ಮಂಗಳವಾರ, ನವೆಂಬರ್ 19, 2019
22 °C

ನಿರೀಕ್ಷೆಗಿಂತ ಕಡಿಮೆ ತೆರಿಗೆ ಸಂಗ್ರಹ

Published:
Updated:

ಮುಂಬೈ: ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ 17.5ರಷ್ಟು ಗರಿಷ್ಠ ತೆರಿಗೆ ಸಂಗ್ರಹಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ಆದರೆ ಇದುವರೆಗೆ ಸಂಗ್ರಹವಾಗಿರುವ ತೆರಿಗೆಯಲ್ಲಿ ಶೇ 4ರಷ್ಟು ಮಾತ್ರವೇ ಹೆಚ್ಚಳವಾಗಿದೆ. 

ಸೆಪ್ಟೆಂಬರ್‌ 17ರವರೆಗೆ ನೇರ ತೆರಿಗೆ ಮೂಲಕ ₹ 5.50 ಲಕ್ಷ ಕೋಟಿ ಸಂಗ್ರಹವಾಗಿದೆ. ಕಳೆದ ವರ್ಷ ₹5.25 ಲಕ್ಷ ಕೊಟಿ ಸಂಗ್ರಹವಾಗಿತ್ತು.

ಗ್ರಾಹಕರ ಖರೀದಿ ಸಾಮರ್ಥ್ಯ ಕಡಿಮೆಯಾಗುತ್ತಿರುವುದು ಹಾಗೂ ದೇಶದ ಒಟ್ಟಾರೆ ಆರ್ಥಿಕ ಬೆಳವಣಿಗೆ ಮಂದಗತಿಯಲ್ಲಿ ಇರುವುದರಿಂದಾಗಿ ತೆರಿಗೆ ಸಂಗ್ರಹದಲ್ಲಿಯೂ ನಿರೀಕ್ಷಿತ ಮಟ್ಟದ ಪ್ರಗತಿ ಸಾಧ್ಯವಾಗಿಲ್ಲ ಎಂದು ತೆರಿಗೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಏಪ್ರಿಲ್‌–ಸೆಪ್ಟೆಂಬರ್‌ ಅವಧಿಗೆ ಮುಂಗಡ ತೆರಿಗೆ ಸಂಗ್ರಹ ₹ 2.05 ಲಕ್ಷ ಕೋಟಿಯಿಂದ ₹ 2.20 ಲಕ್ಷ ಕೋಟಿಗೆ ಏರಿಕೆಯಾಗಿದೆ.  ಕಾರ್ಪೊರೇಟ್‌ ತೆರಿಗೆಯ ಮುಂಗಡ ಪಾವತಿ ಶೇ 3.5ರಷ್ಟು ಏರಿಕೆಯಾಗಿದ್ದರೆ, ವೈಯಕ್ತಿಕ ತೆರಿಗೆಯ ಮುಂಗಡ ಪಾವತಿ ಶೇ 7.5ರಷ್ಟು ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.

2018–19ನೇ ಹಣಕಾಸು ವರ್ಷದಲ್ಲಿ ನೇರ ತೆರಿಗೆಯಿಂದ ₹ 12 ಲಕ್ಷ ಕೋಟಿ ಸಂಗ್ರಹಿಸುವ ಗುರಿ ಇಟ್ಟುಕೊಳ್ಳಲಾಗಿತ್ತು. ಆದರೆ ₹ 50 ಸಾವಿರ ಕೋಟಿಗಳಷ್ಟು ಕಡಿಮೆ ಸಂಗ್ರಹವಾಗಿದೆ.

ಪ್ರತಿಕ್ರಿಯಿಸಿ (+)