ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸ ವಿಮೆಯ ಲಾಭಗಳು

Last Updated 4 ಜೂನ್ 2019, 19:45 IST
ಅಕ್ಷರ ಗಾತ್ರ

ರಜಾದಿನಗಳಲ್ಲಿ ಪ್ರವಾಸ ಹೋಗುವವರು ಅದಕ್ಕಾಗಿ ಯೋಜನೆ ರೂಪಿಸಲು ಸಾಕಷ್ಟು ಸಮಯ ವ್ಯಯ ಮಾಡುತ್ತಾರೆ. ಸುಖಮಯ ಪ್ರವಾಸಕ್ಕಾಗಿ ಎಲ್ಲ ಸಿದ್ಧತೆಗಳನ್ನು ಮಾಡುವ ಅವರು, ಹೆಚ್ಚಿನ ಸಂದರ್ಭಗಳಲ್ಲಿ ಪ್ರವಾಸ ವಿಮೆ ಮಾಡಿಸುವುದರ ಅಗತ್ಯವನ್ನು ನಿರ್ಲಕ್ಷಿಸುತ್ತಾರೆ.

ಪ್ರವಾಸದಲ್ಲಿದ್ದೀರಿ ಎಂದರೆ ಅಪಘಾತ ಸಂಭವಿಸುವ ಸಾಧ್ಯತೆ ಇರುತ್ತದೆ. ಅನಾರೋಗ್ಯಕ್ಕೂ ನೀವು ತುತ್ತಾಗಬಹುದು. ಅನಿರೀಕ್ಷಿತಾವಾಗಿ ಎದುರಾಗುವ ಇಂಥ ಸಂದರ್ಭಗಳನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಪ್ರವಾಸ ವಿಮೆಯೂ ಇಂತಹ ಅನಿರೀಕ್ಷಿತಗಳನ್ನು ತಡೆಯಲಾರದು. ಆದರೆ ಅನಿರೀಕ್ಷಿತ ಘಟನೆಗಳಿಂದಾಗುವ ಆರ್ಥಿಕ ನಷ್ಟವನ್ನು ಭರಿಸುವ ನಿಟ್ಟಿನಲ್ಲಿ ಅವು ನೆರವಾಗುತ್ತವೆ.

ಪ್ರವಾಸಿಗರಿಗೆ ಇಂತಹ ವಿಮೆಗಳು ಅನೇಕ ಲಾಭಗಳನ್ನು ನೀಡುತ್ತವೆ. ಪ್ರವಾಸದ ಸಂದರ್ಭದಲ್ಲಿ ಅಪಘಾತ ಅಥವಾ ಅನಾರೋಗ್ಯಕ್ಕೆ ಒಳಗಾಗಿ ಚಿಕಿತ್ಸೆ ಪಡೆಯುವ ಸಂದರ್ಭ ಬಂದರೆ, ಅದರ ವೆಚ್ಚವನ್ನು ಭರಿಸಲು ವಿಮೆ ನೆರವಾಗುತ್ತದೆ. ಕೆಲವು ರಾಷ್ಟ್ರಗಳಲ್ಲಿ ಚಿಕಿತ್ಸಾ ವೆಚ್ಚಗಳು ಅತಿ ದುಬಾರಿಯಾಗಿರುತ್ತವೆ ಎಂಬುದು ತಿಳಿದಿರುವ ವಿಚಾರ. ಗಂಭೀರ ಸಮಸ್ಯೆ ಎದುರಾದರೆ ಚಿಕಿತ್ಸೆಗಾಗಿ ಸಾವಿರಾರು ಡಾಲರ್‌ ವೆಚ್ಚ ಮಾಡುವ ಸಂದರ್ಭವೂ ಬರುತ್ತದೆ. ಇಂಥ ಸಂದರ್ಭಗಳಲ್ಲಿ ವಿಮೆ ನೆರವಿಗೆ ಬರುತ್ತದೆ. ತುರ್ತು ಸಂದರ್ಭದಲ್ಲಿ ಚಿಕಿತ್ಸೆಗಾಗಿ ಬೇರೆಡೆಗೆ ಸ್ಥಳಾಂತರ ಮಾಡಬೇಕಾದ ಸಂದರ್ಭ ಬಂದರೆ ಅದರ ವೆಚ್ಚವನ್ನು ಸಹ ವಿಮೆಗಳು ಭರಿಸುತ್ತವೆ.

ಪ್ರವಾಸ ವಿಮೆಯ ಇನ್ನೊಂದು ಲಾಭವೆಂದರೆ, ಪ್ರವಾಸ ರದ್ದತಿಯಿಂದ ಅಥವಾ ಪ್ರವಾಸಕ್ಕೆ ಅಡಚಣೆಯುಂಟಾಗಿ ನಷ್ಟ ಸಂಭವಿಸಿದರೆ, ಆದನ್ನೂ ವಿಮೆ ಭರಿಸುತ್ತದೆ. ಪ್ರವಾಸ ಆರಂಭಿಸುವುದಕ್ಕೂ ಮುನ್ನ ಅಥವಾ ಪ್ರವಾಸದ ಮಧ್ಯದಲ್ಲಿ ಯಾವುದಾದರೂ ಸಮಸ್ಯೆ ಎದುರಾಗಿ ಪ್ರವಾಸವನ್ನು ರದ್ದುಪಡಿಸುವ ಅಥವಾ ಮೊಟಕುಗೊಳಿಸುವ ಸಂದರ್ಭ ಬಂದರೆ, ಸಂಸ್ಥೆಗಳಿಗೆ ಮೊದಲೇ ಪಾವತಿಸಿದ ಹಣದಲ್ಲಿ ದೊಡ್ಡ ಭಾಗವನ್ನು ಕಳೆದುಕೊಳ್ಳಬೇಕಾಗುತ್ತದೆ. ಹೀಗೆ ಸಂಭವಿಸಿದ ನಷ್ಟವನ್ನು ಭರಿಸಲು ಸಹ ಪ್ರವಾಸ ವಿಮೆ ನೆರವಾಗುತ್ತದೆ. ಜೊತೆಗೆ ಪ್ರವಾಸ ಸಂದರ್ಭದಲ್ಲಿ ಸಾಮಾನು– ಸರಂಜಾಮು ಕಳೆದು ಹೋದರೆ ಅದರ ನಷ್ಟವನ್ನೂ ವಿಮೆ ಭರಿಸುತ್ತದೆ.

ಪ್ರವಾಸ ವಿಳಂಬವಾಗುವುದು, ಆಕಸ್ಮಿಕ ಸಾವು, ಮೃತರ ಅವಶೇಷಗಳನ್ನು ವಾಪಸ್‌ ತರುವುದು, ದಂತ ಚಿಕಿತ್ಸೆ ಪಡೆಯುವುದೇ ಮುಂತಾದ ವೆಚ್ಚಗಳೂ ವಿಮೆಯ ವ್ಯಾಪ್ತಿಯೊಳಗೆ ಬರುತ್ತವೆ. ಇಂಥ ವಿಮೆಯು ಪ್ರವಾಸಿಗರಿಗೆ ಭರವಸೆ ನೀಡುವಷ್ಟಕ್ಕೆ ಸೀಮಿತವಾಗಿರುವುದಿಲ್ಲ. ತುರ್ತು ಸಂದರ್ಭದಲ್ಲಿ ಆ ಸೇವೆಗಳನ್ನು ಹೇಗೆ ಬಳಸಬಹುದು ಎಂಬ ಮಾಹಿತಿಯನ್ನು ನೀಡುವ ವ್ಯವಸ್ಥೆಯೂ ಇರುತ್ತದೆ. ವಿಮೆ ಮಾಡಿಸಿರುವ ಪ್ರವಾಸಿಗರಿಗೆ ದಿನದ 24 ಗಂಟೆಗಳ ಕಾಲವೂ ಸಲಹೆ– ಸಹಕಾರ ನೀಡುವ ವ್ಯವಸ್ಥೆಯನ್ನು ಆಯಾ ವಿಮಾ ಸಂಸ್ಥೆ ಮಾಡಿರುತ್ತದೆ. ನೀವು ಅಪಘಾತಕ್ಕೆ ಒಳಗಾದರೆ ಅಥವಾ ನಿಮ್ಮ ಅಮೂಲ್ಯ ವಸ್ತುವನ್ನು ಕಳೆದುಕೊಂಡಿದ್ದರೆ ಅಂಥ ಸಂದರ್ಭದಲ್ಲಿ ವಿಮಾ ಸಂಸ್ಥೆ ನಿಮಗೆ ಸಹಕಾರ ನೀಡುತ್ತದೆ.

ಕುಟುಂಬ ಸಹಿತವಾಗಿ ಪ್ರವಾಸಕ್ಕೆ ಹೋಗುವುದೇ ಒಂದು ಖುಷಿ. ಆದರೆ, ಇಂಥ ಪ್ರವಾಸಗಳು ಅಪಘಾತ ಅಥವಾ ಅಪಾಯದಿಂದ ಮುಕ್ತವಾಗಿರುವುದಿಲ್ಲ ಎಂಬುದು ಅಷ್ಟೇ ಸತ್ಯ. ಪ್ರವಾಸಕ್ಕೆ ಹೋದಾಗ ಅಪರೂಪದ ಪ್ರದೇಶ–ದೃಶ್ಯಗಳನ್ನು ವೀಕ್ಷಿಸುವುದು, ವಿವಿಧ ಆಹಾರಗಳ ರುಚಿ ಸವಿಯುವುದು, ವಿಭಿನ್ನವಾದ ಸಂಪ್ರದಾಯಗಳನ್ನು ಅನುಭವಿಸುವುದು ಸಾಮಾನ್ಯ. ಆದರೆ, ಇಂತಹ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸಿದರೆ ಖುಷಿ ಮಾಯವಾಗಿ, ಪ್ರವಾಸದಿಂದ ನಷ್ಟವನ್ನೇ ಆಹ್ವಾನಿಸಿದಂತಾಗುತ್ತದೆ. ನಿಮ್ಮ ಪ್ರವಾಸದ ಖುಷಿ ಹಾಳಾಗಬಾರದು ಎಂದಾದರೆ ಪ್ರವಾಸ ಆರಂಭಿಸುವುದಕ್ಕೂ ಮುನ್ನ ಪ್ರವಾಸ ವಿಮೆ ಮಾಡಿಸುವುದನ್ನು ಮರೆಯಬೇಡಿ.

(ಲೇಖಕ: ಐಸಿಐಸಿಐ ಲೋಂಬಾರ್ಡ್‌ ಜನರಲ್‌ ಇನ್ಶುರೆನ್ಸ್‌ ಕಂಪನಿಯ ಕ್ಲೇಮ್ಸ್‌ ಮುಖ್ಯಸ್ಥ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT