ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರಂಪ್‌ ಹೇಳಿಕೆ: ಕಚ್ಚಾ ತೈಲ ಅಗ್ಗ

ಪ್ರತಿ ಬ್ಯಾರೆಲ್‌ಗೆ 60 ಡಾಲರ್‌ಗೆ ಇಳಿಕೆ: ಭಾರತಕ್ಕೆ ಲಾಭದಾಯಕ
Last Updated 6 ಮೇ 2019, 18:27 IST
ಅಕ್ಷರ ಗಾತ್ರ

ನವದೆಹಲಿ: ಚೀನಾದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲಿನ ಸುಂಕವನ್ನು ಶೇ 10ರಿಂದ ಶೇ 25ಕ್ಕೆ ಹೆಚ್ಚಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪ್ರಕಟಿಸಿರುವುದು ಜಾಗತಿಕ ಷೇರುಪೇಟೆಗಳಲ್ಲಿ ತಲ್ಲಣ ಮೂಡಿಸಿರುವುದರ ಜತೆಗೆ, ಕಚ್ಚಾ ತೈಲ ಬೆಲೆಯೂ ಕುಸಿಯುವಂತೆ ಮಾಡಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ವೆಸ್ಟ್‌ ಟೆಕ್ಸಾಸ್‌ ಇಂಟರ್‌ಮೀಡಿಯೇಟ್‌ ಕಚ್ಚಾ ತೈಲದ ಬೆಲೆಯು ಈಗ ಪ್ರತಿ ಬ್ಯಾರೆಲ್‌ಗೆ 60 ಡಾಲರ್‌ಗೆ ಮತ್ತು ಬ್ರೆಂಟ್‌ ಕಚ್ಚಾ ತೈಲ ಬೆಲೆ ಶೇ 0.92ರಷ್ಟು ಕಡಿಮೆಯಾಗಿ 70.20 ಡಾಲರ್‌ಗೆ ಇಳಿದಿದೆ. ಬೆಲೆ ಇಳಿಕೆಯು ಅಲ್ಪಾವಧಿಯಲ್ಲಿ ಭಾರತಕ್ಕೆ ಲಾಭದಾಯಕವಾಗಿರಲಿದೆ.

ಚೀನಾದ ಸರಕುಗಳ ಮೇಲಿನ ಆಮದು ಸುಂಕವನ್ನು ಹೆಚ್ಚಿಸುವುದರ ಮೊತ್ತವು ₹ 14 ಲಕ್ಷ ಕೋಟಿಗಳಷ್ಟಾಗಲಿದೆ. ಸದ್ಯಕ್ಕೆ ಜಾಗತಿಕ ವ್ಯಾಪಾರದಲ್ಲಿನ ಚೀನಾದ ಶೇ 13ರಷ್ಟು ಪಾಲಿಗೆ ಹೋಲಿಸಿದರೆ ಭಾರತದ ಪಾಲು ಶೇ 2ಕ್ಕಿಂತ ಕಡಿಮೆ ಇದೆ. ಅಮೆರಿಕ ಮತ್ತು ಚೀನಾ ನಡುವಣ ವಾಣಿಜ್ಯ ಸಂಘರ್ಷದ ಫಲವಾಗಿ ಭಾರತದ ರಫ್ತು ವಹಿವಾಟು ಶೇ 3.5ರಷ್ಟು ಹೆಚ್ಚಲಿದೆ ಎಂದು ವಿಶ್ವಸಂಸ್ಥೆಯ ಇತ್ತೀಚಿನ ವರದಿಯಲ್ಲಿ ತಿಳಿಸಲಾಗಿದೆ.

ದೀರ್ಘಾವಧಿಯಲ್ಲಿ ಇನ್ನೂ ಕೆಲ ದೇಶಗಳ ರಫ್ತು ವಹಿವಾಟು ಹೆಚ್ಚಳಗೊಂಡರೆ ಮತ್ತು ಕೆಲ ದೇಶಗಳು ಸ್ವಯಂ ಹಿತರಕ್ಷಣಾ ನೀತಿ ಅನುಸರಿಸಲು ಮುಂದಾದರೆ ಮಾತ್ರ ಭಾರತಕ್ಕೆ ಜಾಗತಿಕ ವ್ಯಾಪಾರ ಕ್ಷೇತ್ರದಲ್ಲಿ ಪ್ರತಿಕೂಲ ಸನ್ನಿವೇಶ ಸೃಷ್ಟಿಯಾಗಲಿದೆ.

ರಿಯಾಯ್ತಿ ದರದಲ್ಲಿ ತೈಲ ಪೂರೈಕೆ ಇಲ್ಲ’

ತನ್ನಲ್ಲಿ ಉತ್ಪಾದನೆಯಾಗುವ ಕಚ್ಚಾ ತೈಲವನ್ನು ಭಾರತಕ್ಕೆ ರಿಯಾಯ್ತಿ ದರದಲ್ಲಿ ಪೂರೈಸುವ ಬಗ್ಗೆ ಯಾವುದೇ ಭರವಸೆ ನೀಡಲು ಸಾಧ್ಯವಿಲ್ಲ ಎಂದು ಅಮೆರಿಕೆಯು ಸ್ಪಷ್ಟಪಡಿಸಿದೆ.

‘ನಮ್ಮಲ್ಲಿ ತೈಲ ಉತ್ಪಾದನೆಯು ಖಾಸಗಿಯವರ ವಶದಲ್ಲಿ ಇದೆ. ಹೀಗಾಗಿ ರಿಯಾಯ್ತಿ ದರದಲ್ಲಿ ಪೂರೈಸಲು ಸರ್ಕಾರ ಒತ್ತಡ ಹೇರಲು ಬರುವುದಿಲ್ಲ’ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ವಿಲ್ಬರ್‌ ರಾಸ್‌ ಹೇಳಿದ್ದಾರೆ.

ಅಮೆರಿಕದ ದಿಗ್ಬಂಧನದ ಫಲವಾಗಿ ಭಾರತವು ಇರಾನ್‌ನಿಂದ ತೈಲ ಆಮದು ಮಾಡಿಕೊಳ್ಳುವುದನ್ನು ಈ ತಿಂಗಳ 2ರಿಂದ ಸ್ಥಗಿತಗೊಳಿಸಿದೆ. ಕಚ್ಚಾ ತೈಲ ಆಮದಿಗೆ ಇರಾನ್‌ 60 ದಿನಗಳ ಸಾಲ ಸೌಲಭ್ಯ ಸೇರಿದಂತೆ ಕೆಲ ರಿಯಾಯ್ತಿಗಳನ್ನು ಒದಗಿಸುತ್ತಿತ್ತು. ಇದು ಭಾರತದ ತೈಲಾಗಾರಗಳ ಪಾಲಿಗೆ ಹೆಚ್ಚು ಲಾಭಕರವಾಗಿತ್ತು. ಇನ್ನು ಮುಂದೆ ಅಂತಹ ಸೌಲಭ್ಯಕ್ಕೆ ಕತ್ತರಿ ಬೀಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT