ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬನ್ಸಲ್‌ರಿಂದ ತೆರಿಗೆ ವಿವರ ಕೇಳಿದ ಐ.ಟಿ ಇಲಾಖೆ

Last Updated 22 ನವೆಂಬರ್ 2018, 20:00 IST
ಅಕ್ಷರ ಗಾತ್ರ

ನವದೆಹಲಿ: ಫ್ಲಿಪ್‌ಕಾರ್ಟ್‌ನಲ್ಲಿನ ತಮ್ಮ ಪಾಲು ಬಂಡವಾಳವನ್ನು ಅಮೆರಿಕದ ರಿಟೇಲ್‌ ದೈತ್ಯಸಂಸ್ಥೆ ವಾಲ್‌ಮಾರ್ಟ್‌ಗೆ ಮಾರಾಟ ಮಾಡಿ ಗಳಿಸಿದ ವರಮಾನದ ವಿವರ ನೀಡಬೇಕು ಎಂದು ಆದಾಯ ತೆರಿಗೆ ಇಲಾಖೆಯು ಸಂಸ್ಥೆಯ ಸಹಸ್ಥಾಪಕರಾದ ಸಚಿನ್‌ ಬನ್ಸಲ್‌ ಮತ್ತು ಬಿನ್ನಿ ಬನ್ಸಲ್‌ ಅವರಿಗೆ ಸೂಚಿಸಿದೆ.

ಭಾರತದ ನಿವಾಸಿಗಳಾಗಿರುವ ಸಚಿನ್‌ ಮತ್ತು ಬಿನ್ನಿ ಅವರು ಆದಾಯ ತೆರಿಗೆ ಕಾಯ್ದೆ ಪ್ರಕಾರ, ತಮ್ಮ ಪಾಲು ಮಾರಾಟದಿಂದ ಗಳಿಸಿದ ಲಾಭದ ಶೇ 20ರಷ್ಟನ್ನು ಬಂಡವಾಳ ಗಳಿಕೆ ತೆರಿಗೆ ರೂಪದಲ್ಲಿ ಪಾವತಿಸಬೇಕಾಗಿದೆ. ಜತೆಗೆ ಈ ವರಮಾನಕ್ಕೆ ಸಂಬಂಧಿಸಿದಂತೆ ಶೇ 75ರಷ್ಟು ಮುಂಗಡ ತೆರಿಗೆಯನ್ನು ಡಿಸೆಂಬರ್‌ 15ರ ಒಳಗೆ ಮತ್ತು ಉಳಿದ ಮೊತ್ತವನ್ನು 2019ರ ಮಾರ್ಚ್‌ 15ರ ಒಳಗೆ ಪಾವತಿಸಬೇಕಾಗಿದೆ.

ಈ ವರ್ಷದ ಆಗಸ್ಟ್‌ನಲ್ಲಿ ವಾಲ್‌ಮಾರ್ಟ್‌ ₹ 1,15,200 ಕೋಟಿ ಪಾವತಿಸಿ ಫ್ಲಿಪ್‌ಕಾರ್ಟ್‌ನಲ್ಲಿನ ಶೇ 77ರಷ್ಟು ಪಾಲು ಬಂಡವಾಳ ಖರೀದಿಸಿತ್ತು. ಸಚಿನ್‌ ಅವರು ತಮ್ಮೆಲ್ಲ ಪಾಲನ್ನು (5 ರಿಂದ 6%) ಮಾರಾಟ ಮಾಡಿದ್ದರು. ಇತ್ತೀಚೆಗೆ ಫ್ಲಿಪ್‌ಕಾರ್ಟ್‌ ಗ್ರೂಪ್‌ನ ಸಿಇಒ ಹುದ್ದೆ ತೊರೆದಿರುವ ಬಿನ್ನಿ, ಅತಿದೊಡ್ಡ ಪಾಲುದಾರನಾಗಿ ನಿರ್ದೇಶಕ ಮಂಡಳಿಯ ಸದಸ್ಯನಾಗಿ ಮುಂದುವರೆಯುವುದಾಗಿ ತಿಳಿಸಿದ್ದಾರೆ.

ಐ.ಟಿ ಇಲಾಖೆಯು ವಿವರ ಬಯಸಿದ್ದಕ್ಕೆ ಪ್ರತಿಕ್ರಿಯೆ ಪಡೆಯುವ ಯತ್ನಕ್ಕೆ ಅವರಿಬ್ಬರೂ ಸ್ಪಂದಿಸಿಲ್ಲ.

ಈ ಇಬ್ಬರೂ ಪ್ರವರ್ತಕರು ಮುಂಗಡ ತೆರಿಗೆ ಸಲ್ಲಿಸದಿದ್ದರೆ ಆ ಮೊತ್ತಕ್ಕೆ ಪ್ರತಿ ತಿಂಗಳೂ ಶೇ 1ರಂತೆ ಬಡ್ಡಿ ಪಾವತಿಸಬೇಕಾಗುತ್ತದೆ.

ಹೋಟೆಲ್‌ ಸೇವಾ ಶುಲ್ಕ: ತೆರಿಗೆ
ಹೋಟೆಲ್‌ ಮತ್ತು ರೆಸ್ಟೋರೆಂಟ್ಸ್‌ಗಳು ಸಂಗ್ರಹಿಸುವ ಸೇವಾ ತೆರಿಗೆಯನ್ನು ಸಿಬ್ಬಂದಿ ಮತ್ತು ಕೆಲಸಗಾರರಿಗೆ ವರ್ಗಾಯಿಸಬೇಕು. ಇಲ್ಲವಾದರೆ ಆ ಮೊತ್ತಕ್ಕೆ ವರಮಾನ ತೆರಿಗೆ ಪಾವತಿಸಬೇಕಾಗುತ್ತದೆ ಎಂದು ಸಿಬಿಡಿಟಿ ತಿಳಿಸಿದೆ.

ಕೆಲವು ಹೋಟೆಲ್‌ ಮತ್ತು ರೆಸ್ಟೋರೆಂಟ್ಸ್‌ಗಳು ಗ್ರಾಹಕರಿಂದ ಕಡ್ಡಾಯವಾಗಿ ಸೇವಾ ತೆರಿಗೆ ಸಂಗ್ರಹಿಸುತ್ತಿವೆ. ಆದರೆ, ಅದನ್ನು ಕೆಲಸಗಾರರಿಗೆ ವರ್ಗಾಯಿಸುತ್ತಿಲ್ಲ. ಹೀಗಾಗಿ ಈ ಬಗ್ಗೆ ಪರಿಶೀಲನೆ ನಡೆಸುವಂತೆ ಗ್ರಾಹಕ ವ್ಯವಹಾರಗಳ ಸಚಿವಾಲಯವು ಸಿಬಿಡಿಟಿಗೆ ತಿಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT