ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಫೂರ್ತಿಯ ಉದ್ಯಮಿ: ಡಸರ್ಟ್‌ ಉದ್ಯಮದ ಸಿಹಿ

Last Updated 9 ಡಿಸೆಂಬರ್ 2020, 19:31 IST
ಅಕ್ಷರ ಗಾತ್ರ
ADVERTISEMENT
""

ಬೆಂಗಳೂರಿನ ಪ್ರಸಿದ್ಧ ಡಸರ್ಟ್ಸ್‌ ಬ್ರ್ಯಾಂಡ್‌ಗಳಲ್ಲಿ ಒಂದಾದ ‘ಟೇಸ್ಟ್ ಆಫ್ ಬ್ಲೈಟಿ’ ಅಡುಗೆ ಮಾಡುವ ಮತ್ತು ಅದನ್ನು ಇನ್ನೊಬ್ಬರಿಗೆ ಉಣಬಡಿಸುವ ಖುಷಿಯ ಕಾರಣದಿಂದಾಗಿ ಜನ್ಮತಾಳಿತು. ಇಲ್ಲಿ ಸಿಹಿ ಡಸರ್ಟ್‌ಗಳನ್ನು, ಸುಂದರವಾದ ಪದರಗಳಾಗಿ ಅಲಂಕರಿಸಿ ಕೊಡಲಾಗುತ್ತದೆ. ಪ್ರಪಂಚದ ಬೇರೆ ಬೇರೆ ಪ್ರದೇಶಗಳ ರುಚಿಯನ್ನು ಆಸ್ವಾದಿಸುವ ಅವಕಾಶ ಇಲ್ಲಿದೆ. ಈ ಉದ್ಯಮವನ್ನು ಚರೋನ್ ಚಾವ್ಲಾ ಮತ್ತು ಅವರ ಪತಿ ಕೆಲವು ವರ್ಷಗಳ ಹಿಂದೆ ಭಾರತಕ್ಕೆ ಮರಳಿದಾಗ, ಇಲ್ಲಿನವರಿಗೆ ವಿಶಿಷ್ಟ ಸಿಹಿತಿಂಡಿಗಳು ಲಭ್ಯವಾಗುವಂತೆ ಮಾಡಬೇಕು ಎಂಬ ಉದ್ದೇಶದಿಂದ ಆರಂಭಿಸಿದ್ದಾರೆ. ಪ್ಯಾಕ್ ಮಾಡಿದ ಡಸರ್ಟ್‌ಗಳಿಗೆ ಭಾರತದಲ್ಲಿ ಮಾರುಕಟ್ಟೆ ಸೃಷ್ಟಿಸುವ ಉದ್ದೇಶದಿಂದ ಚರೋನ್ ತಮ್ಮ ‘ಟೇಸ್ಟ್ ಆಫ್ ಬ್ಲೈಟಿ’ ಪ್ರಾರಂಭಿಸಿದರು.

ಬಗೆ ಬಗೆಯ ಯೋಗರ್ಟ್‌ಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಆದರೆ, ಬೇಕರಿ ಮತ್ತು ರೆಸ್ಟೋರೆಂಟ್ ಹೊರತುಪಡಿಸಿದರೆ ಡಸರ್ಟ್‌ಗಳನ್ನು ಸೂಪರ್ ಮಾರ್ಕೆಟ್‍ನಿಂದ ಸಮಂಜಸ ಬೆಲೆಗೆ ಖರೀದಿಸುವ ಆಯ್ಕೆಗಳು ಇಲ್ಲ ಎಂಬುದನ್ನು ಚರೋನ್ ಗಮನಿಸಿದರು. ಅವರು ಬ್ರಿಟನ್ ಮೂಲದವರು. ಅಲ್ಲಿ ಈ ರೀತಿಯ ಉತ್ಪನ್ನಗಳು ಸೂಪರ್ ಮಾರ್ಕೆಟ್‌ಗಳಲ್ಲಿ ಸಿಗುತ್ತವೆ.

ತಮ್ಮ ಉದ್ಯಮ ಪಯಣದ ಬಗ್ಗೆ ವಿವರಿಸುವ ಚರೋನ್, ‘ನಾನು ಬೆಂಗಳೂರಿಗೆ ಬಂದಾಗ, ನಮ್ಮ ಸಮುದಾಯದ ಪಾರ್ಟಿಗಳಲ್ಲಿ ನೀಡಲು ಮತ್ತು ಕೆಲವು ಔತಣಕೂಟಗಳಲ್ಲಿ ನೀಡಲು ನಾನು ಸಣ್ಣ ಮಡಿಕೆಗಳಲ್ಲಿ ಡಸರ್ಟ್‌ಗಳನ್ನು ತಯಾರಿಸುವುದನ್ನು ಆರಂಭಿಸಿದೆ. ನನ್ನ ನೆರೆಹೊರೆಯವರು ಮತ್ತು ಸ್ನೇಹಿತರು ಈ ವಿಚಾರದಲ್ಲಿ ನನಗೆ ಒಂದು ಮಾರುಕಟ್ಟೆ ಹುಟ್ಟುಹಾಕಲು ಪ್ರೋತ್ಸಾಹಿಸಿದರು’ ಎಂದು ನೆನಪಿಸಿಕೊಳ್ಳುತ್ತಾರೆ. ಚಾರೋನ್ ಅವರು 2018ರ ಆಗಸ್ಟ್ ತಿಂಗಳಲ್ಲಿ ‘ಬ್ಲೈಟಿ ಫುಡ್ಸ್’ ಪ್ರಾರಂಭಿಸಿದರು. ಆರಂಭದಲ್ಲಿ ಮೂರು ಬಗೆಯ ರುಚಿಗಳ ಡಸರ್ಟ್‌ಗಳನ್ನು ಮಾರಾಟಕ್ಕೆ ಇಟ್ಟು, ಮಾರುಕಟ್ಟೆ ಹೇಗಿದೆ ಎಂಬುದನ್ನು ಪರೀಕ್ಷಿಸಿದರು. ನಂತರದ ದಿನಗಳಲ್ಲಿ ಇನ್ನೂ ಮೂರು ಬಗೆಯ ಡಸರ್ಟ್‌ಗಳನ್ನು ಅವರು ಮಾರುಕಟ್ಟೆಗೆ ಬಿಟ್ಟರು. ಈ ಡಸರ್ಟ್‌ಗಳನ್ನು ಪ್ರಸಿದ್ಧ ಸೂಪರ್‌ ಮಾರುಕಟ್ಟೆಗಳಿಗೆ ಸರಬರಾಜು ಮಾಡಲಾಗುತ್ತದೆ.

ಚರೋನ್ ಅವರು ತಮ್ಮ ಉದ್ಯಮ ಆರಂಭಿಸುವ ಮೊದಲು, ಡಸರ್ಟ್‌ಗಳ ರುಚಿ ಚೆನ್ನಾಗಿರಬೇಕು ಎಂಬ ಉದ್ದೇಶದಿಂದ ಸಾಕಷ್ಟು ಪೂರ್ವಸಿದ್ಧತೆಗಳನ್ನು ಮಾಡಿಕೊಂಡಿದ್ದರು. ನಂತರ ಅವರು ಡಸರ್ಟ್‌ಗಳ ಪ್ಯಾಕೇಜಿಂಗ್‌ಗೆ ಆ ವಿಷಯದಲ್ಲಿ ಪರಿಣತಿ ಹೊಂದಿರುವವರ ನೆರವು ಪಡೆದರು. ಪ್ಯಾಕೇಜಿಂಗ್ ವಿನ್ಯಾಸ ಮಾಡಿಕೊಂಡ ನಂತರ, 2018ರ ಆಗಸ್ಟ್‌ನಲ್ಲಿ ಬೆಂಗಳೂರಿನ ವೈಟ್‍ಫೀಲ್ಡ್‌ನಲ್ಲಿ ‘ಟೇಸ್ಟ್ ಆಫ್ ಬ್ಲೈಟಿ’ ಹೆಸರಿನಲ್ಲಿ ಉದ್ಯಮ ಆರಂಭಿಸಿದರು. ‘ಬ್ಲೈಟಿ’ ಎಂಬ ಹೆಸರು ‘ಬಿಲಾಯತ್’ (ಅಂದರೆ ವಿದೇಶ) ಎಂಬ ಪದದಿಂದ ಬಂದಿದೆ. ಯಾವುದೇ ಬೇಕರಿ ಕೌಶಲ ಹೊಂದಿರದಿದ್ದರೂ, ಕಲಿತು ಸಂಪಾದಿಸುವ ಮನಸ್ಸು ಇರುವವರಿಗೆ ಉದ್ಯೋಗಗಳನ್ನು ಸೃಷ್ಟಿಸುವ ಬಯಕೆಯನ್ನು ಕೂಡ ಚರೋನ್ ಹೊಂದಿದ್ದರು.

ಪ್ರತಿ ಉದ್ಯಮಿಯೂ ಸವಾಲುಗಳ ಒಂದು ಹಂತವನ್ನು ಅನುಭವಿಸುತ್ತಾನೆ. ಅದಾದ ನಂತರ ಇನ್ನಷ್ಟು ಶಕ್ತಿಶಾಲಿಯಾಗಿ ಹೊರಹೊಮ್ಮುತ್ತಾನೆ. ಚರೋನ್ ಕೂಡ ತಮ್ಮ ಉದ್ಯಮದ ಆರಂಭಿಕ ದಿನಗಳಲ್ಲಿ ಬಹಳಷ್ಟು ಸವಾಲುಗಳನ್ನು ಎದುರಿಸಿದ್ದರು. ಕೋವಿಡ್–19 ಕಾರಣದಿಂದಾಗಿ ಜಾರಿಗೊಂಡ ಲಾಕ್‌ಡೌನ್‌, ಈ ಪರಿಸ್ಥಿತಿಯನ್ನು ಉಲ್ಬಣಗೊಳಿಸಿತ್ತು. ತಮ್ಮ ಉತ್ಪನ್ನವು ಐಸ್ ಕ್ರೀಮ್ ಅಥವಾ ಯೋಗರ್ಟ್‌ ವರ್ಗದ ಅಡಿ ಬರುವುದಿಲ್ಲವಾದ ಕಾರಣ, ಈ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಮಾರಾಟ ಆಗುತ್ತವೆ ಎಂದು ಸೂಪರ್‌ ಮಾರ್ಕೆಟ್‌ ಮಾಲೀಕರನ್ನು ಮನವೊಲಿಸಲು ಬಹಳಷ್ಟು ಸಮಯ ಬೇಕಾಯಿತು ಚರೋನ್ ಅವರಿಗೆ. ಸೂಪರ್‌ ಮಾರ್ಕೆಟ್‌ಗಳು ಹಾಗೂ ಕಾರ್ಪೊರೇಟ್ ಕಂಪನಿಗಳ ಕ್ಯಾಂಟೀನ್‍ಗಳಲ್ಲಿ ನಿಂತು, ತಮ್ಮ ಉತ್ಪನ್ನಗಳನ್ನು ಸವಿಯುವಂತೆ ಸಾರ್ವಜನಿಕರನ್ನು ಪ್ರೋತ್ಸಾಹಿಸುವ ಕೆಲಸವನ್ನೂ ಚರೋನ್ ಮಾಡಿದರು. ಆದರೆ, ಒಮ್ಮೆ ಈ ಡಸರ್ಟ್‌ಗಳನ್ನು ಸವಿದವರು ಮತ್ತೆ ಬಂದು ಅವುಗಳನ್ನು ಕೇಳಲಾರಂಭಿಸಿದರು.

ಗುರಿ ಇದ್ದರೆ, ಸವಾಲುಗಳನ್ನು ಲೆಕ್ಕಿಸದೆ ಆ ಗುರಿಯನ್ನು ಸಾಕಾರಗೊಳಿಸಲು ವ್ಯಕ್ತಿ ಉತ್ಸಾಹದಿಂದ ಮುಂದುವರಿಯಬೇಕು ಎಂದು ಚರೋನ್ ನಂಬಿದ್ದಾರೆ. ಎಲ್ಲ ಉದ್ಯಮಿಗಳಿಗೆ ಅವರ ಕಿವಿಮಾತು: ‘ನಿಮ್ಮ ಉತ್ಪನ್ನದ ಮೇಲೆ ವಿಶ್ವಾಸ ಮತ್ತು ನಂಬಿಕೆ ಇದ್ದರೆ ನಿಮ್ಮ ವ್ಯವಹಾರವನ್ನು ಮತ್ತಷ್ಟು ದೂರ ಕೊಂಡೊಯ್ಯಲು ಸಾಧ್ಯವಾಗುತ್ತದೆ.’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT