ನವದೆಹಲಿ: ಹಣ ಅಕ್ರಮ ವರ್ಗಾವಣೆ ಆರೋಪದ ಮೇರೆಗೆ ಸ್ವಿಡ್ಜರ್ಲೆಂಡ್ ಅಧಿಕಾರಿಗಳು, ಸ್ವಿಸ್ ಬ್ಯಾಂಕ್‌ನಲ್ಲಿ ಹಲವು ಖಾತೆ ಹೊಂದಿದ್ದ ತೈವಾನ್ ನಿವಾಸಿಯನ್ನು ಬಂಧಿಸಿದ್ದು, ಆತನಿಗೆ ಸೇರಿದ ₹2,610 ಕೋಟಿಯನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ.
ಚಾಂಗ್ ಚುಂಗ್-ಲಿಂಗ್ ಬಂಧಿತ. ಈತ ಅದಾನಿ ಸಮೂಹದ ಜೊತೆಗೆ ನಿಕಟ ಸಂಪರ್ಕ ಹೊಂದಿದ್ದಾನೆ ಎಂದು ಶಂಕಿಸಲಾಗಿದೆ. ಅದಾನಿ ಸಮೂಹದ ವಿರುದ್ಧ 2023ರ ಜನವರಿಯಲ್ಲಿ ಅಮೆರಿಕದ ಶಾರ್ಟ್ ಸೆಲ್ಲರ್ ಕಂಪನಿ ಹಿಂಡೆನ್‌ಬರ್ಗ್ ರಿಸರ್ಚ್ ಬಿಡುಗಡೆಗೊಳಿಸಿದ ವರದಿಯಲ್ಲಿ ಈತನ ಹೆಸರು ಪ್ರಸ್ತಾಪವಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂಡೆನ್‌ಬರ್ಗ್ ರಿಸರ್ಚ್ ತನ್ನ ‘ಎಕ್ಸ್’ ಖಾತೆಯಲ್ಲಿ ಸ್ವಿಸ್ ಮಾಧ್ಯಮ ವೆಬ್‌ಸೈಟ್ ಗೋಥಮ್ ಸಿಟಿ ಪ್ರಕಟಿಸಿರುವ ವರದಿ ಉಲ್ಲೇಖಿಸಿ ಅದಾನಿ ಸಮೂಹದ ವಿರುದ್ಧ ಹೊಸ ವರದಿ ಪ್ರಕಟಿಸಿದೆ.
2021ರಿಂದಲೂ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ಗೌತಮ್ ಅದಾನಿ ವಿರುದ್ಧ ಸ್ವಿಡ್ಜರ್ಲೆಂಡ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಇದರ ಭಾಗವಾಗಿ ಸ್ವಿಸ್ ಬ್ಯಾಂಕ್‌ನ ಹಲವು ಖಾತೆಗಳಲ್ಲಿ ಅದಾನಿಗೆ ಸೇರಿದ್ದ ಈ ಹಣವನ್ನು ವಶಕ್ಕೆ ಪಡೆದಿದ್ದಾರೆ ಎಂದು ಹೇಳಿದೆ.
ಚಾಂಗ್ ಚುಂಗ್-ಲಿಂಗ್, ಅದಾನಿ ಸಮೂಹಕ್ಕೆ ಸೇರಿದ ಮಾರಿಷಸ್ ಮತ್ತು ಬರ್ಮುಡಾ ಫಂಡ್‌ಗಳಲ್ಲಿ ಮಾಡಿರುವ ಕಾನೂನುಬಾಹಿರ ಹೂಡಿಕೆ ಬಗ್ಗೆ ಅಲ್ಲಿನ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿಸಿದೆ.
ತನಿಖೆಗೆ ಕಾಂಗ್ರೆಸ್ ಒತ್ತಾಯ: ಅದಾನಿ ಸಮೂಹದ ವಿರುದ್ಧ ಕೇಳಿಬಂದಿರುವ ಆರೋಪದ ಬಗ್ಗೆ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕು. ಈ ಪ್ರಕರಣದ ವಿಚಾರಣೆಯನ್ನು ಸಂಸತ್‌ನ ಜಂಟಿ ಸದನ ಸಮಿತಿಗೂ ಒಪ್ಪಿಸಬೇಕು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಮಾಧ್ಯಮ ವಿಭಾಗದ ಮುಖ್ಯಸ್ಥ ಜೈರಾಮ್ ರಮೇಶ್ ಆಗ್ರಹಿಸಿದ್ದಾರೆ.
ಆರೋಪ ನಿರಾಕರಿಸಿದ ಅದಾನಿ
ಹಿಂಡೆನ್‌ಬರ್ಗ್ ರಿಸರ್ಚ್ ಮಾಡಿರುವ ಆರೋಪ ನಿರಾಧಾರವಾದುದು. ಕಂಪನಿ ವಿರುದ್ಧ ಸ್ವಿಸ್ ನ್ಯಾಯಾಲಯದಲ್ಲಿ ಯಾವುದೇ ವಿಚಾರಣೆ ನಡೆಯುತ್ತಿಲ್ಲ. ಕಂಪನಿಗೆ ಸೇರಿದ ಯಾವುದೇ ಬ್ಯಾಂಕ್ ಖಾತೆಗಳನ್ನು ಅಲ್ಲಿನ ಅಧಿಕಾರಿಗಳು ಜಪ್ತಿ ಮಾಡಿಲ್ಲ ಎಂದು ಅದಾನಿ ಸಮೂಹ ಪ್ರತಿಕ್ರಿಯಿಸಿದೆ. ಗೌತಮ್ ಅದಾನಿ ಜೊತೆಗೆ ನಿಕಟ ಸಂಪರ್ಕ ಹೊಂದಿರುವ ವ್ಯಕ್ತಿಗೆ ಸೇರಿದ ಐದು ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಈ ಬಗ್ಗೆ ಫೆಡರಲ್ ಕ್ರಿಮಿನಲ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ ಎಂದು ಗೋಥಮ್ ಸಿಟಿ ವರದಿ ಮಾಡಿದೆ. ‘ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಸಮೂಹದ ಹೆಸರನ್ನು ಉಲ್ಲೇಖಿಸಿಲ್ಲ. ಈ ಬಗ್ಗೆ ಅಧಿಕಾರಿಗಳು ಸ್ಪಷ್ಟೀಕರಣ ಅಥವಾ ಮಾಹಿತಿ ಕೇಳಿಲ್ಲ. ನಮ್ಮ ಸಾಗರೋತ್ತರ ವ್ಯವಹಾರವು ಪಾರದರ್ಶಕವಾಗಿದೆ. ಅಲ್ಲಿನ ಕಾನೂನುಗಳನ್ನು ಪಾಲಿಸಲಾಗುತ್ತಿದೆ’ ಎಂದು ಅದಾನಿ ಸಮೂಹ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.