ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂಡಿಕೆಗೆ ಉತ್ತಮ ‘ಯುಲಿಪ್‌’

Last Updated 18 ಜೂನ್ 2019, 19:30 IST
ಅಕ್ಷರ ಗಾತ್ರ

‘ಯುಲಿಪ್‌’ ಎನ್ನುವುದು ಹೂಡಿಕೆ ಆಧಾರಿತ ಹಣಕಾಸು ಉತ್ಪನ್ನವಾಗಿದೆ. ವಿಮಾ ಸಂಸ್ಥೆಯು ಯಾವ ಉತ್ಪನ್ನದಲ್ಲಿ ಹಣವನ್ನು ತೊಡಗಿಸುತ್ತದೆ ಮತ್ತು ಆ ಉತ್ಪನ್ನ ಯಾವ ಪ್ರಮಾಣದಲ್ಲಿ ಲಾಭ ನೀಡಲಿದೆ ಎಂಬುದರ ಮೇಲೆ ‘ಯುಲಿಪ್‌’ನ ಗಳಿಕೆಯು ಅವಲಂಬಿಸಿರುತ್ತದೆ. ಒಂದರ್ಥದಲ್ಲಿ ‘ಯುಲಿಪ್‌’, ಗ್ರಾಹಕರಿಗೆ ಹೂಡಿಕೆಗಿಂತಲೂ ಹೆಚ್ಚಿನ ಅನುಕೂಲಗಳನ್ನು ನೀಡುತ್ತದೆ. ಅವರ ವಿವಿಧ ಅಗತ್ಯಗಳನ್ನು ಈಡೇರಿಸಿಕೊಳ್ಳಲು ಸಹಕಾರಿ ಆಗಿರುತ್ತದೆ.

ವಿಮೆ ಸಂಸ್ಥೆಗಳು ಕೊಡಮಾಡುವ ವಿಶಿಷ್ಟ ವಿಮೆ ಉತ್ಪನ್ನ (Unit Linked Insurance Plan - ಯುಲಿಪ್‌) ಇದಾಗಿದೆ. ಒಂದೇ ಯೋಜನೆಯಡಿ ಹೂಡಿಕೆದಾರರಿಗೆ ವಿಮೆ ಸೌಲಭ್ಯ ಮತ್ತು ಹಣ ಹೂಡಿಕೆ ಅವಕಾಶವು ಇಲ್ಲಿ ಲಭ್ಯ ಇರುತ್ತದೆ.

ಸಂಪತ್ತನ್ನು ವೃದ್ಧಿಸುವ ಅವಕಾಶದ ಜೊತೆಗೆ ಗ್ರಾಹಕರಿಗೆ ವಿಮೆಯ ಭದ್ರತೆಯನ್ನು ಸಹ ‘ಯುಲಿಪ್‌’ ನೀಡುತ್ತದೆ. ಉಳಿತಾಯ ಮಾಡುವುದು, ಮಕ್ಕಳ ಶಿಕ್ಷಣದ ಅಗತ್ಯಗಳನ್ನು ಈಡೇರಿಸುವುದು, ಅವರ ಮದುವೆ ಅಥವಾ ತಮ್ಮ ನಿವೃತ್ತಿಯ ನಂತರದ ಜೀವನಕ್ಕೂ ‘ಯುಲಿಪ್‌’ ನೆರವಾಗುತ್ತದೆ. ಹೀಗೆ ಎಲ್ಲಾ ಅಗತ್ಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ‘ಯುಲಿಪ್‌’ ಒಂದು ಉತ್ತಮ ಪರಿಹಾರ ಎನಿಸಬಲ್ಲದು.

ಹೂಡಿಕೆದಾರರಿಗೆ ವಿಮೆಯನ್ನು ಒದಗಿಸುವಷ್ಟಕ್ಕೇ ‘ಯುಲಿಪ್‌’ ಸೀಮಿತವಾಗಿರುವುದಿಲ್ಲ. ಬದಲಿಗೆ ಅವರ ಹಣವನ್ನು ಷೇರು ಮಾರುಕಟ್ಟೆಯಲ್ಲಿ ತೊಡಗಿಸಿ, ಅದು ವೃದ್ಧಿಸುವಂತೆಯೂ ಮಾಡುತ್ತದೆ. ತಮ್ಮ ಹೂಡಿಕಾ ಜ್ಞಾನಕ್ಕೆ ಅನುಗುಣವಾಗಿ ಹೂಡಿಕೆದಾರರು ಸಕ್ರಿಯ ಅಥವಾ ಪರೋಕ್ಷ ಹೂಡಿಕೆಯ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ಪರೋಕ್ಷ ಹೂಡಿಕೆಯನ್ನು ಆಯ್ಕೆ ಮಾಡಿಕೊಂಡರೆ ನಿಮ್ಮ ಹಣವನ್ನು ಎಲ್ಲಿ ಹೂಡಿಕೆ ಮಾಡಬೇಕು ಎಂಬುದನ್ನು ವಿಮಾ ಸಂಸ್ಥೆಯೇ ತೀರ್ಮಾನಿಸುತ್ತದೆ. ಕಾಲಕಾಲಕ್ಕೆ ಅಗತ್ಯ ಬದಲಾವಣೆಗಳನ್ನು ಸಂಸ್ಥೆಯೇ ಮಾಡುತ್ತದೆ.

ಸಕ್ರಿಯ ಹೂಡಿಕೆಯ ಆಯ್ಕೆ ಮಾಡಿಕೊಂಡರೆ ಯಾವ ಯಾವ ಕ್ಷೇತ್ರದಲ್ಲಿ ಎಷ್ಟು ಹೂಡಿಕೆ ಮಾಡಬೇಕು ಎಂಬುದನ್ನು ಹೂಡಿಕೆದಾರರೇ ನಿರ್ಧರಿಸಬಹುದು. ಅಗತ್ಯವೆನಿಸಿದಾಗ ತಾವೇ ತಮ್ಮ ಹೂಡಿಕೆಯನ್ನು ಬದಲಿಸಿಕೊಳ್ಳಲು ಅವಕಾಶ ಇರುತ್ತದೆ.

ಗ್ರಾಹಕರಿಗೆ ‘ಯುಲಿಪ್‌’ ಅನೇಕ ಆಯ್ಕೆಗಳನ್ನು ಸಹ ನೀಡುತ್ತದೆ. ಸಾಮಾನ್ಯ ಪ್ರೀಮಿಯಂನ ‘ಯುಲಿಪ್‌’ ಆಯ್ಕೆ ಮಾಡಿಕೊಂಡಿರುವ ಗ್ರಾಹಕರೊಬ್ಬರು ತಮ್ಮ ಮುಂದಿನ ಕಂತಿನ ಹಣವನ್ನು ಎಲ್ಲಿ ಮತ್ತು ಎಷ್ಟು ಪ್ರಮಾಣದಲ್ಲಿ ಹೂಡಿಕೆ ಮಾಡಬೇಕು ಎಂಬುದನ್ನು ತಾವೇ ಆಯ್ಕೆ ಮಾಡಿಕೊಳ್ಳಬಹುದು.

ಉದಾಹರಣೆಗೆ– ನಷ್ಟ ತಾಳಿಕೆಯ ಸಾಮರ್ಥ್ಯ ಉಳ್ಳ ಹೂಡಿಕೆದಾರರೊಬ್ಬರು ತಮ್ಮ ಕಂತಿನ ಶೇ 50ರಷ್ಟನ್ನು ಷೇರುಪೇಟೆಯಲ್ಲಿ ಹಾಗೂ ಉಳಿದ ಶೇ 50ರಷ್ಟನ್ನು ಕಾರ್ಪೊರೇಟ್‌ ಸಾಲಪತ್ರಗಳಲ್ಲಿ ಹೂಡಿಕೆ ಮಾಡಬಹುದು. ಸದ್ಯದಲ್ಲೇ ಷೇರುಪೇಟೆ ತೇಜಿಗೆ ಬರಲಿದೆ ಎಂಬ ಸೂಚನೆ ಏನಾದರೂ ಸಿಕ್ಕರೆ, ಇಂತಹ ಹೂಡಿಕೆದಾರರು ಕಂತಿನ ಶೇ 75ರಷ್ಟನ್ನು ಷೇರುಪೇಟೆಯಲ್ಲಿ ಮತ್ತು ಶೇ 25ರಷ್ಟನ್ನು ಕಾರ್ಪೊರೇಟ್‌ ಸಾಲಪತ್ರ ಅಥವಾ ಬೇರೆ ಎಲ್ಲಾದರೂ ಹೂಡಿಕೆ ಮಾಡಿ ಹೆಚ್ಚಿನ ಲಾಭ ಮಾಡಿಕೊಳ್ಳಲು ‘ಯುಲಿಪ್‌’ ಅವಕಾಶ ನೀಡುತ್ತದೆ.

‘ಯುಲಿಪ್‌’ನ ಇನ್ನೊಂದು ಆಕರ್ಷಣೆ ಎಂದರೆ ಬೇಕಾದಾಗ ನಗದೀಕರಿಸುವ ಅವಕಾಶ. ಹೂಡಿಕೆದಾರರು ಅಗತ್ಯವೆನಿಸಿದಾಗ ತಮ್ಮ ಹೂಡಿಕೆಯ ಒಂದು ಭಾಗವನ್ನು ಹಿಂದೆಪಡೆದುಕೊಳ್ಳಲು ‘ಯುಲಿಪ್‌’ ಅವಕಾಶ ನೀಡುತ್ತದೆ. ಹೀಗೆ ಮಾಡಿದರೂ ವಿಮೆಯ ಭದ್ರತೆ ಅವರಿಗೆ ಇದ್ದೇ ಇರುತ್ತದೆ. ಈ ಅವಕಾಶವನ್ನು ಬಳಸಿಕೊಂಡು ಕಾಲಕಾಲಕ್ಕೆ ಸ್ವಲ್ಪ ಹಣವನ್ನು ಹಿಂದೆಪಡೆಯುತ್ತ ತುರ್ತು ಅಗತ್ಯಗಳನ್ನು ಈಡೇರಿಸಿಕೊಳ್ಳಬಹುದು.

ಹೂಡಿಕೆಯು ಪಕ್ವಗೊಂಡಾಗ ಪೂರ್ತಿ ನಿಧಿಯನ್ನು ಒಮ್ಮೇಲೆ ಪಡೆಯುವುದರ ಬದಲು ಕಂತುಗಳಲ್ಲಿ ಪಡೆಯಲು ಸಹ ಇಲ್ಲಿ ಅವಕಾಶ ಇರುತ್ತದೆ. ಹೀಗೆ ಹೂಡಿಕೆಯ ಹಣವನ್ನು ಹಿಂದೆಪಡೆಯಲು ಹತ್ತು ವರ್ಷಗಳ ಅವಧಿಯನ್ನು ನೀಡಬೇಕು ಎಂಬ ಒಂದು ಪ್ರಸ್ತಾವವೂ ಇದೆ. ಅಂದರೆ ಹೂಡಿಕೆದಾರರು ನಿಯಮಿತ ಅವಧಿಯಲ್ಲಿ (ಪ್ರತಿ ತಿಂಗಳು, ತ್ರೈಮಾಸಿಕ...) ಆ ಹಣವನ್ನು ಪಡೆಯುತ್ತಲೇ ಇರಬಹುದು.

ನಿವೃತ್ತಿಯ ನಂತರದ ಜೀವನಕ್ಕಾಗಿ ಹೂಡಿಕೆ ಮಾಡುವವರಿಗೆ ‘ಯುಲಿಪ್‌’ ಒಂದು ಅತ್ಯುತ್ತಮ ಉತ್ಪನ್ನವಾಗಿದೆ. ಇದರಲ್ಲಿ ಹೂಡಿಕೆ ಮಾಡಿದ ಹಣಕ್ಕೆ ಆದಾಯ ತೆರಿಗೆ ಸೆಕ್ಷನ್‌ 80ಸಿ ಅಡಿ ತೆರಿಗೆ ವಿನಾಯಿತಿ ಇರುವುದಲ್ಲದೆ ದೀರ್ಘಾವದಿ ಬಂಡವಾಳ ಹೂಡಿಕೆ ಮೇಲಿನ ತೆರಿಗೆಯೂ ಇರುವುದಿಲ್ಲ.

‘ಯುಲಿಪ್‌’ನ ಈ ಎಲ್ಲಾ ಅಂಶಗಳು ಹೂಡಿಕೆದಾರರನ್ನು ಆಕರ್ಷಿಸುತ್ತವೆ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಹೂಡಿಕಾ ಉತ್ಪನ್ನಗಳಲ್ಲಿ ‘ಯುಲಿಪ್‌’ಅನ್ನೂ ಸೇರಿಸಿಕೊಳ್ಳುವುದು ಬುದ್ಧಿವಂತಿಕೆಯ ನಿರ್ಧಾರವೆನಿಸುತ್ತದೆ.

(ಲೇಖಕ, ಎಸ್‌ಬಿಐ ಲೈಫ್‌ ಇನ್ಶೂರೆನ್ಸ್‌ನ ವೃತ್ತಿ ಪರಿಣತ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT