ಶುಕ್ರವಾರ, ಜನವರಿ 27, 2023
17 °C

2024ರ ಮಾರ್ಚ್‌ ವೇಳೆಗೆ ಏರ್‌ ಇಂಡಿಯಾ, ವಿಸ್ತಾರಾ ವಿಲೀನ: ಟಾಟಾ ಸಮೂಹ ಘೋಷಣೆ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ನವದೆಹಲಿ: ವಿಸ್ತಾರಾ ವಿಮಾನಯಾನ ಕಂಪನಿಯನ್ನು ಏರ್ ಇಂಡಿಯಾದಲ್ಲಿ ವಿಲೀನಗೊಳಿಸಲಾಗುವುದು ಎಂದು ಟಾಟಾ ಸಮೂಹವು ಮಂಗಳವಾರ ಹೇಳಿದೆ. ಇದು ದೇಶದ ವಿಮಾನಯಾನ ಕ್ಷೇತ್ರದ ಮಹತ್ವದ ವಿಲೀನ ಪ್ರಕ್ರಿಯೆ.

ವಿಸ್ತಾರಾ ಕಂಪನಿಯು ಏರ್‌ ಇಂಡಿಯಾದಲ್ಲಿ ವಿಲೀನವಾದ ನಂತರದಲ್ಲಿ, ಸಿಂಗಪುರ ಏರ್‌ಲೈನ್ಸ್ ಕಂಪನಿಯು ಏರ್ ಇಂಡಿಯಾದಲ್ಲಿ ಶೇಕಡ 25.1ರಷ್ಟು ಪಾಲು ಹೊಂದಲಿದೆ. ವಿಲೀನವು 2024ರ ಮಾರ್ಚ್‌ಗೆ ಮೊದಲು ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ವಿಸ್ತಾರಾ ಕಂಪನಿಯಲ್ಲಿ ಟಾಟಾ ಸಮೂಹವು ಶೇ 51ರಷ್ಟು, ಸಿಂಗ‍ಪುರ ಏರ್‌ಲೈನ್ಸ್‌ ಶೇ 49ರಷ್ಟು ಷೇರುಪಾಲು ಹೊಂದಿದೆ. ‘ವಹಿವಾಟಿನ ಭಾಗವಾಗಿ ಏರ್‌ ಇಂಡಿಯಾ ಕಂಪನಿಲ್ಲಿ ನಾವು ₹ 2,058 ಕೋಟಿ ಹೂಡಿಕೆ ಮಾಡಲಿದ್ದೇವೆ’ ಎಂದು ಸಿಂಗಪುರ ಏರ್‌ಲೈನ್ಸ್ ತಿಳಿಸಿದೆ.

ವಿಲೀನದ ನಂತರದಲ್ಲಿ ಏರ್ ಇಂಡಿಯಾ ಕಂಪನಿಯ ಬಳಿ ಒಟ್ಟು 218 ವಿಮಾನಗಳು ಇರಲಿವೆ. ಇದು ಅಂತರರಾಷ್ಟ್ರೀಯ ವಿಮಾನಯಾನ ಸೇವೆ ಒದಗಿಸುವ ಭಾರತದ ಅತಿದೊಡ್ಡ ಕಂಪನಿಯಾಗಲಿದೆ. ದೇಶಿ ಮಾರುಕಟ್ಟೆಯಲ್ಲಿ ವಿಮಾನಯಾನ ಸೇವೆ ಒದಗಿಸುವ ಎರಡನೆಯ ಅತಿದೊಡ್ಡ ಕಂಪನಿಯಾಗಲಿದೆ ಎಂದು ಟಾಟಾ ಸಮೂಹ ಪ್ರತ್ಯೇಕ ಹೇಳಿಕೆಯಲ್ಲಿ ತಿಳಿಸಿದೆ.

ಅಗತ್ಯ ಕಂಡುಬಂದರೆ ಟಾಟಾ ಸನ್ಸ್ ಮತ್ತು ಸಿಂಗಪುರ ಏರ್‌ಲೈನ್ಸ್ ಕಂಪನಿಗಳು ಏರ್‌ ಇಂಡಿಯಾ ಕಂಪನಿಗೆ ಇನ್ನಷ್ಟು ಬಂಡವಾಳ ಒದಗಿಸಲಿವೆ.

ಏರ್‌ ಇಂಡಿಯಾ ಕಂಪನಿಯನ್ನು ನಿಜವಾಗಿಯೂ ವಿಶ್ವದರ್ಜೆಯ ವಿಮಾನಯಾನ ಕಂಪನಿಯನ್ನಾಗಿಸುವ ಪಯಣದಲ್ಲಿ ಈ ವಿಲೀನವು ಮಹತ್ವದ ಮೈಲಿಗಲ್ಲು ಎಂದು ಟಾಟಾ ಸನ್ಸ್ ಅಧ್ಯಕ್ಷ ಎನ್. ಚಂದ್ರಶೇಖರನ್ ಹೇಳಿದ್ದಾರೆ.

ಏರ್ ಇಂಡಿಯಾ, ಏರ್‌ ಇಂಡಿಯಾ ಎಕ್ಸ್‌ಪ್ರೆಸ್, ಏರ್‌ಏಷ್ಯಾ ಇಂಡಿಯಾ ಮತ್ತು ವಿಸ್ತಾರಾ ಕಂಪನಿಗಳು ಟಾಟಾ ಸಮೂಹಕ್ಕೆ ಸೇರಿವೆ. ಅಕ್ಟೋಬರ್‌ವರೆಗಿನ ಮಾಹಿತಿ ಅನ್ವಯ ವಿಸ್ತಾರಾ ಕಂಪನಿಯು ದೇಶಿ ಮಾರುಕಟ್ಟೆಯಲ್ಲಿ ಶೇ 9.2ರಷ್ಟು ಪಾಲು ಹೊಂದಿದ್ದು, ದೇಶದ ವಿಮಾನಯಾನ ಕಂಪನಿಗಳ ಪೈಕಿ ಎರಡನೆಯ ಸ್ಥಾನದಲ್ಲಿ ಇದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು