ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಿಂಬೊ’ದ ಪಾರದರ್ಶಕ ವಹಿವಾಟು

Last Updated 3 ಡಿಸೆಂಬರ್ 2019, 19:30 IST
ಅಕ್ಷರ ಗಾತ್ರ

ದೇಶದಲ್ಲಿ ವಿಮೆ ಸೌಲಭ್ಯ ಪಡೆದುಕೊಂಡವರ ಸಂಖ್ಯೆ ತುಂಬ ಕಡಿಮೆ ಇದೆ. ಕೆಲ ಸಂದರ್ಭಗಳಲ್ಲಿ ವಿಮೆ ಸಂಸ್ಥೆಗಳು ಗ್ರಾಹಕರಿಗೆ ಮನವರಿಕೆ ಮಾಡುವ ಯೋಜನೆ ಒಂದಾಗಿದ್ದರೆ, ಅವರಿಗೆ ಮಾರಾಟ ಮಾಡಿದ ವಿಮೆ ಉತ್ಪನ್ನಗಳು ಬೇರೆಯೇ ಆಗಿರುತ್ತವೆ. ಬಹುತೇಕ ಸಂದರ್ಭಗಳಲ್ಲಿ ವಿಮೆ ವಹಿವಾಟಿನ ವಿವಿಧ ಉತ್ಪನ್ನಗಳನ್ನು ಅರ್ಥೈಸಿಕೊಳ್ಳಲು ಮತ್ತು ಅವುಗಳನ್ನು ಸಮರ್ಪಕವಾಗಿ ನಿರ್ವಹಿಸಲು ಗ್ರಾಹಕರು ತೊಂದರೆ ಅನುಭವಿಸುತ್ತಾರೆ. ಇಂತಹ ಲೋಪಗಳನ್ನು ನಿವಾರಿಸುವ ಉದ್ದೇಶದಿಂದ ಐಐಎಂ ಕೋಲ್ಕತ್ತ, ಐಐಟಿ ಖರಗಪುರದ ಪದವೀಧರರಾದ ಮೂವರು ಸಮಾನ ಮನಸ್ಕರು ಸೇರಿಕೊಂಡು ವಿಮೆ ದಲ್ಲಾಳಿ ಸಂಸ್ಥೆ ಸಿಂಬೊ ಸಂಸ್ಥೆಯನ್ನು (Symbo India Insurance Broking Limited) 2017ರಲ್ಲಿ ಸ್ಥಾಪಿಸಿದ್ದಾರೆ. ವಿಮೆ ವಹಿವಾಟನ್ನು ಸರಳ, ಪಾರದರ್ಶಕವಾಗಿ ನಿರ್ವಹಿಸಿ ಗ್ರಾಹಕರಿಗೆ ಸುಲಭ ರೀತಿಯಲ್ಲಿ ಸೇವೆ ಒದಗಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಮೊಬೈಲ್‌ ಆ್ಯಪ್‌ ಮೂಲಕ ಕಾರ್ಯನಿರ್ವಹಿಸುವುದರಿಂದ ವಹಿವಾಟಿನ ಪ್ರತಿಯೊಂದು ವಿವರ ಪಾರದರ್ಶಕವಾಗಿರುತ್ತದೆ. ಸದ್ಯಕ್ಕೆ ಮಾರುಕಟ್ಟೆಯಲ್ಲಿ ಸಾಮಾನ್ಯ ಅಗತ್ಯಗಳನ್ನು ಈಡೇರಿಸಲು ವಿಮೆ ಯೋಜನೆಗಳಿವೆಯೇ ಹೊರತು, ಗ್ರಾಹಕರಿಗೆ ಮುಖ್ಯವಾಗಿ ಬೇಕಾಗುವ ಸೌಲಭ್ಯ ಒದಗಿಸುತ್ತಿಲ್ಲ. ಈ ಕೊರತೆಯನ್ನು ಇದು ಭರ್ತಿ ಮಾಡಿಕೊಡಲಿದೆ.

ಒಂದಕ್ಕಿಂತ ಹೆಚ್ಚು ಕಂಪನಿಗಳ ವಿಮೆ ಉತ್ಪನ್ನಗಳನ್ನು ಮಾರಾಟ ಮಾಡಲು ಭಾರತೀಯ ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು 2 ವರ್ಷಗಳ ಹಿಂದೆ ಅನುಮತಿ ನೀಡಿತ್ತು. ಹೀಗಾಗಿ ವಿಮೆ ಮಾರಾಟ ವಹಿವಾಟಿನಲ್ಲಿ ಬ್ರೋಕಿಂಗ್‌ (ದಲ್ಲಾಳಿ) ಸಂಸ್ಥೆಗಳ ಪ್ರವೇಶದ ಹಾದಿ ಸುಗಮವಾಗಿದೆ. ಸಿಂಬೊ ಇಂಡಿಯಾ ಇನ್ಶುರೆನ್ಸ್‌ ಬ್ರೋಕಿಂಗ್‌ ಲಿಮಿಟೆಡ್‌, ದೇಶದಾದ್ಯಂತ ಜೀವ ಮತ್ತು ಸಾಮಾನ್ಯ ವಿಮೆ ಉತ್ಪನ್ನಗಳನ್ನು ಮಾರಾಟ ಮಾಡುವ ಪ್ರಮುಖ ದಲ್ಲಾಳಿ ಸಂಸ್ಥೆಯಾಗಿದೆ. ದೇಶದಲ್ಲಿನ ಬಹುತೇಕ ವಿಮೆ ಸಂಸ್ಥೆಗಳ ಜತೆ ಒಪ್ಪಂದ ಮಾಡಿಕೊಂಡು ಅವುಗಳ ಉತ್ಪನ್ನಗಳನ್ನು ತನ್ನ ‍ಪಾಲುದಾರರ ಮೂಲಕ ಗ್ರಾಹಕರಿಗೆ ಮಾರಾಟ ಮಾಡುವ ವಹಿವಾಟಿನಲ್ಲಿ ತೊಡಗಿಸಿಕೊಂಡಿದೆ.

ಸಿಂಬೊ ಪಾಲುದಾರರು ಗ್ರಾಹಕರಿಗೆ ಅಗತ್ಯವಾದ ವಿಮೆ ಉತ್ಪನ್ನಗಳನ್ನು ಸುಲಭವಾಗಿ ಮಾರಾಟ ಮಾಡುತ್ತಾರೆ. ಕಂಪನಿಯ ಪಾಲುದಾರರು ಮೊಬೈಲ್‌ ಆ್ಯಪ್‌ ಮೂಲಕ ವಿಮೆ ಉತ್ಪನ್ನಗಳನ್ನು ಮಾರಾಟ ಮಾಡುತ್ತಾರೆ. ವಿಮೆ ಬದಲಾವಣೆ, ಮತ್ತಿತರ ವಿವರಗಳನ್ನು ಇಲ್ಲಿ ಸುಲಭವಾಗಿ ನಿರ್ವಹಿಸಬಹುದು. ಮೊಬೈಲ್‌ನಲ್ಲಿ ವಿವರಗಳನ್ನು ಭರ್ತಿ ಮಾಡುತ್ತಿದ್ದಂತೆ ತಕ್ಷಣದಿಂದ ವಿಮೆ ಸೌಲಭ್ಯ ಚಾಲನೆಗೆ ಬರಲಿದೆ. ಇದರಿಂದ ವಿಮೆ ವಿತರಣೆಯ ದುಬಾರಿ ವೆಚ್ಚಕ್ಕೂ ತಡೆ ಬೀಳಲಿದೆ. ಅಂತರ್ಜಾಲ ತಾಣದ ಮೂಲಕವೂ ಇದು ಕಾರ್ಯನಿರ್ವಹಿಸುತ್ತಿದೆ. ವಿಮೆ ಉತ್ಪನ್ನಗಳ ಖರೀದಿ ಮತ್ತು ವಿಮೆ ಪರಿಹಾರ ಮೊತ್ತ ಪಡೆಯುವ ಪ್ರಕ್ರಿಯೆಯು ಗ್ರಾಹಕರ ಪಾಲಿಗೆ ಹೆಚ್ಚು ಸುಲಭಗೊಳಿಸುವ ಉದ್ದೇಶದಿಂದ ಈ ವಿಮೆ ದಲ್ಲಾಳಿ ಸಂಸ್ಥೆ ಸ್ಥಾಪಿಸಲಾಗಿದೆ' ಎಂದು ಕಂಪನಿಯ ಸಹ ಸ್ಥಾಪಕ ಮತ್ತು ಸಿಇಒ ಅನಿಕ್‌ ಜೈನ್‌ ಹೇಳುತ್ತಾರೆ.

‘ಡೆಂಗಿ ಸೇರಿದಂತೆ ನೀರಿನಿಂದ ಬರುವ ಕಾಯಿಲೆಗಳಿಗೂ ಇಲ್ಲಿ ವಿಮೆ ಸೌಲಭ್ಯ ಇದೆ. ಒಂದು ವರ್ಷಕ್ಕೆ ₹ 200ಕ್ಕೆ ವಿಮೆ ಪಾಲಿಸಿ ಖರೀದಿಸಿದ್ದರೆ ಇಂತಹ ಕಾಯಿಲೆಗಳ ವೈದ್ಯಕೀಯ ವೆಚ್ಚವನ್ನು ಸುಲಭವಾಗಿ ಭರಿಸಬಹುದಾಗಿದೆ. ಮ್ಯಾರಥಾನ್‌ನಲ್ಲಿ ಭಾಗವಹಿಸಿದಾಗ ಅನಿವಾರ್ಯ ಕಾರಣಕ್ಕೆ ರದ್ದಾದರೆ, ಫಿಟ್ನೆಸ್‌, ಕ್ರೀಡೆಯಲ್ಲಿ ತೊಡಗಿದಾಗ ಗಾಯವಾದರೆ ಅದಕ್ಕೂ ವಿಮೆ ಪಡೆಯಬಹುದು. ಸದ್ಯಕ್ಕೆ ಇಂಗ್ಲಿಷ್‌ ಮತ್ತು ಹಿಂದಿ ಭಾಷೆಯಲ್ಲಿ ಲಭ್ಯ ಇರುವ ಆ್ಯಪ್‌ ವಹಿವಾಟನ್ನು ಇತರ ಪ್ರಾದೇಶಿಕ ಭಾಷೆಗಳಿಗೂ ವಿಸ್ತರಿಸಲಾಗುವುದು. ಜನವರಿ ವೇಳೆಗೆ ಕನ್ನಡ ಮತ್ತು ತೆಲುಗು ಭಾಷೆ ಬಳಕೆಗೆ ಬರಲಿದೆ.

‘ಆಧುನಿಕ ಜೀವನಶೈಲಿಯ ಭಾಗವಾಗಿರುವ ಹಣಕಾಸು ತಂತ್ರಜ್ಞಾನ, ಬಾಡಿಗೆ ವಾಹನ, ಹಣ ರವಾನೆ ಮತ್ತಿತರ ಕ್ಷೇತ್ರಗಳಲ್ಲಿ ತ್ವರಿತವಾಗಿ ಬದಲಾಗುತ್ತಿರುವ ಅಗತ್ಯಗಳಿಗೂ ವಿಮೆ ಸೌಲಭ್ಯ ಕಲ್ಪಿಸಿಕೊಡುತ್ತಿದೆ. ₹ 9 ಬೆಲೆಯ ಫಿಟ್‌ನೆಸ್‌ ವಿಮೆ ಕೂಡ ಇಲ್ಲಿದೆ. ವಿವಿಧ ವಿಮೆ ಕಂಪನಿಯಗಳ ಸಹಯೋಗದಲ್ಲಿ ಡೆಂಗಿ, ದೃಷ್ಟಿ, ಮ್ಯಾರಥಾನ್‌, ಫಿಟ್‌ನೆಸ್‌, ಕ್ರೀಡೆಗೆ ಸಂಬಂಧಿಸಿದ ವಿಮೆ ಉತ್ಪನ್ನಗಳನ್ನೂ ಒದಗಿಸುತ್ತದೆ. ವಾಹನ, ಆರೋಗ್ಯ, ಆಸ್ತಿ, ವಹಿವಾಟು ಮತ್ತಿತರ ವಿಮೆ ಸೌಲಭ್ಯಗಳೂ ಇಲ್ಲಿವೆ. ಸ್ತನ ಮತ್ತು ಗರ್ಭಾಶಯದ ಕೊರಳಿನ ಕ್ಯಾನ್ಸರ್‌ಗೆ ಕೂಡ ಇಲ್ಲಿ ವಿಮೆ ನೆರವು ದೊರೆಯಲಿದೆ. ಈ ಹಿಂದೆ ಯಾವುದೇ ವಿಮೆ ಕಂಪನಿಯ ಸಲಹೆಗಾರರಾಗಿ ಕಾರ್ಯನಿರ್ವಹಿಸದ, 18 ವರ್ಷಕ್ಕಿಂತ ಹೆಚ್ಚಿನ ವಯೋಮಾನದವರು ಸಿಂಬೊದ ಹೊಸ ಪಾಲುದಾರರಾಗಬಹುದು. ಅವರಿಗೆ ತರಬೇತಿ ನೀಡಲಾಗುವುದು' ಎಂದೂ ಜೈನ್‌ ಹೇಳುತ್ತಾರೆ.

***

12 ಸಾವಿರ; ಪಾಲುದಾರರ ಸಂಖ್ಯೆ

4 ಸಾವಿರ: ಪ್ರತಿ ತಿಂಗಳೂ ಸೇರ್ಪಡೆಯಾಗುತ್ತಿರುವ ಪಾಲುದಾರರು

50ಕ್ಕೂ ಹೆಚ್ಚು; ಖಾಸಗಿ, ಸರ್ಕಾರಿ ವಿಮೆ ಸಂಸ್ಥೆಗಳ ಸಂಖ್ಯೆ

30ಕ್ಕೂ ಹೆಚ್ಚು: ಸಿಂಬೊ ಜತೆ ಸಹಭಾಗಿತ್ವ ಹೊಂದಿರುವ ವಿಮೆ ಸಂಸ್ಥೆಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT