ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏರುತ್ತಲೇ ಇದೆ ಚಿನ್ನ ದರ: ಖರೀದಿಗೆ ಇದು ಸಕಾಲ

Last Updated 4 ಡಿಸೆಂಬರ್ 2019, 4:34 IST
ಅಕ್ಷರ ಗಾತ್ರ

ಹಣಕಾಸು ಮಾರುಕಟ್ಟೆ ತಜ್ಞ ಮೈಕಲ್‌ ಬೆಲ್‌ಕಿನ್‌ 2,000ರ ದಶಕದ ಆರಂಭದಲ್ಲಿ ಚಿನ್ನದ ಕುರಿತು ಒಂದು ಮಾತು ಹೇಳಿದ್ದರು. ‘ಯಾವಾಗ ಕೊಳ್ಳುವವರ ಸಂಖ್ಯೆ ಕಡಿಮೆ ಆಗುತ್ತದೆಯೋ, ಮಾರುಕಟ್ಟೆ ಪಾತಾಳಕ್ಕೆ ಇಳಿಯುತ್ತದೆ. ಆದರೆ, ಚಿನ್ನದ ಬೆಲೆ ಮಾತ್ರ ರಾಕೆಟ್‌ ವೇಗದಲ್ಲಿ ಗಗನಕ್ಕೇರುತ್ತದೆ’ ಎಂದು.

ಅಮೆರಿಕ ಆರ್ಥಿಕತೆಗೆ ಬೆನ್ನುಲುಬಾಗಿದ್ದ ‘ತಂತ್ರಜ್ಞಾನದ ಗುಳ್ಳೆ’ ಒಂದಲ್ಲಾ ಒಂದು ದಿನ ಒಡೆಯುತ್ತದೆ ಎಂದೂ ಅವರು ಹೇಳಿದ್ದರು. ಅದರಂತೆಯೇ 2008-09ರಲ್ಲಿ ಅಮೆರಿಕದ ಆರ್ಥಿಕತೆ ತೀವ್ರ ಹಿಂಜರಿತಕ್ಕೆ ಒಳಗಾಯಿತು. ಆ ದೇಶದ ಆರ್ಥಿಕ ಕುಸಿತ ಮತ್ತು ವೇಗದ ಅಭಿವೃದ್ಧಿಗಳೆರಡರಲ್ಲೂ ಮೌಲ್ಯವನ್ನು ಹಾಗೆಯೇ ಉಳಿಸಿಕೊಂಡದ್ದು ಚಿನ್ನ ಮಾತ್ರ. ಈಗಲೂ ಅಮೆರಿಕ– ಚೀನಾ ವ್ಯಾಪಾರ ಸಮರ, ಅಮೆರಿಕ ತೆರಿಗೆ ಕಡಿತ, ತೈಲ ಬೆಲೆ ಏರಿಕೆ ಮತ್ತು ಜಾಗತಿಕ ರಾಜಕೀಯ ಪಲ್ಲಟಗಳಾಗುತ್ತಲೇ ಇವೆ. ಮಾರುಕಟ್ಟೆ ಬೀಳುತ್ತಲೇ ಇದೆ. ಆದರೆ, ಚಿನ್ನದ ದರ ಮಾತ್ರ ಇಳಿಯುತ್ತಿಲ್ಲ. ಮೌಲ್ಯ ಕಡಿಮೆ ಆಗುತ್ತಿಲ್ಲ.

ನಮ್ಮ ನೆನಪುಗಳ ಆಚೆಗಿನ ಕಾಲದಿಂದಲೂ ಚಿನ್ನಕ್ಕೆ ಘನವಾದ ಮೌಲ್ಯವೇ ಇದೆ. ಇದು ಹಳತಾಗದು, ತುಕ್ಕು ಹಿಡಿಯದು. ಅಲ್ಲದೆ, ನಮ್ಮ ನಗದಿನ ಕೊಳ್ಳುವ ಶಕ್ತಿಯನ್ನು ಸದಾ ಕಾಲ ಜೀವಂತವಾಗಿ ಇರಿಸುತ್ತದೆ. ಈ ಕಾರಣಕ್ಕಾಗಿಯೇ ಭಾರತೀಯರಿಗೆ ಚಿನ್ನವೆಂದರೆ ಬೆಟ್ಟದಷ್ಟು ಪ್ರೀತಿ. ಆಭರಣಗಳ ಮಾದರಿಯಲ್ಲಿ ಬಂಗಾರವು ಭಾರತೀಯರ ಹೃದಯ ಮತ್ತು ಮನಸ್ಸುಗಳಲ್ಲಿ ಅಚ್ಚೊತ್ತಿದೆ. ಹುಟ್ಟು, ಮದುವೆ ಸೇರಿದಂತೆ ಎಲ್ಲ ಸಂಭ್ರಮಗಳಲ್ಲೂ ತಮ್ಮ ಪ್ರೀತಿ– ಸ್ನೇಹದ ಸಂಕೇತವಾಗಿ ಚಿನ್ನದ ಉಡುಗೊರೆ ನೀಡುತ್ತಾರೆ. ಎಲ್ಲ ಸಂಭ್ರಮಾಚರಣೆಗಳಿಗೂ ಚಿನ್ನವೆಂಬ ಉಡುಗೊರೆಯ ಮಾಂತ್ರಿಕ ಸ್ಪರ್ಶ ಇರುತ್ತದೆ.

ಹೂಡಿಕೆಯಾಗಿ ಚಿನ್ನ

ಸಂಪತ್ತನ್ನು ಚಿನ್ನದ ರೂಪದಲ್ಲಿ ತಲೆಮಾರುಗಳಿಂದಲೂ ಸಂಗ್ರಹಿಸಲಾಗುತ್ತಿದೆ. ಏಕೆಂದರೆ ಹಲವು ವರ್ಷಗಳಿಂದಲೂ ಚಿನ್ನ ಹೂಡಿಕೆಯು ಲಾಭದ ಖಾತರಿ ನೀಡಿರುವುದು. ಭಾರತದ ನಗರದ ಪ್ರದೇಶಗಳಲ್ಲಿ ಬ್ಯಾಂಕ್‌, ಷೇರು ಮತ್ತು ಇನ್ನಿತರ ಮಾದರಿಯಲ್ಲಿ ಹೂಡಿಕೆ ಸರಾಗವಾಗಿ ಸಾಧ್ಯವಾಗುವಂತೆಗ್ರಾಮೀಣ ಮತ್ತು ಪಟ್ಟಣಗಳಲ್ಲಿ ಆಗುವುದಿಲ್ಲ.ಹೀಗಾಗಿಯೇ ಇಲ್ಲಿ ಚಿನ್ನವೊಂದು ಉಳಿತಾಯದ ರೂಪವಾಗಿದೆ. ಎಲ್ಲರಿಗೂ ಚಿನ್ನವು ಸುಭದ್ರ ಹೂಡಿಕೆಯ ಮಾದರಿಯಾಗಿದೆ. ವಿಶ್ವಾಸಾರ್ಹವೂ ಆಗಿದೆ.

ಸಂಕಷ್ಟದಲ್ಲಿ ಕೈ ಹಿಡಿಯುವ ಬಂಗಾರ

ಎಲ್ಲ ಅನಿಶ್ಚಿತತೆಯ ಗಳಿಗೆಯಲ್ಲಿ ಚಿನ್ನವು ನಮ್ಮನ್ನು ಕಾಪಾಡುತ್ತದೆ. ಹಣದುಬ್ಬರ, ಆರ್ಥಿಕ ಹಿಂಜರಿತ ಮೊದಲಾದ ಕಾರಣಗಳಿಗಾಗಿ ನಗದಿನ ಮೌಲ್ಯ ಕುಸಿತಗೊಳ್ಳಬಹುದು. ಆದರೆ, ಬಂಗಾರದ ಬೆಲೆ ಕಡಿಮೆಯಾಗದು. ಇಂತಹ ಸಂಕಷ್ಟದಲ್ಲಿ ಚಿನ್ನವು ಜನರನ್ನು ಮತ್ತು ದೇಶವನ್ನೂ ಕೈ ಹಿಡಿದಿದೆ. ಚಿನ್ನಕ್ಕೆ ಗ್ರಾಹಕರ ಬೇಡಿಕೆಯು ಕಡಿಮೆಯಾದಾಗ ರಿಯಲ್‌ ಎಸ್ಟೇಟ್‌, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಹೆಚ್ಚಿರುತ್ತದೆ. ಈ ಸಮಯದಲ್ಲಿ ಚಿನ್ನದ ಮೇಲೆ ಹೂಡಿಕೆಯನ್ನು ಮಾಡಿದ್ದೇ ಆದಲ್ಲಿ, ಮಾರುಕಟ್ಟೆ ಬಿದ್ದ ವೇಳೆ ನಮ್ಮ ಅಸ್ತಿತ್ವಕ್ಕೆ, ಚೇತರಿಕೆಯ ಹೋರಾಟಕ್ಕೆ ಚಿನ್ನವೇ ಬೆಂಬಲ ನೀಡುತ್ತದೆ. ಹಣಕಾಸು ಮಾರುಕಟ್ಟೆ ಮತ್ತು ರಾಜಕೀಯ ಅಸ್ಥಿರತೆಯ ಕಾಲದಲ್ಲಿ ದೇಶದ ಮತ್ತು ವ್ಯಕ್ತಿಯ ಅಂತಸ್ತು ಹಾಗೂ ಗೌರವವನ್ನು ಬಂಗಾರ ಉಳಿಸುತ್ತದೆ.

ಈ ಮೇಲಿನ ಎಲ್ಲ ಕಾರಣಗಳಿಂದಾಗಿಯೇ ಹೂಡಿಕೆಯ ಅತ್ಯುತ್ತಮ ಮಾದರಿ ಚಿನ್ನವಾಗಿದೆ. ಈ ಹೂಡಿಕೆಯನ್ನು ಆಭರಣ, ನಾಣ್ಯ, ಬಿಸ್ಕತ್ತು, ಷೇರುಪೇಟೆಯಲ್ಲಿ ವಹಿವಾಟು ನಡೆಸುವ ಚಿನ್ನದ ನಿಧಿ (ಗೋಲ್ಡ್‌ ಇಟಿಎಫ್‌) ಮತ್ತು ಮ್ಯೂಚುವಲ್‌ ಫಂಡ್‌ಗಳ ಮಾದರಿಯಲ್ಲಿ ಮಾಡಬಹುದು. ಚಿನ್ನದ ಬಾಂಡ್‌ಗಳನ್ನು ಹೂಡಿಕೆಯಾಗಿ ಸರ್ಕಾರವೂ ಪರಿಗಣಿಸಿದ್ದು, ಈ ಬಾಂಡ್‌ಗಳ ಮೌಲ್ಯವನ್ನು ಚಿನ್ನದ ಬೆಲೆಗೆ ತಳಕು ಹಾಕಿದೆ.

ಏರಿಕೆ ಹಾದಿಯಲ್ಲಿ

ಐತಿಹಾಸಿಕವಾಗಿಯೂ ಚಿನ್ನದ ದರ ಏರಿಕೆಯಾಗುತ್ತಲೇ ಇದೆ. 1964ರಲ್ಲಿ 10 ಗ್ರಾಂ ಚಿನ್ನದ ಬೆಲೆ ₹ 63ರಷ್ಟಿತ್ತು. ಇದೀಗ ₹38,000ದ ಆಸುಪಾಸಿನಲ್ಲಿದೆ. ಈ ಅಂಕಿ ಅಂಶವನ್ನು ಗಮನಿಸಿದಾಗ ಚಿನ್ನದ ಬೆಲೆ ಏರುಮುಖವಾಗಿಯೇ ಇದೆ. ಹೀಗಾಗಿ ಇದರ ಮೇಲೆ ಹೂಡಿಕೆ ಮಾಡಿದರೆ ಉತ್ತಮ ಲಾಭಾಂಶ ಕಾಣಬಹುದು. ಚಿನ್ನದ ಹೂಡಿಕೆಭವಿಷ್ಯದಲ್ಲಿಯೂ ಲಾಭಕರವಾಗಿರಲಿದೆ.

ಕೊಳ್ಳುವುದು ಈಗ ಸುಲಭ

ಇತ್ತೀಚಿನ ಬಜೆಟ್‌ನಲ್ಲಿಆಧಾರ್‌ ಮತ್ತು ಪ್ಯಾನ್‌ ಕಾರ್ಡ್ ಜೋಡಣೆಗೆ ಸಮ್ಮತಿಸಲಾಗಿದೆ. ಹೀಗಾಗಿಚಿನ್ನದ ಖರೀದಿ ಮತ್ತು ಹೂಡಿಕೆ ಸುಲಭವಾಗಿದೆ. ಇದರಿಂದ ಪ್ರೇರಿತಗೊಂಡಿರುವ ಆಭರಣಗಳ ವ್ಯಾಪಾರಿಗಳು ಹೆಚ್ಚು ಚಿನ್ನ ಖರೀದಿಸುವಂತೆ ಗ್ರಾಹಕರಿಗೆ ವಿವಿಧ ಯೋಜನೆಗಳನ್ನು ಮತ್ತು ರಿಯಾಯಿತಿಗಳನ್ನು ನೀಡುತ್ತಿದ್ದಾರೆ.

ಬಂಗಾರದ ಖರೀದಿ

ಭಾರತೀಯರ ಚಿನ್ನದ ಮೇಲಿನ ಹೂಡಿಕೆಯು ಹೆಚ್ಚಾಗಿ ಆಭರಣದ ರೂಪದಲ್ಲಿ ಇರುತ್ತದೆ. ಆಭರಣದಲ್ಲಿ ಬಿಐಎಸ್‌ ಮಾರ್ಕ್‌ (ಬ್ಯೂರೊ ಆಫ್ ಇಂಡಿಯನ್‌ ಸ್ಟ್ಯಾಂಡರ್ಡ್ಸ್) ಇದ್ದರೆ ಮಾತ್ರ ಕೊಳ್ಳುತ್ತಾರೆ.ಇದು ಚಿನ್ನದ ಗುಣಮಟ್ಟವನ್ನು ಖಾತರಿಪಡಿಸುತ್ತದೆ. ಈ ಅರಿವು ಎಲ್ಲರಲ್ಲೂ ಮೂಡಿದೆ. ಖರೀದಿಸಿದ ರಶೀದಿಗಳಲ್ಲಿ ಚಿನ್ನದ ತೂಕ, ಮೌಲ್ಯ, ಹರಳುಗಳ ಸಂಖ್ಯೆ, ಅವುಗಳ ಮೌಲ್ಯ ಮತ್ತು ಮರುಮಾರಾಟದ ದರ ಎಲ್ಲವನ್ನೂ ನಮೂದಿಸಲಾಗುತ್ತದೆ. ಹೀಗಾಗಿ ಚಿನ್ನವನ್ನು ಆಭರಣ ರೂಪದಲ್ಲಿ ಖರೀದಿಸುವುದು ಸರಾಗವಾಗಿದೆ. ತಮ್ಮ ಉಳಿತಾಯವನ್ನು ಚಿನ್ನದ ಮಾದರಿಯಲ್ಲಿ ಸಂಗ್ರಹಿಸುವುದು ಇದೀಗ ಸರಳಗೊಂಡಿದ್ದು,ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆಯನ್ನು ಪಡೆದಿದೆ. ಹೀಗಿರುವಾಗ ಚಿನ್ನ ಖರೀದಿಸಲು ತಡವೇಕೆ?

ಏರುತ್ತಿರುವ ಚಿನ್ನದ ಬೆಲೆ

ವರ್ಷ;ಬೆಲೆ (ತಲಾ 10 ಗ್ರಾಂ)

1964;₹ 63

1974;₹ 506

1984;₹1,970

2004;₹5,850

2019;₹ 38 ಸಾವಿರ

(ಲೇಖಕ, ಕಲ್ಯಾಣ ಜುವೆಲ್ಲರ್ಸ್‌ನ ಅಧ್ಯಕ್ಷ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT