ಮಂಗಳವಾರ, ಜೂನ್ 2, 2020
27 °C

‘ನ್ಯಾನೊ ಫ್ಯಾಕ್ಟರಿ’ಯಕೈಗಾರಿಕಾ ಜಾದು

ಜಯಸಿಂಹ ಆರ್. Updated:

ಅಕ್ಷರ ಗಾತ್ರ : | |

Deccan Herald

ಜಗತ್ತಿನ ಅತಿ ಅಗ್ಗದ ‘ನ್ಯಾನೊ’ಕಾರನ್ನು ತಯಾರಿಸಲೆಂದೇ ಟಾಟಾ ಮೋಟರ್ಸ್ ಪ್ರತ್ಯೇಕ ಕಾರು ತಯಾರಕಾ ಘಟಕವನ್ನು ಆರಂಭಿಸಿತ್ತು. ಪಶ್ಚಿಮ ಬಂಗಾಳದ ಸಿಂಗೂರ್‌ನಲ್ಲಿ ಆ ಘಟಕ ಆರಂಭವಾಗಬೇಕಿತ್ತಾದರೂ, ಬೇರೆ-ಬೇರೆ ಕಾರಣಗಳಿಂದಾಗಿ ಅದು ಗುಜರಾತ್‌ನ ಸಾನಂದ್‌ ಜಿಲ್ಲೆಯಲ್ಲಿ ತಲೆ ಎತ್ತಿತು. 2008ರಲ್ಲಿ ನಿರ್ಮಾಣ ಕಾಮಗಾರಿ ಆರಂಭವಾಗಿ, 2010ರಲ್ಲಿ ಕಾರ್ಯಾರಂಭ ಮಾಡಿದ ‘ನ್ಯಾನೊ ಫ್ಯಾಕ್ಟರಿ’ ಕಳೆದ ವಾರವಷ್ಟೇ 4,50,000ನೇ ಕಾರು ತಯಾರಿಸಿದ ಒಂದು ಹೊಸ ಮೈಲುಗಲ್ಲನ್ನು ಮುಟ್ಟಿದೆ. ಘಟಕ ಆರಂಭವಾಗಿ ಎಂಟು ವರ್ಷಗಳವರೆಗೂ ಅದರಲ್ಲೇನಿದೆ ಎಂಬುದರ ವಿವರವನ್ನು ಕಂಪನಿ ಬಹಿರಂಗಪಡಿಸಿರಲಿಲ್ಲ. ಇದೇ ಮೊದಲ ಬಾರಿ ನ್ಯಾನೊ ಫ್ಯಾಕ್ಟರಿ ಮಾಧ್ಯಮಗಳೆದುರು ತೆರೆದುಕೊಂಡಿದ್ದು. ಗುಜರಾತ್ ರಾಜಧಾನಿ ಅಹಮದಾಬಾದ್‌ನಿಂದ ಕೇವಲ 30 ನಿಮಿಷಗಳಷ್ಟು ದೂರದಲ್ಲಿರುವ ‘ನ್ಯಾನೊ ಫ್ಯಾಕ್ಟರಿ’ ಸಾನಂದ್‌ನಲ್ಲಿ ಕೈಗಾರಿಕಾ ಜಾದೂವನ್ನೇ ಮಾಡಿದೆ.

ಈ ಘಟಕವು ಕಂಪನಿ ಪಾಲಿಗೆ ಮತ್ತು ಸಾನಂದ್‌ನ ಜನರ ಪಾಲಿಗೂ ಸಿಹಿಯನ್ನೇ ನೀಡಿದೆ ಎಂದರೆ ತಪ್ಪಾಗಲಾರದು. ಏಕೆಂದರೆ ಟಾಟಾ ಮೋಟರ್ಸ್‌ನಲ್ಲಿ ತಯಾರಾಗುವ ಎಲ್ಲಾ ಪ್ಯಾಸೆಂಜರ್ ವಾಹನಗಳಲ್ಲಿ (ಕಾರು, ಎಸ್‌ಯುವಿ, ಎಂಯುವಿ, ಎಂಪಿವಿ) ಶೇ 60ರಷ್ಟು ಈ ಘಟಕದಲ್ಲೇ ತಯಾರಾಗುತ್ತವೆ. ಈವರೆಗೆ ಈ ಘಟಕದಲ್ಲಿ ಪ್ರತಿದಿನ 400 ಕಾರುಗಳು ತಯಾರಾಗುತ್ತಿದ್ದವು. ಆಗಸ್ಟ್ 7ರಿಂದ ಆ ಸಂಖ್ಯೆಯನ್ನು 500ಕ್ಕೆ ಏರಿಕೆ ಮಾಡಲಾಗಿದೆ. ಅಂದಹಾಗೆ ಈ ಘಟಕದಲ್ಲಿ ನ್ಯಾನೊ, ಟಿಯಾಗೊ ಮತ್ತು ಟಿಗಾರ್ ಕಾರುಗಳು ಮಾತ್ರ ತಯಾರಾಗುತ್ತವೆ. ಈಗ ನ್ಯಾನೊಗೆ ಬೇಡಿಕೆ ಕುಸಿದಿದೆಯಾದರೂ, ಟಿಯಾಗೊ ಮತ್ತು ಟಿಗಾರ್‌ಗಳು ಪ್ರೈವೇಟ್‌ ಕಾರ್ (ಸ್ವಂತ ಬಳಕೆ) ಮಾರುಕಟ್ಟೆಯಲ್ಲಿ ಟಾಟಾ ಮೋಟರ್ಸ್‌ ಮತ್ತೆ ತಲೆ ಎತ್ತುವಂತೆ ಮಾಡಿದ ಕಾರುಗಳು. ಅವುಗಳ ಬೇಡಿಕೆ ಏರುತ್ತಲೇ ಇರುವುದರಿಂದ ತಯಾರಿಕಾ ಘಟಕದ ಸಾಮರ್ಥ್ಯವನ್ನು ಹೆಚ್ಚಿಸಲೇಬೇಕಿದೆ. ಈ ಘಟಕ ಆರಂಭವಾದಾಗಿನಿಂದ ಅದು ತನ್ನ ಸಾಮರ್ಥ್ಯದ ಪೂರ್ಣ ಪ್ರಮಾಣದಷ್ಟು ಕೆಲಸ ಮಾಡುತ್ತಿರುವುದು ಇದೇ ಮೊದಲು. ಹೀಗಾಗಿ ಇದು ಟಾಟಾ ಮೋಟರ್ಸ್‌ಗೆ ಸಿಹಿಯ ವಿಚಾರವೇ ಹೌದು.

ಗುಜರಾತ್‌ನಲ್ಲಿ ಬೇರೆ ಸ್ವರೂಪದ ಕೈಗಾರಿಕೆಗಳು ಇದ್ದವಾದರೂ, ಆಟೊಮೊಬೈಲ್‌ ಕೈಗಾರಿಕೆ ಇರಲೇ ಇಲ್ಲ ಎನ್ನಬಹುದು. 2008ರಲ್ಲಿ ಇಲ್ಲಿ ಕಾರು ತಯಾರಕಾ ಘಟಕ ಆರಂಭಿಸಲು ಅಂದಿನ ಸರ್ಕಾರ ಟಾಟಾ ಮೋಟರ್ಸ್‌ಗೆ ಭೂಮಿ ನೀಡಿದಾಗ ಸಣ್ಣ ಪ್ರಮಾಣದ ಆಕ್ಷೇಪಗಳೂ ವ್ಯಕ್ತವಾಗಿದ್ದವು. ಕೃಷಿ ಮತ್ತು ಬಂಜರು ಭೂಮಿಯನ್ನು ನೀಡಲಾಗಿತ್ತದರೂ, ಅದು 1,100 ಎಕರೆಯಷ್ಟು ವಿಸ್ತಾರವಾಗಿತ್ತು. ಹೀಗಾಗಿಯೇ ಆಕ್ಷೇಪ ವ್ಯಕ್ತವಾಗಿದ್ದು. ಗುಜರಾತ್ ಸರ್ಕಾರವು ಅಷ್ಟು ಭೂಮಿ, ನಿರಂತರ ವಿದ್ಯುತ್ ಮತ್ತು ನೀರು ಸರಬರಾಜು ಹಾಗೂ ತೆರಿಗೆ ವಿನಾಯಿತಿ ನೀಡಿತ್ತು. ಆದರೆ, ಅದರ ಬದಲಿಗೆ ಘಟಕದ ಒಟ್ಟು ಕಾರ್ಮಿಕರಲ್ಲಿ 
ಶೇ 85ರಷ್ಟು ಉದ್ಯೋಗಗಳನ್ನು ಸ್ಥಳೀಯರಿಗೇ ನೀಡಬೇಕು ಎಂದು ಷರತ್ತು ಹಾಕಿತ್ತು. ಟಾಟಾ ಮೋಟರ್ಸ್‌ ಆ ಷರತ್ತನ್ನು ಒಪ್ಪಿಕೊಂಡಿತ್ತು.

‘ಆ ಷರತ್ತನ್ನು ಪಾಲಿಸುವುದು ನಮಗೆ ದೊಡ್ಡ ಸವಾಲಾಗಿತ್ತು. ಏಕೆಂದರೆ ಸಾನಂದ್‌ನಲ್ಲಿ ಆಟೊಮೊಬೈಲ್‌ ಕ್ಷೇತ್ರದಲ್ಲಿ ದುಡಿಯಲು ನೆರವಾಗುವ ಶಿಕ್ಷಣ ನೀಡುವ ಸಂಸ್ಥೆಗಳು ಇರಲಿಲ್ಲ. ಅಂತಹ ಶಿಕ್ಷಣ ಪಡೆದ ಯುವಕರೂ ಇಲ್ಲಿ ಇರಲಿಲ್ಲ. ಹೀಗಿದ್ದ ಮೇಲೆ ಶೇ 85ರಷ್ಟು ಉದ್ಯೋಗಗಳನ್ನು ಸ್ಥಳೀಯರಿಗೇ ನೀಡುವುದು ಹೇಗೆ. ಅದಕ್ಕೆ ಘಟಕ ಕಾರ್ಯಾರಂಭ ಮಾಡುವ ಮೊದಲೇ ತರಬೇತಿ ಕಾರ್ಯಕ್ರಮವನ್ನು ಆರಂಭಿಸಿದೆವು. ಘಟಕದಲ್ಲೇ ದೊಡ್ಡ ತರಬೇತಿ ಕೇಂದ್ರವನ್ನು ಸ್ಥಾಪಿಸಿದೆವು. 10+2 ಓದಿದ್ದ ಯುವಕರನ್ನು ಕರೆದಕೊಂಡು ಅವರಿಗೆ ಉಚಿತವಾಗಿ ತರಬೇತಿ ನೀಡಿದೆವು. ಅವರೆಲ್ಲಾ ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿದ ನಂತರವೇ ಘಟಕದಲ್ಲಿ ಕಾರು ತಯಾರಿಕೆಯನ್ನು ಆರಂಭಿಸಿದ್ದು’ ಎನ್ನುತ್ತಾರೆ ಟಾಟಾ ಮೋಟರ್ಸ್‌ನ ಪ್ರಯಾಣಿಕರ ವಾಹನಗಳ ವಿಭಾಗದ ಅಧ್ಯಕ್ಷ ಮಯಾಂಕ್ ಪರೀಕ್.

ಈಗ ಸಾನಂದ್ ಘಟಕದಲ್ಲಿ ದುಡಿಯುತ್ತಿರುವ  ಬ್ಲೂ ಕಾಲರ್ ಕಾರ್ಮಿಕರಲ್ಲಿ ಶೇ 100ರಷ್ಟು ಜನರೂ ಸ್ಥಳೀಯರೇ ಆಗಿದ್ದಾರೆ. ಟಾಟಾ ಮೋಟರ್ಸ್‌ ತಾನೇ ಪ್ರತಿಯೊಬ್ಬರಿಗೂ ತರಬೇತಿ ನೀಡಿ, ಕೆಲಸ ನೀಡಿರುವುದರಿಂದ ಈ ಕಾರ್ಮಿಕರ ಸರಾಸರಿ ವಯಸ್ಸು 26. ಇನ್ನು ಸರ್ಕಾರ ನೀಡಿದ್ದ 1,100 ಎಕರೆ ಭೂಮಿಯಲ್ಲಿ ಕಂಪನಿಯು 359 ಎಕರೆಯಲ್ಲಿ ‘ವೆಂಡರ್ ಪಾರ್ಕ್’ ನಿರ್ಮಿಸಿದೆ. ಈ ಘಟಕದಲ್ಲಿ ತಯಾರಾಗುವ ಕಾರುಗಳಿಗೆ ಅಗತ್ಯ ಬಿಡಿಭಾಗಗಳನ್ನು ಪೂರೈಸುವ ಸುಮಾರು 30 ಸಣ್ಣ ಕಾರ್ಖಾನೆಗಳು ಈ ವೆಂಡರ್ ಪಾರ್ಕ್‌ನಲ್ಲಿವೆ. ಆ ಕಾರ್ಖಾನೆಗಳಿಗೆ ಅಗತ್ಯವಿರುವ ಭೂಮಿ, ಷೆಡ್‌ ಜತೆಗೆ ಆರ್ಥಿಕ ನೆರವನ್ನೂ ಕಂಪನಿ ಒದಗಿಸಿದೆ. ಹೀಗೆ ಈ ಘಟಕವು ಇಲ್ಲಿ ಪ್ರತ್ಯಕ್ಷ, ಪರೋಕ್ಷವಾಗಿ ಸಾವಿರಾರು ಉದ್ಯೋಗಗಳನ್ನು ಸೃಷ್ಟಿಸಿದೆ.

ಕಾರು ಜೋಡಣೆಯ ಕಲಾ ಕೌಶಲ
ಈ ಘಟಕದಲ್ಲಿ ಇರುವುದು ಒಂದೇ ಅಸೆಂಬ್ಲಿ ಲೇನ್ (ಕಾರು ಜೋಡಣಾ ಲೇನ್). ಆದರೆ, ಒಂದೇ ಲೇನ್‌ನಲ್ಲಿ ನ್ಯಾನೊ, ಟಿಗಾರ್ ಮತ್ತು ಟಿಯಾಗೊವನ್ನು ತಯಾರಿಸಬಹುದು. ಸಾಂಪ್ರದಾಯಿಕ ಅಸೆಂಬ್ಲಿ ಲೇನ್‌ಗಳಲ್ಲಿ ಪ್ರತಿ ಕಾರ್‌ ಅನ್ನು ತಯಾರಿಸಲೂ ಲೇನ್‌ನಲ್ಲಿ ಸ್ವಲ್ಪ ಮಾರ್ಪಾಡು ಮಾಡಬೇಕಾಗುತ್ತದೆ. ಆದರೆ ಇಲ್ಲಿ ಒಂದೇ ಲೇನ್‌ಲ್ಲಿ ಮೂರೂ ಕಾರ್‌ಗಳನ್ನು ಒಮ್ಮೆಲೇ ತಯಾರಿಸಬಹುದು. ಅಂದರೆ ಮೊದಲು ಟಿಯಾಗೊವನ್ನು ತಯಾರಿಸಿದರೆ, ಎರಡನೆಯ ಕಾರು ನ್ಯಾನೊ ಆಗಿರಬಹುದು. ಮೂರನೆಯದ್ದು ಟಿಗಾರ್ ಆಗಿರಬಹುದು. ಇದೇ ಈ ಘಟಕದ ವೈಶಿಷ್ಟ್ಯ.

ಈ ಘಟಕದಲ್ಲಿರುವ ಪೇಂಟ್ ಶಾಪ್ ಸಹ ಆಧುನಿಕ ತಂತ್ರಜ್ಞಾನದ್ದು. ಸಾಂಪ್ರದಾಯಿಕ ಪೇಂಟ್ ಶಾಪ್‌ನಲ್ಲಿ ಕಾರಿನ ದೇಹ ಪೇಂಟ್‌ ಟಬ್‌ನೊಳಗೆ ಹಾದು ಹೋಗುತ್ತದೆ. ಈ ಪೇಂಟ್ ಟಬ್‌ಗಳು ತೀರಾ ಉದ್ದವಾಗಿರುತ್ತವೆ. ಇಲ್ಲಿರುವ ಪೇಂಟ್ ಟಬ್‌ನ ಆಳ ಹೆಚ್ಚು, ಉದ್ದ ಕಡಿಮೆ. ಇದರೊಳಗೆ ಕಾರುಗಳು ಮೂರು-ಮೂರು ಬಾರಿ ಪಲ್ಟಿ ಹೊಡೆದು ಹೋಗುತ್ತವೆ. ಈ ಟಬ್‌ನ ಬೆಲೆ ಹೆಚ್ಚು, ಆದರೆ ಕಾರ್ಯನಿರ್ವಹಣಾ ವೆಚ್ಚ ಕಡಿಮೆ. ಹೀಗೆ ಇಂತಹ ಹತ್ತುಹಲವು ಆಧುನಿಕ ಸವಲತ್ತುಗಳನ್ನು ಈ ಘಟಕ ಹೊಂದಿದೆ.

ಗ್ರೀನ್ ಪ್ಲಾಂಟ್‌
ಘಟಕಕ್ಕೆ 2018ರಲ್ಲಿ ಗ್ರೀನ್‌ಕೊ ಪ್ಲಾಟಿನಂ ಸರ್ಟಿಫಿಕೇಷನ್ ದೊರೆತಿದೆ. ತ್ಯಾಜ್ಯ ಮರುಬಳಕೆ ಮತ್ತು ನವೀಕರಿಸಬಹುದಾದ ಇಂಧನಗಳ ಬಳಕೆಯ ಕಾರಣ ಈ ಘಟಕಕ್ಕೆ ಈ ಮಾನ್ಯತೆ ದೊರೆತಿದೆ.

ಶೇ 30-35 - ಘಟಕಕ್ಕೆ ಅಗತ್ಯವಿರುವ ವಿದ್ಯುತ್‌ನಲ್ಲಿ ನವೀಕರಿಸಬಹುದಾದ ಮೂಲಗಳಿಂದ ಘಟಕದಲ್ಲೇ ಉತ್ಪಾದಿಸುತ್ತಿರುವ ವಿದ್ಯುತ್‌ನ ಪ್ರಮಾಣ

9 ಮೆಗಾವಾಟ್ – ವಿದ್ಯುತ್ ಉತ್ಪಾದನೆ ಸಾಮರ್ಥ್ಯದ ಗಾಳಿಯಂತ್ರಗಳಿವೆ

2 ಮೆಗಾವಾಟ್‌ – ವಿದ್ಯುತ್ ಉತ್ಪಾದನೆ ಸಾಮರ್ಥ್ಯದ ಸೌರಫಲಕಗಳಿವೆ

ಶೇ 100 ತ್ಯಾಜ್ಯ ಮರುಬಳಕೆಯ ಪ್ರಮಾಣ – ಘಟಕದಲ್ಲಿ ಬಿಡುಗಡೆಯಾಗುವ ಕೊಳಚೆ ನೀರನ್ನು ಪೂರ್ಣ ಪ್ರಮಾಣದಲ್ಲಿ ಸಂಸ್ಕರಿಸಲಾಗುತ್ತದೆ. ಆ ನೀರನ್ನು ನೆಡುತೋಪಿಗೆ ಬಳಸಲಾಗುತ್ತದೆ

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.