ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಹಕ್ಕೆ ಎದುರಾಗಿ ಈಜುವ ಸವಾಲು!

Last Updated 28 ಅಕ್ಟೋಬರ್ 2018, 20:00 IST
ಅಕ್ಷರ ಗಾತ್ರ

ಷೇರು ಮಾರುಕಟ್ಟೆಯಲ್ಲಿ ನೀವು ಎಷ್ಟು ಬೇಕಾದರೂ ಹಣ ಹೂಡಿ. ಆದರೆ, ಎರಡು ನಿಯಮಗಳನ್ನು ಮಾತ್ರ ಎಂದಿಗೂ ಮರೆಯಬೇಡಿ, ಅವೆಂದರೆ : ನಿಯಮ 1. ಎಂದೂ ಹಣ ಕಳೆದುಕೊಳ್ಳಬೇಡಿ; ನಿಯಮ 2 : ಮೊದಲನೇ ನಿಯಮವನ್ನು ಎಂದೂ ಮರೆಯಬೇಡಿ ! ಇದು ಜಾಗತಿಕ ಷೇರು ಮಾರುಕಟ್ಟೆಯ ಗುರು ಎನಿಸಿರುವ ವಾರನ್ ಬಫೆಟ್ ಹೇಳಿರುವ ಮಾತು. ಈ ಮಾತನ್ನು ಅವರಷ್ಟೇ ಕಾರ್ಯಗತಗೊಳಿಸಲು ಸಾಧ್ಯ ಎನ್ನುವಷ್ಟರ ಮಟ್ಟಿಗೆ ಇತ್ತೀಚಿನ ದಿನಗಳಲ್ಲಿ ಷೇರು ಮಾರುಕಟ್ಟೆ ಜಟಿಲವಾಗಿ ಕಾಣಿಸಿಕೊಂಡಿದೆ. ಅಂಕಿ ಅಂಶಗಳ ಹಾವು ಏಣಿ ಆಟದಲ್ಲಿ ಪೇರುಪೇಟೆಯು ಅಂದಾಜಿಗೇ ಸಿಲುಕದಿರುವುದು ಈಗ ಸ್ವಾಭಾವಿಕವಾಗಿ ಬಿಟ್ಟಿದೆ. ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡು ವಾರಗಳ ನಿರಂತರ ಹಿನ್ನಡೆ ಅನುಭವಿಸಿದ್ದು , ಕಳೆದ ವಾರದಲ್ಲೇ ಶೇ 2.8 ರಷ್ಟು ಕುಸಿತ ಕಂಡು ಏಳು ತಿಂಗಳ ಹಿಂದೆ ಇದ್ದ ಸ್ಥಿತಿಗೆ ತಲುಪಿವೆ.

ಅಕ್ಟೋಬರ್ ತಿಂಗಳಲ್ಲಿ ಈ ಎರಡು ಮಾರುಕಟ್ಟೆಗಳ ಸೂಚ್ಯಂಕಗಳು ಶೇ 8 ರಷ್ಟು ಕುಸಿತ ಕಂಡು, 2018 ರಲ್ಲಿ ಒಟ್ಟಾರೆಯಾಗಿ ಕಂಡುಬಂದಿದ್ದ ಸಕಾರಾತ್ಮಕ ಗುರುತುಗಳನ್ನು ಅಳಿಸಿಹಾಕಿವೆ. ಅಕ್ಟೋಬರ್ 26 ರಂದು ಕೊನೆಗೊಂಡ ಪೇಟೆಯ ವಹಿವಾಟಿನಂತೆ ನವೆಂಬರ್‌ನ ಆರಂಭದಲ್ಲೂ ಮಾರುಕಟ್ಟೆ ಅಷ್ಟೇನು ಸುಧಾರಣೆ ಕಾಣದು ಎಂಬ ಮುನ್ಸೂಚನೆ ಸಿಕ್ಕಿದೆ. ವಾರಾಂತ್ಯಕ್ಕೆ ಸೆನ್ಸೆಕ್ಸ್ ಸೂಚ್ಯಂಕ 33,349 ಅಂಶಗಳಿಗೆ ಕೊನೆಯಾಗಿದ್ದರೆ, ನಿಫ್ಟಿ 10,030 ಅಂಶಗಳಲ್ಲಿ ವಹಿವಾಟು ಮುಗಿಸಿದೆ. ಅಂದರೆ ಕಳೆದ ವಾರದಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಕ್ರಮವಾಗಿ 966 ಮತ್ತು 274 ಅಂಶಗಳನ್ನು ಕಳೆದುಕೊಂಡಿವೆ. ಹೀಗಾಗಿ ಪ್ರವಾಹಕ್ಕೆ ಎದುರಾಗಿ ಈಜುವ ಸವಾಲು ಮುಂದೆಯೂ ಇರಲಿದೆ.

ವಿದೇಶಿ ಷೇರು ಮಾರುಕಟ್ಟೆಯಲ್ಲಿ ನೆಗಡಿ ಬಂದರೆ ಭಾರತದ ಷೇರು ಮಾರುಕಟ್ಟೆಯಲ್ಲಿ ವಿಷಮಶೀತ ಜ್ವರ ಬರುತ್ತದೆ ಎನ್ನುವುದು ಷೇರು ತಜ್ಞರ ವಲಯದಲ್ಲಿರುವ ಮಾತು. ಅದಕ್ಕೆ ಇಂಬು ಕೊಡುವಂತೆ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ , ಹೌಸಿಂಗ್ ಫೈನಾನ್ಸ್ ಮತ್ತು ಬ್ಯಾಂಕಿಂಗ್‌ಯೇತರ ಕಂಪನಿಗಳ ಆರ್ಥಿಕ ಒತ್ತಡ, ಗ್ರಾಹಕರು ಒತ್ತಡದಿಂದ ತಮ್ಮ ವಹಿವಾಟು ಚುಕ್ತಾ ಮಾಡಿಕೊಂಡಿಕೊಳ್ಳುತ್ತಿರುವುದು, ವಿದೇಶಿ ಮಾರು
ಕಟ್ಟೆಗಳಲ್ಲಿ ಭಾರಿ ಹಿಂಜರಿಕೆ, ವಿತ್ತೀಯ ಕೊರತೆ ಸೇರಿದಂತೆ ಹಲವು ವಿಚಾರಗಳು ಷೇರು
ಪೇಟೆಯನ್ನು ಕದಡಿದ ಸ್ಥಿತಿಗೆ ತಂದಿವೆ. ಕಚ್ಚಾ ತೈಲ ಬೆಲೆ ಏರಿಕೆ ವಾರಾಂತ್ಯದಲ್ಲಿ ಕಡಿಮೆಯಾಗಿದ್ದರೂ ಅದಕ್ಕೆ ಷೇರು ಮಾರುಕಟ್ಟೆ ಸೂಕ್ತವಾಗಿ ಸ್ಪಂದಿಸಿಲ್ಲ. ಹೀಗಾಗಿ 2018 ರ ಮಾರ್ಚ್ ನಂತರದ ಅತಿ ಕಡಿಮೆ ವಹಿವಾಟನ್ನು ಷೇರುಪೇಟೆ ದಾಖಲಿಸಿದೆ.

ಯೆಸ್ ಬ್ಯಾಂಕ್ ಉಜ್ಜೀವನ್‌ಗೆ ತಟ್ಟಿದ ಬಿಸಿ: ಯೆಸ್ ಬ್ಯಾಂಕ್ ತನ್ನ ಎರಡನೇ ತ್ರೈಮಾಸಿಕ ಅವಧಿಯಲ್ಲಿ ₹ 964.7 ಕೋಟಿ ನಿವ್ವಳ ಲಾಭ ಗಳಿಸಿದ್ದರೂ ಶೇ 4 ರಷ್ಟು ಕುಸಿತ ದಾಖಲಿಸಿರುವುದರಿಂದ ಬ್ಯಾಂಕ್‌ ಷೇರಿನ ಬೆಲೆ ಶೇ 9 ರಷ್ಟು ಕುಸಿತ ಕಂಡಿದೆ. ಅ.19 ರಂದು ₹217.70 ಇದ್ದ ಷೇರಿನ ಬೆಲೆ 26 ರಂದು ₹180.60 ಗೆ ಕುಸಿದಿದೆ.

ಉಜ್ಜೀವನ್ ಫೈನಾನ್ಶಿಯಲ್ ಸರ್ವೀಸಸ್ ಮತ್ತು ಇಕ್ವೀಟಾಸ್ ಹೋಲ್ಡಿಂಗ್ಸ್‌ನ ಷೇರುಗಳು ಶೇ 23 ರಷ್ಟು ಕುಸಿತ ಕಂಡು ಮಾರಾಟದ ಒತ್ತಡಕ್ಕೆ ಸಿಲುಕಿದ್ದವು. ಸಣ್ಣ ಮಟ್ಟದ ಬ್ಯಾಂಕ್‌ಗಳು ಆರಂಭವಾದ ಮೂರು ವರ್ಷಗಳ ಒಳಗಾಗಿ ಲೀಸ್ಟೆಡ್‌ ವ್ಯಾಪ್ತಿಗೆ ಬರಬೇಕು ಎಂದು ಆರ್‌ಬಿಐ ಪುನರುಚ್ಚರಿಸಿದ ಪರಿಣಾಮ ದಿಢೀರ್ ಕುಸಿತ ದಾಖಲಾಗಿತ್ತು.

ಮಾರುತಿಗೂ ತಟ್ಟಿದ ಬಿಸಿ : ಭಾರತದ ಅತಿ ದೊಡ್ಡ ಕಾರು ತಯಾರಿಕಾ ಕಂಪನಿ ಮಾರುತಿ ಸುಜುಕಿ ಗುರುವಾರ ತನ್ನ ತ್ರೈಮಾಸಿಕ ವರದಿಯಲ್ಲಿ ಲಾಭಾಂಶ ಕುಸಿತದ ಬಗ್ಗೆ ಪ್ರಕಟಿಸಿತು. ₹ 2,240.4 ಕೋಟಿ ಆದಾಯ ಗಳಿಸಿದ್ದು ,ನಿವ್ವಳ ಲಾಭದಲ್ಲಿ 9.8 ರಷ್ಟು ಕಡಿಮೆಯಾಗಿದೆ ಎಂದು ತಿಳಿಸಿತು. ನಾಲ್ಕು ವರ್ಷಗಳಲ್ಲೇ ಮೊದಲ ಬಾರಿಗೆ ಮಾರುತಿ ಸುಜುಕಿ ತನ್ನ ಲಾಭ ತಗ್ಗಿರುವ ಬಗ್ಗೆ ವಿವರಿಸಿತು. ತಯಾರಿಕಾ ವೆಚ್ಚ , ಜಾಹೀರಾತು ವೆಚ್ಚ ಮತ್ತು ರೂಪಾಯಿ ಮೌಲ್ಯ ಕುಸಿತ ನಿವ್ವಳ ಲಾಭ ತಗ್ಗಲು ಕಾರಣ ಎಂದಿತು. ಇದರಿಂದ ₹ 6,760.40 ಇದ್ದ ಷೇರಿನ ಬೆಲೆ ₹ 6,705.30ಗೆ ಇಳಿಯಿತು.

ಏರಿಕೆ ದಾಖಲೆ : ಪೇಟೆಯ ಇಂಡೆಕ್ಸ್‌ನಲ್ಲಿರುವ ಎಂಟು ಕಂಪನಿಗಳು ಶೇ 10 ಕ್ಕಿಂತ ಹೆಚ್ಚು ಪ್ರಗತಿ ದಾಖಲಿಸಿವೆ. ಇಐಡಿ ಪ್ಯಾರಿ ( ಶೇ 14), ಒಬೆರಾಯ್ ರಿಯಾಲ್ಟಿ (ಶೇ 13), ಇಂಟಲೆಕ್ಟ್ ಡಿಸೈನ್ ಅರೇನಾ (ಶೇ 12.73 ), ಕಜಾರಿಯ ಸೆರಾಮಿಕ್ಸ್ (ಶೇ 12), ಎಸ್ ಜಿವಿಎನ್(ಶೇ 11.66), ಎಐಎ ಎಂಜಿನಿಯರಿಂಗ್( ಶೇ 11.23), ಫಿನೋಲೆಕ್ಸ್ ಇಂಡಸ್ಟ್ರೀಸ್ (ಶೇ 10.98), ಕ್ಯಾನ್ ಫಿನ್ ಹೋಮ್ಸ್ (ಶೇ 10.44) . ಇನ್ನು ಪ್ರಮುಖ ಕಂಪನಿಗಳಾದ ಎಚ್‌ಡಿಎಫ್‌ಸಿಶೇ 2.63, ಕೋಲ್ ಇಂಡಿಯಾ ಶೇ 1.83, ಮತ್ತು ಐಸಿಐಸಿಐ ಬ್ಯಾಂಕ್ ಶೇ 0.05 ರಷ್ಟು ಏರಿಕೆ ಕಂಡಿವೆ.

ಭಾರ್ತಿ ಏರ್‌ಟೆಲ್‌ನ ಅಚ್ಚರಿ ಫಲಿತಾಂಶ : ಭಾರ್ತಿ ಏರ್‌ಟೆಲ್‌ನ ಷೇರುಗಳು ಶೇ 4.24 ರಷ್ಟು ಏರಿಕೆ ಕಂಡಿವೆ. ಎರಡನೇ ತ್ರೈಮಾಸಿಕ ಅವಧಿಯಲ್ಲಿ ಕಂಪನಿಯು ಅಚ್ಚರಿಯ ರೀತಿಯಲ್ಲಿ ₹ 118.8 ಕೋಟಿ ನಿವ್ವಳ ಲಾಭ ದಾಖಲಿಸಿರುವುದು ಇದಕ್ಕೆ ಕಾರಣವಾಗಿದೆ.

ಇಳಿಕೆ: ಬಾಂಬೆ ಡೈಯಿಂಗ್, ದಿಲೀಪ್ ಬಿಲ್ಡ್ ಕಾನ್, 8ಕೆ ಮೈಲ್ಸ್ , ಜುಬ್ಲಿಯಂಟ್ ಫುಡ್, ಕ್ವಾಲಿಟಿ ಸೇರಿದಂತೆ ಇನ್ನು ಕೆಲ ಕಂಪನಿಗಳು ಶೇ 23 ಕ್ಕಿಂತ ಹೆಚ್ಚು ಅಂಶಗಳ ಇಳಿಕೆ ಕಂಡಿವೆ. ಪ್ರಮುಖ ಕಂಪನಿಗಳಾದ ಸನ್ ಫಾರ್ಮಾ ಶೇ 9, ಇಂಡಸ್ ಇಂಡ್ ಬ್ಯಾಂಕ್ ಶೇ 8.33 , ಇನ್ಫೊಸಿಸ್ , ಶೇ 7.19, ಮತ್ತು ಟಿಸಿಎಸ್ ಶೇ 6.13 ರಷ್ಟು ಇಳಿಕೆ ಕಂಡಿವೆ.

ಸಾರ್ವಕಾಲಿಕ ಕುಸಿತ: ನಾರಾಯಣ ಹೃದಯಾಲಯ, ಹಿಂದೂಸ್ತಾನ್ ಏರೊನಾಟಿಕ್ಸ್, ಆದಿತ್ಯಾ ಬಿರ್ಲಾ ಕ್ಯಾಪಿಟಲ್, ಪಿಎನ್‌ಬಿ ಹೌಸಿಂಗ್ ಫೈನಾನ್ಸ್ , ಮ್ಯಾಕ್ಸ್ ಇಂಡಿಯಾ, ಉಜ್ಜೀವನ್ ಫೈನಾನ್ಶಿಯಲ್ , ಡಿಬಿ ಕಾರ್ಪ್ ಸೇರಿದಂತೆ ಇನ್ನೂ ಕೆಲ ಕಂಪನಿಗಳು ಕುಸಿತ ದಾಖಲಿಸಿವೆ.

ವಾರದ ಮುನ್ನೋಟ:ಈ ವಾರವೂ ವಿವಿಧ ಕಂಪನಿಗಳ ತ್ರೈಮಾಸಿಕ ಆರ್ಥಿಕ ಪ್ರಗತಿ ವರದಿಗಳು ಷೇರು ಮಾರುಕಟ್ಟೆಯ ಮೇಲೆ ಪ್ರಭಾವ ಬೀರಲಿವೆ.

ವಿಜಯ ಬ್ಯಾಂಕ್, ಯುನಿಯನ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ, ಅದಾನಿ ಪವರ್, ಬ್ಲೂ ಡಾರ್ಟ್, ಡಾಬರ್, ಎಸ್ಕಾರ್ಟ್ಸ್, ಟಾಟಾ ಮೋಟರ್ಸ್ , ಎಚ್‌ಡಿಎಫ್‌ಸಿ, ಎನ್‌ಟಿಪಿಸಿ , ಆ್ಯಕ್ಸಿಸ್ ಬ್ಯಾಂಕ್, ಎಸ್‌ಎಐಎಲ್ , ಐಒಸಿ , ಸೇರಿದಂತೆ ಪ್ರಮುಖ ಕಂಪನಿಗಳು ಅಕ್ಟೋಬರ್ 29 ರಿಂದ ನವೆಂಬರ್ 2 ಅವಧಿಯಲ್ಲಿ ವರದಿ ನೀಡಲಿವೆ. ಹೀಗಾಗಿ ಕಾದು ನೋಡುವ ತಂತ್ರ ಅನಿವಾರ್ಯವಾಗಲಿದೆ.

(ಸುವಿಷನ್‌ ಹೋಲ್ಡಿಂಗ್ಸ್‌ ಪ್ರವೇಟ್‌ ಲಿಮಿಟೆಡ್‌ನ ಕಾರ್ಪೊರೇಟ್‌ ಫೈನಾನ್ಸ್‌ ಉಪಾಧ್ಯಕ್ಷ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT