣವರ ನೇತೃತ್ವದಲ್ಲಿ ಜಪ್ತಿ ಮಾಡಲಾಗಿತ್ತು. ಗೋದಾಮುಗಳನ್ನು ಜಿಲ್ಲಾಡಳಿತದ ಸುಪರ್ದಿಗೆ ಪಡೆಯಲಾಗಿತ್ತು. ಮೂರು ಗೋದಾಮುಗಳಲ್ಲಿರುವ 29 ಸಾವಿರ ಕ್ವಿಂಟಲ್ ಸಕ್ಕರೆ ಜಪ್ತಿ ಮಾಡಲಾಗಿದೆ’ ಎಂದು ತಹಸೀಲ್ದಾರ್ ತಿಳಿಸಿದ್ದರು.‌

ಕಾಲಹರಣ:‘2017ರ ಡಿಸೆಂಬರ್‌ವರೆಗೆ ಕಬ್ಬು ಪೂರೈಸಿದ ಎಲ್ಲ ರೈತರಿಗೂ ನಿಗದಿಪಡಿಸಿದ ದರದಂತೆ ಬಿಲ್ ಪಾವತಿಸಿದ್ದೇವೆ. ಸಕ್ಕರೆ ದರ ಇಳಿಕೆ, ಸಕ್ಕರೆ ಮಾರಾಟದ ಮೇಲೆ ಸರ್ಕಾರದ ಹೊಸ ನೀತಿಯಿಂದಾಗಿ ಡಿಸೆಂಬರ್ ನಂತರ ಪೂರೈಕೆಯಾದ ಕಬ್ಬಿನ ಬಿಲ್ ಪಾವತಿಸಲು ವಿಳಂಬವಾಗಿದೆ. ಶೀಘ್ರವೇ ಬಿಲ್ ಪಾವತಿಸುತ್ತೇವೆ’ ಎಂದು ಕಾರ್ಖಾನೆ ಉಪಾಧ್ಯಕ್ಷ ವೀರೇಶ ಕಂಬಳಿ ರೈತರಿಗೆ ಭರವಸೆ ನೀಡಿದ್ದರು.

ಆದರೆ, ಮರುದಿನವೇ ಅಧಿಕಾರಿಗಳು ಗೋದಾಮುಗಳನ್ನು ಜಪ್ತಿ ಮಾಡಿದ್ದರು. ಆದರೆ, ಇದುವರೆಗೂ ಸಕ್ಕರೆ ಮಾರಿ ರೈತರಿಗೆ ಬಾಕಿ ಪಾವತಿಸುವ ಕೆಲಸ ಆಗಿಲ್ಲ. ಇದರಿಂದಾಗಿ ರೈತರು ಹಣಕ್ಕಾಗಿ ಚಾತಕಪಕ್ಷಿಗಳಂತೆ ಕಾಯುತ್ತಿದ್ದಾರೆ. ಇನ್ನೊಂದೆಡೆ, ಸರ್ಕಾರ ಭರವಸೆಗಳ ಮೇಲೆ ಭರವಸೆ ನೀಡುತ್ತಾ, ಸಕ್ಕರೆ ಕಾರ್ಖಾನೆಗಳಿಗೆ ಗಡುವು ನೀಡುತ್ತಾ ಕಾಲ ದೂಡುತ್ತಿದೆ ಎಂಬುದು ಕಬ್ಬು ಬೆಳೆಗಾರರ ದೂರು.

ಕೊಳ್ಳುವವರಿಲ್ಲ:ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಎಸ್.ಬಿ. ಬೊಮ್ಮನಹಳ್ಳಿ, ‘ಜಪ್ತಿ ಮಾಡಿದ ಸಕ್ಕರೆ ಹಾಗೂ ಮೊಲಾಸಿಸ್ ಮಾರಲು ಎರಡು ಬಾರಿ ಟೆಂಡರ್ ಕರೆಯಲಾಗಿದೆ. ಆದರೆ, ಯಾರೂ ಪಾಲ್ಗೊಂಡಿಲ್ಲ. ಇದರಿಂದಾಗಿ ಮಾರಾಟ ಪ್ರಕ್ರಿಯೆ ಸಾಧ್ಯವಾಗಿಲ್ಲ. ಮತ್ತೊಮ್ಮೆ ಟೆಂಡರ್‌ ಪ್ರಕ್ರಿಯೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದು ತಿಳಿಸಿದರು.

‘ಕಾರ್ಖಾನೆಯಿಂದ ಸಕ್ಕರೆ ಜಪ್ತಿ ಮಾಡಿರುವುದರಿಂದ ಯಾವುದೇ ಪ್ರಯೋಜನವಾಗಿಲ್ಲ. ಜಿಲ್ಲಾಡಳಿತ ಸಕ್ಕರೆಯನ್ನು ಯಾವಾಗಲಾದರೂ ಮಾರಾಟ ಮಾಡಲಿ. ಆದರೆ, ರೈತರಿಗೆ ಬರಬೇಕಾದ ಬಾಕಿ ಹಣವನ್ನು ಸರ್ಕಾರ ಕೂಡಲೇ ಪಾವತಿಸಬೇಕು’ ಎಂದು ರೈತ ಸಂಘದ ಮುಖಂಡ ಅಶೋಕ ಯಮಕನಮರಡಿ ಒತ್ತಾಯಿಸಿದ್ದಾರೆ.

**

ಯಾರೂ ಖರೀದಿಗೆ ಮುಂದಾಗದಿದ್ದಲ್ಲಿ, ಮುಕ್ತ ಹರಾಜಿಗೆ ಅವಕಾಶ ನೀಡುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗುವುದು. ಸರ್ಕಾರದ ನಿರ್ದೇಶನದಂತೆ ಕ್ರಮ ಕೈಗೊಳ್ಳಲಾಗುವುದು.

–ಎಸ್.ಬಿ. ಬೊಮ್ಮನಹಳ್ಳಿ, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT