ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಬಿಐ: 19ರ ಸಭೆಯಲ್ಲಿ ಕೋಲಾಹಲ ನಿರೀಕ್ಷೆ

ಕೇಂದ್ರೀಯ ಬ್ಯಾಂಕ್‌ನ ಸ್ವಾಯತ್ತತೆ ಕುರಿತ ಸಂಘರ್ಷ
Last Updated 11 ನವೆಂಬರ್ 2018, 20:23 IST
ಅಕ್ಷರ ಗಾತ್ರ

ನವದೆಹಲಿ: ಸ್ವಾಯತ್ತತೆಗೆ ಸಂಬಂಧಿಸಿದಂತೆ ಭಾರತೀಯ ರಿಸರ್ವ್‌ ಬ್ಯಾಂಕ್‌ ಮತ್ತು ಕೇಂದ್ರ ಸರ್ಕಾರ ನಡುವಣ ವಿವಾದ ತಾರಕಕ್ಕೆ ಏರಿದ್ದು, ಇದೇ 19ರಂದು ನಡೆಯಲಿರುವ ಆರ್‌ಬಿಐ ನಿರ್ದೇಶಕ ಮಂಡಳಿಯ ಸಭೆಯು ತೀವ್ರ ಕೋಲಾಹಲದಿಂದ ಕೂಡಿರಲಿದೆ ಎಂದು ನಿರೀಕ್ಷಿಸಲಾಗಿದೆ.

ಹಲವಾರು ವಿವಾದಾತ್ಮಕ ವಿಷಯಗಳು ಸಭೆಯಲ್ಲಿ ತೀವ್ರ ಸ್ವರೂಪದ ಚರ್ಚೆಗೆ ಎಡೆ ಮಾಡಿಕೊಡಲಿವೆ. ಆರ್‌ಬಿಐ ಬಳಿ ಇರುವ ಮೀಸಲು ನಿಧಿಯ ಬಳಕೆಗೆ ಸಂಬಂಧಿಸಿದಂತೆ ಹೊಸ ನಿಯಮಾವಳಿ ರೂಪಿಸುವ ಅಗತ್ಯವನ್ನು ಕೆಲ ನಿರ್ದೇಶಕರು ಪ್ರಸ್ತಾಪಿಸಲಿದ್ದಾರೆ. ಹೆಚ್ಚುವರಿ ನಿಧಿಯ ನಿರ್ವಹಣೆ ಮತ್ತು ಕಿರು, ಸಣ್ಣ, ಮಧ್ಯಮ ಕೈಗಾರಿಕೆಗಳಿಗೆ (ಎಂಎಸ್‌ಎಂಇ) ಹಣಕಾಸು ನೆರವು ಕಲ್ಪಿಸುವ ವಿಷಯಗಳನ್ನೂ ಚರ್ಚೆಗೆ ಕೈಗೆತ್ತಿಕೊಳ್ಳಲು ಒತ್ತಾಯಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಆರ್‌ಬಿಐ ವಿರುದ್ಧ ಈ ಮೊದಲು ಯಾವತ್ತೂ ಬಳಸದ, ಸಾರ್ವಜನಿಕ ಹಿತಾಸಕ್ತಿ ರಕ್ಷಿಸಲು ಗವರ್ನರ್‌ಗೆ ಸರ್ಕಾರ ನಿರ್ದೇಶನ ನೀಡುವ ಆರ್‌ಬಿಐ ಕಾಯ್ದೆ 1934ರ ಸೆಕ್ಷನ್‌ 7 ಬಳಸುವ ಕುರಿತು ಹಣಕಾಸು ಸಚಿವಾಲಯವು ಚರ್ಚೆಗೆ ಆಸ್ಪದ ಮಾಡಿಕೊಟ್ಟಿದೆ. ಇದರಿಂದ ಕೇಂದ್ರೀಯ ಬ್ಯಾಂಕ್‌ ಮತ್ತು ಸರ್ಕಾರ ನಡುವಣ ಸಂಘರ್ಷ ತೀವ್ರಗೊಂಡಿದೆ.

‘ಕೇಂದ್ರೀಯ ಬ್ಯಾಂಕ್‌ನ ಸ್ವತಂತ್ರ ಕಾರ್ಯನಿರ್ವಹಣೆಗೆ ಅಡ್ಡಿಪಡಿಸುವುದರಿಂದ ಮತ್ತು ಸರ್ಕಾರದ ಮರ್ಜಿಗೆ ಒಳಗಾಗಿ ಆರ್‌ಬಿಐ ತನ್ನ ಧೋರಣೆಯಲ್ಲಿ ರಾಜಿ ಮಾಡಿಕೊಂಡರೆ ಆರ್ಥಿಕತೆಗೆ ಗಂಡಾಂತರ ಒದಗಲಿದೆ’ ಎಂದು ಡೆಪ್ಯುಟಿ ಗವರ್ನರ್‌ ವಿರಳ್ ಆಚಾರ್ಯ ಅವರು ಆತಂಕ ವ್ಯಕ್ತಪಡಿಸಿದ್ದರು.

ನಿರ್ದೇಶಕ ಮಂಡಳಿ ಸಭೆಯ ಕಾರ್ಯಸೂಚಿ ಮೊದಲೇ ನಿರ್ಧಾರವಾಗಿರುತ್ತದೆ. ಮುಂಚಿತವಾಗಿಯೇ ಅದನ್ನು ಸದಸ್ಯರಿಗೆ ಹಂಚಲಾಗಿರುತ್ತದೆ. ಕಾರ್ಯಸೂಚಿಯಲ್ಲಿ ಇಲ್ಲದ ವಿಷಯಗಳನ್ನೂ ನಿರ್ದೇಶಕರು ಸಭೆಯಲ್ಲಿ ಪ್ರಸ್ತಾಪಿಸಬಹುದಾಗಿದೆ.

ಸರ್ಕಾರ ನಾಮಕರಣ ಮಾಡಿರುವ ಮತ್ತು ಕೆಲ ಸ್ವತಂತ್ರ ನಿರ್ದೇಶಕರು, ಮಧ್ಯಂತರ ಲಾಭಾಂಶ ವಿತರಣೆ ಮತ್ತು ಮೀಸಲು ನಿಧಿಯ ನಿಯಮಾವಳಿ ಬದಲಾವಣೆಯನ್ನು ಚರ್ಚೆಗೆ ಕೈಗೆತ್ತಿಕೊಳ್ಳಲು ಒತ್ತಾಯಿಸಬಹುದು ಎಂದು ಮೂಲಗಳು ತಿಳಿಸಿವೆ.

ಆರ್‌ಬಿಐನ ಮೀಸಲು ನಿಧಿ ಬಳಕೆಗೆ ಸಂಬಂಧಿಸಿದಂತೆ ಯಾವುದೇ ಬದಲಾವಣೆ ಮಾಡುವ ಮೊದಲು, ‘ಆರ್‌ಬಿಐ ಕಾಯ್ದೆ 1934’ಗೆ ತಿದ್ದುಪಡಿ ತರಬೇಕಾಗುತ್ತದೆ

ಆರ್‌ಬಿಐ ಬಳಿ ಇರುವ ಶಾಸನಬದ್ಧ ಕನಿಷ್ಠ ಮೀಸಲು ನಿಧಿಯ ಪ್ರಮಾಣವನ್ನು, ವಿಶ್ವದ ಇತರ ದೇಶಗಳ ಕೇಂದ್ರೀಯ ಬ್ಯಾಂಕ್‌ಗಳಲ್ಲಿ ಜಾರಿಯಲ್ಲಿ ಇರುವ ಮಟ್ಟಕ್ಕೆ ನಿಗದಿಪಡಿಸುವ ನಿಯಮಗಳನ್ನು ಹೊಸದಾಗಿ ರೂಪಿಸುವ, ಹಣಕಾಸು ಬಿಕ್ಕಟ್ಟು ಎದುರಿಸುತ್ತಿರುವ ಕೆಲ ಬ್ಯಾಂಕ್‌ಗಳಿಗೆ ವಿಧಿಸಿರುವ ನಿರ್ಬಂಧಿತ ಕ್ರಮಗಳಲ್ಲಿ ಸಡಿಲಿಕೆ, ಎಂಎಸ್‌ಎಂಇ ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ (ಎನ್‌ಬಿಎಫ್‌ಸಿ) ಸಾಲ ನೀಡುವುದನ್ನು ಸಡಿಲಗೊಳಿಸುವ ಕ್ರಮಗಳ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT