ಮಂಗಳವಾರ, ಜೂನ್ 22, 2021
22 °C

ಕೋವಿಡ್ ಲಾಕ್‌ಡೌನ್‌: ವಾಹನ ನೋಂದಣಿ ಶೇ 30ರಷ್ಟು ಇಳಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ದೇಶದಲ್ಲಿ ವಾಹನಗಳ ನೋಂದಣಿಯು 2019–20ನೇ ಹಣಕಾಸು ವರ್ಷಕ್ಕೆ ಹೋಲಿಸಿದರೆ 2020–21ನೇ ಹಣಕಾಸು ವರ್ಷದಲ್ಲಿ ಶೇಕಡ 29.85ರಷ್ಟು ಇಳಿಕೆ ಆಗಿದೆ ಎಂದು ಭಾರತೀಯ ವಾಹನ ವಿತರಕರ ಸಂಘಟನೆಗಳ ಒಕ್ಕೂಟ (ಎಫ್‌ಎಡಿಎ) ಹೇಳಿದೆ.

2019–20ರಲ್ಲಿ 2.17 ಕೋಟಿ ವಾಹನಗಳು ನೋಂದಣಿ ಆಗಿದ್ದವು. 2020–21ರಲ್ಲಿ ವಾಹನಗಳ ನೋಂದಣಿಯು 1.52 ಕೋಟಿಗೆ ಇಳಿಕೆ ಕಂಡಿದೆ. ಇದು ಕಳೆದ ಎಂಟು ವರ್ಷಗಳ ಅತ್ಯಂತ ಕನಿಷ್ಠ ಮಟ್ಟವಾಗಿದೆ.

ಟ್ರ್ಯಾಕ್ಟರ್‌ ಹೊರತುಪಡಿಸಿ ಉಳಿದೆಲ್ಲ ವಾಹನಗಳ ನೋಂದಣಿಯು 2020–21ರಲ್ಲಿ ನಕಾರಾತ್ಮಕ ಬೆಳವಣಿಗೆ ಕಂಡಿದೆ ಎಂದು ಎಫ್‌ಎಡಿಎ ತಿಳಿಸಿದೆ. ಟ್ರ್ಯಾಕ್ಟರ್‌ ನೋಂದಣಿಯಲ್ಲಿ ಶೇ 16.11ರಷ್ಟು ಬೆಳವಣಿಗೆ ಕಂಡುಬಂದಿದೆ.

2020ರ ಏಪ್ರಿಲ್‌ನಲ್ಲಿ ದೇಶದಾದ್ಯಂತ ಸಂಪೂರ್ಣ ಲಾಕ್‌ಡೌನ್‌ ಜಾರಿಯಲ್ಲಿತ್ತು. ಒಂದೇ ಒಂದು ವಾಹನವೂ ನೋಂದಣಿ ಆಗಿರಲಿಲ್ಲ. ಹೀಗಾಗಿ 2021ರ ಏಪ್ರಿಲ್‌ ತಿಂಗಳ ನೋಂದಣಿಯ ಅಂಕಿ–ಅಂಶವನ್ನು ಅದರೊಂದಿಗೆ ಹೋಲಿಸಲು ಆಗುವುದಿಲ್ಲ. 2021ರ ಮಾರ್ಚ್‌ಗೆ ಹೋಲಿಸಿದರೆ ಶೇ 28.15ರಷ್ಟು ಇಳಿಕೆ ಆಗಿದೆ ಎಂದು ತಿಳಿಸಿದೆ.

ಭಾರತವು ಸದ್ಯ ಅತ್ಯಂತ ಕಷ್ಟಕರವಾದ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಕೋವಿಡ್‌ನ ಎರಡನೇ ಅಲೆಯು ಪ್ರತಿಯೊಬ್ಬರ ಜೀವನವನ್ನೂ ಸಂಕಷ್ಟಕ್ಕೆ ದೂಡಿದೆ. ಈ ಬಾರಿ, ಸೋಂಕು ಹರಡುವಿಕೆಯು ನಗರ ಪ್ರದೇಶಗಳಿಗಷ್ಟೇ ಸೀಮಿತವಾಗಿರದೆ, ಗ್ರಾಮೀಣ ಪ್ರದೇಶಗಳಿಗೂ ಹಬ್ಬುತ್ತಿದೆ ಎಂದು ಒಕ್ಕೂಟದ ಅಧ್ಯಕ್ಷ ವಿಂಕೇಶ್‌ ಗುಲಾಟಿ ತಿಳಿಸಿದ್ದಾರೆ.

ಕಳೆದ ವರ್ಷದಂತೆಯೇ ಈ ವರ್ಷವೂ ಆರ್ಥಿಕ ಕೊಡುಗೆ ಘೋಷಿಸಿ ಎಂದು ಅವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು