ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Union Budget 2023: ಬಜೆಟ್‌ ಪ್ರಮುಖಾಂಶಗಳು ಹೀಗಿವೆ...

Last Updated 1 ಫೆಬ್ರುವರಿ 2023, 19:30 IST
ಅಕ್ಷರ ಗಾತ್ರ

ವಿತ್ತೀಯ ಕೊರತೆ ಶೇ 5.9

2023–24ನೇ ಹಣಕಾಸು ವರ್ಷಕ್ಕೆ ವಿತ್ತೀಯ ಕೊರತೆಯನ್ನು ಜಿಡಿಪಿಯ ಶೇ 5.9ಕ್ಕೆ ತಗ್ಗಿಸಲು ಕೇಂದ್ರ ಸರ್ಕಾರ ಉದ್ದೇಶಿಸಿದೆ. 2022–23ನೇ ಹಣಕಾಸು ವರ್ಷಕ್ಕೆ ವಿತ್ತೀಯ ಕೊರತೆಯು ಶೇ 6.4ರಷ್ಟು ಇರಲಿದೆ ಎಂದು ಸಚಿವೆ ನಿರ್ಮಲಾ ಹೇಳಿದ್ದಾರೆ.

2025–26ರ ವೇಳೆಗೆ ವಿತ್ತೀಯ ಕೊರತೆಯನ್ನು ಶೇ 4.5ಕ್ಕೆ ತಗ್ಗಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಸಾಲ ಮಿತಿ ಹೆಚ್ಚಳ

ಏಪ್ರಿಲ್‌ 1ರಿಂದ ಆರಂಭ ಆಗಲಿರುವ 2023–24ನೇ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರವು ದಾಖಲೆಯ ₹ 15.4 ಲಕ್ಷ ಕೋಟಿ ಸಾಲ ಪಡೆಯಲು ಮುಂದಾಗಿದೆ. ಇದು 2023ರ ಮಾರ್ಚ್‌ 31ಕ್ಕೆ ಕೊನೆಗೊಳ್ಳಲಿರುವ ಪ್ರಸಕ್ತ ಹಣಕಾಸು ವರ್ಷಕ್ಕೆ ನಿಗದಿಪಡಿಸಿರುವ ₹ 14.21 ಲಕ್ಷ ಕೋಟಿಗೂ ಹೆಚ್ಚಿನದ್ದಾಗಿದೆ.

ಸಾಲಪತ್ರಗಳನ್ನು ಮಾರಾಟ ಮಾಡುವ ಮೂಲಕ ಮಾರುಕಟ್ಟೆಯಿಂದ ₹ 11.8 ಲಕ್ಷ ಕೋಟಿ ಸಂಗ್ರಹಿಸಲಾಗುವುದು. ಉಳಿದ ಮೊತ್ತವು ಸಣ್ಣ ಉಳಿತಾಯ ಮತ್ತು ಇತರೆ ಮೂಲಗಳಿಂದ ಬರಲಿದೆ. ಸರಾಸರಿ ಸಾಲ ಸಂಗ್ರಹವು
₹ 15.4 ಲಕ್ಷ ಕೋಟಿ ಆಗಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಬಜೆಟ್‌ ಭಾಷಣದಲ್ಲಿ ತಿಳಿಸಿದ್ದಾರೆ.

2022–23ನೇ ಹಣಕಾಸು ವರ್ಷದಲ್ಲಿ ಜನವರಿ 27ರವರೆಗೆ ಕೇಂದ್ರವು ₹ 12.93 ಲಕ್ಷ ಕೋಟಿ ಸಾಲ ಸಂಗ್ರಹ ಮಾಡಿದೆ. ಇದು ಬಜೆಟ್‌ ಅಂದಾಜಿನ ಶೇ 91ರಷ್ಟು ಆಗಿದೆ.

ಟೆಲಿಕಾಂಗೆ ನೆರವು

ದೂರಸಂಪರ್ಕ ಮತ್ತು ಅಂಚೆ ಇಲಾಖೆ ಯೋಜನೆಗಳಿಗೆ ಕೇಂದ್ರ ಸರ್ಕಾರವು ಬಜೆಟ್‌ನಲ್ಲಿ ₹1.23 ಲಕ್ಷ ಕೋಟಿ ಅನುದಾನವನ್ನು ನೀಡಿದೆ.

ಒಟ್ಟು ಅನುದಾನದಲ್ಲಿ ದೂರಸಂಪರ್ಕ ಇಲಾಖೆಗೆ ₹97,579 ಕೋಟಿ ನೀಡಲಾಗಿದೆ. ಇದರಲ್ಲಿ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಇದೇ ವರ್ಷದಲ್ಲಿ 4ಜಿ ಮತ್ತು 5ಜಿ ಸೇವೆಗಳನ್ನು ಜಾರಿಗೊಳಿಸುವ ನಿರೀಕ್ಷೆ ಇದ್ದು, ಅದಕ್ಕಾಗಿ ₹52,937 ಕೋಟಿ ಬಂಡವಾಳ ಸೇರಿದೆ. ಅಂಚೆ ಯೋಜನೆಗಳಿಗೆ ₹25,814 ಕೋಟಿ ಮೀಸಲಿಡಲಾಗಿದೆ. ಇದರಲ್ಲಿ ಇಂಡಿಯಾ ಪೋಸ್ಟ್‌ ಪೇಮೆಂಟ್ಸ್‌ ಬ್ಯಾಂಕ್‌ಗೆ ₹250 ಕೋಟಿ ಸಹ ಸೇರಿಕೊಂಡಿದೆ.

ಎಂಎಸ್ಎಂಇಗೆ ನೆರವು

ಕಿರು, ಸಣ್ಣ ಮತ್ತು ಮಧ್ಯಮ ಗಾತ್ರದ (ಎಂಎಸ್‌ಎಂಇ) ಉದ್ದಿಮೆಗಳಿಗಾಗಿ ಸಾಲ ಖಾತರಿ ಯೋಜನೆಯ ₹ 9 ಸಾವಿರ ಕೋಟಿ ಮೊತ್ತದ ಪರಿಷ್ಕೃತ ಕಾರ್ಯಕ್ರಮ ಜಾರಿಗೊಳಿಸಲಾಗಿದೆ.

ಆರ್ಥಿಕ ಸ್ಥಿರತೆ ಸಾಧಿಸುವ ಮತ್ತು ಅರ್ಹರಿಗೆ ಸುಲಭವಾಗಿ ಸಾಲ ಸಿಗುವಂತೆ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ನ್ಯಾಷನಲ್‌ ಫೈನಾನ್ಶಿಯಲ್‌ ಇನ್‌ಫರ್ಮೇಷನ್‌ ರಿಜಿಸ್ಟ್ರಿ ಸ್ಥಾಪಿಸಲು ಮುಂದಾಗಿದೆ.

47.8 ಕೋಟಿ ಜನ್‌ ಧನ್‌ ಖಾತೆ

ವಿತ್ತೀಯ ಸೇರ್ಪಡೆಯ ಭಾಗವಾಗಿ ಜಾರಿಗೆ ತಂದಿರುವ ಜನ್‌ಧನ್‌ ಯೋಜನೆಯ ಅಡಿ ಈವರೆಗೆ 47.8 ಕೋಟಿ ಖಾತೆಗಳನ್ನು ತೆರೆಯಲಾಗಿದೆ.

2014ರ ಅಗಸ್ಟ್‌ 28ರಂದು ಯೋಜನೆಗೆ ಚಾಲನೆ ನೀಡಲಾಗಿದ್ದು, ಉಳಿತಾಯ ಮತ್ತು ಠೇವಣಿ ಖಾತೆಗಳು, ಸಾಲ, ವಿಮೆ ಮತ್ತು ಪಿಂಚಣಿಯಂತಹ ಹಣಕಾಸು ಸೇವೆಗಳನ್ನು ಕಡಿಮೆ ಬೆಲೆಗೆ ಸಿಗುವಂತೆ ಮಾಡುವ ಯೋಜನೆ ಇದಾಗಿದೆ.

ಸಬ್ಸಿಡಿ ಮೊತ್ತ ಇಳಿಕೆ

ಆಹಾರ, ರಸಗೊಬ್ಬರ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಸಬ್ಸಿಡಿ ಮೊತ್ತವನ್ನು2023–24ನೇ ಹಣಕಾಸು ವರ್ಷಕ್ಕೆ ₹ 3.75 ಲಕ್ಷ ಕೋಟಿಗೆ ನಿಗದಿಪಡಿಸಲಾಗಿದೆ. 2022–23ಕ್ಕೆ ನಿಗದಿಪಡಿಸಿರುವ ಪರಿಷ್ಕೃತ ಮೊತ್ತ ₹ 5.21 ಲಕ್ಷ ಕೋಟಿಗೆ ಹೋಲಿಸಿದರೆ ಸಬ್ಸಿಡಿ ಶೇ 28ರಷ್ಟು ಕಡಿಮೆ ಆಗಿದೆ.

ಇದರಿಂದಾಗಿ ಒಟ್ಟು ಸಬ್ಸಿಡಿಯಲ್ಲಿ ರಸಗೊಬ್ಬರ ಸಬ್ಸಿಡಿ ₹ 2.25 ಲಕ್ಷ ಕೋಟಿಯಿಂದ ₹ 1.75 ಲಕ್ಷ ಕೋಟಿಗೆ ಇಳಿಕೆ ಆಗಲಿದೆ. ಪೆಟ್ರೋಲಿಯಂ ಸಬ್ಸಿಡಿ ₹ 9,179 ಕೋಟಿಯಿಂದ ₹ 2,257 ಕೋಟಿಗೆ ತಗ್ಗಲಿದೆ. ಆಹಾರ ಸಬ್ಸಿಡಿ ₹ 2.87 ಲಕ್ಷ ಕೋಟಿಯಿಂದ ₹ 1.97 ಲಕ್ಷ ಕೋಟಿಗೆ ಇಳಿಕೆ ಆಗುವ ಅಂದಾಜು ಮಾಡಲಾಗಿದೆ.

2022–23ರಲ್ಲಿ ಆಹಾರ ಸಬ್ಸಿಡಿ ಮೊತ್ತವು ₹ 2.88 ಲಕ್ಷ ಕೋಟಿಯಿಂದ ₹ 2.87 ಲಕ್ಷ ಕೋಟಿಗೆ ಇಳಿಕೆ ಆಗಲಿದೆ. ಆದರೆ, ರಸಗೊಬ್ಬರ ಸಬ್ಸಿಡಿ ₹ 1.53 ಲಕ್ಷ ಕೋಟಿಯಿಂದ ₹ 2.25 ಲಕ್ಷ ಕೋಟಿಗೆ ಹೆಚ್ಚಾಗಲಿದೆ. ಪೆಟ್ರೋಲಿಯಂ ಸಬ್ಸಿಡಿ ಸಹ ₹ 3,422 ಕೋಟಿಯಿಂದ ₹ 9,179 ಕೋಟಿಗೆ ಏರಿಕೆ ಆಗುವ ಅಂದಾಜು ಮಾಡಲಾಗಿದೆ.

ಹಿರಿಯರ ಠೇವಣಿ ಮಿತಿ ಹೆಚ್ಚಳ

ಹಿರಿಯ ನಾಗರಿಕರಿಗೆ ಈ ಬಾರಿಯ ಬಜೆಟ್‌ನಲ್ಲಿ ಒಂದಿಷ್ಟು ಕೊಡುಗೆ ನೀಡಲಾಗಿದೆ. ಹಿರಿಯ ನಾಗರಿಕರ ಉಳಿತಾಯ ಯೋಜನೆಯ ಠೇವಣಿ ಮಿತಿಯನ್ನು ₹ 15 ಲಕ್ಷದಿಂದ ₹ 30 ಲಕ್ಷಕ್ಕೆ ಹೆಚ್ಚಿಸಲಾಗಿದೆ.

ತಿಂಗಳ ಆದಾಯ ಖಾತೆ ಯೋಜನೆಯ ಠೇವಣಿ ಮಿತಿಯನ್ನು ಸಹ ಈಗಿರುವ ₹ 4.5 ಲಕ್ಷದಿಂದ ₹ 9 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಜಂಟಿ ಖಾತೆ ಹೊಂದಿರುವವರಿಗೆ ಠೇವಣಿ ಮಿತಿಯು ₹ 15 ಲಕ್ಷ ಇರಲಿದೆ. ಸದ್ಯ ₹ 9 ಲಕ್ಷ ಮಾತ್ರ ಇದೆ.

ವಿವಾದ್‌ ಸೆ ವಿಶ್ವಾಸ್‌–2

ವಾಣಿಜ್ಯ ವಿಷಯಗಳಿಗೆ ಸಂಬಂಧಿಸಿದ ವ್ಯಾಜ್ಯಗಳನ್ನು ಬಗೆಹರಿಸಲು ವಿವಾದ್‌ ಸೆ ವಿಶ್ವಾಸ್‌–2 ಎನ್ನುವ ಮತ್ತೊಂದು ಯೋಜನೆಯನ್ನು ಸರ್ಕಾರ ಜಾರಿಗೆ ತರಲು ಮುಂದಾಗಿದೆ. ಈಗಾಗಲೇ ಜಾರಿಯಲ್ಲಿ ಇರುವ ವಿವಾದ್‌ ಸೆ ವಿಶ್ವಾಸ್ ಯೋಜನೆಯ ಅಡಿ ನೇರ ತೆರಿಗೆಗೆ ಸಂಬಂಧಿಸಿದ ವ್ಯಾಜ್ಯಗಳನ್ನು ಇತ್ಯರ್ಥಪಡಿಸಲಾಗುತ್ತಿದೆ.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT