ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏರ್‌ ಇಂಡಿಯಾ ಸಿಇಒ ಆಗಿ ಟರ್ಕಿಯ ಇಲ್ಕ್ಯಾಶ್‌ ಈಸೈ ನೇಮಕ: ಟಾಟಾ ಸನ್ಸ್‌ ಪ್ರಕಟಣೆ

Last Updated 14 ಫೆಬ್ರುವರಿ 2022, 12:11 IST
ಅಕ್ಷರ ಗಾತ್ರ

ನವದೆಹಲಿ: ಏರ್‌ ಇಂಡಿಯಾದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಟರ್ಕಿ ಮೂಲದ ಇಲ್ಕ್ಯಾಶ್‌ ಈಸೈ (Ilker Ayci) ಅವರನ್ನು ನೇಮಕ ಮಾಡಿರುವುದಾಗಿ ಟಾಟಾ ಸನ್ಸ್‌ ಸೋಮವಾರ ಪ್ರಕಟಿಸಿದೆ.

ಇತ್ತೀಚಿನ ವರೆಗೂ ಟರ್ಕಿಷ್‌ ಏರ್‌ಲೈನ್ಸ್‌ನ ಅಧ್ಯಕ್ಷರಾಗಿದ್ದ ಇಲ್ಕ್ಯಾಶ್‌ ಈಸೈ (51), ಏಪ್ರಿಲ್‌ 1 ಅಥವಾ ಅದಕ್ಕೂ ಮುಂಚೆಯೇ 'ಏರ್ ಇಂಡಿಯಾದ' ಹೊಣೆಗಾರಿಕೆ ವಹಿಸಲಿದ್ದಾರೆ. ಟಾಟಾ ಸನ್ಸ್‌ ಅಡಿಯಲ್ಲಿ ಏರ್‌ ಇಂಡಿಯಾಗೆ ಇಲ್ಕ್ಯಾಶ್‌ ಮೊದಲ ಸಿಇಒ ಮತ್ತು ಎಂಡಿ ಆಗಲಿದ್ದಾರೆ.

ಸೋಮವಾರ ನಡೆದ ಸಭೆಯಲ್ಲಿ ಏರ್‌ ಇಂಡಿಯಾ ಮಂಡಳಿಯು ಈ ನಿರ್ಧಾರ ಕೈಗೊಂಡಿದೆ. ಟಾಟಾ ಸನ್ಸ್‌ ಅಧ್ಯಕ್ಷ ಎನ್‌.ಚಂದ್ರಶೇಖರನ್‌ ವಿಶೇಷ ಆಹ್ವಾನದ ಮೇರೆಗೆ ಸಭೆಯಲ್ಲಿ ಭಾಗಿಯಾಗಿದ್ದರು.

'ಇಲ್ಕ್ಯಾಶ್‌ ಅವರು ತಮ್ಮ ಅಧಿಕಾರದ ಅವಧಿಯಲ್ಲಿ ಟರ್ಕಿಷ್‌ ಏರ್‌ಲೈನ್ಸ್‌ ಅನ್ನು ಈಗಿರುವ ಯಶಸ್ಸಿನ ಮಟ್ಟಗೆ ತೆಗೆದುಕೊಂಡು ಹೋಗಿದ್ದಾರೆ. ಅವರನ್ನು ಟಾಟಾ ಗ್ರೂಪ್‌ಗೆ ಸ್ವಾಗತಿಸಲು ಸಂತೋಷವಾಗುತ್ತಿದೆ. ಅವರು ಏರ್‌ ಇಂಡಿಯಾ ಸಂಸ್ಥೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ನಿರೀಕ್ಷೆ ಇದೆ.. ' ಎಂದು ಚಂದ್ರಶೇಖರನ್‌ ಹೇಳಿದ್ದಾರೆ.

'ಏರ್‌ ಇಂಡಿಯಾ ಅನ್ನು ಜಗತ್ತಿನ ಅತ್ಯುತ್ತಮ ವಿಮಾನಯಾನ ಸಂಸ್ಥೆಯಾಗಿ ಮಾಡಲು ಅದರ ಹಿನ್ನೆಲೆಯನ್ನು ಬಳಸಿಕೊಳ್ಳುತ್ತೇವೆ. ಭಾರತದ ಆತಿಥ್ಯವನ್ನು ಬಿಂಬಿಸುವ ಉತ್ಕೃಷ್ಟ ಹಾರಾಟದ ಅನುಭವವನ್ನು ನೀಡುತ್ತೇವೆ...' ಎಂದು ಇಲ್ಕ್ಯಾಶ್‌ ಭರವಸೆ ವ್ಯಕ್ತಪಡಿಸಿದ್ದಾರೆ.

ಇಸ್ತಾನ್‌ಬುಲ್‌ನಲ್ಲಿ ಜನಿಸಿದ ಇಲ್ಕ್ಯಾಶ್‌ ಈಸೈ ಅವರು ಬಿಲ್ಕೆಂಟ್‌ ಯೂನಿವರ್ಸಿಟಿಯ ರಾಜ್ಯಶಾಸ್ತ್ರ ಮತ್ತು ಸಾರ್ವಜನಿಕ ಆಡಳಿತ ವಿಭಾಗದಲ್ಲಿ ಅಧ್ಯಯನ ನಡೆಸಿದ್ದಾರೆ. 1995ರಲ್ಲಿ ಇಂಗ್ಲೆಂಡ್‌ನ ಲೀಡ್ಸ್‌ ಯೂನಿವರ್ಸಿಟಿಯಲ್ಲಿ ರಾಜ್ಯಶಾಸ್ತ್ರದಲ್ಲಿ ಸಂಶೋಧನೆ ಚಟುವಟಿಕೆಗಳು ಹಾಗೂ 1997ರಲ್ಲಿ ಇಸ್ತಾನ್‌ಬುಲ್‌ನ ಮರ್ಮರಾ ಯೂನಿವರ್ಸಿಟಿಯಲ್ಲಿ ಅಂತರರಾಷ್ಟ್ರೀಯ ಸಂಬಂಧಗಳ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ.

ಭಾರತ ಸರ್ಕಾರವು ಜನವರಿ 27ರಂದು ಏರ್‌ ಇಂಡಿಯಾ ಮಾಲಿಕತ್ವವನ್ನು ಟಾಟಾ ಸನ್ಸ್‌ಗೆ ಹಸ್ತಾಂತರಿಸಿತು. ಏರ್ ಇಂಡಿಯಾ ಉಳಿಸಿಕೊಂಡಿದ್ದ ₹15,300 ಕೋಟಿ ಸಾಲದ ಮೊತ್ತ ಮತ್ತು ₹2,700 ಕೋಟಿ ನಗದು ಸೇರಿ ಒಟ್ಟು ₹18,000 ಕೋಟಿಗೆ ಟಾಟಾ ಸನ್ಸ್‌ ಬಿಡ್‌ ಸಲ್ಲಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT