ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೃತ್ತಿಪರತೆ ಹೊಂದಿ ಅಥವಾ ಗಂಟುಮೂಟೆ ಕಟ್ಟಿ: ಬಿಎಸ್‌ಎನ್‌ಎಲ್‌ ನೌಕರರಿಗೆ ಎಚ್ಚರಿಕೆ

Last Updated 6 ಆಗಸ್ಟ್ 2022, 13:34 IST
ಅಕ್ಷರ ಗಾತ್ರ

ನವದೆಹಲಿ: ಭಾರತ್ ಸಂಚಾರ್ ನಿಗಮ್ ಲಿಮಿಟೆಡ್‌ (ಬಿಎಸ್‌ಎನ್‌ಎಲ್‌) ಉದ್ಯೋಗಿಗಳಿಂದ ಸರ್ಕಾರವು ಉನ್ನತ ಮಟ್ಟದ ವೃತ್ತಿಪರತೆ ಬಯಸುತ್ತದೆ ಎಂದು ಕೇಂದ್ರ ದೂರಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ಏನಾದರೂ ನಡೆಯುತ್ತದೆ ಎಂಬ ‘ಸರ್ಕಾರಿ’ ಧೋರಣೆಯನ್ನು ನೌಕರರು ಬಿಡಬೇಕು. ಹೊಣೆಗಾರಿಕೆಯಿಂದ ನಡೆದುಕೊಳ್ಳಬೇಕು. ಇಲ್ಲದಿದ್ದರೆ, ಗಂಟುಮೂಟೆ ಕಟ್ಟಲು ಸಿದ್ಧರಾಗಿ ಎಂದು ವೈಷ್ಣವ್‌ ಎಚ್ಚರಿಕೆ ನೀಡಿದ್ದಾರೆ.

ಬಿಎಸ್‌ಎನ್‌ಎಲ್‌ ಪುನಶ್ಚೇತನಕ್ಕಾಗಿ ₹1.64 ಲಕ್ಷ ಕೋಟಿ ಮೊತ್ತದ ಪ್ಯಾಕೇಜ್‌ಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಹಿನ್ನೆಲೆಯಲ್ಲಿ ಅಶ್ವಿನಿ ವೈಷ್ಣವ್ ಅವರು ನೌಕರರಿಗೆ ಕಟ್ಟುನಿಟ್ಟಿನ ಸಂದೇಶ ರವಾನಿಸಿದ್ದಾರೆ.

‘ನಿರೀಕ್ಷೆಗೆ ತಕ್ಕಂತೆ ಕಾರ್ಯನಿರ್ವಹಿಸದವರಿಗೆ ಕಡ್ಡಾಯವಾಗಿ ನಿವೃತ್ತಿ ಹೊಂದಲು ಆದೇಶಿಸಲಾಗುವುದು. ಇಲ್ಲದಿದ್ದರೆ, ಗಂಟುಮೂಟೆ ಸಮೇತ ಮನೆಗೆ ಕಳುಹಿಸಲಾಗುವುದು’ ಎಂದು ಹೇಳಿದ್ದಾರೆ.

‘ಕೆಲಸ ಮಾಡಲು ಬಯಸದ ನೌಕರರು ವಿಆರ್‌ಎಸ್ ತೆಗೆದುಕೊಂಡು ಮನೆಗೆ ಹೋಗಲು ಸ್ವತಂತ್ರರು. ಅವರು ವಿಆರ್‌ಎಸ್‌ ತೆಗೆದುಕೊಳ್ಳುವಲ್ಲಿ ಪ್ರತಿರೋಧ ತೋರಿಸಿದರೆ, ನಾವು 56ಜೆ(ಅಕಾಲಿಕ ನಿವೃತ್ತಿಗೆ ಬಳಸುವ ನಿಯಮ) ಅನ್ನು ಬಳಸುತ್ತೇವೆ. ಆದ್ದರಿಂದ, ನೀವು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಬೇಕು. ಇಲ್ಲವೇ ಗಂಟುಮೂಟೆ ಕಟ್ಟಿಕೊಂಡು ಮನೆಗೆ ಹೋಗಲು ಸಿದ್ಧರಾಗಿರಿ. ನನ್ನ ಹೇಳಿಕೆ ಸಂಪೂರ್ಣವಾಗಿ ಸ್ಪಷ್ಟವಾಗಿದೆ. ಈ ಬಗ್ಗೆ ನಿಮ್ಮ ಮನಸ್ಸಿನಲ್ಲಿ ಯಾವುದೇ ಅನುಮಾನ ಬೇಡ’ ಎಂದು ವೈಷ್ಣವ್ ತಿಳಿಸಿದ್ದಾರೆ.

ಬಿಎಸ್‌ಎನ್‌ಎಲ್‌ನ ಭಾಗವಾಗಿರುವ ಮಹಾನಗರ ಟೆಲಿಫೋನ್ ನಿಗಮ್ ಲಿಮಿಟೆಡ್‌ಗೆ(ಎಂಟಿಎನ್‌ಎಲ್‌) ಭವಿಷ್ಯವಿಲ್ಲ ಎಂದೂ ವೈಷ್ಣವ್‌ ತಿಳಿಸಿದ್ದಾರೆ.

‘ಎಂಟಿಎನ್‌ಎಲ್‌ಗೆ ಭವಿಷ್ಯವಿಲ್ಲ. ಇದರಲ್ಲಿ ನಾವು ಹೆಚ್ಚಿನದನ್ನು ಮಾಡಲು ಸಾಧ್ಯವಿಲ್ಲ. ಎಂಟಿಎನ್‌ಎಲ್‌ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ನಮಗೆಲ್ಲರಿಗೂ ಅರಿವಿದೆ. ಅದಕ್ಕಾಗಿ ನಾವು ವಿಭಿನ್ನ ಯೋಜನೆ ರೂಪಿಸಲು ಯೋಚಿಸುತ್ತಿದ್ದೇವೆ. ಮುಂದಿನ ಕ್ರಮಗಳ ಕುರಿತು ನಿರ್ಧರಿಸುತ್ತೇವೆ’ ಎಂದು ಹೇಳಿದ್ದಾರೆ.

ಬಿಎಸ್‌ಎನ್‌ಎಲ್‌ ಪುನಶ್ಚೇತನಕ್ಕಾಗಿ ₹ 1.64 ಲಕ್ಷ ಕೋಟಿ ಮೊತ್ತದ ಪ್ಯಾಕೇಜ್‌ಗೆ ಕೇಂದ್ರ ಸಚಿವ ಸಂಪುಟ ಬುಧವಾರ ಒಪ್ಪಿಗೆ ನೀಡಿದೆ.

ಕೇಂದ್ರವು ಸಮ್ಮತಿ ನೀಡಿರುವ ಕ್ರಮಗಳು ಕಂಪನಿಯ ಸೇವೆಗಳನ್ನು ಉತ್ತಮಪಡಿಸಲು, ಹೆಚ್ಚಿನ ತರಂಗಾಂತರ ಹಂಚಿಕೆ ಮಾಡಲು, ಕಂಪನಿಯ ಹಣಕಾಸಿನ ಹೊರೆಯನ್ನು ತಗ್ಗಿಸಲು ಹಾಗೂ ಕಂಪನಿಯ ಫೈಬರ್ ಜಾಲದ ಬಲವರ್ಧನೆಗೆ ಗಮನ ನೀಡುತ್ತದೆ.

ಬಿಎಸ್‌ಎನ್‌ಎಲ್‌ಗೆ ನಗದು ರೂಪದಲ್ಲಿ ₹ 43,964 ಕೋಟಿ ನೀಡಲಾಗುತ್ತದೆ. ನಾಲ್ಕು ವರ್ಷಗಳ ಅವಧಿಯಲ್ಲಿ ₹ 1.20 ಲಕ್ಷ ಕೋಟಿಯನ್ನು ಇತರ ನೆರವುಗಳ ರೂಪದಲ್ಲಿ ನೀಡಲಾಗುತ್ತದೆ ಎಂದು ವೈಷ್ಣವ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT